ಶುಕ್ರವಾರ, ಮಾರ್ಚ್ 24, 2023
22 °C

PV Web Exclusive: ದೇವ ಮಾನವರ ಡಾಂಬಿಕತೆಗೆ ಕನ್ನಡಿ ಹಿಡಿಯುವ ‘ಆಶ್ರಮ್’

ನವೀನ್ ಕುಮಾರ್ ಜಿ. Updated:

ಅಕ್ಷರ ಗಾತ್ರ : | |

Prajavani

ಇದು ಒಟಿಟಿ ವೇದಿಕೆಗಳ ಕಾಲ. ಆನ್‌ಲೈನ್‌ನಲ್ಲಿ ಮನೋರಂಜನೆ ಅರಸುವವರ ಮನಕ್ಕೆ ಮುದ ನೀಡಲು ಈ ವೇದಿಕೆಗಳಲ್ಲಿ ಜನಪ್ರಿಯ ನಟ, ನಟಿಯರ ಸಾಕಷ್ಟು ಸಿನಿಮಾ, ವೆಬ್ ಸರಣಿಗಳು ಬಿಡುಗಡೆಯಾಗುತ್ತಿವೆ.

ಇವುಗಳ ಸಾಲಿಗೆ ಪ್ರಕಾಶ್ ಝಾ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಆಶ್ರಮ್’ ಹಿಂದಿ ವೆಬ್ ಸರಣಿ ಹೊಸ ಸೇರ್ಪಡೆ. ಎಮ್ಎಕ್ಸ್ ಪ್ಲೇಯರ್ ವೇದಿಕೆಯಲ್ಲಿ ಬಿಡುಗಡೆಗೊಂಡಿರುವ ಈ ಸರಣಿಯನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ.

ಭಕ್ತಿಯ ಹೆಸರಿನಲ್ಲಿ ಬಡ ಜನರನ್ನು ಸುಲಿಗೆ ಮಾಡುವ ದೇವ ಮಾನವನನ್ನು ವಿಡಂಬಿಸಿ ಈ ಸರಣಿಯ ಕಥೆ ಹೆಣೆಯಲಾಗಿದೆ.
ಸಮಾಜದಲ್ಲಿ ನಡೆಯುವ ವಿದ್ಯಮಾನಗಳನ್ನು ಕೇಂದ್ರೀಕರಿಸಿ ಸಿನಿಮಾ ನಿರ್ಮಿಸುವುದರಲ್ಲಿ ಪ್ರಕಾಶ್ ಝಾ ಅವರು ಸಿದ್ಧಹಸ್ತರು. ತಮ್ಮ ‘ಸತ್ಯಾಗ್ರಹ’ ಸಿನಿಮಾದಲ್ಲಿ ಭ್ರಷ್ಟಾಚಾರ, ‘ಆರಕ್ಷಣ್’ನಲ್ಲಿ ಮೀಸಲಾತಿ ವಿಷಯ ಹಾಗೂ ‘ರಾಜನೀತಿ’ ಸಿನಿಮಾದಲ್ಲಿ ರಾಜಕೀಯ ಪಕ್ಷಗಳ ವಿಡಂಬನೆಯೊಂದಿಗೆ ಈ ಹಿಂದೆಯೂ ಪ್ರೇಕ್ಷಕರ ಮನಗೆದ್ದಿದ್ದಾರೆ.

ಈ ವೆಬ್ ಸರಣಿಯಲ್ಲಿ ಝಾ ಅವರು ಜಾತಿ ವ್ಯವಸ್ಥೆಯ ಕರಾಳ ಮುಖವನ್ನು ಅನಾವರಣಗೊಳಿಸುವ ಪ್ರಯತ್ನ ಮಾಡಿದ್ದಾರೆ.
ಬಾಲಿವುಡ್ ನಟ ಬಾಬಿ ಡಿಯೋಲ್ ಅವರು ಬಾಬಾ ಪಾತ್ರದಲ್ಲಿ ನಟಿಸುವ ಮೂಲಕ ತಾವು ಹಿಂದೆ ನಿರ್ವಹಿಸಿದ್ದ ಪಾತ್ರಗಳಿಗಿಂತ ವಿಭಿನ್ನವಾದ ನಟನೆಯನ್ನು ನೀಡಿದ್ದಾರೆ.

‘ಆಶ್ರಮ್’ ವೆಬ್ ಸರಣಿಯ ಒಂಬತ್ತು ಕಂತುಗಳ ಮೊದಲ ಸೀಸನ್ ಇದೀಗ ಬಿಡುಗಡೆಗೊಂಡಿದ್ದು, ಪ್ರತಿ ಕಂತು 40 ನಿಮಿಷಗಳ ಅವಧಿಯದ್ದಾಗಿದೆ. ಜಾತಿ ಸಂಘರ್ಷದ ಎಳೆಯಿಂದ ಆರಂಭವಾಗುವ ಈ ಸರಣಿಯ ಕಥೆ ಮುಂದೆ ಸಾಗಿದಂತೆ ಬಾಬಾ, ಮೋಸದಿಂದ ಹೇಗೆ ಜನರನ್ನು ತನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾನೆ ಎಂಬುದನ್ನು ಚಿತ್ರಿಸಿದ್ದಾರೆ.

ಬಾಬಾ ನಿರ್ಮಲ್ (ಬಾಬಿ ಡಿಯೋಲ್) ತನ್ನ ಆಪ್ತ ಬೋಪಾಭಾಯಿ(ಚಂದನ್ ರಾಯ್ ಸನ್ಯಾಲ್) ಜೊತೆ ಸೇರಿ ಆಶ್ರಮದ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಜನಪ್ರಿಯನಾಗಿರುತ್ತಾನೆ. ಹೀಗಿರುವಾಗ ಅರಣ್ಯ ಪ್ರದೇಶದಲ್ಲಿ ಜಾಗ ಸಮತಟ್ಟು ಮಾಡುವಾಗ ಅಸ್ಥಿಪಂಜರವೊಂದು ಪತ್ತೆಯಾಗುತ್ತದೆ. ಅಲ್ಲಿಂದ ಕಥೆ ಹೊಸ ತಿರುವು ಪಡೆದುಕೊಳ್ಳುತ್ತದೆ. ಪೊಲೀಸ್ ಅಧಿಕಾರಿ ಉಜಗರ್ ಸಿಂಗ್‌ಗೆ (ದರ್ಶನ್ ಕುಮಾರ್) ಈ ಪ್ರಕರಣದ ತನಿಖೆಯ ಹೊಣೆ ನೀಡಲಾಗುತ್ತದೆ. ಆತ ವಿಧಿವಿಜ್ಞಾನ ತಜ್ಞೆ ಡಾ. ನತಾಶಾ (ಅನುಪ್ರಿಯಾ ಗೋಯೆಂಕಾ) ಹಾಗೂ ಪತ್ರಕರ್ತ ಟಿಂಕಾ ಸಿಂಗ್ (ರಾಜೀವ್ ಸಿದ್ಧಾರ್ಥ್) ಜತೆ ಸೇರಿ ಪ್ರಕರಣದ ಸುಳಿಗಳನ್ನು ಬಿಡಿಸಲು ಪ್ರಯತ್ನಿಸುತ್ತಾನೆ. ಆಗ ಎಲ್ಲಾ ಸಾಕ್ಷ್ಯಗಳು ಆಶ್ರಮದತ್ತ ಬೊಟ್ಟು ಮಾಡುತ್ತವೆ. ಇದನ್ನರಿತ ಬಾಬಾ, ರಾಜಕಾರಣಿಗಳನ್ನು ಬಳಸಿಕೊಂಡು ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಾನೆ. ಆದರೆ ಛಲ ಬಿಡದ ಪೊಲೀಸ್ ಅಧಿಕಾರಿ ಆಶ್ರಮದ ಹಿಂದಿನ ರಹಸ್ಯಗಳನ್ನು ಬಿಚ್ಚಿಡಲು ಮತ್ತು ಬಾಬಾನ ಇನ್ನೊಂದು ಮುಖವನ್ನು ಅನಾವರಣಗೊಳಿಸಲು ಪ್ರಯತ್ನಿಸುವುದೇ ಈ ಸರಣಿಯ ಮುಖ್ಯ ಕಥಾ ಹಂದರ.
ನಿರ್ಮಲ್ ಬಾಬಾನ ಪಾತ್ರದಲ್ಲಿ ನಟಿಸಿರುವ ಬಾಬಿ ಡಿಯೋಲ್ ಅವರ ಅಭಿನಯ ಗಮನ ಸೆಳೆದರೂ ಕೆಲವೆಡೆ ಪೇಲವವಾಗಿ ಮೂಡಿ ಬಂದಿದೆ. ಚಂದನ್ ರಾಯ್, ಅನುಪ್ರಿಯಾ, ದರ್ಶನ್ ಕುಮಾರ್ ಅವರ ಪಾತ್ರಗಳು ಕೂಡ ಗಮನ ಸೆಳೆಯುತ್ತವೆ. ತ್ರಿಧಾ ಚೌಧರಿ ಹಾಗೂ ಅದಿತಿ ಪೊಹಾಂಕರ್ ಅವರೂ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ನೆಟ್‌ಫ್ಲಿಕ್ಸ್ ವೇದಿಕೆಯಲ್ಲಿ ಪ್ರಸಾರಗೊಂಡಿದ್ದ ಜನಪ್ರಿಯ ವೆಬ್ ಸರಣಿ ‘ಸೇಕ್ರೆಡ್ ಗೇಮ್ಸ್’ನ ಸೀಸನ್ ಎರಡರ ಕಥೆಗೂ ಈ ಸರಣಿಯ ಕಥೆಗೂ ಕೆಲವು ಅಂಶಗಳಲ್ಲಿ ಸಾಮ್ಯತೆ ಕಂಡು ಬರುತ್ತದೆ. ‘ಸೇಕ್ರೆಡ್ ಗೇಮ್ಸ್’ನಲ್ಲಿಯೂ ಅಧ್ಯಾತ್ಮವನ್ನು ಬಂಡವಾಳ ಮಾಡಿಕೊಂಡು ಜನರಿಗೆ ಮೋಸ ಮಾಡುವ ಬಾಬಾನ ಚಿತ್ರಣವಿದೆ. ಆಶ್ರಮದ ಜೊತೆಗೆ ನಂಟು ಹೊಂದಿರುವ ವ್ಯಕ್ತಿಗಳು ನಡೆಸುವ ಅಪರಾಧ ಚಟುವಟಿಕೆಗಳೂ ಅಲ್ಲಿ ಮುಖ್ಯವಾಗಿತ್ತು. ಈ ಸರಣಿಯಲ್ಲಿಯೂ ಅಂತಹ ಅಂಶಗಳಿಗೆ ಝಾ ಅವರು ಹೆಚ್ಚು ಒತ್ತು ನೀಡಿದ್ದಾರೆ.

ಬಾಬಾ ನಿರ್ಮಲ್‌ನ ಆಶ್ರಮದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ರಾಜಕಾರಣಿಗಳೊಂದಿಗಿನ ಆತನ ನಂಟು ಮೊದಲಾದವುಗಳನ್ನು ಪರಿಣಾಮಕಾರಿಯಾಗಿ ಈ ಸರಣಿಯಲ್ಲಿ ಝಾ ಅವರು ಚಿತ್ರಿಸಿದ್ದಾರೆ.

ಪ್ರೇಕ್ಷಕರ ಹಲವಾರು ಪ್ರಶ್ನೆಗಳಿಗೆ ಉತ್ತರಗಳನ್ನು ಬಾಕಿ ಉಳಿಸುವ ಮೂಲಕ ಸರಣಿಯ ಮೊದಲ ಸೀಸನ್ ಕೊನೆಗೊಳ್ಳುತ್ತದೆ. ಅದೇ ರೀತಿ ಎರಡನೇ ಸೀಸನ್‌ನಲ್ಲಿ ಏನೆಲ್ಲಾ ಇರಬಹುದು ಎಂಬ ಸೂಚನೆಯನ್ನೂ ಕೊನೆಯ ಕಂತಿನಲ್ಲಿ ನೀಡಲಾಗಿದೆ.

ವೆಬ್ ಸರಣಿಯ ಪ್ರತಿ ಕಂತಿನ ಕೊನೆಯಲ್ಲೂ ರೋಚಕತೆಯನ್ನು ಉಳಿಸಿಕೊಳ್ಳುವ ಮೂಲಕ ಮುಂದಿನ ಕಂತನ್ನೂ ನೋಡುವಂತೆ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಲು ಝಾ ಅವರಿಗೆ ಸಾಧ್ಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು