ಭಾನುವಾರ, ಆಗಸ್ಟ್ 25, 2019
27 °C

ಮತ್ತೆ ಒಂದಾದ ಅಜಯ್‌– ಅಭಿಷೇಕ್‌

Published:
Updated:
Prajavani

ಏಳು ವರ್ಷಗಳ ನಂತರ ಅಜಯ್‌ ದೇವಗನ್‌ ಹಾಗೂ ಅಭಿಷೇಕ್‌ ಬಚ್ಚನ್‌ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಅಜಯ್‌ ದೇವಗನ್‌ ಮೂರು – ನಾಲ್ಕು ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಹೊಸ ಸಿನಿಮಾವೊಂದಕ್ಕೆ ಸಹಿ ಹಾಕಿದ್ದಾರೆ. ಇದರಲ್ಲಿ ಅಭಿಷೇಕ್‌ ಬಚ್ಚನ್‌ ಜೊತೆ ಏಳು ವರ್ಷಗಳ ನಂತರ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. 

ಇದು ಇವರಿಬ್ಬರು ಒಟ್ಟಾಗಿ ನಟಿಸುತ್ತಿರುವ ಐದನೇ ಚಿತ್ರ. 2012ರಲ್ಲಿ ಬಿಡುಗಡೆಯಾದ ‘ಬೋಲ್‌ ಬಚ್ಚನ್‌’ ಈ ಜೋಡಿ ಅಭಿನಯದ ಕೊನೆಯ ಚಿತ್ರ. ಇದಲ್ಲದೇ ಎಲ್‌ಒಸಿ ಕಾರ್ಗಿಲ್‌ (2003), ಜಮೀನ್‌ (2003), ಯುವ (2004) ಚಿತ್ರಗಳಲ್ಲಿ ನಟಿಸಿದ್ದರು. ಈ ಚಿತ್ರವನ್ನು ಕೂಕಿ ಗುಲಾಟಿ ನಿರ್ದೇಶಿಸುತ್ತಿದ್ದಾರೆ. 

ಈ ಚಿತ್ರಕತೆಯನ್ನು ಅಜಯ್‌ ತುಂಬ ಇಷ್ಟಪಟ್ಟು ತಕ್ಷಣವೇ ನಟಿಸಲು ಒಪ್ಪಿಕೊಂಡಿದ್ದಾರಂತೆ. 1999 ಹಾಗೂ 2000ರಲ್ಲಿ ನಡೆದ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ನಡೆದ ಮಹತ್ತರ ಬದಲಾವಣೆಗಳ ಸತ್ಯಘಟನೆಗಳು ಈ ಸಿನಿಮಾ ಕತೆಯ ಮೂಲ ಎಂದು ಚಿತ್ರತಂಡ ತಿಳಿಸಿದೆ. ಈ ಚಿತ್ರಕ್ಕೆ ಅಜಯ್‌ ದೇವಗನ್‌ ಅವರೇ ಬಂಡವಾಳ ಹೂಡಲಿದ್ದಾರೆ ಎಂಬ ಸುದ್ದಿಯೂ ಕೇಳಿಬರುತ್ತಿದೆ. 

ಇದರಲ್ಲಿ ಇಲಿಯಾನಾ ಡಿ ಕ್ರೂಸ್‌ ಅವರು ಅಜಯ್‌ ದೇವಗನ್‌ ಜೊತೆ ಜೋಡಿಯಾಗಿ ನಟಿಸಲಿದ್ದಾರೆ. ಅಜಯ್‌ ಜೊತೆಗೆ ಇಲಿಯಾನಾ ‘ಬಾದ್‌ಷಾ’ ಹಾಗೂ ‘ರೇಡ್‌’ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು.

ಈ ಸಿನಿಮಾ ಈ ವರ್ಷಾಂತ್ಯದಲ್ಲಿ ಬಿಡುಗಡೆಯಾಗಲಿದೆ.

ಅಜಯ್‌ ದೇವಗನ್‌ ಮೂರು ಬಹುತಾರಾಗಣದ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಸದ್ಯ ‘ಭುಜ್‌– ದಿ ಪ್ರೈಡ್‌ ಆಫ್‌ ಇಂಡಿಯಾ’ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪರಿಣಿತಿ ಚೋಪ್ರಾ, ರಾನಾ ದಗ್ಗುಬಾಟಿ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

‘ತಾನಾಜಿ– ದಿ ಅನ್‌ಸಂಗ್‌ ವಾರಿಯರ್‌' ಚಿತ್ರದಲ್ಲಿ ಪತ್ನಿ ಕಾಜೊಲ್‌ ಹಾಗೂ ಸೈಫ್‌ ಆಲಿ ಖಾನ್‌ ಜೊತೆ ನಟಿಸುತ್ತಿದ್ದಾರೆ. ‘ಆರ್‌ಆರ್‌ಆರ್‌’ ಸಿನಿಮಾದಲ್ಲಿ ಸ್ವಾತಂತ್ರ್ಯ ಹೋರಾಟಗಾರನ ಪಾತ್ರ ನಿರ್ವಹಿಸುತ್ತಿದ್ದಾರೆ.

Post Comments (+)