ಐಶಾನಿ ಶೆಟ್ಟಿಗೆ ಈಗ ಬಿಕಾಂ ಪರೀಕ್ಷೆ!

7
ಎರಡು ಶೇಡ್‌ಗಳ ಪಾತ್ರ

ಐಶಾನಿ ಶೆಟ್ಟಿಗೆ ಈಗ ಬಿಕಾಂ ಪರೀಕ್ಷೆ!

Published:
Updated:
Prajavani

ಇತ್ತೀಚೆಗಷ್ಟೇ ಅವರು ಎಂ.ಎ. ಪದವಿ ಪಡೆದಿದ್ದು ಸುದ್ದಿಯಾಗಿತ್ತು. ಇದೇಕೆ ಮತ್ತೆ ಬಿಕಾಂ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಹುಬ್ಬೇರಿಸಬೇಡಿ. ‘ನಮ್ ಗಣಿ ಬಿಕಾಂ ಪಾಸ್‌’ ಎಂಬ ಸಿನಿಮಾದಲ್ಲಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. 

‘ರಾಕೆಟ್’ ಸಿನಿಮಾ ನಂತರ ವಿದ್ಯಾಭ್ಯಾಸಕ್ಕಾಗಿ ನಟನೆಯಿಂದ ಕೊಂಚ ದೂರವಿದ್ದ ಐಶಾನಿ ‘ಕಾಜಿ’ ಎಂಬ ಕಿರುಚಿತ್ರ ನಿರ್ದೇಶಿಸಿದ್ದರು. ಆ ಚಿತ್ರದ ಕುರಿತು ಪ್ರಶಂಸೆಯ ಮಾತುಗಳು ಕೇಳಿಬಂದಿದ್ದವು. ನಂತರ ‘ನಡುವೆ ಅಂತರವಿರಲಿ’ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ನಟನಾ ಬದುಕಿಗೆ ಮರಳಿದ್ದರು. ಇದೀಗ ಅವರು ಹೊಸ ತಂಡದ ಜತೆಯಲ್ಲಿ ‘ನಮ್ ಗಣಿ ಬಿಕಾಂ ಪಾಸ್‌’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಅಭಿಷೇಕ್‌ ಶೆಟ್ಟಿ ಈ ಚಿತ್ರದ ನಿರ್ದೇಶಕರು. ಅವರೇ ನಾಯಕನಾಗಿ ನಟಿಸುತ್ತಿದ್ದಾರೆ ಕೂಡ. ಬೃಂದಾವನ್ ಎಂಟರ್‌ಪ್ರೈಸಸ್ ಅಡಿಯಲ್ಲಿ ನಾಗೇಶ್ ಅವರು ಹಣ ಹೂಡುತ್ತಿದ್ದಾರೆ. 2017ರಲ್ಲಿ ಅಭಿಷೇಕ್ ‘ಗಣಿ ಬಿಕಾಂ ಪಾಸ್’ ಎಂಬ ಕಿರುಚಿತ್ರ ರೂಪಿಸಿದ್ದರು. ಇದೇ ಕಿರುಚಿತ್ರದ ಕಥೆಯ ಎಳೆಯನ್ನು ಇನ್ನಷ್ಟು ವಿಸ್ತರಿಸಿ ಹಲವು ಹೊಸ ಆಯಾಮಗಳನ್ನು ಸೇರಿಸಿ ಸಿನಿಮಾ ಮಾಡುತ್ತಿದ್ದಾರೆ ಅಭಿಷೇಕ್‌.

‘ಇದು ತುಂಬ ಭಿನ್ನವಾದ ಕಥಾವಸ್ತು ಹೊಂದಿದೆ. ಬಿ.ಕಾಂ. ಪಾಸ್‌ ಆದ ನಿರುದ್ಯೋಗಿ ಹುಡುಗನೊಬ್ಬ ಬೆಂಗಳೂರಿನಂಥ ನಗರದಲ್ಲಿ ಯಾವ ರೀತಿ ಪರದಾಡಬೇಕಾಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಪರಿಣಾಮಕಾರಿಯಾಗಿ ಹೇಳಲಾಗಿದೆ. ಮಧ್ಯಮವರ್ಗದ ಪರಿಸ್ಥಿತಿಯನ್ನು ಬಿಂಬಿಸಲಾಗಿದೆ’ ಎಂದು ಸಿನಿಮಾದ ಕುರಿತು ವಿವರಿಸುತ್ತಾರೆ ಐಶಾನಿ.

ಹಾಗೆಂದು ಇದು ಸಾಮಾಜಿಕ ಸಮಸ್ಯೆಗಳನ್ನು ಇಟ್ಟುಕೊಂಡು ಮಾಡಿದ ಗಂಭೀರ ಸಿನಿಮಾ ಎಂದುಕೊಳ್ಳಬೇಡಿ. ಎಲ್ಲ ಸಮಸ್ಯೆ ಫಜೀತಿಗಳನ್ನು ಹಾಸ್ಯ ಉಕ್ಕಿಸುವ ಧಾಟಿಯಲ್ಲಿ ಹೇಳುವ ನಿರೂಪಣಾ ಕ್ರಮವನ್ನು ನಿರ್ದೇಶಕರು ಅನುಸರಿಸಿದ್ದಾರಂತೆ. ‘ನಗು ಉಕ್ಕಿಸುತ್ತಲೇ ನಮ್ಮ ಸಮಾಜದ ವಾಸ್ತವ ಪರಿಸ್ಥಿತಿಯ ಹಲವು ಆಯಾಮಗಳನ್ನು ಇದು ತೆರೆದಿಡುತ್ತದೆ’ ಎನ್ನುವುದು ಐಶಾನಿ ಹೇಳಿಕೆ.

ಕಥೆಯಲ್ಲಿರುವ ಭಿನ್ನ ಗುಣ ಮತ್ತು ಪಾತ್ರಕ್ಕಿರುವ ಮಹತ್ವವನ್ನು ಗಮನಿಸಿ ಈ ಸಿನಿಮಾವನ್ನು ಖುಷಿಯಿಂದಲೇ ಅವರು ಒಪ್ಪಿಕೊಂಡಿದ್ದಾರೆ. 

‘ಎರಡು ಪ್ರತ್ಯೇಕವಾದ ಕಾಲಾವಧಿಯಲ್ಲಿ ಈ ಸಿನಿಮಾದ ಕಥೆ ನಡೆಯುತ್ತಿದೆ. ಅದಕ್ಕೆ ಅನುಸಾರವಾಗಿ, ಸ್ಕೂಲ್‌ಗೆ ಹೋಗುವ ಹುಡುಗಿ ಮತ್ತು ಪ್ರಬುದ್ಧ ಹುಡುಗಿಯ ಛಾಯೆಗಳಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಬೆಳೆಯುತ್ತ ಬೆಳೆಯುತ್ತ ಅವಳ ವ್ಯಕ್ತಿತ್ವದಲ್ಲಿ ಯಾವ ಬಗೆಯ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ ಎಂಬುದನ್ನು ನಿರ್ದೇಶಕರು ಬಹುಸೂಕ್ಷ್ಮವಾಗಿ ಹಿಡಿದಿಟ್ಟಿದ್ದಾರೆ’ ಎಂದು ಅವರು ತಮ್ಮ ಪಾತ್ರದ ಕುರಿತು ವಿವರಿಸುತ್ತಾರೆ. ಈಗಾಗಲೇ ಶೇ 40ರಷ್ಟು ಚಿತ್ರೀಕರಣ ಮುಗಿದಿದೆ. ಬೆಂಗಳೂರಿನಲ್ಲಿಯೇ ಇಡೀ ಚಿತ್ರವನ್ನು ಚಿತ್ರೀಕರಿಸಲಾಗುತ್ತದಂತೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !