ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರುತಿ #MeToo ಆರೋಪಕ್ಕೆ ‘ವಿಸ್ಮಯ’ ನಿರ್ದೇಶಕ ಅರುಣ್ ವೈದ್ಯನಾಥನ್ ಹೇಳಿದ್ದೇನು?

ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದ ನಟಿ
Last Updated 21 ಅಕ್ಟೋಬರ್ 2018, 14:18 IST
ಅಕ್ಷರ ಗಾತ್ರ

ಬೆಂಗಳೂರು: ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ‘ವಿಸ್ಮಯ’ ಚಿತ್ರದ ನಿರ್ದೇಶಕ ಅರುಣ್ ವೈದ್ಯನಾಥನ್ ಪ್ರತಿಕ್ರಿಯೆ ನೀಡಿದ್ದಾರೆ.

ವಿವಾದಕ್ಕೆ ಸಂಬಂಧಿಸಿ ಫೇಸ್‌ಬುಕ್‌ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ‘ಅರ್ಜುನ್ ಮತ್ತು ಶ್ರುತಿ ಹರಿಹರನ್ ಇಬ್ಬರೂ ನನ್ನ ಉತ್ತಮ ಸ್ನೇಹಿತರು. ಅವರಿಬ್ಬರ ಕುಟುಂಬದವರನ್ನೂ ನಾನು ಬಲ್ಲೆ’ ಎಂದು ಬರೆದುಕೊಂಡಿದ್ದಾರೆ.

‘ಅರ್ಜುನ್ ಸರ್ ಬಗ್ಗೆ ಹೇಳುವುದಾದರೆ, ಅವರೊಬ್ಬ ಸಂಭಾವಿತ, ನಟನೆ ವಿಚಾರಕ್ಕೆ ಬಂದಾಗ ವೃತ್ತಿಪರ. ಶ್ರುತಿ ಅವರಿಗೂ ಇದೇ ಅನ್ವಯವಾಗುತ್ತದೆ. ಶ್ರುತಿ ಅವರು #MeToo ಚಳವಳಿಯಲ್ಲಿ ಅರ್ಜುನ್ ಸರ್ ಹೆಸರು ಉಲ್ಲೇಖಿಸಿದ ಪ್ರಕಟಣೆ ನೋಡಿದೆ. ಸಿನಿಮಾದ ನಿರ್ದಿಷ್ಟ ದೃಶ್ಯವೊಂದರ ಬಗ್ಗೆ ಅದರಲ್ಲಿ ಉಲ್ಲೇಖಸಿದ ಅಂಶ ನೋಡಿ ಆಘಾತವಾಯಿತು. ಅದೊಂದು ರೊಮ್ಯಾಂಟಿಕ್ ದೃಶ್ಯ. ಶೂಟಿಂಗ್‌ಗೂ ಮುನ್ನ ಆ ಬಗ್ಗೆ ನಾವು ಚರ್ಚಿಸಿದ್ದೆವು ಹಾಗೂ ರಿಹರ್ಸಲ್ ನಡೆಸಿದ್ದೆವು. ಕೆಲವೊಂದು ಅಗತ್ಯ ಸುಧಾರಣೆಗಳನ್ನು ಮಾಡಿ ಶೂಟಿಂಗ್‌ಗೆ ಸಿದ್ಧತೆ ಮಾಡಿದ್ದೆ. ದೃಶ್ಯಗಳನ್ನು ಸುಧಾರಣೆ ಮಾಡುವುದು ಸಿನಿಮಾ ಚಿತ್ರೀಕರಣದ ಸಾಮಾನ್ಯ. ಶೂಟಿಂಗ್‌ ನಡೆದಿರುವುದು 2 ವರ್ಷಗಳ ಹಿಂದೆ. ಹೀಗಾಗಿ ಕ್ಷಣಕ್ಷಣದ ಮಾಹಿತಿ ನನಗೆ ನೆನಪಿಲ್ಲ.

ಇನ್ನೊಂದು ವಿಷಯವನ್ನು ನಾನಿಲ್ಲಿ ಹೇಳಬೇಕು. ಆ ರೊಮ್ಯಾಂಟಿಕ್ ದೃಶ್ಯ ತೆರೆಯ ಮೇಲೆ ಪ್ರದರ್ಶನಗೊಂಡಿದ್ದರಿಂದಲೂ ಹೆಚ್ಚೇ ಇತ್ತು. ಅರ್ಜುನ್ ಸರ್ ಅವರು ಅದನ್ನು ಕಡಿಮೆ ಮಾಡುವಂತೆ ನನ್ನ ಬಳಿ ಮನವಿ ಮಾಡಿದ್ದರು. ‘ನನಗೂ ಈಗ ಹದಿಹರೆಯದ ಮಗಳಂದಿರಿದ್ದಾರೆ, ಅಂಥಹ ದೃಶ್ಯಗಳಲ್ಲಿ ನಟಿಸಲಾರೆ’ ಎಂದು ಅವರು ಹೇಳಿದ್ದರು. ಅದನ್ನು ಅರ್ಥ ಮಾಡಿಕೊಂಡ ನಾನು ಇಡೀ ದೃಶ್ಯದ ಸ್ಕ್ರಿಪ್ಟ್‌ ಅನ್ನು ಪುನಹ ಬರೆದಿದ್ದೆ. ಇದು ನಿಜವಾಗಿ ನಡೆದದ್ದು.

ನನ್ನ ಸಿನಿಮಾ ಸೆಟ್‌ನ ಹೊರತಾಗಿ ಇಬ್ಬರು ವಯಸ್ಕರ ನಡುವೆ ದೂರವಾಣಿ ಕರೆಯೋ ಅಥವಾ ಸಂದೇಶಗಳೋ ವಿನಿಮಯಗೊಂಡಿದ್ದರೆ ನನ್ನ ಗಮನಕ್ಕೆ ದೂರಿನ ರೂಪದಲ್ಲಿ ಬಾರದಿದ್ದರೆ ನಾನು ಆ ಬಗ್ಗೆ ಪ್ರತಿಕ್ರಿಯಿಸಲಾರೆ. ಅದು ಸರಿಯೂ ಅಲ್ಲ.

ವೈಯಕ್ತಿಕವಾಗಿ ಅವರಿಬ್ಬರೂ ನನ್ನ ಉತ್ತಮ ಸ್ನೇಹಿತರು. ಉತ್ತಮ ಸಿನಿಮಾ ರೂಪಿಸುವ ನಿಟ್ಟಿನಲ್ಲಿ ನಾವೊಂದು ತಂಡವಾಗಿ ಕೆಲಸ ಮಾಡಿದ್ದೆವು. ಇನ್ನು #MeToo ಚಳವಳಿ ಬಗ್ಗೆ ಹೇಳುವುದಾದರೆ, ಎಲ್ಲ ಕ್ಷೇತ್ರದಲ್ಲಿಯೂ ಎಲ್ಲ ಮಹಿಳೆಯರಿಗೂ ಸುರಕ್ಷತೆಯಿಂದ ಕೂಡಿದ ವಾತಾವರಣವನ್ನು ಇದು ನಿರ್ಮಾಣ ಮಾಡಲಿ ಆಶಿಸುತ್ತೇನೆ.

ಇನ್ನು ಈ ವಿಷಯಕ್ಕೆ ಸಂಬಂಧಪಟ್ಟು ನನಗೆ ದೂರವಾಣಿ ಸಂದೇಶ ಕಳುಹಿಸಲು,ಕರೆ ಮಾಡಲು ದಯಮಾಡಿ ಪ್ರಯತ್ನಿಸಬೇಡಿ. ನಾನು ಈಗ ಹೇಳಿರುವುದಕ್ಕಿಂತ ಹೆಚ್ಚು ಹೇಳುವುದು ಏನೂ ಇಲ್ಲ’ ಎಂದುಅರುಣ್ ವೈದ್ಯನಾಥನ್ ಬರೆದುಕೊಂಡಿದ್ದಾರೆ.

ಇವನ್ನೂ ಓದಿ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT