ಬುಧವಾರ, ಜನವರಿ 22, 2020
24 °C

ಅಮೃತಮತಿಯ ಮರುಹುಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಚಿತ್ರದ ಶೂಟಿಂಗ್‌ ಪೂರ್ಣಗೊಂಡಿದ್ದು, ಸೆನ್ಸಾರ್‌ಗೆ ಸಿದ್ಧವಾಗಿದೆ. ಶೀಘ್ರವೇ, ಚಿತ್ರ ತೆರೆಕಾಣುವ ನಿರೀಕ್ಷೆ ಇದೆ. ನಿರ್ದೇಶನದ ಜತೆಗೆ ಚಿತ್ರಕಥೆ, ಸಂಭಾಷಣೆ ಹಾಗೂ ಗೀತರಚನೆಯನ್ನು ಅವರೇ ನಿಭಾಯಿಸಿದ್ದಾರೆ.

ಹದಿಮೂರನೇ ಶತಮಾನದ ಜನ್ನ ಕವಿಯಿಂದ ರಚಿತವಾದ ‘ಯಶೋಧರ ಚರಿತೆ’ ಕಾವ್ಯ ಆಧರಿಸಿದ ಚಿತ್ರವಿದು. ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಈ ಚಿತ್ರಕ್ಕೆ ಇಂಚರ ಪುಟ್ಟಣ್ಣ ಪ್ರೊಡಕ್ಷನ್‌ ಸಂಸ್ಥೆಯಡಿ ಬಂಡವಾಳ ಹೂಡಿದ್ದಾರೆ. 

ಯುವರಾಜ ಯಶೋಧರನ ಪತ್ನಿ ಅಮೃತಮತಿಯು ಒಂದು ದಿನ ಲಾಯದ ಉಸ್ತುವಾರಿಯಾದ ಅಷ್ಟಾವಂಕನ ಹಾಡು ಕೇಳಿ ಮೋಹಿತಳಾಗುತ್ತಾಳೆ. ತನ್ನ ಸೇವಕಿ ಮೂಲಕ ಆತನನ್ನು ಒಪ್ಪಿಸಿ ತಾನೇ ಲಾಯಕ್ಕೆ ಹೋಗಿ ಬರಲು ಆರಂಭಿಸುತ್ತಾಳೆ. ಅನುಮಾನ ಬಂದ ಯಶೋಧರ ಒಂದು ರಾತ್ರಿ ಹಿಂಬಾಲಿಸಿ ಅವರಿಬ್ಬರ ಜೊತೆಯನ್ನು ಕಣ್ಣಾರೆ ಕಾಣುತ್ತಾನೆ. ಕೊಲ್ಲಬೇಕಿನಿಸಿದರೂ ಕೊಲ್ಲದೆ ಹಿಂತಿರುಗುತ್ತಾನೆ.

ಕೆಲವು ದಿನಗಳ ನಂತರ ತನ್ನ ವಿಷಯ ಗಂಡ ಮತ್ತು ಅತ್ತೆ ಮಾವಂದಿರಿಗೆ ತಿಳಿದಿದೆಯೆಂಬ ಅನುಮಾನದಿಂದ ಅಮೃತಮತಿಯು ವಿಷದ ಲಡ್ಡುಗೆ ಉಣಿಸಿ ಅವರ ಸಾವಿಗೆ ಕಾರಣಳಾಗುತ್ತಾಳೆ. ಆನಂತರ ಎಲ್ಲರೂ ವಿವಿಧ ಜನ್ಮಾಂತರಗಳಲ್ಲಿ ಮರುಹುಟ್ಟು ಪಡೆಯುತ್ತಾರೆ. ಇದು ಮೂಲ ಕಥೆಯ ಸಾರ. 

‘ಮೂಲ ಕಥನಗಳನ್ನು ಪುನರ್‌ ಸೃಷ್ಟಿ ಮಾಡಿದ ದೊಡ್ಡ ಪರಂಪರೆಯೇ ನಮ್ಮಲ್ಲಿದೆ. ಈ ಪರಂಪರೆಯ ಮುಂದುವರಿಕೆಯಾಗಿ ‘ಯಶೋಧರ ಚರಿತೆ’ಯ ಮೂಲ ಕಥನವನ್ನು ಪುನರ್‌ ಸೃಷ್ಟಿಸಿ, ಪುನರ್‌ ವ್ಯಾಖ್ಯಾನ ಮಾಡಲಾಗಿದೆ. ಅಮೃತಮತಿ ಮತ್ತು ಅರಮನೆ ವ್ಯವಸ್ಥೆಯ ನಡುವಿನ ಮುಖಾಮುಖಿ ಮೂಲಕ ಮೂಲಕಥನದಲ್ಲಿದ್ದ ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಮರು ವ್ಯಾಖ್ಯಾನದ ಹೊಸ ರೂಪ ಕೊಟ್ಟಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಬರಗೂರು.

ಕೇವಲ ಒಂದು ಹಾಡು ಕೇಳಿ ಅಮೃತಮತಿಯು ಅಷ್ಟಾವಂಕನಲ್ಲಿ ಅನುರಕ್ತಳಾದಳೆನ್ನುವ ಬದಲು ಅರಮನೆಯ ಭೋಗ ಬಂಧನದಲ್ಲಿ ಆಕೆ ಅನುಭವಿಸುತ್ತಿದ್ದ ತಳಮಳ ಮತ್ತು ಜನಪದ ಸಂಗೀತಾದಿ ಕಲೆಗಳ ಬಗ್ಗೆ ಇದ್ದ ಆಸಕ್ತಿಯನ್ನು ನಿರೂಪಿಸಿ ಆಕೆಯ ಹೊಸ ಸಂಬಂಧಕ್ಕೆ ತರ್ಕವನ್ನು ಒದಗಿಸಲಾಗಿದೆ. ಭೋಗ ಮತ್ತು ಸುಖ, ಬಂಧನ ಮತ್ತು ಬಿಡುಗಡೆ, ಪ್ರಭುತ್ವ ಮತ್ತು ಜನತೆ –ಹೀಗೆ ವಿಭಿನ್ನ ನೆಲೆಗಳ ಮುಖಾಮುಖಿ ಮತ್ತು ವೈರುಧ್ಯಗಳನ್ನು ‘ಅಮೃತಮತಿ’ ಮೂಲಕ ವ್ಯಾಖ್ಯಾನಿಸಲಾಗಿದೆ ಎನ್ನುವುದು ಅವರ ವಿವರಣೆ.

ಇದನ್ನೂ ಓದಿ: ಇದು ಚೀರಾಟಗಳ ಶತಮಾನ: ಬರಗೂರು ರಾಮಚಂದ್ರಪ್ಪ

ನಟಿ ಹರಿಪ್ರಿಯಾ ‘ಅಮೃತಮತಿ’ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಯಶೋಧರನಾಗಿ ನಟ ಕಿಶೋರ್‌, ಅಷ್ಟಾವಂಕನ ಪಾತ್ರದಲ್ಲಿ ತಿಲಕ್‌, ಯಶೋಧರನ ತಂದೆ– ತಾಯಿಯಾಗಿ ಸುಂದರ್‌ ರಾಜ್‌, ಪ್ರಮೀಳಾ ಜೋಷಾಯ್‌ ಅಭಿನಯಿಸಿದ್ದಾರೆ. ಸುಪ್ರಿಯಾ ರಾವ್‌, ಅಂಬರೀಶ್‌ ಸಾರಂಗಿ, ವತ್ಸಲಾ ಮೋಹನ್‌ ತಾರಾಗಣದಲ್ಲಿದ್ದಾರೆ. ನಾಗರಾಜ ಅದವಾನಿ ಅವರ ಛಾಯಾಗ್ರಹಣವಿದೆ. ಸುರೇಶ್‌ ಅರಸು ಅವರ ಸಂಕಲನವಿದೆ. ಶಮಿತಾ ಮಲ್ನಾಡ್‌ ಸಂಗೀತ ನಿರ್ದೇಶಿಸಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು