‘ಟಾಲಿವುಡ್ ಪ್ರಿನ್ಸ್’ ಮಹೇಶ್ ಬಾಬು ನಟನೆಯ ‘ಸರಿಲೇರು ನೀಕೆವ್ವರು’ ಚಿತ್ರದಲ್ಲಿ ಕರ್ನಾಟಕದ ಕ್ರಷ್ ರಶ್ಮಿಕಾ ಮಂದಣ್ಣ ನಟಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸೂಪರ್ ಹಿಟ್ ಆಗಿತ್ತು. ಇದರ ಯಶಸ್ಸೇ ಮಹೇಶ್ ಬಾಬು ಮತ್ತು ರಶ್ಮಿಕಾ ಕುಟುಂಬಗಳ ನಡುವಿನ ಸ್ನೇಹ ಮತ್ತು ಒಡನಾಟವನ್ನು ಗಟ್ಟಿಗೊಳಿಸಿದೆ.
ಲಾಕ್‌ಡೌನ್ ಪರಿಣಾಮ ಈಗ ರಶ್ಮಿಕಾ ಕೊಡಗಿನಲ್ಲಿದ್ದಾರೆ. ಅಲ್ಲಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳೊಟ್ಟಿಗೆ ಆಗಾಗ್ಗೆ ಸಂವಾದ ನಡೆಸುತ್ತಿದ್ದಾರೆ.
ಆದರೆ, ಹೊಸ ಸುದ್ದಿ ಅದಲ್ಲ. ಸೋಮವಾರ ಹೈದರಾಬಾದ್‌ನಲ್ಲಿರುವ ಮಹೇಶ್ ಬಾಬು ಮನೆಗೆ ಗಿಫ್ಟ್ ಹ್ಯಾಂಪರ್‌ವೊಂದು ಬಂದಿತ್ತಂತೆ. ಇದು ಅವರ ಪತ್ನಿ ನಮ್ರತಾ ಶಿರೋಡ್ಕರ್‌ಗೆ ಅಚ್ಚರಿ ತಂದಿತ್ತು. ಇದನ್ನು ಯಾರು ಕಳುಹಿಸಿದ್ದಾರೆ ಎಂದು ಚಿಂತೆಗೆ ಬೀಳುವ ಮೊದಲೇ ಅದರೊಟ್ಟಿಗೆ ಇಟ್ಟಿದ್ದ ಪತ್ರ ಓದಿದಾಗ ಅವರಿಗೆ ಖುಷಿಯಾಯಿತಂತೆ. ಅಂದಹಾಗೆ ಕೂರ್ಗ್‌ನಿಂದ ಆ ಗಿಫ್ಟ್ ಹ್ಯಾಂಪರ್ ಕಳುಹಿಸಿದ್ದು ರಶ್ಮಿಕಾ ಮಂದಣ್ಣ! ‘ಈ ಗಿಫ್ಟ್ ನಿಮಗೆ ಇಷ್ಟವಾಗುತ್ತದೆ ಎಂದುಕೊಂಡಿದ್ದೇನೆ’ ಎಂದು ರಶ್ಮಿಕಾ ಪತ್ರದಲ್ಲಿ ಬರೆದಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ರಶ್ಮಿಕಾ ಕಳುಹಿಸಿರುವ ಗಿಫ್ಟ್ ಹ್ಯಾಂಪರ್‌ನ ಫೋಟೊ ಹಂಚಿಕೊಂಡಿರುವ ನಮ್ರತಾ,‘ಈಗ ಮಾನ್ಸೂನ್ ಸಮಯ. ಕೂರ್ಗ್‌ನಿಂದ ನಮ್ಮ ಮನೆಗೆ ರಶ್ಮಿಕಾ ರುಚಿಕರವಾದ ಪದಾರ್ಥಗಳನ್ನು ಕಳುಹಿಸಿದ್ದಾರೆ. ಕೋವಿಡ್ 19 ಅವಧಿಯಲ್ಲಿ ಮಾವಿನ ಉಪ್ಪಿನಕಾಯಿಯು ಗಿಫ್ಟ್ ರೂಪದಲ್ಲಿ ನಮ್ಮ ಮನೆಗೆ ಬಂದಿದೆ. ನಿಜಕ್ಕೂ ಸಂತೋಷವಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಜೊತೆಗೆ, ಕಾರ್ತಿ ನಟನೆಯ ತಮಿಳಿನ ‘ಸುಲ್ತಾನ್’ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.