ಸೋಮವಾರ, ಜನವರಿ 25, 2021
26 °C

ಚಂದನವನ: ಹೊಸ ನಿರ್ದೇಶಕಿ ವಿಸ್ಮಯಾ ಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನನಗೆ ತೆರೆಯ ಹಿಂದಿನ ಕೆಲಸಗಳೇ ಇಷ್ಟ. ಹಾಗಾಗಿ ನಿರ್ದೇಶನದತ್ತಲೇ ಮುಖ ಮಾಡಿದ್ದೇನೆ ಎಂದು ಹೇಳುತ್ತಾರೆ ಚಂದನವನಕ್ಕೆ ಹೊಸ ನಿರ್ದೇಶಕಿಯಾಗಿ ಕಾಲಿಟ್ಟಿರುವ ವಿಸ್ಮಯಾ ಗೌಡ.

ವಿಸ್ಮಯಾ ಮೂಲತಃ ಕೊಡಗಿನವರು. ಓದಿದ್ದು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌. ಜತೆಗೆ ಆಟೋಮೊಬೈಲ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ. ಆದರೆ ಸೆಳೆದದ್ದು ಮಾಡೆಲಿಂಗ್‌ ಕ್ಷೇತ್ರ. ಸಾಹಿತ್ಯ, ಕಲೆಯಲ್ಲಿ ಆಸಕ್ತಿ ಹೊಂದಿದ್ದ ಅವರು ಮಾಡೆಲಿಂಗ್‌ನತ್ತ ಹೊರಳಿದರು. ಅದನ್ನು ಒಂದು ಅಭಿರುಚಿಯಾಗಿ ಬೆಳೆಸಿಕೊಂಡರು. ಈವೆಂಟ್‌ ಮ್ಯಾನೇಜ್‌ಮೆಂಟ್‌ನಲ್ಲಿ ಅವರದ್ದು ಪರಿಣತಿ. ಹೀಗೆ ಸಿನಿಮಾ ಕ್ಷೇತ್ರದ ನಂಟು ಬೆಳೆಯಿತು. ಜತೆಗೆ ಸ್ಫೂರ್ತಿದಾಯ ಭಾಷಣಕಾರರಾಗಿ, ವ್ಯಕ್ತಿತ್ವ ವಿಕಸನ ಕೋರ್ಸ್‌ಗಳನ್ನು ನಡೆಸುತ್ತಿರುವ ಅವರು ಈಗ ನಿರ್ದೇಶಕರ ಕ್ಯಾಪ್‌ ಧರಿಸಲು ಮುಂದಾಗಿದ್ದಾರೆ.

ಇದೀಗ ತಾವೇ ರೂಪಿಸಿದ ಕಥೆ ಇಟ್ಟುಕೊಂಡು ತಮ್ಮದೇ ನಿರ್ಮಾಣ ಸಂಸ್ಥೆ, ವಿಸ್ಮಯಾ ಫಿಲ್ಮ್ಸ್ ಬ್ಯಾನರ್‌ ಅಡಿಯಲ್ಲಿ ಹೊಸ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಇನ್ನಷ್ಟೇ ಹೆಸರಿಡಬೇಕಾಗಿದೆ. ಜನವರಿ ಮೂರನೇ ವಾರದಲ್ಲಿ ಮುಹೂರ್ತ ಮತ್ತು ಫೆಬ್ರುವರಿ 14ರಿಂದ ಶೂಟಿಂಗ್‌ ಆರಂಭಿಸಲು ಸಿದ್ಧತೆ ನಡೆದಿದೆ ಎಂದು ವಿಸ್ಮಯಾ ವಿವರಿಸಿದರು.

ಚಿತ್ರ ಪ್ರೀತಿ– ರೊಮ್ಯಾಂಟಿಕ್‌ ಕಥೆಯನ್ನು ಹೊಂದಿದೆ. ಹುಡುಗಿಯಷ್ಟೇ ಹುಡುಗನಲ್ಲೂ ಅಷ್ಟೇ ತೀವ್ರತರನಾದ ಭಾವನೆಗಳಿರುತ್ತವೆ ಎನ್ನುವುದನ್ನು ಹೇಳಲು ಹೊರಟಿದ್ದೇನೆ. ಮೈಸೂರು– ಕೊಡಗು ಭಾಗಗಳಲ್ಲಿ ಚಿತ್ರೀಕರಣ ಮಾಡುತ್ತೇವೆ. ಇದುವರೆಗೆ ಚಿತ್ರಗಳಲ್ಲಿ ತೋರಿಸದ ಮೈಸೂರು– ಮಡಿಕೇರಿಯ ಜಾಗಗಳನ್ನು ಸುಂದರವಾಗಿ ತೋರಿಸುತ್ತೇವೆ. ಸುಮಾರು 35 ದಿನಗಳಲ್ಲಿ ಚಿತ್ರದ ಶೂಟಿಂಗ್‌ ಮುಕ್ತಾಯಗೊಳ್ಳಲಿದೆ. ಅಂದಾಜು ಒಂದು ಕೋಟಿ ರೂಪಾಯಿ ಬಜೆಟ್‌ ಹಾಕಿಕೊಂಡಿದ್ದೇವೆ ಎಂದು ವಿಸ್ಮಯಾ ವಿವರಿಸಿದರು.

ಅನುಭವ ಇಲ್ಲದೇ ಸಿನಿಮಾ ನಿರ್ಮಾಣ ಸವಾಲಲ್ಲವೇ ಎಂದು ಕೇಳಿದಾಗ ಪ್ರತಿಕ್ರಿಯಿಸಿದ ವಿಸ್ಮಯಾ, ‘ಸಿನಿಮಾ ಕೆಲಸಗಳಲ್ಲಿ ನೇರವಾಗಿ ತೊಡಗಿಲ್ಲ ನಿಜ. ಆದರೆ, ಆ ಕ್ಷೇತ್ರದ ಪರಿಚಯ ಚೆನ್ನಾಗಿಯೇ ಇದೆ. ಅನುಭವಿಗಳ ತಂಡ ನನ್ನೊಂದಿಗೆ ಇದೆ. ಹಾಗಾಗಿ ಅವರೆಲ್ಲರೂ ಸೇರಿ ನನ್ನ ಕಲ್ಪನೆಯನ್ನು ಸಾಕಾರಗೊಳಿಸುತ್ತಾರೆ. ಸಿನಿಮಾ ಯಶಸ್ವಿಯಾಗುವ ನಿರೀಕ್ಷೆ ಇದೆ’ ಎಂದು ಹೇಳಿದರು.

ಚಿತ್ರದಲ್ಲಿ ಯಾರಿದ್ದಾರೆ?

ಬಿಗ್‍ಬಾಸ್ ಮೂಲಕ ಹೆಸರು ಮಾಡಿದ್ದ ಡಾನ್ಸರ್ ಕಿಶನ್, ಕ್ರಿಕೆಟ್‌ಪಟು ಪ್ರವೀಣ್‍ರಂತ ಹೊಸ ಪ್ರತಿಭೆಗಳು ಚಿತ್ರದಲ್ಲಿದ್ದಾರೆ. ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಪುತ್ರಿ ಶ್ರಾವ್ಯಾ ರಾವ್ ಪ್ರಧಾನ ಪಾತ್ರದಲ್ಲಿದ್ದಾರೆ. ಅವರನ್ನು ಇನ್ನು ಸಾತ್ವಿಕಾ ಎಂದು ಕರೆಯಲಾಗುತ್ತದೆ ಎಂದು ವಿಸ್ಮಯಾ ಅವರ ತಂಡದ ಮೂಲಗಳು ಹೇಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು