ಸೋಮವಾರ, ಮೇ 16, 2022
28 °C

‘ಅಮೆರಿಕಾ ಅಮೆರಿಕಾ ...’ ಪಯಣಕ್ಕೀಗ 25ರ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನೂರು ಜನ್ಮಕೂ ನೂರಾರು ಜನ್ಮಕೂ.....’ ಈ ಹಾಡು ಕಿವಿಗೆ ಬಿದ್ದಾಗ ಮನಸ್ಸಿನಲ್ಲೇ ಪದೇ ಪದೇ ರಿರಿಲೀಸ್‌ ಆಗುವ ಸಿನಿಮಾ ‘ಅಮೆರಿಕಾ ಅಮೆರಿಕಾ’. ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ, ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾಗೀಗ 25 ವರ್ಷದ ಸಂಭ್ರಮ.

ಈ ಸಂಭ್ರಮದ ಕ್ಷಣವನ್ನು ನಟ ರಮೇಶ್‌ ಅರವಿಂದ್‌ ಟ್ವೀಟ್‌ ಮೂಲಕ ನೆನಪಿಸಿಕೊಂಡಿದ್ದಾರೆ. ‘ಈ ದಿನ, 25 ವರ್ಷಗಳ ಹಿಂದೆ ‘ಅಮೆರಿಕಾ ಅಮೆರಿಕಾ’ ಚಿತ್ರ ಬಿಡುಗಡೆಯಾಗಿ, ಒಂದು ವರ್ಷ ಓಡಿತು. ಅಂದಿನಿಂದ ಇಂದಿನವರೆಗೆ ಈ ಸೂರ್ಯನಿಗೆ ನೀವು ತೋರಿಸುತಿರುವ ಪ್ರೀತಿಗೆ ನಾನು ಋಣಿ’ ಎಂದು ರಮೇಶ್‌ ಉಲ್ಲೇಖಿಸಿದ್ದಾರೆ.

ಚಿತ್ರದಲ್ಲಿ ‘ಸೂರ್ಯ’ನಾಗಿ ರಮೇಶ್‌, ‘ಭೂಮಿ’ಯಾಗಿ ನಟಿ ಹೇಮಾ ಪ್ರಭಾತ್‌ ಹಾಗೂ ‘ಶಶಾಂಕ್‌’ ಪಾತ್ರದಲ್ಲಿ ಅಕ್ಷಯ್‌ ಆನಂದ್‌ ನಟಿಸಿದ್ದರು. ಈ ಜೋಡಿಯು ಲಕ್ಷಾಂತರ ಸಿನಿ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆದಿತ್ತು. ದತ್ತಣ್ಣ, ವೈಶಾಲಿ ಕಾಸರವಳ್ಳಿ ಮತ್ತಿತರರು ತಾರಾಗಣದಲ್ಲಿದ್ದರು. ವಿ.ಮನೋಮೂರ್ತಿ ಸಂಗೀತ ನಿರ್ದೇಶನದ ‘ನೂರು ಜನ್ಮಕೂ...’ ‘ಯಾವ ಮೋಹನ ಮುರಳಿ ಕರೆಯಿತೊ..’ ಹಾಡುಗಳಂತೂ ಇನ್ನೂ ಕನ್ನಡಿಗರ ಅಧರದಲ್ಲಿ ಹಚ್ಚಹಸಿರಾಗಿದೆ.

1996ರ ಜೂನ್‌ 16ರಂದು ಕ್ಯಾಲಿಫೋರ್ನಿಯಾದ ಮಿಲ್‌ ಪೀಟಸ್‌ನಲ್ಲಿರುವ ರವೀಂದ್ರನಾಥ್‌ ಎಂಬುವವರ ಮನೆಯಲ್ಲಿ ಚಿತ್ರದ ಮುಹೂರ್ತ ನಡೆದಿತ್ತು. ಚಿತ್ರತಂಡದ 16 ಸದಸ್ಯರಷ್ಟೇ ಚಿತ್ರೀಕರಣಕ್ಕೆಂದು ಅಮೆರಿಕಕ್ಕೆ ಹೋಗಿದ್ದರು. ರಮೇಶ್‌ ಅರವಿಂದ್‌ ಅವರೂ ಮೊದಲ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿದ್ದರು. ಅಮೆರಿಕದಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಯೂ ಈ ಚಿತ್ರಕ್ಕಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು