ಗುರುವಾರ , ಸೆಪ್ಟೆಂಬರ್ 24, 2020
27 °C

ಆಯುಷ್ಮಾನ್‌ಭವ ಸಿನಿಮಾ ವಿಮರ್ಶೆ | ಅಂತರಂಗದ ಶುದ್ಧಿಗೆ ಹಿಡಿದ ಕನ್ನಡಿ

ಕೆ.ಎಚ್. ಓಬಳೇಶ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರ: ಆಯುಷ್ಮಾನ್‌ಭವ
ನಿರ್ಮಾಣ: ಬಿ.ಎಸ್. ದ್ವಾರಕೀಶ್‌, ಯೋಗೀಶ್‌ ದ್ವಾರಕೀಶ್‌
ನಿರ್ದೇಶನ: ಪಿ. ವಾಸು
ತಾರಾಗಣ: ಶಿವರಾಜ್‌ಕುಮಾರ್‌, ರಚಿತಾ ರಾಮ್‌, ಅನಂತನಾಗ್‌, ರಂಗಾಯಣ ರಘು, ಸಾಧುಕೋಕಿಲ, ನಿಧಿ ಸುಬ್ಬಯ್ಯ, ಯಶ್ ಶೆಟ್ಟಿ

**

ಪ್ರೇತಾತ್ಮದ ಕಥನಗಳ ಮೂಲಕ ಮಾನವರ ಅಂತರಂಗ ಶೋಧಿಸುವುದರಲ್ಲಿ ನಿರ್ದೇಶಕ ಪಿ. ವಾಸು ಸಿದ್ಧಹಸ್ತರು. ‘ಆಯುಷ್ಮಾನ್‌ಭವ’ ಸಿನಿಮಾದಲ್ಲೂ ಅವರು ಮನುಷ್ಯರ ಅಂತರಂಗದ ಶುದ್ಧಿಗೆ ಕನ್ನಡಿ ಹಿಡಿದಿದ್ದಾರೆ. ಆದರೆ, ಇಲ್ಲಿ ಪ್ರೇತಾತ್ಮಗಳ ಆರ್ತನಾದವಿಲ್ಲ ಅಷ್ಟೇ.

ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿ ಅನಾಹುತದಿಂದ ಮಾನಸಿಕ ಆಘಾತಕ್ಕೀಡಾದ ತರುಣಿಯನ್ನು ಮತ್ತೆ ಸರಿದಾರಿಗೆ ತರುವುದೇ ಚಿತ್ರದ ಕಥೆ. ಆದರೆ, ಆಕೆಯ ಸ್ಥಿತಿಗೆ ಕಾರಣ ಯಾರು ಎಂಬುದು ಅವಳ ಕುಟುಂಬಕ್ಕೆ ತಿಳಿಯದಿರುವುದೇ ಕಥೆಯಲ್ಲಿನ ಕುತೂಹಲ. 

ಕೃಷ್ಣ ಆಗರ್ಭ ಶ್ರೀಮಂತ. ವೃತ್ತಿಯಲ್ಲಿ ವೈದ್ಯ. ಅಪ್ಪ ಪ್ರತಿಷ್ಠಿತ ಆಸ್ಪತ್ರೆಯ ಮಾಲೀಕ. ತನ್ನ ಸಂಸ್ಥೆ ಮೇಲೆ ಕೇಳಿಬಂದ ದೂರಿನ ಸತ್ಯಾಸತ್ಯತೆಯ ತನಿಖೆಗೆ ಇಳಿಯುತ್ತಾನೆ ಕೃಷ್ಣ. ಸಿಬಿಐಗೆ ಸಾಕ್ಷ್ಯ ನೀಡಲು ಹೊರಟಾಗ ರೈಲಿನಲ್ಲಿ ಅವಘಡ ಸಂಭವಿಸುತ್ತದೆ. ಲಕ್ಷ್ಮಿ ಆ ದುರ್ಘಟನೆಯ ಸಂತ್ರಸ್ತೆ. 

ತನ್ನ ತಪ್ಪಿನಿಂದ ಮಾನಸಿಕ ಸಂಕಷ್ಟದ ಕುಲುಮೆಗೆ ಸಿಲುಕಿದ ಕುಟುಂಬದ ನೆಮ್ಮದಿಗೆ ಟೊಂಕಕಟ್ಟಿ ನಿಲ್ಲುತ್ತಾನೆ ಕೃಷ್ಣ. ಸಂಗೀತದ ಮೂಲಕ ಲಕ್ಷ್ಮಿಯ ಬದುಕನ್ನು ಹಸನುಗೊಳಿಸುವುದೇ ಅವನ ಗುರಿ. 

ಸಸ್ಪೆನ್ಸ್‌, ಥ್ರಿಲ್ಲರ್‌ ಹಣೆಪಟ್ಟಿಯ ಈ ಚಿತ್ರದಲ್ಲಿ ಹಾಸ್ಯವೂ ಬೆರೆತಿದೆ. ಶಿವರಾಜ್‌ಕುಮಾರ್‌ ಜೊತೆಗೆ ಸಾಧುಕೋಕಿಲ ಮತ್ತು ರಂಗಾಯಣ ರಘು ಅವರ ಪಾತ್ರ ಪೋಷಣೆಯ ಉದ್ದೇಶವೇ ಅದು. 

ಮೊದಲಾರ್ಧ ಕೃಷ್ಣನ ಪಾತ್ರ ಪ್ರವೇಶದ ಸುತ್ತಲೇ ತಿರುಗುತ್ತದೆ. ದ್ವಿತೀಯಾರ್ಧದಲ್ಲಿ ಚಿತ್ರಕಥೆ ಕುರ್ಚಿಯ ತುದಿಗೆ ತಂದು ಕೂರಿಸುತ್ತದೆ. ಚುರುಕಾದ ನಿರೂಪಣೆಯಿಂದಾಗಿ ಸಿನಿಮಾ ನೋಡಿಸುವ ಗುಣ ಹೊಂದಿದೆ. ಚಕಚಕನೆ ಸಾಗುತ್ತಾ ಮುಂದೇನಾಗುತ್ತದೆ ಎನ್ನುವ ಪ್ರಶ್ನೆಯನ್ನು ನೋಡುಗರ ಮುಂದಿಟ್ಟು ಮಜಾ ಕೊಡುತ್ತದೆ.

ಬದುಕಿನ ತಾಕಲಾಟಗಳನ್ನು ಚಿತ್ರದಲ್ಲಿ ಹದವಾಗಿ ನೇಯ್ದಿದ್ದಾರೆ ನಿರ್ದೇಶಕರು. ಸಿನಿಮಾವನ್ನು ತಾಂತ್ರಿಕವಾಗಿಯೂ ಅಚ್ಚುಕಟ್ಟಾಗಿ ರೂಪಿಸಬೇಕೆಂಬ ನಿರ್ದೇಶಕರ ಉಮೇದಿಗೆ ಹಲವು ಪುರಾವೆಗಳು ಸಿಗುತ್ತವೆ. ಚಿತ್ರದ ವಿಷುಯಲ್‌ ಎಫೆಕ್ಟ್‌ ನೋಡುಗರಿಗೆ ಮುದ ನೀಡುತ್ತದೆ. ಆದರೆ, ದಟ್ಟಕಾನನದಲ್ಲಿ ಬೆನ್ನಟ್ಟಿದ ಬಲಿಷ್ಠ ಹುಲಿಯನ್ನು ಮರದ ಚೂಪಾದ ಕಡ್ಡಿಯಿಂದ ಸಾಯಿಸುವುದು ದುರ್ಬಲ ಪರಿಕಲ್ಪನೆ.

ಅಲ್ಲಲ್ಲಿ ಬಿಲ್ಡಪ್‌ ಡೈಲಾಗ್‌ಗಳು ಇವೆಯಾದರೂ ಇಡೀ ಸಿನಿಮಾವನ್ನು ಆವರಿಸಿಕೊಳ್ಳದಂತೆ ಎಚ್ಚರವಹಿಸಲಾಗಿದೆ. ಸಾಮಾನ್ಯ ಕಥೆಯನ್ನು ಜನಪ್ರಿಯ ನಾಯಕನೊಬ್ಬನ ಇಮೇಜ್‌ನಲ್ಲಿ ಬೆರೆಸಿ ಅಭಿಮಾನಿಗಳಿಂದ ಚಪ್ಪಾಳೆ ತಟ್ಟಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಅಭಿನಯ, ನೃತ್ಯ, ಸಾಹಸ ದೃಶ್ಯಗಳಲ್ಲಿ ಶಿವರಾಜ್‌ಕುಮಾರ್‌ ಸಿಳ್ಳೆ ಗಿಟ್ಟಿಸುತ್ತಾರೆ. 

ಗ್ಲಾಮರ್‌ ಗೊಂಬೆಯಾಗಿಯೇ ಮಿಂಚುತ್ತಿದ್ದ ರಚಿತಾ ರಾಮ್‌ ಭಾವುಕ ಸನ್ನಿವೇಶಗಳನ್ನು ಜೀವಿಸಿದ್ದಾರೆ. ಅವರ ವೃತ್ತಿಬದುಕಿನಲ್ಲಿಯೇ ನೆನಪಿನಲ್ಲಿ ಉಳಿಯುವ ಪಾತ್ರ ಇದು. ಗುರುಕಿರಣ್‌ ಸಂಗೀತ ಸಂಯೋಜನೆಯ ಹಾಡುಗಳು ಚೆನ್ನಾಗಿವೆ. ಪಿ.ಕೆ.ಎಚ್‌. ದಾಸ್ ಅವರ ಛಾಯಾಗ್ರಹಣ ನಿರ್ದೇಶಕರ ಶ್ರಮಕ್ಕೆ ಸಮರ್ಥವಾಗಿ ಸ್ಪಂದಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು