ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗಲಿಕೆಯ ನೋವಿಂದ ಹೊರಬಂದಿಲ್ಲ, ಸಂಭ್ರಮವನ್ನು ಸ್ವೀಕರಿಸಲಾಗುತ್ತಿಲ್ಲ: ಅಶ್ವಿನಿ

Last Updated 17 ಮಾರ್ಚ್ 2022, 4:26 IST
ಅಕ್ಷರ ಗಾತ್ರ

ಅಪ್ಪು ಅವರ ಅಗಲಿಕೆಯ ನೋವು ನಮ್ಮ ಕುಟುಂಬದ ಪಾಲಿಗೆ ಅನಂತವಾದುದು. ಅದಕ್ಕೆ ಎಂದಿಗೂ ಕೊನೆಯಿಲ್ಲ. ಹೌದು, ಅವರ ಆಲೋಚನೆಗಳೇ ಭಿನ್ನ. ತುಂಬಾ ತಾಳ್ಮೆಯ, ವಿನಮ್ರವಾದ ವ್ಯಕ್ತಿತ್ವ ಅವರದ್ದು. ಅವರ ಬದುಕಿನಿಂದ ಕಲಿಯುವುದು ತುಂಬಾ ಇದೆ. ವೈಯಕ್ತಿಕ ಹಾಗೂ ಸಾರ್ವಜನಿಕ ಬದುಕು ಎರಡರಿಂದಲೂ ನಾವು ಸಾಕಷ್ಟು ತಿಳಿಯಬೇಕು, ಕಲಿಯಬೇಕು. ಇನ್ನೂ ಎಷ್ಟೋ ವಿಚಾರಗಳು ಇವೆ. ಅವೆಲ್ಲವನ್ನೂ ನನ್ನೊಳಗೆ ಇಟ್ಟುಕೊಂಡಿದ್ದೇನೆ.

ಅಪ್ಪು ಮೇಲಿನ ಅಭಿಮಾನವನ್ನು ನೋಡುವಾಗ ಮನಸ್ಸು, ಹೃದಯ ತುಂಬಿ ಬರುತ್ತದೆ. ನಮ್ಮ ದುಃಖದಲ್ಲಿ ನಾಡೂ ಭಾಗಿಯಾಯಿತು. ಮುಂದೆ ಅಭಿಮಾನಿಗಳದ್ದು ತೆರೆ ಮೀರಿದ, ಮೇರೆ ಮೀರಿದ ಅಭಿಮಾನ. ಅಪ್ಪು ಅವರ ಆದರ್ಶವನ್ನು ಅವರೂ ಆಚರಿಸಿದರು. ನೀವೆಲ್ಲ ನೋಡಿದ್ದೀರಲ್ಲ, ರಕ್ತದಾನ, ನೇತ್ರದಾನ, ಅನ್ನದಾನ ಒಂದಾ ಎರಡಾ... ನನಗೆ ಮಾತೇ ಹೊರಡುತ್ತಿಲ್ಲ. ಮನಸ್ಸು ಅಷ್ಟು ಆರ್ದ್ರವಾಗಿಬಿಟ್ಟಿದೆ. ಅವರಿಗೆಲ್ಲ ಕೃತಜ್ಞಳಾಗಿದ್ದೇನೆ.

ಆದರೇನು ಮಾಡಲಿ, ನಾವಿನ್ನೂ ಅವರ ಅಗಲಿಕೆಯ ದುಃಖದಿಂದ ಹೊರಬಂದಿಲ್ಲ. ಹಾಗಾಗಿ ಯಾವುದೇ ಸಂಭ್ರಮವನ್ನು ಸ್ವೀಕರಿಸಲಾಗುತ್ತಿಲ್ಲ.

ಹೊಸಬರಿಗೆ ಅವಕಾಶ ಕೊಡಬೇಕು, ಬೇರೆ ಬೇರೆ ಸಿನಿಮಾ ಮಾಡಬೇಕು. ಸಿನಿಮಾ ಕ್ಷೇತ್ರದ ಎಲ್ಲ ವಿಭಾಗಗಳಲ್ಲಿಯೂ ಹೊಸಬರಿಗೆ ಅವಕಾಶ ಕೊಡಬೇಕು ಎಂಬುದು ಅಪ್ಪು ಅವರ ಕನಸಾಗಿತ್ತು. ಅದರಂತೆ ಪಿಆರ್‌ಕೆ ಸ್ಟುಡಿಯೋಸ್‌ ನಡೆದುಕೊಂಡು ಬಂದಿದೆ. ಆ ಗುರಿಯತ್ತ ಮುಂದೆಯೂ ದಾಪುಗಾಲು ಹಾಕಿ ನಡೆಯುತ್ತೇವೆ. ಮುಂದಿನ ಏಪ್ರಿಲ್‌ನಲ್ಲಿ ಮಹಿಳಾ ಯುವ ನಿರ್ದೇಶಕರೊಬ್ಬರ ನೇತೃತ್ವದಲ್ಲಿ ‘ಆಚಾರ್‌ ಎನ್‌ಕೋ’ ಎಂಬ ಹೊಸ ಚಿತ್ರವೊಂದು ನಿರ್ಮಾಣವಾಗಲಿದೆ. ಮಾತ್ರವಲ್ಲ, ಇನ್ನೂ ಹೊಸ ಕಥೆಗಳನ್ನು ಕೇಳುತ್ತಿದ್ದೇವೆ. ಸರಿಯೆನಿಸಿದ್ದನ್ನು ನಿರ್ಮಿಸುತ್ತೇವೆ.

ನನಗೆ ಚಿತ್ರರಂಗ ಹೊಸದಲ್ಲ. ಆದರೆ ಮುನ್ನೆಲೆಗೆ ಬಂದವಳಲ್ಲ ಅಷ್ಟೇ. ತೆರೆಮರೆಯಲ್ಲೇ ಇದ್ದೆ. 2016ರಲ್ಲಿ ಪಿಆರ್‌ಕೆ ಆಡಿಯೊ, 2017ರಲ್ಲಿ ಪಿಆರ್‌ಕೆಡ ಪ್ರೊಡಕ್ಷನ್ಸ್‌ಆರಂಭವಾಯಿತು. ಈ ಸಂಸ್ಥೆಯಲ್ಲಿ ಮೊದಲ ದಿನದಿಂದಲೇ ಸಕ್ರಿಯಳಾಗಿದ್ದೆ. ಅಂದಿನಿಂದಲೂ ಕಲಿಯುತ್ತಲೇ ಬಂದಿದ್ದೇನೆ. ಹಾಗಾಗಿ ಈ ಕ್ಷೇತ್ರದ ಒಳಹೊರಗುಗಳು ಗೊತ್ತಿವೆ. ಮುಖ್ಯವಾಗಿ ಹೊಸ ಪ್ರತಿಭೆಗಳನ್ನು ಗುರುತಿಸಿ ಹೊರತರಬೇಕು ಎಂಬ ಉದ್ದೇಶವೇ ನಮ್ಮ ಸಂಸ್ಥೆಯದು. ಅದು ಮುಂದುವರಿಯುತ್ತಲೇ ಇರುತ್ತದೆ. ಅಪ್ಪು ಅವರ ಸ್ಫೂರ್ತಿಯೂ ನಮ್ಮ ಜೊತೆಗಿರುತ್ತದೆ. ನಮ್ಮ ತಂಡ ಸದೃಢವಾಗಿದೆ.

ಮಕ್ಕಳನ್ನು ಚಿತ್ರರಂಗಕ್ಕೆ ತರುವ ಉದ್ದೇಶ ಇಲ್ಲ. ದೊಡ್ಡ ಮಗಳು ಕಲಾ ಶಿಕ್ಷಣ ಪಡೆಯುತ್ತಿದ್ದಾಳೆ. ಚಿಕ್ಕವಳು ಇನ್ನೂ ಶಾಲೆಗೆ ಹೋಗುತ್ತಿದ್ದಾಳೆ. ಇದುವರೆಗೆ ಕಂಡಂತೆ ಮಕ್ಕಳಿಗೆ ಈ ಕ್ಷೇತ್ರದತ್ತ ಆಸಕ್ತಿಯೂ ಇಲ್ಲ. ಮುಂದೇನೋ ಗೊತ್ತಿಲ್ಲ. ಅವರಿಗೇನು ಇಷ್ಟವೋ ಅದನ್ನು ಮಾಡುತ್ತಾರೆ.

ಜೇಮ್ಸ್‌ ಬಿಡುಗಡೆಯ ಸಂಭ್ರಮ ಇದೆ ನಿಜ. ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದು ತಂಡದವರು, ನೋಡಿದವರು ಹೇಳುತ್ತಿದ್ದಾರೆ. ಆದರೆ, ನನಗೆ ನೋಡಲು ಸಾಧ್ಯವೇ ಇಲ್ಲ. ಆದರೆ, ನಮ್ಮ ಕುಟುಂಬದವರೆಲ್ಲ ಚಿತ್ರ ನೋಡಲು ಹೋಗುತ್ತಿದ್ದಾರೆ.

ಅಭಿಮಾನಿಗಳಿಗೂ ಒಳ್ಳೆಯದಾಗಲಿ. ಅವರ ಆಶೀರ್ವಾದ, ಹಾರೈಕೆ ಅಪ್ಪು ಚೇತನ ಹಾಗೂ ನಮ್ಮ ಮೇಲಿರಲಿ.

ನಿರೂಪಣೆ: ಎಸ್‌.ಎಚ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT