ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿಗಳ ಹೂಮಳೆ ಬರಲಿದೆಯೇ ತಕ್ಕ ಬೆಳೆ?

Last Updated 15 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಕನ್ನಡ ಸಿನಿಮಾಗಳಿಗೆ ಹನ್ನೊಂದು ಪ್ರಶಸ್ತಿಗಳು ಬಂದಿವೆ. ಸಂಭ್ರಮಿಸುವುದಕ್ಕೆ ಇದು ಸಕಾಲ. ಹಾಗೆಯೇ ಹೆಗಲೇರಿದ ಜವಾಬ್ದಾರಿ–ನಿರೀಕ್ಷೆಗಳನ್ನೂ ಗಮನದಲ್ಲಿಟ್ಟುಕೊಂಡು ಆತ್ಮವಿಮರ್ಶೆ ಮಾಡಿಕೊಳ್ಳುವುದಕ್ಕೂ ಇದು ಪ್ರೇರಣೆಯಾಗಬೇಕಲ್ಲವೇ?

ಶುಕ್ರವಾರ ಎಂಬುದು ಗಾಂಧಿನಗರಕ್ಕೆ ಹಬ್ಬದ ದಿನ. ಹೊಸ ಸಿನಿಮಾಗಳ ಬಿಡುಗಡೆ, ನೆಚ್ಚಿನ ನಟರುಗಳ ಪೋಸ್ಟರ್‌ಗಳಿಗೆ ಹಾಲೆರೆದು ಹಾರ ಹಾಕುವ ಅಭಿಮಾನಿಗಳ ಸಂಭ್ರಮ, ಆತಂಕ, ಪುಳಕ, ಕುತೂಹಲಗಳನ್ನು ಕಣ್ಣಲ್ಲಿ ತುಂಬಿಕೊಂಡು ಕಾದಿರುವ ಚಿತ್ರತಂಡ... ಹೀಗೆ ಶುಕ್ರವಾರ ಬಂತೆಂದರೆ ಗಾಂಧಿನಗರದ ಗಲ್ಲಿಗಳು ನಳನಳಿಸತೊಡಗುತ್ತಿವೆ. ಕಳೆದ ಶುಕ್ರವಾರ (ಆ. 9) ಈ ಸಂಭ್ರಮದ ಹೊನಲಿಗೆ ಇನ್ನೊಂದು ತೊರೆಯೂ ಬಂದು ಸೇರಿತ್ತು. ರಭಸ ಇಮ್ಮಡಿಗೊಂಡಿತ್ತು. ಅದಕ್ಕೆ ಕಾರಣ ‘ಸಿನಿಮಾ ರಾಷ್ಟ್ರಪ್ರಶಸ್ತಿಗಳ ಪಟ್ಟಿ’ ಪ್ರಕಟಗೊಂಡಿದ್ದು. ಒಂದಲ್ಲಾ ಎರಡಲ್ಲಾ ಬರೋಬ್ಬರಿ ಹನ್ನೊಂದು ಪ್ರಶಸ್ತಿಗಳು (ಸೃಜನೇತರ ವಿಭಾಗವನ್ನೂ ಸೇರಿಸಿಕೊಂಡರೆ ಹನ್ನೆರಡು) ಕನ್ನಡ ಚಿತ್ರಗಳನ್ನು ಅರಸಿಕೊಂಡು ಬಂದಿವೆ. ಕನ್ನಡಕ್ಕೆ ಇಷ್ಟೊಂದು ರಾಷ್ಟ್ರಪ್ರಶಸ್ತಿಗಳು ಬಂದಿದ್ದು ಇದೇ ಮೊದಲು! ಹಾಗಾಗಿ ಅದು ನಿಜಕ್ಕೂ ಚಿತ್ರರಂಗದ ಪಾಲಿಗೆ ಶುಭ ಶುಕ್ರವಾರವೇ ಸರಿ.

ಪ್ರಶಸ್ತಿ ಅಂದಾಕ್ಷಣ ‘ಆರ್ಟ್‌ ಫಿಲ್ಮ್’ ಎಂಬ ಪೆಟ್ಟಿಗೆಯಲ್ಲಿ ಬಲವಂತವಾಗಿ ತುರುಕಿ, ಅಟ್ಟದ ಮೇಲಿಟ್ಟಿರುವ ಸಿನಿಮಾಗಳೇ ಮನಸ್ಸಿಗೆ ಬರುತ್ತವೆ. ಕೆಲವು ಸಲವಂತೂ ಈ ಪ್ರಶಸ್ತಿ ಪಟ್ಟಿ ನೋಡಿಯೇ ಇಂಥದ್ದೊಂದು ಸಿನಿಮಾ ಕನ್ನಡದಲ್ಲಿ ಬಂದಿದೆ ಎಂದು ಜನರು ಗೊತ್ತು ಮಾಡಿಕೊಳ್ಳುವ ಪರಿಸ್ಥಿತಿಯೂ ಇರುತ್ತದೆ.

ಸ್ವತಃ ಪ್ರಶಸ್ತಿ ವಿಜೇತ ಸಿನಿಮಾಗಳ ನಿರ್ದೇಶಕರೂ ಬಯಸದ, ಪ್ರೇಕ್ಷಕರೂ ಅಪೇಕ್ಷಿಸದ ಇಂಥ ಕೆಟೆಗರೀಕರಣ ಅದು ಹೇಗೋ ಜನಪ್ರಿಯ ಸಿನಿಮಾ ಮತ್ತು ಕಲಾತ್ಮಕ ಸಿನಿಮಾಗಳೆಂಬ ಎರಡು ದ್ವೀಪಗಳನ್ನು ನಿರ್ಮಿಸಿಬಿಟ್ಟಿದೆ. ಮಲಯಾಳಂ ಮತ್ತು ತಮಿಳು ಚಿತ್ರರಂಗಗಳು ಈ ಕಣಿವೆಯಲ್ಲಿ ಸದಭಿರುಚಿಯ ಕಂಬ ನೆಟ್ಟು ‘ಬ್ರಿಡ್ಜ್‌’ಗಳನ್ನು ನಿರ್ಮಾಣ ಮಾಡಿಕೊಂಡಿವೆ. ಆದರೆ ಕನ್ನಡದಲ್ಲಿ ಅಂಥ ಪ್ರಯತ್ನಗಳು ವಿರಳ ಎಂಬ ಮಾತುಗಳು ಕೇಳಿಬರುತ್ತಿದ್ದವು.

ಆದರೆ ಈ ವರ್ಷದ ರಾಷ್ಟ್ರಪ್ರಶಸ್ತಿಗಳನ್ನು ಪಡೆದ ಸಿನಿಮಾಗಳ ಪಟ್ಟಿಯನ್ನು ನೋಡಿದರೆ ಕನ್ನಡದಲ್ಲಿಯೂ ಇಂಥದ್ದೊಂದು ಪ್ರಯತ್ನ ನಡೆಯುತ್ತಿದೆ ಎಂಬ ಭಾವನೆ ಬಲವಾಗಿ ಮೂಡದೇ ಇರದು.

ಆರು ಪ್ರಶಸ್ತಿಗಳನ್ನು ಪಡೆದುಕೊಂಡ ‘ನಾತಿಚರಾಮಿ’,ಎರಡು ಪ್ರಶಸ್ತಿಗಳನ್ನು ಪಡೆದ ‘ಒಂದಲ್ಲಾ ಎರಡಲ್ಲಾ’ ಮತ್ತು ‘ಕೆಜಿಎಫ್’, ಅತ್ಯುತ್ತಮ ಮಕ್ಕಳ ಚಿತ್ರ ಎಂಬ ಹಿರಿಮೆಗೆ ಪಾತ್ರವಾದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು’ ಇವೆಲ್ಲವೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಂಥ ಸಿನಿಮಾಗಳು. ಅಷ್ಟೇ ಅಲ್ಲ, ‘ಕೆಜಿಎಫ್‌’ ಮತ್ತು ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಈ ಎರಡೂ ಸಿನಿಮಾಗಳು ವರ್ಷದ ಹಿಟ್ ಸಿನಿಮಾಗಳ ಸಾಲಿನಲ್ಲಿರುವಂಥವು. ‘ನಾತಿಚರಾಮಿ’ ಮತ್ತು ‘ಒಂದಲ್ಲಾ ಎರಡಲ್ಲಾ’ ಸಿನಿಮಾಗಳೂ ಚಿತ್ರಮಂದಿರಗಳ ಮೂಲಕ ಜನರನ್ನು ತಲುಪುವ, ಗಳಿಕೆಯ ಕಮರ್ಷಿಯಲ್ ಉದ್ದೇಶವನ್ನು ಇಟ್ಟುಕೊಂಡೇ ಮಾಡಿರುವ ಸಿನಿಮಾಗಳು. ಅಂದರೆ ಕನ್ನಡ ಮುಖ್ಯವಾಹಿನಿಯ ಕಮರ್ಷಿಯಲ್‌ ಸಿನಿಮಾಗಳು ಮತ್ತು ಗುಪ್ತಗಾಮಿನಿಯಂತಿದ್ದ ಪರ್ಯಾಯ ಸಿನಿಮಾಗಳೆಂಬ ಭಿನ್ನ ಪಾತ್ರಗಳಲ್ಲಿ ಹರಿಯುತ್ತಿದ್ದ ತೊರೆ ಒಂದುಗೂಡುತ್ತಿವೆಯೇ? ಎರಡರ ನಡುವಿನ ಗೆರೆ ತೆಳ್ಳಗಾಗುತ್ತಿದೆಯೇ? ಕನ್ನಡ ಸಿನಿಮಾಗಳ ಟ್ರೆಂಡ್ ಬದಲಾಗುತ್ತಿರುವುದರ ಸೂಚನೆಯೇ ಇದು?

‘ಹೆಚ್ಚು ಪ್ರಶಸ್ತಿಗಳು ಬಂದಿವೆ ಎಂಬ ಕಾರಣಕ್ಕೆ ಕನ್ನಡ ಸಿನಿಮಾಗಳ ಟ್ರೆಂಡ್ ಬದಲಾಗಿದೆ ಎಂಬುವುದನ್ನು ನಾನು ಒಪ್ಪುವುದಿಲ್ಲ’ ಎನ್ನುತ್ತಾರೆ ಹಿರಿಯ ನಿರ್ದೇಶಕ ಪಿ. ಶೇಷಾದ್ರಿ. ಮುಖ್ಯವಾಹಿನಿಯಲ್ಲಿನ ಸಿನಿಮಾಗಳಿಗೆ ಹೆಚ್ಚು ಪ್ರಶಸ್ತಿಗಳು ಬಂದಿರುವುದು ಕಾಕತಾಳೀಯವಷ್ಟೇ ಎನ್ನುವುದು ಅವರ ಅಭಿಪ್ರಾಯ. ಅಂದಹಾಗೆ, ಅವರ ನಿರ್ದೇಶನದ ‘ಮೂಕಜ್ಜಿಯ ಕನಸುಗಳು’ ಸಿನಿಮಾ ಈ ವರ್ಷ ನ್ಯಾಷನಲ್‌ ಆರ್ಕೈವ್ಸ್‌ಗೆ ಆಯ್ಕೆಯಾಗಿದೆ.

ಶೇಷಾದ್ರಿ
ಶೇಷಾದ್ರಿ

‘ಪ್ರಶಸ್ತಿಗಳು ಯಾವ ಸಿನಿಮಾಗಳಿಗೆ ಸಿಕ್ಕಿವೆ ಎನ್ನುವುದು ನಿರ್ಣಾಯಕರ ಮನಸ್ಥಿತಿಯನ್ನು ಬಿಂಬಿಸುತ್ತದೆ. ತೀರ್ಪುಗಾರರ ತಂಡದಲ್ಲಿ ಹತ್ತರಿಂದ ಹದಿಮೂರು ಜನ ಇರುತ್ತಾರೆ. ಅವರ ಆಲೋಚನೆ, ಆ ಕ್ಷಣದ ನಿರ್ಧಾರಗಳ ಮೇಲೆ ಆ ವರ್ಷದ ಪ್ರಶಸ್ತಿ ಪಟ್ಟಿ ರೂಪುಗೊಳ್ಳುತ್ತದೆಯೇ ಹೊರತು ಅವಷ್ಟೇ ಶ್ರೇಷ್ಠ ಸಿನಿಮಾಗಳು ಅಂತಲ್ಲ’ ಎನ್ನುವ ಅವರು, ‘ಸಿನಿಮಾಗಳನ್ನು ಗ್ರಹಿಸುವ ರೀತಿ ಬದಲಾಗಿರಬಹುದು. ಈ ವರ್ಷ ತೀರ್ಪುಗಾರರ ಪಟ್ಟಿಯಲ್ಲಿದ್ದವರಲ್ಲಿ ಹೆಚ್ಚು ಜನ ಮುಖ್ಯವಾಹಿನಿ ಸಿನಿಮಾಕರ್ತರು. ಹಾಗಿದ್ದಾಗ ಸಹಜವಾಗಿಯೇ ಅವರು ಅಂಥ ಸಿನಿಮಾಗಳನ್ನೇ ಆಯ್ಕೆ ಮಾಡುತ್ತಾರೆ’ ಎನ್ನುತ್ತಾರೆ.

ಸ್ವತಃ ರಾಷ್ಟ್ರಪ್ರಶಸ್ತಿಯ ತೀರ್ಪುಗಾರರಾಗಿ ಕೆಲಸ ಮಾಡಿದ ಅನುಭವವೂ ಇರುವ ಅವರು ಪ್ರಶಸ್ತಿಯ ಮಾರ್ಗಸೂಚಿಗಳತ್ತಲೂ ಗಮನ ಸೆಳೆಯುತ್ತಾರೆ.‘ಅವಾರ್ಡ್ಸ್ ಗೈಡ್‌ಲೈನ್ಸ್‌ನಲ್ಲಿ ಸಿನಿಮ್ಯಾಟಿಕ್, ಥಿಮೆಟಿಕ್ ಮತ್ತು ಏಸ್ತಟಿಕ್ ಈ ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಶಸ್ತಿ ನೀಡಬೇಕು ಎಂದಿದೆ. ಈ ಮೂರು ಪದಗಳನ್ನು ನಿರ್ಣಾಯಕರು ಹೇಗೆ ವ್ಯಾಖ್ಯಾನಿಸಿಕೊಳ್ಳುತ್ತಾರೆ ಅನ್ನುವುದರ ಮೇಲೆ ಆ ವರ್ಷದ ಪ್ರಶಸ್ತಿ ಪಟ್ಟಿ ರೂಪುಗೊಳ್ಳುತ್ತದೆ’ ಎಂಬುದು ಶೇಷಾದ್ರಿ ಅವರ ಮಾತು.

ಇದೇ ಸಂದರ್ಭದಲ್ಲಿ, ‘ಈ ವರ್ಷ ಸಾಕಷ್ಟು ಕನ್ನಡ ಸಿನಿಮಾಗಳು ಸ್ಪರ್ಧೆಯಲ್ಲಿದ್ದವು. ಕನ್ನಡಕ್ಕೆ ಸಾಕಷ್ಟು ಪ್ರಶಸ್ತಿಗಳು ಬಂದಿವೆ ಎನ್ನುವುದು ಖುಷಿಯ ವಿಷಯ. ಅಷ್ಟರಮಟ್ಟಿಗೆ ಕನ್ನಡ ಸಿನಿಮಾಗಳು ಅಲ್ಲಿ ಚರ್ಚೆಗೊಳಗಾಗಿರುತ್ತವೆ. ಕನ್ನಡವನ್ನು ಪ್ರತಿನಿನಿಧಿಸಿದ ತೀರ್ಪುಗಾರ ಪ್ರಯತ್ನವೂ ಇರುತ್ತದೆ. ಅಂದಮಾತ್ರಕ್ಕೆ ಅವರ ಮಾತನ್ನು ಎಲ್ಲರೂ ಕೇಳಲೇಬೇಕು ಎಂದೇನಿಲ್ಲವಲ್ಲ. ಎಲ್ಲರಿಗೂ ಒಳ್ಳೆಯ ಸಿನಿಮಾ ಅನಿಸಿರುವುದಕ್ಕೇ ಪ್ರಶಸ್ತಿ ಕೊಟ್ಟಿರುತ್ತಾರೆ’ ಎನ್ನಲು ಮರೆಯುವುದಿಲ್ಲ.

ಲಿಂಗದೇವರು
ಲಿಂಗದೇವರು

ಈ ಸಲದ ರಾಷ್ಟ್ರಪ್ರಶಸ್ತಿಯ ತೀರ್ಪುಗಾರರ ಸಮಿತಿಯಲ್ಲಿದ್ದ ಬಿ.ಎಸ್‌. ಲಿಂಗದೇವರು ಪ್ರಶಸ್ತಿ ಪಡೆಯುವ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಿಲ್ಲ ಎಂಬ ಮಾತನ್ನೇ ಒಪ್ಪುವುದಿಲ್ಲ. ‘ಮೊದಲಿನಿಂದಲೂ ನಮ್ಮಲ್ಲಿ ಕಲಾತ್ಮಕ ಸಿನಿಮಾಗಳು ಚಿತ್ರಮಂದಿರಗಳಲ್ಲಿ ತೆರೆಕಂಡು ಸಾಕಷ್ಟು ದಿನ ಓಡಿದ ಉದಾಹರಣೆಗಳು ಇವೆ. ಪ್ರೇಮಾ ಕಾರಂತ ನಿರ್ದೇಶನದ ‘ಫಣಿಯಮ್ಮ’ ಸಪ್ನಾ ಚಿತ್ರಮಂದಿರದಲ್ಲಿ ನೂರು ದಿನ ಓಡಿತ್ತು. ಕಾಸರವಳ್ಳಿ ಅವರ ಹಲವು ಸಿನಿಮಾಗಳು ಬಿಡುಗಡೆಯಾಗಿವೆ. ನನ್ನದೇ ನಿರ್ದೇಶನದ ‘ನಾನು ಅವನಲ್ಲ ...ಅವಳು’ ಸಿನಿಮಾ ಏಳು ವಾರ ಓಡಿತ್ತು. ಹಾಗೆ ನೋಡಿದರೆ ‘ತಿಥಿ’ ಕೂಡ ಹಿಟ್ ಸಿನಿಮಾ. ಇಂಥದ್ದೊಂದು ಪರಂಪರೆಯೇ ನಮ್ಮಲ್ಲಿದೆ. ಇತ್ತೀಚೆಗಷ್ಟೇ ಕಲಾತ್ಮಕ ಚಿತ್ರಗಳು ಥಿಯೇಟರ್‌ನಲ್ಲಿ ನೋಡಲು ಸಿಗುವುದಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆಯಷ್ಟೆ’ ಎನ್ನುತ್ತಾರೆ ಅವರು.

ಮುಖ್ಯವಾಹಿನಿಯ ಸಿನಿಮಾಗಳಿಗೇ ಈ ಸಲ ಹೆಚ್ಚು ಪ್ರಶಸ್ತಿ ಬಂದಿರುವುದರ ಹಿಂದೆ ವಿಶೇಷ ಕಾರಣ ಇದೆ ಎಂಬುದನ್ನೂ ಅವರು ಒಪ್ಪುವುದಿಲ್ಲ. ‘ನಾವು ಅಲ್ಲಿ ನಿರ್ಣಾಯಕರಾಗಿರುವುದು ಭಾರತದ ಒಳ್ಳೆಯ ಸಿನಿಮಾಗಳನ್ನು ಆಯ್ಕೆ ಮಾಡುವುದಕ್ಕಾಗಿಯೇ ವಿನಾ, ಕನ್ನಡದ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡುವುದಕ್ಕಾಗಿ ಅಲ್ಲ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾಗಳು, ಬಿಡುಗಡೆಯಾಗದ ಸಿನಿಮಾಗಳು ಎಂದು ವಿಭಾಗಿಸಿಕೊಂಡು ನೋಡುವುದೂ ಇಲ್ಲ. ಪ್ರಶಸ್ತಿ ಪಡೆದ ಎಲ್ಲ ಚಿತ್ರಗಳೂ ತಮ್ಮ ಅರ್ಹತೆಯಿಂದಲೇ ಪಡೆದುಕೊಂಡಿವೆ. ಬಹುಶಃ. ಕೆಜಿಎಫ್‌ನಂಥ ಕಮರ್ಷಿಯಲ್ ಸಿನಿಮಾಗೆ ಎರಡು ಪ್ರಶಸ್ತಿಗಳು ಬಂದಿರುವುದಕ್ಕೆ ಈ ಪ್ರಶ್ನೆಗಳು ಹುಟ್ಟಿಕೊಂಡಿರಬೇಕು. ಆದರೆ ಆ ಚಿತ್ರಕ್ಕೆ ಪ್ರಶಸ್ತಿ ಬಂದಿರುವುದು ತಾಂತ್ರಿಕ ವಿಭಾಗದಲ್ಲಿ. ಆ ವಿಭಾಗದಲ್ಲಿ ನಾವು ಅನುಸರಿಸಬೇಕಾದ ಮಾನದಂಡಗಳೇ ಹಾಗಿವೆ’ ಎನ್ನುತ್ತಾರೆ ಅವರು.

‘ನಾವು ನಮ್ಮ ಭಾಷೆ, ನಮ್ಮ ಸಮಾಜವನ್ನು ಪ್ರತಿನಿಧಿಸುವಂಥ ಗಟ್ಟಿ ವಸ್ತುಗಳನ್ನಿಟ್ಟು ನಮ್ಮತನದ ಸಿನಿಮಾ ಮಾಡಿದಾಗ ಚಿತ್ರಮಂದಿರಗಳಲ್ಲಿಯೂ ಗೆಲ್ಲಬಹುದು, ಹಾಗೆಯೇ ಪ್ರಶಸ್ತಿಗಳನ್ನೂ ಪಡೆದುಕೊಳ್ಳಬಹುದು ಎನ್ನುವುದಕ್ಕೆ ಈ ಸಲದ ಪ್ರಶಸ್ತಿಪಟ್ಟಿ ಒಂದು ಉದಾಹರಣೆ’ ಎನ್ನುವುದು ಅವರ ಅಭಿಪ್ರಾಯ. ಇಷ್ಟಾಗಿಯೂ ‘ಪ್ರಶಸ್ತಿಗೆ ಅರ್ಹವಾಗುವ ಮಾನದಂಡ ಏನೆಂದರೆ ಆ ಕ್ಷಣಕ್ಕೆ ನಿರ್ಣಾಯಕರಿಗೆ ಇಷ್ಟ ಆಗಬೇಕು. ಒಳ್ಳೆಯ ಸಿನಿಮಾ ಎಂದು ಮನವರಿಕೆ ಆಗಬೇಕು’ ಎಂಬ ಮಾತನ್ನು ಅವರೂ ಒಪ್ಪುತ್ತಾರೆ.

ಕನ್ನಡಾಭಿಮಾನವನ್ನು ಕಣ್ತುಂಬಿಕೊಂಡು, ಪ್ರಶಸ್ತಿಗಳ ಪ್ರಖರ ಬೆಳಕಿನಲ್ಲಿ ಅರ್ಧ ಕಣ್ಣುಮುಚ್ಚಿಕೊಂಡವರಿಗೆ ಖಂಡಿತ ಸಂಭ್ರಮಿಸುವುದಕ್ಕೆ ಇದು ಸಕಾಲ. ಸಂಭ್ರಮದ ಜೊತೆಗೇ ಹೆಗಲೇರಿದ ಜವಾಬ್ದಾರಿ–ನಿರೀಕ್ಷೆಗಳನ್ನೂ ಗಮನದಲ್ಲಿಟ್ಟುಕೊಂಡು ಆತ್ಮವಿಮರ್ಶೆ ಮಾಡಿಕೊಳ್ಳುವುದಕ್ಕೂ ಇದು ಪ್ರೇರಣೆಯಾಗಬೇಕು. ಕೊಂಚ ವಸ್ತುನಿಷ್ಠವಾಗಿ ನೋಡಿದರೆ ಈ ವೈಭವದಉಬ್ಬರದಲ್ಲಿ ಮೇಲೇರಿದ ಜೊಳ್ಳುಗಳೂ ಕಣ್ಣಿಗೆ ಬೀಳದಿರುವುದಿಲ್ಲ. ಹಾಗಾಗಿ ಖುಷಿಪಡುತ್ತಲೇ, ಪ್ರಶಸ್ತಿಯ ಜೊತೆಗೇ ಬರುವ ಭ್ರಮೆಯ ಬಲೂನುಗಳನ್ನು ‘ನಿಜದ ಸೂಜಿಮೊನೆ’ಯಲ್ಲಿ ಒಡೆದು ಮುಂದೆ ಸಾಗಬೇಕಾದ ವಿವೇಕವೂ ಚಿತ್ರರಂಗ ದಕ್ಕಿಸಿಕೊಳ್ಳಬೇಕಾಗಿದೆ.

ಕನ್ನಡಕ್ಕೆ ಹಲವು ರಾಷ್ಟ್ರಪ್ರಶಸ್ತಿಗಳನ್ನು ತಂದುಕೊಟ್ಟ, ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರಾದ ಗಿರೀಶ ಕಾಸರವಳ್ಳಿ ಅವರು ಇತ್ತೀಚೆಗೆ ತಮ್ಮ ಸ್ನೇಹಿತರೊಂದಿಗೆ ಆಡಿದ ಈ ಮಾತು, ಹಿರಿಮನುಷ್ಯನೊಬ್ಬ ತನ್ನ ಕುಟುಂಬದ ಕಿರಿಯರ ಸಾಧನೆಯನ್ನು ಮೆಚ್ಚಿಕೊಳ್ಳುತ್ತಲೇ ಅವರ ಭ್ರಮೆಯನ್ನು ಒಡೆಯುವ ವಿವೇಕದ ಸೂಜಿಮೊನೆಯಾಗಿಯೂ ಕೇಳಿಸುತ್ತವೆ. ಆ ಮಾತಿನೊಟ್ಟಿಗೆ ಈ ಚರ್ಚೆಗೆ ಅಲ್ಪವಿರಾಮ ಇಡಬಹುದು.

ಗಿರೀಶ ಕಾಸರವಳ್ಳಿ
ಗಿರೀಶ ಕಾಸರವಳ್ಳಿ

ಕಾಸರವಳ್ಳಿ ಅವರ ಮಾತು ಹೀಗಿದೆ: ‘ಎಲ್ಲರೂ ನಮ್ಮ ಭಾಷೆಗೆ ಇಷ್ಟು ಪ್ರಶಸ್ತಿಗಳು ಬಂದವು ಎಂದು ಸಂಭ್ರಮಿಸುತ್ತಾರೆ. ಕನ್ನಡದವರುಕನ್ನಡ ಭಾಷೆ ಸಿನಿಮಾಗಳ ಬಗ್ಗೆ ಮಾತಾಡುತ್ತಾರೆ; ತಮಿಳು ಭಾಷೆಯವರು ತಮಿಳು ಸಿನಿಮಾಗಳ ಬಗ್ಗೆ ಮಾತಾಡುತ್ತಾರೆ; ಮಲಯಾಳಂನವರು ಮಲಯಾಳಿ ಸಿನಿಮಾಗಳ ಬಗ್ಗೆ ಮಾತಾಡುತ್ತಾರೆ. ಅವರ ಭಾಷಾಪ್ರೇಮ ಸಹಜ. ನಾನೂ ಆ ಪರವೇ. ನಾನೂ ನಮ್ಮ ಭಾಷೆಯ ಸಿನಿಮಾಗೇ ಹೆಚ್ಚು ಪ್ರಶಸ್ತಿಗಳು ಬರಬೇಕು ಎಂದು ಬಯಸುತ್ತೇನೆ. ಆದರೆ ಅವರು ಹೇಳುವಂಥ ಭಾಷೆಗೂ, ನಾನು ಹೇಳುವಂಥ ಭಾಷೆಗೂ ಮೂಲಭೂತ ವ್ಯತ್ಯಾಸ ಇದೆ. ನಾನು ಹೇಳುವುದು ಸಿನಿಮಾ ಭಾಷೆ. ನನ್ನ, ‘ಸಿನಿಮಾ ಭಾಷೆ’ಗೆ ಹೆಚ್ಚಿನ ಮನ್ನಣೆ ಸಿಗಬೇಕು ಎಂದು ಬಯಸುತ್ತೇನೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT