ಮತ್ತೆ ಅಮೃತಾ

7

ಮತ್ತೆ ಅಮೃತಾ

Published:
Updated:
Prajavani

ಶಿವಸೇನಾ ಮುಖ್ಯಸ್ಥ ಬಾಳ್‌ ಸಾಹೇಬ್ ಠಾಕ್ರೆ ಜೀವನಕತೆಯ ಚಿತ್ರ ‘ಠಾಕ್ರೆ’ಯ ಮೂಲಕ ಬಾಲಿವುಡ್‌ ನಟಿ ಅಮೃತಾ ರಾವ್‌ ತೆರೆಗೆ ಮರಳಿದ್ದಾರೆ. ನವಾಜುದ್ದೀನ್‌ ಸಿದ್ದಿಕಿ ಚಿತ್ರದ ನಾಯಕ ನಟ. ಠಾಕ್ರೆ ಪತ್ನಿ ಮೀನಾತಾಯ್‌ ಠಾಕ್ರೆಯಾಗಿ ಅಮೃತಾ ಅಭಿನಯಿಸಿದ್ದಾರೆ.

ಇದು ಒಂದರ್ಥದಲ್ಲಿ ಅಮೃತಾ ಅವರ ಎರಡನೇ ಇನ್ನಿಂಗ್ಸ್‌. ಬಾಲಿವುಡ್‌ ಎಂಟ್ರಿಗೂ ಮೊದಲು ಅಂದರೆ ವಿದ್ಯಾರ್ಥಿ ಜೀವನದಲ್ಲೇ ರೂಪದರ್ಶಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟವರು ಅಮೃತಾ. ‘ಅಬ್‌ ಕಿ ಬಾರಸ್‌’ ಮೂಲಕ 2002ರಲ್ಲಿ ಬಿ ಟೌನ್‌ಗೆ ಪರಿಚಯಗೊಂಡರು. ಮೊದಲ ಚಿತ್ರದ ಅಭಿನಯಕ್ಕೆ ಫಿಲ್ಮ್‌ ಫೇರ್‌ ಅತ್ಯುತ್ತಮ ಹೊಸ ನಾಯಕನಟಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ‘2006ರ ಸೂಪರ್‌ ಹಿಟ್‌ ಚಿತ್ರ ‘ವಿವಾಹ್‌’ನಲ್ಲಿನ ನಟನೆ ಅಮೃತಾ ಅವರ ತಾರಾವರ್ಚಸ್ಸು ಹೆಚ್ಚುವಂತೆ ಮಾಡಿತು. ಶಾಹೀದ್ ಕಪೂರ್‌ಗೆ ಜೋಡಿಯಾಗಿ ಅಮೃತಾ ಅವರದು ಗಮನ ಸೆಳೆವ ಅಭಿನಯ. ಬಿ ಟೌನ್ ಅವರನ್ನು ‘ವಿವಾಹ್‌ ನಟಿ ’ ಎಂದೇ ಗುರುತಿಸಲಾರಂಭಿಸಿತು. 

ಸಿನಿಮಾ ಮತ್ತು ಕಿರುತೆರೆಯಲ್ಲಿ ಅವಕಾಶ ಹಾಗೂ ಪ್ರಸಿದ್ಧಿಯ ಉತ್ತುಂಗದಲ್ಲಿರುವಾಗಲೇ ಗುಡ್‌ ಬೈ ಹೇಳಿ ತೆರೆಗೆ ಸರಿದುದು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿತ್ತು. 

‘ಠಾಕ್ರೆ’ ಸಿನಿಮಾದಲ್ಲಿ ಮೀನಾತಾಯ್‌ ಪಾತ್ರಕ್ಕಾಗಿ ಆಫರ್‌ ಬಂದಾಗಲೂ ಅಮೃತಾಗೆ ನಂಬಲಾಗಿರಲಿಲ್ಲವಂತೆ. ‘ನಿರ್ಮಾಪಕ ಸಂಜಯ್ ರಾವತ್‌ ಮತ್ತು ನಿರ್ದೇಶಕ ಅಭಿಜಿತ್‌ ಪನ್ಸೆ ಒಂದು ದಿನ ನನ್ನೊಂದಿಗೆ ಮಾತನಾಡಿ ಠಾಕ್ರೆ ಸಿನಿಮಾದಲ್ಲಿ ಮೀನಾತಾಯ್‌ ಪಾತ್ರ ಮಾಡುವಂತೆ ಕೇಳಿದಾಗ ನಿಜಕ್ಕೂ ಅಚ್ಚರಿಯಾಯಿತು. ಚಿತ್ರರಂಗದಲ್ಲಿ ನನ್ನದೇ ಆದ ಛಾಪು ಮೂಡಿಸಿದವಳು ನಾನು. ಸಾರ್ವಕಾಲಿಕವೆನಿಸುವ ಪಾತ್ರಗಳನ್ನೂ ಮಾಡಿದ್ದೇನೆ. ನನ್ನನ್ನು ಹುಡುಕಿಕೊಂಡು ಬಂದ ಮೀನಾತಾಯ್‌ ಪಾತ್ರವನ್ನು ಒಪ್ಪಿಕೊಂಡಿದ್ದಕ್ಕೆ ನನಗೀಗ ಹೆಮ್ಮೆ ಎನಿಸುತ್ತಿದೆ’ ಎಂದು ಅಮೃತಾ ಹೇಳಿಕೊಂಡಿದ್ದಾರೆ.

ಮನೋಜ್ಞ ನಟನೆ ಮತ್ತು ಸೌಂದರ್ಯದಿಂದ ಗಮನ ಸೆಳೆಯುವ ಅಮೃತಾ ಈಗ ಮತ್ತೊಂದು ಅಧ್ಯಾಯ ಬರೆಯುತ್ತಿರುವುದು ಅವರ ಅಭಿಮಾನಿಗಳಿಗೆ ಭಾರಿ ಖುಷಿ ಕೊಟ್ಟಿದೆ. ಮೊನ್ನೆಯಷ್ಟೇ ಮುಂಬೈನ ಶಿವಾಜಿ ರಾವ್ ಪಾರ್ಕ್‌ಗೆ ಮೀನಾತಾಯ್‌ ಗೆಟಪ್‌ನಲ್ಲಿ ಭೇಟಿ ಕೊಟ್ಟಾಗ ನೂರಾರು ಮಂದಿ ಅಭಿಮಾನಿಗಳು ಅಲ್ಲಿ ಮುತ್ತಿಕೊಂಡದ್ದು ಇದಕ್ಕೆ ಸಾಕ್ಷಿ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !