ಗುರುವಾರ , ಆಗಸ್ಟ್ 18, 2022
23 °C
ಮಾತುಕತೆ

ಅಂಬಿಗೆ ನಿಜಕ್ಕೂ ವಯಸ್ಸಾಯ್ತಾ?

ಚ.ಹ.ರಘುನಾಥ/ ಬಿ.ಎಂ.ಹನೀಫ್‌ Updated:

ಅಕ್ಷರ ಗಾತ್ರ : | |

Deccan Herald

ಅಂಬರೀಶ್‌ ಜೊತೆಗಿನ ಸಂದರ್ಶನವೆಂದರೆ ಸಂತೆಯಲ್ಲಿ ಮಾತು ಹೆಕ್ಕಿದಂತೆ. ಅವರ ತುಂಡರಿಸಿದ ಮಾತುಗಳಲ್ಲಿ ಕನ್ನಡ ಸಿನಿಮಾ ಹಾಗೂ ಕರ್ನಾಟಕ ರಾಜಕಾರಣಕ್ಕೆ ಸಂಬಂಧಿಸಿದ ಅಮೂಲ್ಯ ವಿವರಗಳು ಸುಳಿದುಹೋಗುತ್ತವೆ. ‘ಸಿನಿಮಾ ಮತ್ತು ರಾಜಕಾರಣ ಸಾಕು’ ಎನ್ನುತ್ತಲೇ ತಮ್ಮ ನೆಚ್ಚಿನ ಎರಡೂ ಕ್ಷೇತ್ರಗಳ ಬಗ್ಗೆ ಮಾತನಾಡಿದ ಅವರ ಉತ್ಸಾಹವನ್ನು ನೋಡಿದರೆ, ಅವರು ಮಾಡಬೇಕಾದ ಕೆಲಸ ಇನ್ನೂ ಸಾಕಷ್ಟು ಬಾಕಿಯುಳಿದಿದೆ ಎನ್ನಿಸುತ್ತದೆ.

***

ಟೀವಿಯಲ್ಲಿ ‘ಶ್ರೀಕೃಷ್ಣದೇವರಾಯ’ ಸಿನಿಮಾ. ಕೃಷ್ಣದೇವರಾಯನ ಪೋಷಾಕಿನಲ್ಲಿ ರಾಜ್‌ಕುಮಾರ್‌ ಅವರನ್ನು ಆಸ್ವಾದಿಸುತ್ತ ಆಗಷ್ಟೇ ಬೆಳಗಿನ ಉಪಾಹಾರ ಮುಗಿಸಿದ್ದ ಅಂಬರೀಶ್‌ ಅವರೊಂದಿಗಿನ ಮಾತುಕತೆ ಆರಂಭವಾದುದು ಊಟ ತಿಂಡಿಯ ಮೂಲಕವೇ. ‘ಊಟ ತಿಂಡಿ ಮೊದಲಿನಂತೆ ಇದೆಯೇ?’ ಎನ್ನುವ  ನಮ್ಮ ಪ್ರಶ್ನೆಗೆ – ‘ಬದಲಾವಣೆ ಆಗಲೇಬೇಕು. ಹಿಂದಿನಂತೆ ಈಗಲೂ ಇರುವುದು ಸಾಧ್ಯವೇ’  ಎನ್ನುವುದು ಅವರ ಮರುಪ್ರಶ್ನೆ.

‘‘ಸಿನಿಮಾದಲ್ಲಿ ಆರಾಮಾಗಿದ್ದವರು ರಾಜಕಾರಣಕ್ಕೆ ಜಿಗಿದದ್ದು ಹೇಗೆ?’  ಎನ್ನುವ ಪ್ರಶ್ನೆಯೊಂದಿಗೆ ಮಾತುಕತೆ ಶುರುವಾಯಿತು. ಅಂಬರೀಶ್‌ ನೇರ ಉತ್ತರ ನೀಡಲಿಲ್ಲ. ‘ಇವತ್ತು ಬಿಡಿ, ಸಿನಿಮಾ – ರಾಜಕೀಯ ಎರಡೂ ಸಾಕು ಅನ್ನಿಸ್ತಿದೆ. ಸಿನಿಮಾದಿಂದ ಆಕಸ್ಮಿಕವಾಗಿ ಪಾಲಿಟಿಕ್ಸ್‌ಗೆ ಹೋದೆ. ಏನು ಮಾಡಿದರೂ ಸ್ವಲ್ಪ ಒಳ್ಳೆಯತನ ಇಟ್ಟುಕೊಂಡು ಮಾಡಬೇಕು ಅನ್ನೋದು ನನ್ನ ಪಾಲಿಸಿ. ಎಲ್ಲರಿಗೂ ಒಳ್ಳೆಯವನಾಗಲು ಸಾಧ್ಯವಿಲ್ಲ. ಸೋಲು ಗೆಲುವು ಎಲ್ಲವನ್ನೂ ನೋಡಿದೆ. ಎಷ್ಟು ಜನರಿಗೆ ಇಂಥ ಅವಕಾಶ ಸಿಗುತ್ತೆ? ನೂರಾರು ಕೋಟಿ ಜನರಲ್ಲಿ ಕೇಂದ್ರ ಸಚಿವನಾಗುವ ಅವಕಾಶ ಎಷ್ಟು ಜನರಿಗೆ ಸಿಗುತ್ತೆ? ಎಲ್ಲ ಅಡೆತಡೆ ನೋಡಿರುವೆ. ಎಮ್ಮೆಲ್ಲೆ ಆಗಿ ಸೋತಿರುವೆ, ಎಂಪಿಯಾಗಿ ಸೋತಿರುವೆ. ಗೆಲುವಿನ ರುಚಿಯನ್ನೂ ನೋಡಿರುವೆ. ಏನೇ ಆಗಿದ್ದರೂ ಜನರ ಆಸೆ. ಅವರು ಅವಕಾಶ ಕೊಟ್ಟಾಗ ಒಂದು ಎಪ್ಪತ್ತು ಪರ್ಸೆಂಟಾದರೂ ಅದನ್ನು ಚೆನ್ನಾಗಿ ಮಾಡಲು ಪ್ರಯತ್ನಿಸಿರುವೆ. ತುಂಬಾ ರಾಜಕೀಯ ಮಾಡುವುದು ನನ್ನ ಶೈಲಿಯಲ್ಲ. ದಿನಕ್ಕೆ ಒಂದು ನಾಲ್ಕು ಗಂಟೆ ರಾಜಕೀಯ ಮಾಡುತ್ತೇನೆ ಅಷ್ಟೇ.

ನನ್ನಿಂದ ಸಾಧ್ಯವಾದಷ್ಟೂ ಜನರ ಕೆಲಸ ಮಾಡಿದ್ದೇನೆ. ಈಗಲೂ ಬಡವರು ಬರ್ತಾರೆ. ಕೆಲವೊಮ್ಮೆ ಏನೂ ಮಾಡಲಿಕ್ಕಾಗಲ್ಲ. ಎಲ್ಲವನ್ನೂ ಮಾಡುವುದು ಸಾಧ್ಯವಾದರೆ ದೇವರು ಆಗಿಬಿಡ್ತೇವೆ. ಅದು ಸಾಧ್ಯವಿಲ್ಲ’’ ಎಂದರು.

ಮಾತನಾಡುತ್ತ ಅಂಬರೀಶ್‌ ಕೊಂಚ ಫಿಲಾಸಫಿಕಲ್‌ ಆದರು. ‘‘‌ಸಂಸಾರ ಬೆಳೆಯುತ್ತೆ. ಊರು ಬೆಳೆಯಲ್ಲ. ಊರು ಅಷ್ಟೇ ಇರುತ್ತೆ. ಇದು ನಮ್ಮ ಸಮಸ್ಯೆ. ನಮ್ಮ ತಾತ, ತಂದೆಯ ಕಾಲದಲ್ಲೆಲ್ಲ ಜನ ಬೆಳಗ್ಗೆ ಐದು ಗಂಟೆಗೆ ಹೊಲಕ್ಕೆ ಹೋಗಿ ಉಳುತ್ತಿದ್ದರು. ಹನ್ನೊಂದರ ಸುಮಾರಿಗೆ ಹೆಂಡತಿ ಬುತ್ತಿ ತರುತ್ತಿದ್ದಳು. ಸಂಜೆ ಐದೂವರೆಗೆ ಕೆಲಸ ಮುಗಿಸಿ ಹಸುಗಳನ್ನು ಕಟ್ಟಿ, ಕಟ್ಟೆಗೆ ಬಂದು ಊರವರ ಜೊತೆ ಮಾತನಾಡುತ್ತಿದ್ದರು. ಏನೇ ಸಮಸ್ಯೆ ಬಂದರೂ ಅವರವರೇ ಸೆಟ್ಲ್‌ ಮಾಡಿಕೊಳ್ಳುತ್ತಿದ್ದರು. ಈಗ ಪರಿಸ್ಥಿತಿ ಮೊದಲಿನಂತಿಲ್ಲ. ಅಣ್ಣತಮ್ಮಂದಿರೇ ಸ್ಟೇಷನ್‌, ಕೋರ್ಟ್‌ಗೆ ಓಡಾಡುತ್ತಾರೆ.’’ 

‘ಅಂಬರೀಶ್‌ ಹೃದಯದ ಮಾತು ಕೇಳ್ತಾರೆ ಎನ್ನುವ ಮಾತಿತ್ತು. ಆ ಮಾತು, ರಾಜಕಾರಣಕ್ಕೆ ಬಂದ ನಂತರ ನೀವು ಸ್ವಲ್ಪ ತಲೆಯ ಮಾತು ಕೇಳ್ತೀರಿ ಅಂತಾಯಿತು’  ಎಂದು ಸಣ್ಣದಾಗಿ ಕೆಣಕಿದೆವು.

‘‘ನಮ್ಮಣ್ಣ, ತಮ್ಮ, ಮಗ, ಹೆಂಡತಿ, ಚಿಕ್ಕಪ್ಪ – ಯಾರೂ ರಾಜಕೀಯವಾಗಿ ನಮ್ಮ ಮನೆಗೆ ಬರಂಗಿಲ್ಲ. ಪ್ರೀತಿ, ವಿಶ್ವಾಸ, ಕಷ್ಟಸುಖಕ್ಕೆ ಯಾರು ಬೇಕಾದರೂ ಬರಬಹುದು. ರಾಜಕೀಯವಾಗಿ ಜನ ಬರಬೇಕು ಅಷ್ಟೇ. ಆ ಕಾರಣಕ್ಕಾಗಿ ನನ್ನ ಅಣ್ಣಂದಿರೂ ರಾಜಕಾರಣದ ವಿಷಯಕ್ಕೆ ಒಂದು ಕೆಲಸಕ್ಕೂ ನನ್ನ ಬಳಿ ಬರುತ್ತಿರಲಿಲ್ಲ. ಪಾಪ, ನನ್ನ ಪರವಾಗಿ ಓಟು ಕೇಳುತ್ತಿದ್ದರು ಅಷ್ಟೇ. ಹೀಗಿರುವಾಗ ನಾನು ಬೇರೆಯವರ ಮಾತು ಕೇಳುವ ಪ್ರಶ್ನೆ ಎಲ್ಲಿಂದ ಬಂತು? ಇದನ್ನೆಲ್ಲ ನಾನು ಬೇರೆಯವರನ್ನು ನೋಡಿ ಕಲಿತಿದ್ದಲ್ಲ. ನನ್ನ ತಾಯಿ, ಅಮ್ಮ ಹಾಗೆ ಬದುಕಿದ್ದರು.

ರಾಜಕುಮಾರ್‌ ಅವರ ಜೊತೆ ನಾನು ಇಪ್ಪತ್ತೈದು ವರ್ಷಗಳ ನಂತರ ನಟಿಸಿದ್ದು – ‘ಒಡಹುಟ್ಟಿದವರು’ ಸಿನಿಮಾದಲ್ಲಿ. ಮೂರನೇ ಕ್ಲಾಸು ಓದಿದ ರಾಜಕುಮಾರ್‌ ಕರ್ನಾಟಕದಲ್ಲಿ ಇತಿಹಾಸವನ್ನೇ ಬರೆದುಬಿಟ್ಟರು. ಶಿಕ್ಷಣದಿಂದಲೇ ಎಲ್ಲವೂ ಸಾಧ್ಯ ಎನ್ನುವಂತಿಲ್ಲ. ಮಾನವೀಯತೆ ಮತ್ತು ಗೆಲುವಿಗೆ ಶಿಕ್ಷಣ ಬೇಕಾಗಿಲ್ಲ. ರಾಜ್‌ ಯಶಸ್ಸಿಗೆ ಕಾರಣ ಎಜುಕೇಷನ್ ಅಲ್ಲ, ಡೆಡಿಕೇಷನ್. ಅವರು ಯಾವಾಗಲೂ ಹೇಳುತ್ತಿದ್ದರು – ‘ಮೇಕಪ್‌ ಮ್ಯಾನ್‌ ಒಂದು ಬೊಟ್ಟಿಡುತ್ತಾನೆ. ಆ ಸಮಯದಲ್ಲಿ ಸುತ್ತ ಇರುವ ಎಲ್ಲರೂ ಅವರು ಹೀಗೆ ಇವರು ಹೀಗೆ ಎಂದು ಹೇಳುತ್ತಲೇ ಇರುತ್ತಾರೆ. ನನ್ನದಾಯಿತು, ನನ್ನ ಮೇಕಪ್‌ ಆಯಿತು. ಒಂದು ಪರ್ಸೆಂಟ್‌ ಆದರೂ ನನ್ನೊಳಗೆ ಹೋಗಲ್ಲ. ಅದರ ಬಗ್ಗೆ ಗಮನ ಕೊಡುತ್ತಿರಲಿಲ್ಲ’. ನಾನೂ ಅಷ್ಟೇ – ನನಗೇನು ಸರಿ ಅನ್ನಿಸುತ್ತೋ ಅದನ್ನು ಮಾಡುತ್ತೇನೆ. ನೀವು ಹೇಳಿದ್ರಿ ಅನ್ನೋ ಕಾರಣಕ್ಕೆ ಮಾಡೊಲ್ಲ.

‘‘ನಮ್ಮ ತಾಯಿಗೆ ಮದುವೆಯಾದಾಗ ಒಂಬತ್ತು ವರ್ಷ. ತಂದೆಗೆ ಹದಿನಾರು ವರ್ಷ. ನನ್ನ ಅಮ್ಮನಿಗೆ ಎಜುಕೇಷನ್‌ ಏನಿತ್ತು ಹೇಳಿ? ಆದರೆ ಅವರಲ್ಲಿ ತಿಳುವಳಿಕೆ ಇತ್ತು..’’ 

‘‘ಕುದುರೆಮುಖ ಚಿತ್ರದ ಶೂಟಿಂಗ್‌ ಚಿಕ್ಕಮಗಳೂರಿನಲ್ಲಿ ನಡೆಯುತ್ತಿತ್ತು. ಪಡುವಾರಳ್ಳಿ ಪಾಂಡವರು ಶೂಟಿಂಗ್‌ ಮಂಗಳೂರಿನಲ್ಲಿ. ನನ್ನ ಬಳಿ ಡೇಟ್ಸ್‌ ಇರಲಿಲ್ಲ. ‘ನೀನೇ ಬರಬೇಕು ಮರಿ’ ಎಂದು ಒತ್ತಾಯಿಸಿದರು ಪುಟ್ಟಣ್ಣ. ಒಂದು ದಿನ ಚಿಕ್ಕಮಗಳೂರಿನಿಂದ ಹೊರಟು ಮಂಗಳೂರು ಸರ್ಕಲ್‌ ಸಮೀಪಕ್ಕೆ ಬಂದೆ. ಅಲ್ಲಿಗೆ ಬಂದ ಸ್ನೇಹಿತರು ಶೂಟಿಂಗ್‌ ಸ್ಥಳಕ್ಕೆ ಕರೆದೊಯ್ಯುವುದನ್ನು ಬಿಟ್ಟು ಗೆಸ್ಟ್‌ಹೌಸ್‌ಗೆ ಕರೆದೊಯ್ದರು. ಅರೆ ಶೂಟಿಂಗ್‌ ಎಲ್ರಯ್ಯಾ ಅಂದೆ. ಗೆಳೆಯರು ಅಳುಕುತ್ತಲೇ ನನ್ನ ತಂದೆಯ ಸಾವಿನ ಸುದ್ದಿ ತಿಳಿಸಿದರು.  ಅಲ್ಲಿಂದ ವಾಪಸ್‌ ಹೊರಟು ಮನೆಗೆ ಬಂದೆ, ರಾತ್ರಿ ಹನ್ನೆರಡು ಗಂಟೆ ಯಾಗಿತ್ವೇತು. ಎಲ್ಲ ಕೆಲಸಗಳನ್ನು ಮುಗಿಸಿದೆ. ಮರುದಿನ ಒಬ್ಬನೇ ರೂಮಲ್ಲಿ ಸಿಗರೇಟು ಸೇದುತ್ತಾ ಕೂತಿದ್ದೆ, ಅಮ್ಮ  ಬಂದರು. (ಅಮ್ಮನ ಎದುರಿಗೆ ಸಿಗರೇಟ್‌ ಸೇದ್ತಿದ್ದೆ, ಆದರೆ ಅಪ್ಪನ ಎದುರು ಸೇದ್ತಿರಲಿಲ್ಲ.) ‘ಎಲ್ಲಿಂದ ಬಂದೆ’ ಎಂದು ವಿಚಾರಿಸಿದರು. ‘ಅವರನ್ನೆಲ್ಲ ಏಕೆ ಕಾಯಿಸ್ತೀಯ. ಇನ್ನು ನಿಮ್ಮಪ್ಪನ್ನ ವಾಪಸ್‌ ತರಲಿಕ್ಕೆ ಆಗೊಲ್ಲ. ಹೋಗಿ ಕೆಲಸ ಮುಗಿಸಿಕೊಂಡು ಬಾ’ ಎಂದರು. ಗಂಡ ಸತ್ತು ಒಂದು ದಿನವೂ ಆಗಿಲ್ಲ,  ಮೊದಲೇ ಹಳ್ಳಿಯ ಹೆಂಗಸು ಹೀಗೆ ಹೇಳುವುದಿದೆಯಲ್ಲ – ಅದು ಎಜುಕೇಷನ್. ಮಗ ಯಾರ ಬಳಿಯೂ ಕೆಟ್ಟ ಹೆಸರು ತೆಗೆದುಕೊಳ್ಳಬಾರದು ಎನ್ನುವ ತಿಳಿವಳಿಕೆ ಇದೆಯಲ್ಲ, ಅದು ಎಜುಕೇಷನ್’’.

ಅಂಬರೀಶ್‌ರ ನೆನಪು ಮತ್ತೆ ಅಮ್ಮನತ್ತಲೇ ಹರಿಯಿತು. ‘‘ಲಾವಣ್ಯ ಪತ್ರಿಕೆಯವರು ನನಗೆ ಬೆಸ್ಟ್‌ ವಿಲನ್, ರಾಜ್‌ಕುಮಾರ್‌ ಅವರಿಗೆ ಬೆಸ್ಟ್‌ ಹೀರೊ ಪ್ರಶಸ್ತಿ ಕೊಟ್ಟಿದ್ದರು. ಟೌನ್‌ ಹಾಲ್‌ನಲ್ಲಿ ಕಾರ್ಯಕ್ರಮ. ತಾಯಿಯವರನ್ನು ಕರೆದುಕೊಂಡು ಹೋಗಿದ್ದೆ. ಅವರಿಗೆ ರಾಜ್‌ಕುಮಾರ್‌ ಎಂದರೆ ದೇವರಿದ್ದಂತೆ. ‘ನಮಸ್ಕಾರ ಮಾಡು’ ಎಂದು ಒಂದೇ ಸಮನೆ ಪೀಡಿಸತೊಡಗಿದರು. ನಾನು ‘ದೂರದಿಂದ ನಮಸ್ಕಾರ ಮಾಡಿದರೆ ಅವರಿಗೆ ಎಲ್ಲಿ ಕಾಣಿಸುತ್ತೆ, ಸುಮ್ಮನೆ ಕೂತಿರು’ ಎಂದೆ. ಅಷ್ಟರಲ್ಲೇ ಯಾರಿಗೋ ಪ್ರಶಸ್ತಿ ಕೊಡಲು ರಾಜ್‌ಕುಮಾರ್‌ ವೇದಿಕೆಯ ಮೇಲೆ ಬಂದರು. ಆವರೆಗೆ ನನಗೂ ಅವರಿಗೂ ಪರಿಚಯ ಇರಲಿಲ್ಲ. ನಾವಿಬ್ಬರೂ ಜೊತೆಯಲ್ಲಿ ನಟಿಸಿರಲಿಲ್ಲ. ನನ್ನನ್ನು ನೋಡಿದವರೇ – ‘ಹೇಗಿದ್ದೀರಿ ಅಂಬರೀಶ್‌’ ಎಂದರು. ‘ಚೆನ್ನಾಗಿದ್ದೀನಿ ಸರ್‌’ ಎಂದೆ. ಹಿಂತಿರುಗುವಾಗ ಅಮ್ಮ ಮೈಸೂರು ಟೋಲ್‌ಗೇಟ್‌ ಬರುವವರೆಗೂ ಬೈದರು. ‘ನೀನು ಯಾರೆಂದು ಅವರು ನಿನಗೆ ನಮಸ್ಕಾರ ಮಾಡಬೇಕು’ ಎನ್ನುವುದು ಅವರ ತಕರಾರು. ಇದನ್ನೇ ನೋಡಿ, ‘ನೋಡಿ ಕಲಿಯುವುದು’ ಎನ್ನುವುದು’’.

ಇನ್ನಷ್ಟು ಓದು

 ಅಂಬಿಗೆ ನಿಜಕ್ಕೂ ವಯಸ್ಸಾಯ್ತಾ?  ಅಭಿಮಾನಿಗಳಿಗೆ ಅಂಬರೀಷ್ ಬರೆದಿದ್ದ ಪತ್ರ
‘ಕಾವೇರಿ’ಗಾಗಿ ರಾಜೀನಾಮೆ ಕೊಟ್ಟಿದ್ದ ಮಂಡ್ಯದ ಗಂಡು
ಗೆಳೆಯನ ಸಾವು; ಕಂಬನಿ ಮಿಡಿದ ರಜನಿಕಾಂತ್‌
ಗ್ಲ್ಯಾಮರ್–ಗ್ರ್ಯಾಮರ್ ಸೂತ್ರ ಸಿನಿಮಾ-ರಾಜಕಾರಣದ ಪಾತ್ರ

ರಾಜಕೀಯದಲ್ಲೂ ‘ರೆಬೆಲ್‌’

‘‘ಆಗ ಕನ್ನಡ ಸಿನಿಮಾಗಳೆಲ್ಲ ಶೂಟಿಂಗ್‌ಗೆ ಫ್ಲೋರ್‌ ದೊರೆಯುತ್ತಿದ್ದುದು ಸಂಜೆ 6 ಗಂಟೆಯ ನಂತರ ಅಥವಾ ರಾತ್ರಿಯ ವೇಳೆ. ‘ಯಾವ ಫ್ಲೋರ್‌ ಆಚೆ ನಾಯಿಗಳು ಓಡಾಡುವುದಿಲ್ಲವೋ ಅಲ್ಲಿ ಕನ್ನಡ ಸಿನಿಮಾದ ಶೂಟಿಂಗ್‌ ನಡೆಯುತ್ತಿದೆ’ ಎನ್ನುವ ಜೋಕ್‌ ಆಗ ಚಾಲ್ತಿಯಲ್ಲಿತ್ತು. ಏಕೆಂದರೆ ಅಲ್ಲಿ ಊಟ– ತಿಂಡಿಗೆ ಕೊರತೆ. ಆ ಕಾಲದಲ್ಲಿ ಬೆಳೆದು ಬಂದವರು ರಾಜ್‌ಕುಮಾರ್‌. ಆಗಿನ ಕಾಲಕ್ಕೆ ಎಲ್ಲ ನ್ಯಾಚುರಲ್ ಆಗಿ ಅಭಿನಯ. ಈಗಿನಂತೆ ಗ್ರಾಫಿಕ್ಸ್‌, ಹುಲಿ ತೋರಿಸೋದು, ಸಿಂಹ ತೋರಿಸೋದು ಎಲ್ಲ ಇರಲಿಲ್ಲ. ಹಾಗೆಂದು ಒನ್‌ ಮ್ಯಾನ್‌ ಇಂಡಸ್ಟ್ರಿ ಏನೂ ಇರಲಿಲ್ಲ. ಅವರ ಕೆಲಸ ಅವರಿಗೆ. ನಮ್ಮ ಸಿನಿಮಾ ಅವರಿಗೆ. ಒಂದು ಕಾಲಕ್ಕೆ ಕಲ್ಯಾಣಕುಮಾರ್‌ ಎಂಟರ್‌ ಆದರೆಂದರೆ ಇಡೀ ಸ್ಟುಡಿಯೊಗೆ ಸೆಂಟ್‌ ವಾಸನೆ ಬರ್ತಿತ್ತು. ಒಂದೊಂದು ಕಾಲಕ್ಕೆ ಒಬ್ಬರೊಬ್ಬರು. ಆದರೆ, ಅವರ ಕೆಲಸ ಅವರದು. ನಮ್ಮ ಕೆಲಸ ನಮ್ಮದು.’’

ಅಂಬರೀಷ್‌ ಜೊತೆಗೆ ಮಾತು ಎಂದರೆ ‘ನಾಗರಹಾವು’ ಬರದಿದ್ದರೆ ಹೇಗೆ? ಸಿನಿಮಾ ಅವಕಾಶಗಳಿಗಾಗಿ ಎಲ್ಲರೂ ಪರಿತಪಿಸುವಾಗ, ‘ನಾಗರಹಾವು’ ಸಿನಿಮಾದ ಅವಕಾಶ ಹುಡುಕಿಕೊಂಡು ಬಂತು. ಆಗಿನ್ನೂ ಅಂಬರೀಶ್‌ ಹುಡುಗಾಟಿಕೆಯ ಬುದ್ಧಿ ಬಿಟ್ಟಿರಲಿಲ್ಲವಂತೆ.  ‘‘ನಾನು ಸ್ವಲ್ಪ ಮುಂಗೋಪಿ. ನಾನು ಡ್ರಾಮಾ ಮಾಡಿದವನಲ್ಲ. ಆ್ಯಕ್ಟಿಂಗ್‌ ಗೊತ್ತಿರಲಿಲ್ಲ. ಬರೀ ಪುಂಡಾಟಿಕೆ. ಇವತ್ತಾದರೆ ಹುಡುಗರು ಫೈಟ್‌, ಡಾನ್ಸ್‌, ಡೈಲಾಗ್‌ ಡೆಲಿವರಿ – ಎಲ್ಲ ಕಲಿತು ಚಿತ್ರರಂಗಕ್ಕೆ  ಬರುತ್ತಾರೆ. ಆಗ ನಾವೆಲ್ಲ raw! ರಾಜ್‌ಕುಮಾರ್‌ ಎಷ್ಟನೇ ಪಿಕ್ಚರ್‌ಗೆ ಹಾಡಿದ್ದು? ಅದ್ಭುತ ವಾಯ್ಸ್‌ ಇದ್ದೂ ‘ಮಹಿಷಾಸುರ ಮರ್ದಿನಿ’, ‘ಸಂಪತ್ತಿಗೆ ಸವಾಲ್‌’ವರೆಗೆ ಕಾಯಬೇಕಾಯಿತು. ಪುಟ್ಟಣ್ಣ ಮೊದಲನೇ ದಿನವೇ ನಮ್ಮನ್ನು ಲಂಚ್‌ಗೆ ಕರೆದುಕೊಂಡು ಹೇಳಿದರು. ‘ಇಬ್ಬರಿಗೂ ಒಳ್ಳೆಯ ಭವಿಷ್ಯವಿದೆ’ ಎಂದರು. ‘ಅವನು (ವಿಷ್ಣುವರ್ಧನ್) ಹೀರೊ. ಒಳ್ಳೆ ಹೆಸರು ಬರ್ತದೆ ಎನ್ನುವುದು ಸರಿ. ನಾನು ವಿಲನ್‌,  ನನಗೆ ಹೇಗೆ ಒಳ್ಳೆ ಹೆಸರು ಬರ್ತದೆ’ ಎಂದೆ. ‘ನೋಡ್ತಿರು ಮರಿ’ ಎಂದರು. ನಂತರ ಆದದ್ದು ಪವಾಡ. ಮೈಸೂರಿನಲ್ಲಿ ರಾತ್ರಿ ಷೋ ನೋಡಿದೆ. ಅದರಲ್ಲಿ ನನ್ನ ಎಂಟ್ರಿಗಿಂತ ಮುಂಚೆ ಸೈಕಲ್‌ ಚಕ್ರ ತಿರುಗುವುದನ್ನು ತೋರಿಸುತ್ತಾರೆ. ಚಕ್ಗರ ತಿರುಗುವುದನ್ತೊನು ನೋಡುತ್ಡತಲೇ ಪ್ರೇಕ್ಷಕರು ಚಪ್ಪಾಳೆ ಹೊಡೆಯತೊಡಗಿದರು. ಸೈಕಲ್‌ ಚಕ್ರ ತೆರೆಯ ಮೇಲೆ ತಿರುಗುತ್ತಿದ್ದಂತೆ ನನ್ನ ಜೀವನಚಕ್ರವೂ ತಿರುಗಿತು. ಪುಟ್ಟಣ್ಣನವರು ಪಾತ್ರದ ಶಕ್ತಿಯನ್ನು ಮೊದಲೇ ಕಲ್ಪಿಸಿಕೊಂಡಿದ್ದರು’’.

‘ನಾಗರಹಾವು’ ರೀತಿಯ ಅದ್ಭುತ ಸಿನಿಮಾದ ಮೂಲಕ ಆರಂಭಿಸಿದ ಅಂಬರೀಶ್‌ ವೃತ್ತಿಜೀವನದಲ್ಲಿ ಒಂದೇ ಬಗೆಯ ಪಾತ್ರಗಳು ದೊರೆತವಲ್ಲವೇ? ‘ಏಳುಸುತ್ತಿನ ಕೋಟೆ’, ‘ಅಂತ’, ‘ನ್ಯೂಡೆಲ್ಲಿ’ಯಂಥ ಕೆಲವು ಸಿನಿಮಾಗಳನ್ನು ಹೊರತುಪಡಿಸಿದರೆ ಉಳಿದಂತೆ ಆ್ಯಕ್ಷನ್‌ ಸಿನಿಮಾಗಳಲ್ಲಿ ಕಲಾವಿದನಾಗಿ ಅವರು ಕಳೆದುಹೋದರೆ? ಈ ಪ್ರಶ್ನೆಗೆ ಅಂಬರೀಶ್‌ ತಮ್ಮನ್ನು ತಾವು ವಿಮರ್ಶಿಸಿಕೊಳ್ಳುವಂತೆ ಪ್ರತಿಕ್ರಿಯಿಸಿದರು.

‘‘ನನಗೇ ಅನ್ನಿಸುತ್ತೆ. ಆಗಾಗ ನಮ್ಮನ್ನು ನಾವು ಸಾಬೀತುಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಅಂತ. ‘ಏಳು ಸುತ್ತಿನ ಕೋಟೆ’ ಸಾಧಾರಣ ಕಥೆಯಲ್ಲ. ಜನರಿಗೆ ಅದು ಅರ್ಥವಾಗಲಿಲ್ಲ. ವರ್ಷಗಳ ನಂತರ ಟೀವಿಯಲ್ಲಿ ನೋಡಿ ‘ಎಂಥ ಸಿನಿಮಾ’ ಎಂದರು. ‘ಮೌನರಾಗ’ – ಯಾವ ಹೀರೊ ಕೂಡ ಒಪ್ಪಲು ಹಿಂಜರಿಯುವ ಸಿನಿಮಾ.  ಆದರೆ, ಇಂಥ ಸಿನಿಮಾಗಳು ಯಾವಾಗಲೂ ಸಿಗುವುದಿಲ್ಲ. ‘ಹೃದಯ ಹಾಡಿತು’ ಕೂಡ ಭಿನ್ನವಾದ ಸಿನಿಮಾ. ನಾನು ‘ಫೈಟು ಬೇಡ್ರಯ್ಯಾ’ ಅಂದರೂ ‘ಇಲ್ಲ ಸಾರ್‌, ಒಂದು ಫೈಟ್‌ ಹಾಕ್ತೇವೆ’ ಎನ್ನುತ್ತಿದ್ದರು. ‘ನ್ಯೂಡೆಲ್ಲಿ’ ಕೂಡ ಒಳ್ಳೆ ಆ್ಯಕ್ಷನ್ ಸಿನಿಮಾ. ಆ್ಯಕ್ಷನ್ ಎಂದರೆ ಫೈಟ್‌ ಅಲ್ಲ, ಅದು ಒಳಗಿನ ಸಂಘರ್ಷ. ‘ಅಂತ’ ಸಿನಿಮಾ ಬಂದ ಮೇಲೆ, ಅದೇ ಥಾಟ್‌ನ ಸುಮಾರು ಅರವತ್ತು ಸಿನಿಮಾಗಳನ್ನು ನಾನು ಮಾಡಬೇಕಾಯಿತು. ಬೇಸರ ಆಗುತ್ತೆ, ಆದರೆ ಏನು ಮಾಡುವುದು?’’

ಮಾತು ಮತ್ತೆ ರಾಜಕಾರಣದತ್ತ ಹರಿಯಿತು. ‘ ರಾಜಕಾರಣ ನಿಮ್ಮ ಆಯ್ಕೆಯಲ್ಲ ಎಂದು ಅನ್ನಿಸಿರಲಿಲ್ಲವೇ? ಸಿನಿಮಾದಿಂದ ದೊರೆತ ತೃಪ್ತಿ ರಾಜಕಾರಣದಿಂದ ಯಾವತ್ತಾದರೂ ದೊರೆತಿದೆಯೇ?’ ಎಂದು ಕೇಳಿದೆವು. ‘‘ರಾಜಕೀಯದಲ್ಲಿ ಸುಮಾರು ಜನಕ್ಕೆ ಒಳ್ಳೆಯದು ಮಾಡಬಹುದು. ಎಂಪಿ ಫಂಡ್‌ ಅನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವುದನ್ನು ನಾನು ತೋರಿಸಿಕೊಟ್ಟೆ. ಹಳ್ಳಿಗಳನ್ನು ಕೇಂದ್ರವಾಗಿಟ್ಟುಕೊಂಡು 149 ಕಲ್ಯಾಣಮಂಟಪಗಳನ್ನು ಕಟ್ಟಿಸಿದೆ. ಶ್ರೀಮಂತ ಗೆಳೆಯರಿಂದ ಅನೇಕ ಆ್ಯಂಬುಲೆನ್ಸ್‌ಗಳನ್ನು ಕೊಡಿಸಿದೆ. ನನಗೆ ಕೊಟ್ಟ ಕೆಲಸವನ್ನು ಸರಿಯಾಗಿ ನಿರ್ವಹಿಸಿದ ತೃಪ್ತಿ ಇದೆ ನನಗೆ. ಸಿನಿಮಾದಲ್ಲೂ ದೊರೆತ ಗೌರವ ರಾಜಕಾರಣದಲ್ಲೂ ದೊರೆತಿದೆ’’ ಎಂದರು.

ಮುಂದಿನ ಪ್ರಶ್ನೆಯ ಮೂಲಕ ಅಂಬರೀಶ್‌ರನ್ನು ಬಾಲ್ಯದ ಓಣಿಗಳಲ್ಲಿ ಸುತ್ತಾಡಿಸುವ ನಮ್ಮ ಪ್ರಯತ್ನ ಅಷ್ಟೇನೂ ಯಶಸ್ವಿಯಾಗಲಿಲ್ಲ. ‘ಜಲೀಲನ ನಂತರದ ಅಂಬರೀಶ್‌ ನಮಗೆ ಗೊತ್ತು. ಅದಕ್ಕೂ ಮುಂಚಿನ ನಿಮ್ಮ ಬಾಲ್ಯ ಹೇಗಿತ್ತು?’ ಎಂದಾಗ, ಅವರು ನೇರವಾಗಿ ಹೈಸ್ಕೂಲು ದಿನಗಳಿಗೆ ಬಂದರು.

‘‘ನಾನು ಸ್ವಲ್ಪ ಬ್ರಿಲಿಯೆಂಟ್‌ ಬಾಯ್‌ – ಎಸ್ಸೆಸ್ಸೆಲ್ಸಿವರೆಗೆ. ಕಾಲೇಜಿಗೆ ಬಂದ ತಕ್ಷಣ ಎಲ್ಲವೂ ‘ಎ ಎ ಎ’ – ‘ಎ’ ಅಂದರೆ ಆ್ಯಬ್ಸೆಂಟ್‌ ಎಂದರ್ಥ. (ನಗು..) ಸ್ಪೋರ್ಟ್ಸ್‌ ಬಗ್ಗೆ ಆಸಕ್ತಿ ಇತ್ತು. ಎಲ್ಲ ಆಟಗಳಲ್ಲೂ ಆಸಕ್ತಿ ಇತ್ತು. ಎಸ್‌ಎಸ್‌ಎಲ್‌ಸಿವರೆಗೆ ಗಣಿತದಲ್ಲಿ ನೂರಕ್ಕೆ ನೂರು ತೆಗೀತಿದ್ದೆ. 92 ಪರ್ಸೆಂಟ್‌ಗೆ ಕಡಿಮೆ ಇಲ್ಲವೇ ಇಲ್ಲ. ಮನೆಯಲ್ಲಿ ಇಬ್ಬರು ಎಂಜಿನಿಯರ್‌ಗಳಿದ್ದರು. ಇನ್ನೊಬ್ಬರು ಡಬ್ಬಲ್‌ ಗ್ರಾಜುಯೇಟ್‌. ಅಪ್ಪನಿಗೆ ನಾನು ಡಾಕ್ಟರ್‌ ಆಗಬೇಕು ಎಂದಿತ್ತು. ಬೆಂಗಳೂರಿನಲ್ಲಿ ಕಾಲೇಜಿಗೆ ಸೇರಿಸಿದರು. ಮೈಸೂರು ಚಿಕ್ಕದು, ಬೆಂಗಳೂರು ದೊಡ್ಡದು ಅಷ್ಟೇ. ಆ ವೇಳೆಗೆ ನನ್ನ ಆಸಕ್ತಿಯೇ ಬದಲಾಗಿತ್ತು’’.

ವಿಷ್ಣುವರ್ಧನ್‌ ಪ್ರಸ್ತಾಪವಿಲ್ಲದೆ ಅಂಬರೀಶ್‌ ಜೊತೆಗಿನ ಮಾತುಕತೆ ಮುಗಿಯುವುದು ಸಾಧ್ಯವೇ? ಗೆಳೆಯನನ್ನು ನೆನಪಿಸಿಕೊಂಡಾಗ ಅಂಬಿ ಕಣ್ಣು ಮಂಜಾದದ್ದು ಸುಳ್ಳಲ್ಲ. ‘‘ವಿಷ್ಣುವರ್ಧನ್‌ ತುಂಬಾ ಬುದ್ಧಿವಂತ. ಬೇರೆಯವರ ಜೊತೆ ತುಂಬಾ ಬೆರೆಯುತ್ತಿರಲಿಲ್ಲ. ಅವನ ಪಿಕ್ಚರ್‌ ಯಾವುದು, ಕ್ಯಾರೆಕ್ಟರ್‌ ಏನು ಎಂದೆಲ್ಲ ಯೋಚಿಸಿದರೆ ಸಮಸ್ಯೆ. ನಾವಿಬ್ಬರೂ ಹಾಗೆ ಯೋಚಿಸುತ್ತಲೇ ಇರಲಿಲ್ಲ. ನಿಮ್ಮ ಕೆಲಸ ನಿಮಗೆ, ನನ್ನ ಕೆಲಸ ನನಗೆ ಎಂದುಕೊಂಡರೆ ಸಮಸ್ಯೆಯೇ ಬರೊಲ್ಲ. ಹೀಗಿದ್ದುದರಿಂದಲೇ ನಮ್ಮ ಸ್ನೇಹ ಚೆನ್ನಾಗಿತ್ತು’’ ಎಂದರು. ಊಟಕ್ಕೆಂದು ಇಬ್ಬರೂ  ಸಿಂಗಪುರಕ್ಕೆ ಹೋಗಿಬರುತ್ತಿದ್ದ ದಿನಗಳನ್ನು ನೆನಪಿಸಿಕೊಂಡರು. ‘‘ಅವನ ಆರೋಗ್ಯದಲ್ಲಿ ಏರುಪೇರಾದಾಗ ನನಗೆ ಸ್ವಲ್ಪವೇನಾದರೂ ಕ್ಲೂ ದೊರೆತಿದ್ದರೆ ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗುತ್ತಿದ್ದೆ. ಆದರೆ, ಏನೂ ವಿಷು ತಿಳಿಸಲಿಲ್ಲ ನೋಡಿ..’’ ಎಂದು ಸಣ್ಣ ದನಿಯಲ್ಲಿ ಹೇಳಿದರು.

ಮಾತು ಕೊನೆಗೊಂಡಿದ್ದು ಇವತ್ತಿನ ಕನ್ನಡ ಚಿತ್ರರಂಗದ ಗತಿ ಸ್ಥಿತಿಯ ವಿಶ್ಲೇಷಣೆಯೊಂದಿಗೆ. ‘‘‌ ಕನ್ನಡದಲ್ಲಿ ಇವತ್ತು  ಒಳ್ಳೊಳ್ಳೆಯ ಹೀರೊಗಳು ಬಂದಿದ್ದಾರೆ. ಇಂಡಸ್ಟ್ರಿಗೆ ಒಳ್ಳೆಯ ಹೆಸರೂ ಬರ್ತಿದೆ. ಆದರೆ ಫೀಡಿಂಗ್‌ ಸರಿಯಾಗಿಲ್ಲ. ಒಬ್ಬೊಬ್ಬ ಹೀರೊ ಒಂದು ಸಿನಿಮಾ ಮಾಡಲು ವರ್ಷಗಟ್ಟಲೆ ಸಮಯ ತೆಗೆದುಕೊಂಡರೆ ಚಿತ್ರಮಂದಿರಗಳಿಗೆ ಫೀಡಿಂಗ್‌ ಹೇಗೆ ಕೊಡುತ್ತೀರಿ? ಹೀರೊ ಯಾರೂಂತ ಗೊತ್ತಿರಲ್ಲ, ಪ್ರೊಡ್ಯೂಸರ್‌–ನಿರ್ದೇಶಕ ಯಾರು ಎನ್ನುವುದೂ  ಗೊತ್ತಿರಲ್ಲ. ನಮ್ಮ ಕಾಲದಲ್ಲಿ ಇದೆಲ್ಲ ಜನರಿಗೆ ಗೊತ್ತಿರುತ್ತಿತ್ತು. ಎರಡೂವರೆ ಲಕ್ಷ ಬಾಡಿಗೆ ಇರುವ ಚಿತ್ರಮಂದಿರದಲ್ಲಿ ಕಲೆಕ್ಷನ್‌ ಎಂಬತ್ತು ಸಾವಿರ ರೂಪಾಯಿ ಎನ್ನುವಂತಾದರೆ ಹೇಗೆ? ಹೀರೊಗಳು ಇವತ್ತು ವರ್ಷಕ್ಕೆ ಎರಡೆರಡು ಸಿನಿಮಾ ಮಾಡಿದರೂ ಚಿತ್ರರಂಗದ ಪರಿಸ್ಥಿತಿ ಸುಧಾರಿಸುತ್ತದೆ’’ ಎಂದರು.

ಚಿತ್ರರಂಗದಿಂದ ಚಿತ್ರ ನಟರತ್ತ ಮಾತು ಹರಿಯಿತು. ಕನ್ನಡದ ಸಿನಿಮಾ ನಟರು ನಿಜ ಜೀವನದಲ್ಲಿ ವಿವಾದಕ್ಕೆ ಸಿಲುಕಿಕೊಳ್ಳುತ್ತಿರುವ ಬಗ್ಗೆ, ಜೈಲುಪಾಲಾಗುತ್ತಿರುವ ಬಗ್ಗೆ ಪ್ರಶ್ನಿಸಿದೆವು. – ‘‘ಹೀಗೆ ಮಾಡಬೇಡಿ ಎನ್ನುವುದನ್ನು ಜನರಿಗೆ ತೋರಿಸುವುದಕ್ಕಾಗಿ ಅವರು ನಿಜ ಜೀವನದಲ್ಲೇ ಹೀಗೆ ಮಾಡಿ ತೋರಿಸುತ್ತಿದ್ದಾರೆ ಅನ್ನಿಸುತ್ತದೆ. ಏನು ಮಾಡುವುದು?’’ ಎಂದು ನಕ್ಕರು.

ಮಾತು ನಡೆದೇ ಇತ್ತು.  ಸಿಗರೇಟಿನ ಹೊಗೆ ಬಿಡುತ್ತಾ ಅಂಬರೀಷ್‌ ಮೂಡ್‌ ಹೊರಳುತ್ತಿತ್ತು. ವಿಶಾಲವಾದ ಫ್ಲ್ಯಾಟ್‌ನ ಎಂಟನೇ ಮಹಡಿಯದು. ಅವರು ಕುಳಿತಿದ್ದ ಕುರ್ಚಿ ಬದಿಯ ಕಿಟಕಿಯಿಂದ ಕಣ್ಣಾಡಿಸಿದರೆ ಮುಖ್ಯಮಂತ್ರಿಯ ಮನೆ ಕಾಣಿಸುತ್ತಿತ್ತು. ‘‘ಅರವತ್ತೇಳು ವರ್ಷ ಆಗ್ತಾ ಬಂತು. ಮೊದಲಿನ ರೀತಿ ಓಡಾಡಿ, ಜನರನ್ನು ಭೇಟಿ ಮಾಡಿ ಅವರ ಕೆಲಸವನ್ನು ಮಾಡುವ ಶಕ್ತಿ ಈಗಿಲ್ಲ’’ ಎಂದರು. ಅವರ ಮಾತಿನಲ್ಲಿ ವಾಸ್ತವದ ಗ್ರಹಿಕೆಯಿತ್ತು.  ಆದರೆ, ಅಂಬರೀಶ್‌ ಅವರನ್ನು ಭೇಟಿಯಾಗಲು ಕಾದು ನಿಂತಿದ್ದ ಸಣ್ಣ ಗುಂಪನ್ನು ನೋಡಿದರೆ, ಅವರಿಗೆ ಸದ್ಯಕ್ಕಂತೂ ವಿಶ್ರಾಂತಿ ಇಲ್ಲ ಎನ್ನುವುದು ಸ್ಪಷ್ಟವಾಗುವಂತಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು