ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷಿತ್ ಶಶಿಕುಮಾರ್ ಸಂದರ್ಶನ: ಅಪ್ಪನ ಹೆಸರು ಉಳಿಸುವ ಹಂಬಲ ಮಗನಿಗೆ

Last Updated 15 ಜುಲೈ 2022, 0:30 IST
ಅಕ್ಷರ ಗಾತ್ರ

ಸಿನಿಮಾ ಆಸಕ್ತಿಯನ್ನು ಮನೆಯಿಂದಲೇ ಬೆಳೆಸಿಕೊಂಡು, ಶಾಲಾ ದಿನಗಳಲ್ಲಿ ಮುಂದುವರಿಸಿದವರು ನಟ ಶಶಿಕುಮಾರ್‌ ಪುತ್ರ ಅಕ್ಷಿತ್‌ ಶಶಿಕುಮಾರ್‌. ನಟನೆಯ ಪಟ್ಟುಗಳನ್ನು ಕಲಿತುಕೊಳ್ಳುತ್ತಲೇ ಎಂಜಿನಿಯರಿಂಗ್‌ ಮುಗಿಸಿದರು. ‘ಸೀತಾಯಣಂ’ ತೆಲುಗು ಚಿತ್ರದ ಮೂಲಕ ಬೆಳ್ಳಿ ತೆರೆ ಪ್ರವೇಶಿಸಿದ ಅವರು ಜುಲೈ 15ರಂದು ‘ಓ ಮೈ ಲವ್‌’ ಮೂಲಕ ಕನ್ನಡದ ಬೆಳ್ಳಿತೆರೆಗೆ ಕಾಲಿಡುತ್ತಿದ್ದಾರೆ. ಈ ಹೊತ್ತಿನಲ್ಲಿ ಅಕ್ಷಿತ್‌ ಅವರ ಜೊತೆಗೊಂದು ಮಾತುಕತೆ.

ಎಂಜಿನಿಯರಿಂಗ್‌ ಓದಿದವರು ನಟನೆಯತ್ತ ಹೊರಳಿದಿರಿ?
ನಟನೆ ಚಿಕ್ಕ ವಯಸ್ಸಿನ ಹಂಬಲ. ಎಂಜಿನಿಯರಿಂಗ್ ಓದಿದ್ದು ಅಪ್ಪನ ಒತ್ತಾಯದಿಂದ. ಯಾವುದೇ ಕೆಲಸ ಮಾಡಿ, ಒಂದು ಭದ್ರವಾದ ಶಿಕ್ಷಣದ ತಳಹದಿ ಇರಬೇಕು ಎಂಬುದು ಅವರ ನಿಲುವು. ಹಾಗೆ ನೋಡಿದರೆ ನಾನು ಈ ಕ್ಷೇತ್ರವನ್ನು ಆರಿಸಿಕೊಳ್ಳುವಾಗ ಅವರಿಗೆ ಆತಂಕ ಇತ್ತು. ನಾನು ನಟನೆಗೆ ಬರುವುದು ಅವರಿಗೆ ಇಷ್ಟವೂ ಇರಲಿಲ್ಲ. ಆದರೆ, ಇದು ನನ್ನ ಆಯ್ಕೆ. ಇಷ್ಟಪಟ್ಟೇ ಬಂದಿದ್ದೇನೆ.

ತಂದೆಯವರ ಪ್ರಭಾವ ಮತ್ತು ಅವರಿಂದ ಕಲಿತದ್ದು ಏನು?

ತಂದೆಯವರು ಸ್ಟಾರ್‌ ಆಗಿದ್ದವರು. ಅವರ ಹೆಸರನ್ನು ಗಟ್ಟಿಯಾಗಿ ಉಳಿಸಬೇಕು ಎಂಬ ಛಲ ನನ್ನಲ್ಲಿದೆ. ಈಗಲೂ ಅವರ ಪ್ರಭಾವವನ್ನು ಎಲ್ಲಿಯೂ ಬಳಸದೇ ಸ್ವತಃ ಮುನ್ನಡೆಯುತ್ತಿದ್ದೇನೆ. ನನ್ನ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತಿದ್ದೇನೆ. ‘ಸೀತಾಯಣಂ’ನಿಂದ ಇಲ್ಲಿಯವರೆಗೂ ನಾನು ಆಡಿಷನ್‌ನಲ್ಲಿ ಭಾಗವಹಿಸಿಯೇ ಆಯ್ಕೆಯಾಗಿದ್ದೇನೆ. ಸ್ವತಃ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಬಂದಿದ್ದೇನೆ. ಎಲ್ಲ ಕ್ಷೇತ್ರಗಳಂತೆಯೇ ಇಲ್ಲಿಯೂ ಸ್ಪರ್ಧೆ ಇದೆ. ನಿಜವಾದ ಪ್ರತಿಭೆ ಇದ್ದರೆ ಮಾತ್ರ ಇಲ್ಲಿ ಉಳಿಯಬಹುದು. ಹಾಗಾಗಿಯೇ ನನ್ನ ಚಿತ್ರಗಳ ಪ್ರಚಾರಕ್ಕೂ ತಂದೆಯವರು ಬರುವುದಿಲ್ಲ. ಸ್ವಂತಿಕೆ ಮೇಲೆ ನಂಬಿಕೆ ಇದೆ. ಪ್ರತಿ ಹಂತದಲ್ಲೂ ಕಲಿಯುತ್ತಲೇ ಇದ್ದೇನೆ.

ಸಾಲು ಚಿತ್ರಗಳಲ್ಲಿ ಅವಕಾಶ ಬಂದಿವೆ. ತುಂಬಾ ಬ್ಯುಸಿಯಾಗಿಬಿಟ್ಟಿರಾ ಹೇಗೆ?

ಹೌದು, ಸದ್ಯ ‘ಓ ಮೈ ಲವ್‌’ ಚಿತ್ರದ ಪ್ರಮೋಷನ್‌ನಲ್ಲಿ ತೊಡಗಿದ್ದೇನೆ. ಇದರ ಫಲಿತಾಂಶದ ಮೇಲೆ ನಿರೀಕ್ಷೆ ಇದೆ. ಆ ಬಳಿಕ ಸೆಪ್ಟೆಂಬರ್‌ನಲ್ಲಿ ನಾನು ಮತ್ತು ಅದಿತಿ ಪ್ರಭುದೇವ ಅಭಿನಯದ ಇನ್ನೊಂದು ಹೊಸ ಚಿತ್ರ ಬಿಡುಗಡೆಯಾಗಲಿದೆ. ಅದರ ಡಬ್ಬಿಂಗ್‌ ಕೂಡಾ ಮುಗಿದಿದೆ. ಒಳ್ಳೆಯ ಕಥಾ ವಸ್ತುವನ್ನು ನೋಡಿಕೊಂಡು ಆಯ್ಕೆ ಮಾಡುತ್ತೇನೆ. ಕಮರ್ಷಿಯಲ್‌ ಚಿತ್ರ ಅಂದಾಕ್ಷಣ ಸುಮ್ಮನೆ ಒಪ್ಪಿಕೊಂಡು ಬಿಡುವುದಿಲ್ಲ. ಹಾಗಾಗಿ ಬ್ಯುಸಿ ಆಗಿರಲೇಬೇಕು.

‘ಓ ಮೈಲವ್‌’ ನಲ್ಲಿ ಏನಿದೆ?

ಪೂರ್ಣಪ್ರಮಾಣದ ಕುಟುಂಬ ಮನೋರಂಜನಾತ್ಮಕ ಪ್ಯಾಕೇಜನ್ನು ನೀವು ನೋಡಬಹುದು. ಒಳ್ಳೆಯ ನಿರ್ದೇಶಕರು ಸಿಕ್ಕಿದ್ದಾರೆ. ಅವರಿಗೆ ಸಂಗೀತದ ಗ್ರಹಿಕೆ ಚೆನ್ನಾಗಿದೆ. ಕಥೆಯೊಂದನ್ನು ಸಿನಿಮೀಯವಾಗಿ ಕಟ್ಟಿಕೊಡುವಲ್ಲಿ ಆಸ್ಥೆ ವಹಿಸಿದ್ದಾರೆ. ಕಥೆ, ಸಂಗೀತ, ಛಾಯಾಗ್ರಹಣ, ಸಾಹಸ, ಕಲಾವಿದರ ಆಯ್ಕೆ ಇವೆಲ್ಲದರಲ್ಲೂ ಕರಾರುವಾಕ್ಕುತನ ಇತ್ತು. ಹಾಗಾಗಿ ಇದು ಪ್ರೇಕ್ಷಕನಿಗೆ ಇಷ್ಟವಾಗುತ್ತದೆ.

ಹಿರಿಯ ಕಲಾವಿದರೊಂದಿಗಿನ ಅನುಭವ?

ಪ್ರೀತಿಯಿಂದ ತುಂಬಾ ಕಲಿಸಿದ್ದಾರೆ. ಎಸ್‌. ನಾರಾಯಣ್‌, ಪವಿತ್ರಾ ಲೋಕೇಶ್‌, ಸಾಧು ಕೋಕಿಲ ಅವರಂತಹ ಹಿರಿಯರು ಇದ್ದರು. ಸೆಟ್‌ಗೆ ಹೋದಾಗ ಸಣ್ಣಗೆ ಅಳುಕು, ಕಂಪನ ನನ್ನಲ್ಲಿತ್ತು. ಆದರೆ, ನಿರ್ದೇಶಕರು ಇದನ್ನೆಲ್ಲಾ ಗಮನಿಸಿ ಹಲವಾರು ಕಾರ್ಯಾಗಾರಗಳನ್ನು ನಡೆಸಿದರು. ಆ ಅಳುಕು ಹೋಗಲಾಡಿಸಲು ಎಲ್ಲ ಪ್ರಯತ್ನಗಳೂ ನಡೆದಿವೆ. ಹಿರಿಯ ಕಲಾವಿದರು ಪ್ರೀತಿಯಿಂದ ನಡೆಸಿಕೊಂಡಿದ್ದಾರೆ. ಎಸ್‌.ನಾರಾಯಣ್‌ ಅಭಿನಯದ ವೇಳೆ ನಾನು ಕ್ಯಾಮೆರಾ ಮಾನಿಟರ್‌ ಮುಂದೆಯೇ ಕೂತಿರುತ್ತಿದ್ದೆ. ಇವರ ಜೊತೆಗೆ ಕೆಲಸ ಮಾಡಬೇಕಾದರೆ ಶ್ರದ್ಧೆ ಇರಬೇಕು ಎಂದು ತಂದೆಯವರ ಎಚ್ಚರಿಕೆಯೂ ಇತ್ತು. ನಾಯಕಿ ಕೀರ್ತಿ ಕಲ್ಕೆರೆ ಅವರೂ ತುಂಬಾ ಖುಷಿ ಮತ್ತು ಪ್ರೀತಿಯಿಂದ ತೊಡಗಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT