ಬುಧವಾರ, ಜುಲೈ 28, 2021
24 °C

28 ತುಂಬುವ ಮೊದಲೇ 65ರ ಅಪ್ಪನಾದ ಅನುಪಮ್

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಅನುಪಮ್ ಖೇರ್

ನಟನಾಗಿ ಮಿಂಚುವ ಮತ್ತು ಐಡೆಂಟಿಟಿ ಹೊಂದುವ ಉಮೇದಿನಲ್ಲಿ 1984ರಲ್ಲಿ ಬಾಲಿವುಡ್‌ ಪ್ರವೇಶಿಸಿದ ಅನುಪಮ್‌ ಖೇರ್‌ ಅದ್ಧೂರಿ ವೆಚ್ಚದ ಚಿತ್ರವೊಂದಕ್ಕೆ ಹೀರೋ ಆಗಿ ಗ್ರ್ಯಾಂಡ್ ಎಂಟ್ರಿ ಕೊಡಬೇಕಿತ್ತು. ಆಗ ಅವರ ವಯಸ್ಸು ಬರೀ 28. ಆದರೆ, ಸಿನಿಪ್ರಿಯರ ಎದುರಿಗೆ ಅವರು ಕಂಡಿದ್ದು 65ರ ವಯಸ್ಸಿನ ನೊಂದ ತಂದೆಯಾಗಿ!

ಅಮೆರಿಕದ ನ್ಯೂಯಾರ್ಕ್‌ನಲ್ಲಿ ಹಿಂಸಾಚಾರವೊಂದರಲ್ಲಿ ಏಕೈಕ ಪುತ್ರನನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿ ನೋವು ಅನುಭವಿಸುವ ವೃದ್ಧ ತಂದೆ, ತಾಯಿಯ ಕಥೆ ಆಧರಿಸಿದ ‘ಸಾರಂಶ್‌’ (1984) ಚಿತ್ರ ನಿರ್ದೇಶಿಸಿದ ಮಹೇಶ್ ಭಟ್ ಅವರಿಗೆ ವಯೋವೃದ್ಧರ ನಟರ ಬದಲು ಕಣ್ಣಿಗೆ ಬಿದ್ದದ್ದು ಯುವಕ ಅನುಪಮ್ ಖೇರ್!

ಹಿಮಾಚಲ್ ಪ್ರದೇಶದ ಶಿಮ್ಲಾದಲ್ಲಿ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಅನುಪಮ್‌ ಖೇರ್ 1978ರಲ್ಲಿ ನವದೆಹಲಿಯ ನ್ಯಾಷನಲ್ ಸ್ಕೂಲ್ ಆಫ್‌ ಡ್ರಾಮಾ (ಎನ್‌ಎಸ್‌ಡಿ) ಸಂಸ್ಥೆಯಲ್ಲಿ ಶಿಕ್ಷಣ ಪಡೆದು ನೇರವಾಗಿ ಬಂದಿಳಿದಿದ್ದು ಮುಂಬೈಗೆ. ಕಲಿತ ವಿದ್ಯೆಯ ಪ್ರಮಾಣಪತ್ರಗಳನ್ನು ಹಿಡಿದು ನಿರ್ದೇಶಕರು, ನಿರ್ಮಾಪಕರ ಮನೆಬಾಗಿಲಿಗೆ ಎಡತಾಕುತ್ತಿದ್ದ ಅವರು ರಾತ್ರಿ ವೇಳೆ ಮಲಗುತ್ತಿದ್ದದ್ದು ರೈಲು ನಿಲ್ದಾಣದ ಮೂಲೆಯಲ್ಲಿ.

ದೊಡ್ಡದು ಇಲ್ಲದಿದ್ದರೂ ಸಣ್ಣಪುಟ್ಟ ಪಾತ್ರವನ್ನಾದರೂ ಕೊಡಿ ಎಂದು ಗೋಗೆರೆದ ಅನುಪಮ್‌ಗೆ ಮಹೇಶ್ ಭಟ್ ನಿರಾಸೆಗೊಳಿಸಲಿಲ್ಲ. ಅನುಪಮ್ ಖೇರ್‌ಗೆ (ನಿವೃತ್ತ ಶಿಕ್ಷಕ ಬಿ.ವಿ.ಪ್ರಧಾನ್) ಮತ್ತು ರೋಹಿಣಿ ಹಟ್ಟಂಗಡಿಗೆ (ಪ್ರಧಾನ್ ಪತ್ನಿ ಪಾರ್ವತಿ) ಪಾತ್ರ ಕೊಟ್ಟರು. ಇಬ್ಬರ ವಯಸ್ಸು 28! ಇದನ್ನೇ ಸವಾಲಾಗಿ ಸ್ವೀಕರಿಸಿದ ಅವರಿಬ್ಬರೂ ಪಾತ್ರಕ್ಕೆ ಜೀವ ತುಂಬಿದರು ಅಲ್ಲದೇ ಉತ್ತಮ ಅಭಿನಯಕ್ಕೆ ಪ್ರಶಸ್ತಿ ಸಹ ಗಳಿಸಿದರು.

ಜೀವನದ ದಿಕ್ಕನ್ನೇ ಬದಲಿಸಿದ ‘ಸಾರಂಶ್‌’ ಚಿತ್ರವನ್ನು ಮರೆಯಲಾಗದು ಎನ್ನುವ ಅನುಪಮ್ ಖೇರ್ ತಮ್ಮ ‘ಲೆಸನ್ಸ್‌ ಲೈಫ್‌ ಥಾಟ್ ಮೀ, ಅನೋಯಿಂಗ್ಲಿ’ ಆತ್ಮಚರಿತ್ರೆ ಕೃತಿಯಲ್ಲಿ ಅದಕ್ಕಾಗಿ ಹಲವು ಪುಟಗಳನ್ನು ಮೀಸಲಿಟ್ಟಿದ್ದಾರೆ. ಹಲವು ಚಿತ್ರಗಳಿಂದ ತಿರಸ್ಕೃತಗೊಂಡು ನಿರಾಸೆಗೊಂಡಿದ್ದ ನಿವೃತ್ತ ಶಿಕ್ಷಕನ ಪಾತ್ರದ ಸುಳಿವು ಸಿಕ್ಕ ಕೂಡಲೇ ಅದರಂತೆಯೇ ಕೂದಲು ಬೋಳಿಸಿಕೊಂಡು, ವೃದ್ಧನ ವೇಷದಲ್ಲಿ ಕೈಯಲ್ಲಿ ಉರುಗೋಲು ಹಿಡಿದು ನಿರ್ದೇಶನಕನ ಎದುರು ನಿಂತರಂತೆ.

ಮೃತ ಪುತ್ರನ ಅಸ್ತಿ ಮತ್ತು ಸಂಬಂಧಪಟ್ಟ ವಸ್ತುಗಳನ್ನು ಪಡೆದುಕೊಳ್ಳಲು ಪಡುವ ಪಡಿಪಾಟಲು, ಆರ್ಥಿಕ ಸಮಸ್ಯೆಯಿಂದ ಪಾರಾಗಲು ಮನೆಯಲ್ಲಿನ ಕೋಣೆ ಯುವತಿಗೆ ಬಾಡಿಗೆಗೆ ನೀಡಿದಾಗ ಆಗುವ ತೊಂದರೆ, ಪ್ರೇಮಿಯಿಂದ ವಂಚನೆಯಾದರೂ ಮಗುವನ್ನು ಹೆರುವ ಯುವತಿ, ಆಕೆಯನ್ನು ರಕ್ಷಿಸುವ ಪರಿ ಎಲ್ಲವೂ ‘ಸಾರಂಶ್‌’ನಲ್ಲಿ ಅನಾವರಣಗೊಂಡಿದೆ. ಪಾತ್ರಕ್ಕೆ ಜೀವ ತುಂಬುವ ವಿಷಯದಲ್ಲಿ ಅನುಪಮ್ ಮತ್ತು ರೋಹಿಣಿ ಸ್ವಲ್ಪವೂ ರಾಜಿ ಮಾಡಿಕೊಳ್ಳಲಿಲ್ಲ.

ಕಳೆದ ತಿಂಗಳು (ಮೇ 25) ‘ಸಾರಂಶ್‌’ ಚಿತ್ರವು 36 ವರ್ಷ ಪೂರೈಸಿದ ಸಂದರ್ಭದಲ್ಲಿ ಮಹೇಶ್ ಭಟ್ ಟ್ವೀಟ್ ಮಾಡಿ, ‘ಧನ್ಯವಾದ ಅನುಪಮ್, ನಿನ್ನಿಂದಾಗಿ ನನಗೊಂದು ಅದ್ಭುತ ಪರಿಕಲ್ಪನೆ ಮೂಡಿತು‌’ ಎಂದಿದ್ದಾರೆ.

‘ಮೇರಾ ಅಂತ್ ಹೈ, ತುಮ್ಹಾರಾ ಅಂತ್ ಹೈ. ಮಗರ್ ಜೀವನ್...ಇಸ್ಕಾ ಕೋಯಿ ಅಂತ್ ನಹೀಂ. ಯೇ ತೋ ಅಂತ್‌ಹೀನ್ ಹೈ. (ನನ್ನ ಕೊನೆಯಿದೆ, ನಿನ್ನ ಕೊನೆಯಿದೆ. ಆದರೆ ಜೀವನ...ಇದಕ್ಕೆ ಕೊನೆ ಎಂಬುದಿಲ್ಲ. ಇದಕ್ಕೆ ಕೊನೆಯಿಲ್ಲ’ ಎಂಬ ಸಾಲಿನೊಂದಿಗೆ ಕೃತ್ಯಜ್ಞತೆ ಅರ್ಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು