ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ: ರಾಜ್‌ಕುಮಾರ್ ಆತ್ಮಕಥೆಯ ನೆನಕೆ

Published 25 ಏಪ್ರಿಲ್ 2023, 20:34 IST
Last Updated 25 ಏಪ್ರಿಲ್ 2023, 20:34 IST
ಅಕ್ಷರ ಗಾತ್ರ

‘ಪ್ರಜಾವಾಣಿ’ ಪತ್ರಿಕೆಯು ಸಿನಿಮಾರಂಗದ ಪ್ರಮುಖ ಘಟನಾವಳಿಗಳನ್ನಷ್ಟೆ ದಾಖಲಿಸದೆ ಆತ್ಮಕಥೆಗಳಿಗೂ ಬೆಳಕು ಕಾಣಿಸಿದೆ. ಅದರಲ್ಲಿ ರಾಜ್‌ಕುಮಾರ್ ಅವರ ಬದುಕಿನ ಕುರಿತ ಆಸಕ್ತಿಕರ ಅಂಶಗಳನ್ನು ಒಳಗೊಂಡಿದ್ದ ಆತ್ಮಕಥೆ ಮುಖ್ಯವಾದುದು. ಅದು 1970ರಲ್ಲೇ ಪ್ರಕಟವಾಗಿತ್ತು.

‘ತಂದೆಯವರು ಮನೆ ಬಿಡುವಾಗ ನನ್ನ ತಾಯಿ ಗರ್ಭಿಣಿ. ಹರಕೆಯ ಫಲವಾಗಿ ಹುಟ್ಟಿದ ನನಗೆ ಮುತ್ತುರಾಜ ಎಂದು ಹಿರಿಯರು ಹೆಸರಿಟ್ಟರು. ಈ ಹೆಸರಿನ ಹಿಂದೆ ಒಂದು ಐತಿಹ್ಯವಿದೆ.

‘ಕನಕಪುರ–ಮೇಕೆದಾಟುಗಳ ನಡುವೆ ಕೆಲವು ಮೈಲಿಗಳ ದೂರದಲ್ಲಿ ಆಂಜನೇಯನ ಪುಟ್ಟ ಗುಡಿಯೊಂದಿದೆ. ಇಲ್ಲಿಗೆ ನಮ್ಮೂರಿನ ಕಡೆಯಿಂದ ಹೋಗಬೇಕಾದರೆ ಹೊಳೆ ದಾಟಿ ಹೋಗಬೇಕು. ಮಕ್ಕಳಾಗದಿದ್ದವರು ಈ ದೇವರಿಗೆ ಹರಕೆ ಹೊತ್ತರೆ ಸಂತಾನವಾಗುವುದು ಎಂದು ಪ್ರತೀತಿ. ನನ್ನ ಹಿರಿಯರೂ ಈ ದೇವರಿಗೆ ಹರಕೆ ಹೊತ್ತರು. ಹರಕೆಯ ಫಲವಾಗಿ ಹುಟ್ಟಿದ ನನಗೆ ಈ ದೇವರ ಹೆಸರನ್ನೇ ಇಟ್ಟರು. ಈ ದೇವರಿಗೆ ಮತ್ತೆತ್ತರಾಯ ಎಂದು ಹೆಸರು ಬರಲು ದಂತ ಕಥೆಯೊಂದಿದೆ...‘ ಹೀಗೆ ಸಾಗುತ್ತದೆ ನಟ ರಾಜ್‌ಕುಮಾರ್ ಅವರ ಆತ್ಮಕಥೆಯ ಬರಹ.

1970ರ ಮಾರ್ಚ್‌ನಲ್ಲಿ ಇಂತಹುದೊಂದು ಪ್ರಯೋಗವನ್ನು ‘ಪ್ರಜಾವಾಣಿ’ ಪತ್ರಿಕೆಯು ಪ್ರಾರಂಭಿಸಿತ್ತು. ‘ಹಿರಿಯರ ಹರಕೆ’ ಎನ್ನುವ ಅಧ್ಯಾಯದಲ್ಲಿ ರಾಜ್‌ಕುಮಾರ್ ಅವರ ಹುಟ್ಟಿನ ಹಿಂದೆ ಹಿರಿಯರು ಹೇಗೆ ಹರಕೆ ಹೊತ್ತಿದ್ದರು ಎನ್ನುವ ಅಂಶವನ್ನು ಪ್ರಧಾನವಾಗಿ ಇರಿಸಲಾಗಿತ್ತು. ಗುಬ್ಬಿ ಕಂಪನಿ ಸೇರುವುದಕ್ಕೆ ಮೊದಲು ತಮ್ಮ ಮಾವ ಅಪ್ಪಾಜಿಗೌಡರು ಹಾಗೂ ಅವರ ತಮ್ಮ ಸಣ್ಣೇಗೌಡರಲ್ಲಿ ತಾವು ಸಂಗೀತ ಪಾಠ ಕಲಿತದ್ದನ್ನೂ ಆಗ ರಾಜಕುಮಾರ್ ಹೇಳಿಕೊಂಡಿದ್ದರು. ಅವರ ಆತ್ಮಕಥೆಯ ಅಧ್ಯಾಯಗಳು ಕೆಲವು ತಿಂಗಳುಗಳ ಅವಧಿಯಲ್ಲಿ ಆಗ ಪ್ರಕಟವಾಗಿತ್ತು.

ಹೀಗೆ ಸಿನಿಮಾ ಜತೆಗೆ ಸಾಂಸ್ಕೃತಿಕ ನಂಟು ಹೊಂದಿರುವ ಪತ್ರಿಕೆಯು ಈಗ ‘ಸಿನಿ ಸಮ್ಮಾನ’ ನೀಡುವ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಪ್ರಶಸ್ತಿಗಳು ಯಾವುವು, ಆಯ್ಕೆ ಪ್ರಕ್ರಿಯೆ ಹೇಗಿದ್ದೀತು ಎನ್ನುವುದನ್ನು ತಿಳಿಯಲು ನಿತ್ಯವೂ ಈ ಸ್ಥಳವನ್ನು ಗಮನಿಸುತ್ತಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT