ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಗ ಸಂಸ್ಕೃತಿಯ ಬಹುರೂಪಿ ಸಾಕ್ಷಿಪ್ರಜ್ಞೆ

Last Updated 21 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಚಲನಚಿತ್ರ ಸಮಾಜದ ಹಿನ್ನೆಲೆಯಲ್ಲಿ ಬೆಳೆದು ಬಂದ ಕನ್ನಡದ ಸಿನಿ ಸಮುದಾಯಕ್ಕೆ, ಬಂಗಾಳದ ಸಾಹಿತ್ಯ, ಕಲೆ, ರಂಗಭೂಮಿಯ ಪರಿಚಯ ಇರುವ ಸಾಂಸ್ಕೃತಿಕ ಲೋಕಕ್ಕೆ, ಈಚೆಗೆ ಅಗಲಿದ ಬಂಗಾಳಿ ಚಿತ್ರ-ರಂಗ ನಿರ್ದೇಶಕ, ಕಲಾವಿದ, ಕವಿ, ಬರಹಗಾರ ಸೌಮಿತ್ರ ಚಟರ್ಜಿ ಅಪರಿಚಿತರೇನಲ್ಲ.

ಚಲನಚಿತ್ರ ರಸಗ್ರಹಣ ಶಿಬಿರಗಳಲ್ಲಿ ಮುನ್ನುಡಿ ಬರೆಯುವುದು ಸತ್ಯಜಿತ್‌ ರೇ ಅವರ ‘ಅಪೂ’ ತ್ರಿವಳಿ (‘ಪಥೇರ್‌ ಪಾಂಚಾಲಿ’, ‘ಅಪರಾಜಿತೋ’, ‘ಅಪೂರ್‌ ಸಂಸಾರ್’) ಚಿತ್ರಗಳ ಮೂಲಕವೇ. ಈ ತ್ರಿವಳಿಗಳ ಅಂತಿಮ ಚರಣವೇ ‘ಅಪೂರ್‌ ಸಂಸಾರ್‌’. ಈ ಚಿತ್ರದ ಭಾವುಕ ಸ್ಥಿತಿಯಲ್ಲಿ ಜರ್ಝರಿತನಾದ ಲೇಖಕನ ಪಾತ್ರದ ಮೂಲಕ ಬಂಗಾಳಿ ಚಿತ್ರರಂಗವನ್ನು ಪ್ರವೇಶಿಸಿದವರು ಸೌಮಿತ್ರ.

‘ಅಪರಾಜಿತೋ’ ಆಡಿಷನ್‌ಗೆ ಬಂದಿದ್ದರೂ ಸೌಮಿತ್ರಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ, ಸೌಮಿತ್ರ, ರೇ ಅವರ ಸಖ್ಯ ಬಿಡಲಿಲ್ಲ. ಮುಂದಿನ ಆರು ದಶಕಗಳ ಕಾಲ ಸೌಮಿತ್ರ ಬಂಗಾಳಿ ಚಿತ್ರರಂಗದ ಆರಾಧ್ಯ ದೈವವಾದದ್ದುಇಂದು ಇತಿಹಾಸ. ಅಂದಿನ ‘ಅಪೂ’ ಪಾತ್ರದಿಂದ ಈ ವರ್ಷ ತೆರೆಕಂಡ ‘ಸ್ರೋಬ್ನೇರ್‌ ಧಾರಾ’ದ ಅಮಿತಾವ್‌ ಸರ್ಕಾರ್‌ ಪಾತ್ರದವರೆಗೆ ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಚಿತ್ರರಂಗದಲ್ಲಿ ಅಚ್ಚಳಿಯದ ಹೆಜ್ಜೆ ಹಾಕಿದ ಸೌಮಿತ್ರ, ಕೇವಲ ಬಂಗಾಳಿ ಚಿತ್ರರಂಗವಷ್ಟೇ ಅಲ್ಲ, ಭಾರತೀಯ ಸಾಂಸ್ಕೃತಿಕ ಲೋಕದ ದಂತಕಥೆ.

‘ಅಪೂರ್‌ ಸಂಸಾರ್’‌ನ ಮುಗ್ಧ ಅಪೂ, ‘ಚಾರುಲತಾ’ದ ಆದರ್ಶಮಯ ಕನಸುಗಾರ ಅಮಲ್‌, ‘ಅರಣ್ಯೇರ್‌ ದಿನ್‌ ರಾತ್ರಿ’ಯ ವಿಕ್ಷಿಪ್ತ ನಗರಜೀವಿ ಆಸೀಮ್‌, ‘ಹಿರಾರ್‌ ರಾಜಾ ದೇಶೆ’ಯಬಂಡಾಯ ಕಸುವಿನ ಅಧ್ಯಾಪಕ ಉದಯ ಪಂಡಿತ್‌... ಹೀಗೆರೇ ನಿರ್ದೇಶಿಸಿದ 14ಚಿತ್ರಗಳ ಕೇಂದ್ರ ಪಾತ್ರಗಳಿಗೆ ಜೀವಸ್ಪರ್ಶ ಮಾಡುವ ಮೂಲಕ ಸಿನಿ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿಕೊಂಡಿರುವ ಸೌಮಿತ್ರ, ಬಂಗಾಳ ಚಿತ್ರರಂಗಕ್ಕೆ ದಕ್ಕಿದ ‘ಅಪೂರ್ವ’ ಕೊಡುಗೆ ಎಂದರೆ ಉತ್ಪ್ರೇಕ್ಷೆಯೇನಲ್ಲ. ಸೂಕ್ಷ್ಮ, ಉದಾತ್ತ ಕಲಾವಂತಿಕೆಯ ಜತೆ, ದೈವದತ್ತ ಸಹಜ ಸೌಂದರ್ಯಭರಿತ ಮುಗ್ಧ ಮನಸ್ಸಿನಿಂದಾಗಿ ಸೌಮಿತ್ರ ಬಂಗಾಳದ ಅಂದಿನ- ಇಂದಿನ ಜನಾಂಗದ ಆರಾಧ್ಯದೈವ.

ತಮ್ಮ ಪ್ರತಿಭೆಯನ್ನು ಕೇವಲ ರೇ ಅವರ ಕುಲುಮೆಯಲ್ಲಷ್ಟೇ ಒರೆಗೆ ಹಚ್ಚದೆ ಬಂಗಾಳಿ ಚಿತ್ರರಂಗದ ದಿಗ್ಗಜ– ದಿಗ್ದರ್ಶಕರಾದ (ಋತ್ವಿಕ್‌ ಘಟಕ್‌ ಹಾಗೂ ಬುದ್ಧದೇವ್‌ ದಾಸ್‌ಗುಪ್ತ ಹೊರತುಪಡಿಸಿ) ಮೃಣಾಲ್‌ ಸೇನ್‌, ತಪನ್‌ ಸಿನ್ಹಾ, ತರುಣ್‌ ಮಜುಂದಾರ್‌, ಗೌತಮ್‌ ಘೋಷ್‌, ಋತುಪರ್ಣೋ ಘೋಷ್‌, ಅಪರ್ಣಾ ಸೇನ್‌ ಸೇರಿದಂತೆ ಹಲವರ ಕಲಾತ್ಮಕ ಚಿತ್ರಗಳ ಕೇಂದ್ರ ಪಾತ್ರಗಳಿಗೆ ಜೀವ ತುಂಬಿ, ಅವುಗಳಿಗೆ ಬಂಗಾಳಿ ಚಿತ್ರರಂಗದ ಇತಿಹಾಸದಲ್ಲಿ ಶಾಶ್ವತ ಸ್ಥಾನ ಕಲ್ಪಿಸಿದವರು ಸೌಮಿತ್ರ.

ಮನಸ್ಸು ಸಾಹಿತ್ಯ, ರಂಗಭೂಮಿಯತ್ತ ತುಡಿಯುತ್ತಿದ್ದರೂ ‘ಅಪೂರ್ ಸಂಸಾರ್’ನ ಮೊದಲ ದಿನದ ಚಿತ್ರೀಕರಣದ ನಂತರ ಅಭಿನಯವನ್ನೇ ಬದುಕಿನ ಭಾಗವಾಗಿಸಿಕೊಂಡು ತಮ್ಮ ಆಯ್ಕೆಯ ಬಗ್ಗೆ ಕೊನೆಯ ದಿನದವರೆಗೂ ವಿಷಾದಪಡದೆ ಸಮರ್ಥಿಸಿಕೊಂಡವರು ಅವರು. ಸಾಹಿತ್ಯ-ರಂಗಭೂಮಿ, ಚಿತ್ರಕಲೆಯನ್ನು ಸಹ ಬದುಕಿನುದ್ದಕ್ಕೂ ತಮ್ಮೊಂದಿಗೆ ನಡೆಸಿಕೊಂಡೇ ಬಂದವರು. ಸೌಮಿತ್ರರನ್ನು ರಂಗಭೂಮಿಗೆ ಎಳೆದುತಂದ ಶಕ್ತಿಯಾದರೋ ಬಂಗಾಳಿ ರಂಗಭೂಮಿಯ ದಿಗ್ಗಜ ಶಿಶಿರ್‌ಕುಮಾರ್‌ ಬಾಧುರಿ.

ಸೌಮಿತ್ರ ರಂಗಭೂಮಿಗೆ ಒಲಿದು ‘ರೇ’ ಅವರಿಗೆ ದಕ್ಕದೇ ಹೋಗಿದ್ದರೆ? ಅಥವಾ ರೇ ಅವರ 14 ಚಿತ್ರಗಳಲ್ಲಿ ಸೌಮಿತ್ರ ಅವರಿಗೆ ಅವಕಾಶ ಸಿಗದೇ ಇದ್ದಿದ್ದರೆ ಬಂಗಾಳಿ ಪ್ರೇಕ್ಷಕರಿಗೆ ‘ಅಪೂ...’ ಫೆಲುದಾ ದಕ್ಕುತ್ತಲೇ ಇರಲಿಲ್ಲ. ಬಂಗಾಳಿ ಚಿತ್ರರಂಗ ಬೇರೊಂದು ಮಗ್ಗುಲಲ್ಲಿ ಚಲಿಸುತ್ತಿತ್ತೇ? ಗೊತ್ತಿಲ್ಲ. ರೇ, ಸೌಮಿತ್ರ ಒಬ್ಬರಿಗೊಬ್ಬರು ಪೂರಕವಾದದ್ದು ಬಂಗಾಳಿ ಸಂಸ್ಕೃತಿಯ ಸೌಭಾಗ್ಯ.

ಸೌಮಿತ್ರರ ಇಡೀ ಬದುಕಿನ ಪಾತಳಿಯನ್ನು ಒಮ್ಮೆ ಅವಲೋಕಿಸಿದರೆ, ಅವರನ್ನು ನಿರ್ದಿಷ್ಟವಾದ ನಮ್ಮ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಹುದುಗಿಸುವುದು ಕಷ್ಟ. ಸೌಮಿತ್ರ ಅವರನ್ನು ರೇ ಶೋಧ ಎನ್ನುವವರಿಗೆ ಮೃಣಾಲ್‌ ಸೇನ್‌, ತಪನ್‌ ಸಿನ್ಹಾ ಚಿತ್ರಗಳು ಉತ್ತರವಾಗುತ್ತವೆ. ಅವರನ್ನು ಚಿತ್ರನಟ ಎಂದು ಗುರುತಿಸಲು ಯತ್ನಿಸಿದರೆ, ರಂಗಭೂಮಿ ಅಡ್ಡನಿಲ್ಲುತ್ತದೆ. ಹಾಗೆಂದು ರಂಗಕರ್ಮಿ ಎಂದುಕೊಂಡರೆ ಅವರೊಳಗಿನ ಕವಿ, ಚಿತ್ರಕಲಾವಿದ ಎದ್ದು ನಿಲ್ಲುತ್ತಾನೆ. ಹಾಗಾಗಿ ಈ ಬಹುರೂಪಿಯನ್ನು ಒಂದು ಕ್ರಿಯಾಶೀಲ ಮಾಧ್ಯಮದ ಹಣೆಪಟ್ಟಿಗೆ ಸೀಮಿತಗೊಳಿಸುವುದು ಸರಿಯಲ್ಲ.

ಬಂಗಾಳಿ ಸೃಜನಶೀಲ ಜಗತ್ತಿಗೆ ಸೌಮಿತ್ರ ವೃದ್ಧ ಆಲದ ವೃಕ್ಷದಂತೆ. ಅದು ಮಾಗಿದಷ್ಟೂ ಹೊಸ ರೂಪ ಪಡೆಯುವ ವಿಸ್ಮಯದಂತೆ. ಬದುಕಿನ ಕೊನೆಯ ಘಟ್ಟದವರೆಗೂ ಸೃಜನಾತ್ಮಕವಾಗಿಯೇ ಬದುಕಿದವರು ಸೌಮಿತ್ರ (ಕಳೆದ ವರ್ಷ ಬಿಡುಗಡೆಯಾದ ಅವರ ಚಿತ್ರಗಳ ಸಂಖ್ಯೆ 15. ಈ ವರ್ಷವೂ ಅಷ್ಟೇ ಸಂಖ್ಯೆಯ ಅವರ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆಯಂತೆ).

‘ಕೀರ್ತಿ ಶನಿ ತೊಲಗಾಚೆ’ ಎಂದರೂ ದಾದಾ ಸಾಹೇಬ್‌ ಫಾಲ್ಕೆ, ಪದ್ಮಭೂಷಣ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಅವರನ್ನು ಅರಸಿ ಬಂದಿವೆ. ಕೆಲವು ಪ್ರಶಸ್ತಿಗಳನ್ನು ತಮ್ಮ ತಾತ್ವಿಕ ಮತ್ತು ಸೈದ್ಧಾಂತಿಕ ಕಾರಣಗಳಿಗಾಗಿ ತಿರಸ್ಕರಿಸುವ ದಾರ್ಷ್ಟ್ಯ ತೋರಿದವರು ಅವರು. ತಮ್ಮ ಜೀವಿತಾವಧಿಯಲ್ಲಿ ನಾಲ್ಕು ಕಾವ್ಯ ಸಂಗ್ರಹ, ಮೂರು ನಾಟಕಗಳು ಐದು ಗದ್ಯ ಸಂಕಲನಗಳನ್ನು ಸಾಹಿತ್ಯ ಜಗತ್ತಿಗೆ ಕೊಡುಗೆಯಾಗಿ ನೀಡಿದವರು ಸೌಮಿತ್ರ. ಅವರು ರಚಿಸಿದ 108 ಆಯ್ದ ಚಿತ್ರಗಳು ‘ಫಾರಮ್ಸ್‌ ವಿದಿನ್‌’ ಶೀರ್ಷಿಕೆಯಡಿಯಲ್ಲಿ ಹಲವಾರು ಕಲಾ ಗ್ಯಾಲರಿಗಳಲ್ಲಿ ಪ್ರದರ್ಶನಗೊಂಡು ಕಲಾಸಕ್ತರ ಮೆಚ್ಚುಗೆ ಗಳಿಸಿವೆ. ಅವರ ಅಭಿನಯದ (ಸುಮನ್‌ ಮುಖ್ಯೋಪಾಧ್ಯಾಯ ನಿರ್ದೇಶಿಸಿದ) ‘ರಾಜಾ ಅಮರ್‌’ ಬಂಗಾಳಿ ರಂಗಭೂಮಿಯ ಬಹುಚರ್ಚಿತ-ವಿಮರ್ಶಿತ ರಂಗ ಪ್ರಯೋಗ. ‘ನಾಮ್ ಜಬಾನ್’, ‘ರಾಜ್‌ಕುಮಾರ್‌’,‘ಫೇರಾ’, ‘ನೀಲ್‌ಕಾಂತ’,‘ಘಾತಕ್‌ ಬಿದೆ‌’,‌ ‘ನ್ಯಾಯಮೂರ್ತಿ’, ‘ಟಿಕ್‌ ಟಿಕೆ’ ಇವರ ‌ಪ್ರತಿಭೆಯ ರಂಗ ಮೈಲಿಗಲ್ಲುಗಳು.

ಪುಸ್ತಕ ಪ್ರೀತಿಯ ಸೌಮಿತ್ರರಿಗೆ ಜೋಸೆಫ್‌ ಕಾನ್ರಾಡ್‌ ಅವರ ಕೃತಿಗಳು, ಅದರಲ್ಲೂ ‘ಹಾರ್ಟ್‌ ಆಫ್‌ ಡಾರ್ಕ್‌ನೆಸ್’ಅತ್ಯಂತ ಪ್ರೀತಿಯ ಕೃತಿ. ಬಿಭೂತಿ ಭೂಷಣ್‌ ಬಂದೋಪಾಧ್ಯಾಯ, ರೋಮನ್‌ ರೋಲಾ, ಕಿರ್ಕ್‌ ಗಾರ್ಡ್‌ ಅವರ‘ಆತ್ಮೀಯ’ ಲೇಖಕರು. ತಮ್ಮ ಗೆಳೆಯ ನಿರ್ಮಾಲ್ಯ ಆಚಾರ್ಯ ಅವರ ಜತೆಗೂಡಿ ‘ಎಕ್ಸಾನ್‌’ ಎಂಬ ಸಾಹಿತ್ಯ–ಕಲೆಗೆ ಸಂಬಂಧಿಸಿದ ಪತ್ರಿಕೆಯನ್ನು ಸೌಮಿತ್ರ ಸಂಪಾದಿಸುತ್ತಿದ್ದರು. ಚಿತ್ರೀಕರಣದ ನಡುವಿನ ಬಿಡುವಿನಲ್ಲಿ ಪದ್ಯಗಳನ್ನು ಬರೆಯುತ್ತಿದ್ದ ಸೌಮಿತ್ರ ಅದನ್ನು ಚಿತ್ರತಂಡದವರಿಗೆ ವಾಚಿಸುತ್ತಿದ್ದರು. ಸೌಮಿತ್ರರಿಗೆ ಆಸಕ್ತಿ ಇಲ್ಲದ ಕ್ಷೇತ್ರವೇ ಇರಲಿಲ್ಲ. ಸಿನಿಮಾ, ರಂಗಭೂಮಿ, ಕಾವ್ಯ- ಗದ್ಯ, ಚಿತ್ರಕಲೆ, ಭಾಷೆ, ಸಂಸ್ಕೃತಿ, ಉಪ-ಸಂಸ್ಕೃತಿ, ಕ್ರೀಡೆ ಹೀಗೆ ಎಲ್ಲದರಲ್ಲೂ ಆಳವಾದ ಪಾಂಡಿತ್ಯ ಅವರದ್ದು. ಈಡನ್‌ ಗಾರ್ಡನ್‌ನಲ್ಲಿ ನಡೆಯುತ್ತಿದ್ದ ಯಾವುದೇ ಕ್ರಿಕೆಟ್‌ ಪಂದ್ಯಕ್ಕೂ ಅವರ ಹಾಜರಿ ನಿಶ್ಚಿತ.

ತಾವು ಅರ್ಥೈಸಿಕೊಂಡದ್ದನ್ನು, ಅಂತರ್ಗತವಾಗಿಸಿಕೊಂಡ ಸತ್ವವನ್ನು ತಮ್ಮ ಬಹುಮುಖಿ ವ್ಯಕ್ತಿತ್ವದ ಸಹಿಯಂತಿದ್ದ ಅವರಮುಗುಳ್ನಗೆಗೆ ಬೆರೆಸಿ ಮಂಡಿಸುತ್ತಿದ್ದ ರೀತಿ ಅವರೊಂದಿಗೆ ಜೀವಿಸಿದವರ ಮನದಲ್ಲಿ ಅಚ್ಚೊತ್ತಿರುವುದು ಸಹಜ. ಎಲ್ಲ ಸಂಗತಿಗಳನ್ನು ಕಪ್ಪು–ಬಿಳುಪಿಗಿಳಿಸಿ ತೀರ್ಪು ನೀಡುವ ಇಂದಿನ ಪ್ರವೃತ್ತಿಯ ವಿರುದ್ಧದ ಧರ್ಮ ಸೌಮಿತ್ರರದ್ದು. ತಿರಸ್ಕಾರ–ಪುರಸ್ಕಾರ ಎರಡಕ್ಕೂ ಅವರದ್ದು ಸಮಾನವಾದ ಪ್ರತಿಕ್ರಿಯೆ. ಸ್ಥಿತಪ್ರಜ್ಞ ನಿಲುವು ಅವರ ವ್ಯಕ್ತಿತ್ವದ ಸ್ಥಾಯಿ ಭಾವ.

ಕೊನೆಯವರೆಗೂ ಸೌಮಿತ್ರ ಬಂಗಾಳಿ ಚಿತ್ರರಂಗಕ್ಕೆ ನಿಷ್ಠರಾಗಿದ್ದವರು. ತಾವು ಅಭಿನಯಿಸುವ ಚಿತ್ರಗಳಲ್ಲಿ ಎರಡನೇ ಕೇಂದ್ರ ಪಾತ್ರ ಆಗುವುದನ್ನು ಒಪ್ಪದೆ, ರಾಜ್‌ ಕಪೂರ್‌ ಅವರ ‘ಸಂಗಮ್‌’, ದಿಲೀಪ್‌ ಕುಮಾರ್‌ ಅವರ ‘ಆದ್ಮಿ’, ಶ್ಯಾಂ ಬೆನಗಲ್‌ ಅವರ ‘ಕಲಿಯುಗ್’ ಚಿತ್ರಗಳ ಪಾತ್ರಗಳನ್ನು ತಿರಸ್ಕರಿಸಿದವರು. ಅವರ ಕಾಲದ ಬಂಗಾಳಿ ಚಿತ್ರರಂಗದಲ್ಲಿ ಅತಿ ಎತ್ತರದ ಸ್ಥಾನದಲ್ಲಿದ್ದ ನಟ ಉತ್ತಮ್‌ ಕುಮಾರ್‌ರ ವಿರುದ್ಧಾತ್ಮಕ ವ್ಯಕ್ತಿತ್ವ ಸೌಮಿತ್ರ ಅವರದ್ದು. ರೂಪು ಆಧಾರಿತ ಸಾಂಪ್ರದಾಯಿಕ ನಾಯಕನ ಕಲ್ಪನೆಗೆ ಒಗ್ಗುತ್ತಿದ್ದವರು ಉತ್ತಮ್‌ ಕುಮಾರ್‌. ಸಹಜ ಕಲಾತ್ಮಕತೆಯೊಂದಿಗೆ ರೂಪವೂ ಬೆರೆತ ನಾಯಕನ ಕಲ್ಪನೆಗೆ ದಕ್ಕುತ್ತಿದ್ದವರು ಸೌಮಿತ್ರ.

ಉತ್ತಮ್‌ ಕುಮಾರ್‌ ಅವರದ್ದು ಸಹಜ, ಸ್ವಯಂಪ್ರೇರಿತ ಸಮಯಸ್ಫೂರ್ತಿಯ ಅಭಿನಯ. ಕಲಾತ್ಮಕ, ಬೌದ್ಧಿಕ ಅಭಿನಯದ ಮಾದರಿ ಸೌಮಿತ್ರರದ್ದು. ಸೌಮಿತ್ರರನ್ನು ಅಕಿರ ಕುರಸೋವಾ ಅವರ ತೋಷಿರೋ ಮಿಫ್ಯುನ್‌, ಫೆಲಿನಿಯ ಮಾರ್ಸೆಲೊ ಮಾಸ್ತ್ರಿಯಿಯೊನ್ನಿಗಷ್ಟೇ ಹೋಲಿಸಬಹುದು. ಇದೇ ರೀತಿ ಸೌಮಿತ್ರರನ್ನು ಕೊನೆಯವರೆಗೂ ಅಭಿನಯಿಸಿದ ಕ್ಲಿಂಟ್‌ ಈಸ್ಟ್‌ವುಡ್‌, ಕಿರ್ಕ್‌ ಡಗ್ಲಾಸ್‌, ಕ್ರಿಸ್ಟಫರ್ ಫ್ಲಮರ್‌ರಂತಹ ಕಲಾವಿದರೊಂದಿಗೆ ಹೋಲಿಸಬಹುದು ಅಷ್ಟೆ.

ಈಗಿನ ಸಂದರ್ಭದಲ್ಲಿ ಸೌಮಿತ್ರ ನಮಗೆ ಮುಖ್ಯವಾಗುವುದು ಇನ್ನೊಂದು ಕಾರಣಕ್ಕೆ. ಅವರು ನೇರ ನಿಷ್ಠುರವಾದಿ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಮ್ಮ ಬದುಕಿನುದ್ದಕ್ಕೂ ಎತ್ತಿಹಿಡಿದು, ತಮಗೆ ಸರಿ ಎನಿಸಿದ್ದನ್ನು ಯಾವುದೇ ಭಿಡೆ ಇಲ್ಲದೆ ಹೇಳಿದವರು. ಅವಕಾಶವಾದಿಯಾಗದೇ ಶಕ್ತಿಕೇಂದ್ರಗಳಿಗೆ ಮುಖಾಮುಖಿಯಾದವರು. ಜಾತಿ, ಮತ ಮೀರಿದ ಧರ್ಮನಿರಪೇಕ್ಷ ಸಮಾಜಕ್ಕಾಗಿ ಹಂಬಲಿಸಿದವರು, ದುಡಿದವರು. ಇದಕ್ಕಾಗಿ ಪರ್ಯಾಯ ರಾಜಕೀಯ ಸಂಸ್ಕೃತಿಯ ಅಗತ್ಯವನ್ನು ಎತ್ತಿಹಿಡಿದು ಕಾಲದ ಸಾಕ್ಷಿಪ್ರಜ್ಞೆ ಆದವರು. ಬಂಗಾಳಿ ಭದ್ರಲೋಕ ಇವರನ್ನು ಗುರುತಿಸಿದ್ದು ಸೈದ್ಧಾಂತಿಕ ದ್ರಷ್ಟಾರ ಎಂದೇ. ತಮ್ಮ ನಿಲುವಿಗೆ ಧಕ್ಕೆ ಬಂದಾಗ ಎರಡು ಬಾರಿ ಪದ್ಮ ಪ್ರಶಸ್ತಿ ತಿರಸ್ಕರಿಸಿದವರು. ನೋಟು ಅಮಾನ್ಯೀಕರಣ ವಿರೋಧಿಸಿದವರು. ನಾಗರಿಕ ಹಕ್ಕು (ತಿದ್ದುಪಡಿ) ಕಾಯ್ದೆ- 2019ನ್ನು ವಿರೋಧಿಸಿ ಹೋರಾಟಕ್ಕಿಳಿದವರು ಸೌಮಿತ್ರ. ‌

ಸೌಮಿತ್ರ ತಮ್ಮ ಚಲನಚಿತ್ರ ಜೀವಿತದಲ್ಲಿ ಪ್ರೀತಿಸಿದ ಪಾತ್ರ ಈಜು ಕೋಚ್‌ರದ್ದು. ‘ಕೋನಿ’ (1986- ಸರೋಜ್‌ ಡೇ ಈ ಚಿತ್ರದ ನಿರ್ದೇಶಕರು) ಚಿತ್ರದ ಈ ಪಾತ್ರದ ಘೋಷವಾಕ್ಯ, ‘ಫೈಟ್‌ ಕೋನಿ ಫೈಟ್‌’ ಈ ಮಾತು ಅವರ ಬದುಕಿನ ಕೊನೆಯ ಕ್ಷಣದವರೆಗೂ ಅವರಲ್ಲಿ ರಿಂಗಣಿಸುತ್ತಿತ್ತು. ಕೊನೆವರೆಗೂ ಕೋವಿಡ್‌ –19 ಜತೆ ಸೆಣಿಸಿದರು ಸೌಮಿತ್ರ.

ಕಾಲದ ಕಾರಣ ಲಡ್ಡಾದ ಪುರಾತನ ವೃಕ್ಷವೊಂದು ಬಿರುಗಾಳಿಗೆ ಧರಾಶಾಯಿಯಾದಂತೆ ಸೌಮಿತ್ರರ ಈಗಿನ ನಿರ್ಗಮನ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT