ಮಂಗಳವಾರ, ಮೇ 24, 2022
31 °C

ನಟಿ ಹರಿಪ್ರಿಯಾಗೆ ಹಾಲಿವುಡ್‌ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇತ್ತೀಚೆಗೆ ನಡೆದ ಹಾಲಿವುಡ್‌ ಅಂತರರಾಷ್ಟ್ರೀಯ ಗೋಲ್ಡನ್‌ ಏಜ್‌ ಚಿತ್ರೋತ್ಸವದಲ್ಲಿ ‘ಅಮೃತಮತಿ’ ಚಿತ್ರದಲ್ಲಿನ ಪಾತ್ರಕ್ಕಾಗಿ ನಟಿ ಹರಿಪ್ರಿಯಾ ಅವರಿಗೆ ಶ್ರೇಷ್ಠ ನಟಿ ಪ್ರಶಸ್ತಿ ಲಭಿಸಿದೆ.

ಇದಕ್ಕೂ ಮುನ್ನ ನೋಯ್ಡಾದ ಎರಡು ಸಂಸ್ಥೆಗಳು ನಡೆಸಿದ ಎರಡು ಪ್ರತ್ಯೇಕ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲೂ ಹರಿಪ್ರಿಯಾ ಅವರು ಶ್ರೇಷ್ಠ ನಟಿ ಪ್ರಶಸ್ತಿಗೆ ಭಾಜನರಾಗಿದ್ದರು. ಹೀಗಾಗಿ ಒಟ್ಟು ಮೂರು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಅವರು ಶ್ರೇಷ್ಠ ನಟಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್‌ ಮೂಲಕ ನಿರ್ಮಾಣಗೊಂಡು ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿದ ‘ಅಮೃತಮತಿ’ ಚಿತ್ರವು ಅಟ್ಲಾಂಟ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ಶ್ರೇಷ್ಠ ವಿದೇಶಿ ಭಾಷಾ ಚಿತ್ರ’ ಪ್ರಶಸ್ತಿ ಗಳಿಸಿತ್ತು. ಲಾಸ್‌ ಏಂಜಲಿಸ್‌ ಸನ್‌ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಶ್ರೇಷ್ಠ ಚಿತ್ರ ಮತ್ತು ಬರಗೂರರಿಗೆ ಶ್ರೇಷ್ಠ ಚಿತ್ರಕಥೆ ಪ್ರಶಸ್ತಿ ಲಭಿಸಿತ್ತು.

ಇಲ್ಲಿಯವರೆಗೆ ಈ ಚಿತ್ರವು ಹತ್ತಕ್ಕೂ ಅಧಿಕ ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಪ್ರದರ್ಶನ ಕಂಡಿದೆ. ‘ಇಂತಹ ಮನ್ನಣೆಗೆ ಪಾತ್ರವಾಗುತ್ತಿರುವ ಈ ಚಿತ್ರವು ಕನ್ನಡದ ಪ್ರಾಚೀನ ಕೃತಿಯಾದ ‘ಯಶೋಧರ ಚರಿತೆ’ಯ ಪ್ರಸಂಗವನ್ನು ಆಧರಿಸಿ ಮರುವ್ಯಾಖ್ಯಾನಗೊಂಡ ಚಿತ್ರವೆನ್ನುವುದು ಒಂದು ವಿಶೇಷ’ ಎನ್ನುತ್ತಾರೆ ಬರಗೂರು ರಾಮಚಂದ್ರಪ್ಪ.

ಚಿತ್ರದಲ್ಲಿ ಯಶೋಧರನ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್‌ ಅವರು ನಟಿಸಿದ್ದು, ಸುಂದರರಾಜ್‌, ಪ್ರಮೀಳಾ ಜೋಷಾಯ್‌ ತಿಲಕ್‌, ಸುಪ್ರಿಯಾ ರಾವ್‌ ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಿತ್ರವು ಶೀಘ್ರದಲ್ಲೇ ಮುಂಬೈ ಸಂಸ್ಥೆಯೊಂದರ ಮೂಲಕ ಕರ್ನಾಟಕದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು