ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರ್‌ ಗೋವಿಂದ್‌ ನಟನೆಯ ಮೂಕನಾಯಕ ಸಿನಿಮಾಗೆ ದಶಕದ ಅತ್ಯುತ್ತಮ ಚಿತ್ರ ಪ್ರಶಸ್ತಿ

Last Updated 11 ಆಗಸ್ಟ್ 2021, 7:15 IST
ಅಕ್ಷರ ಗಾತ್ರ

ಬೆಂಗಳೂರು: ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿದ ‘ಮೂಕನಾಯಕ’ ಚಿತ್ರಕ್ಕೆ ನೋಯ್ಡಾದ ಅಂತರರಾಷ್ಟ್ರೀಯ ಸಿನಿಮಾ ಸ್ಪರ್ಧೆಯಲ್ಲಿ ‘ದಶಕದ ಅತ್ಯುತ್ತಮ ಚಿತ್ರ’ ಪ್ರಶಸ್ತಿ ಲಭ್ಯವಾಗಿದೆ.

‘ನೋಯ್ಡಾದ ಸಂಸ್ಥೆಯೊಂದು ‘ಇನ್‌ಕ್ರೆಡಿಬಲ್‌ ಸಿನಿ ಅವಾರ್ಡ್ಸ್‌’ಗಾಗಿ ಹತ್ತು ವರ್ಷಗಳ ಒಳಗೆ ನಿರ್ಮಾಣಗೊಂಡ ವಿಶ್ವದ ಎಲ್ಲ ಭಾಷೆಯ ಚಿತ್ರಗಳನ್ನು ಆಹ್ವಾನಿಸಿತ್ತು. ಈ ಸ್ಪರ್ಧೆಗೆ ‘ಮೂಕನಾಯಕ’ ಚಿತ್ರವನ್ನು ಕಳುಹಿಸಲಾಗಿತ್ತು. ಪ್ರವೇಶ ಪಡೆದ ಚಿತ್ರಗಳಲ್ಲಿ ಆಯ್ದ ಚಿತ್ರಗಳನ್ನು ವಿವಿಧ ಪ್ರಕಾರಗಳ ಸ್ಪರ್ಧೆಗೆ ನಾಮನಿರ್ದೇಶನ ಮಾಡಲಾಗಿತ್ತು. ಹೀಗೆ ನಾಮನಿರ್ದೇಶನಗೊಂಡ ‘ಮೂಕನಾಯಕ’ ಚಿತ್ರವು ವಿಶ್ವದ ವಿವಿಧ ಭಾಷೆಗಳ ಸಿನಿಮಾಗಳೊಂದಿಗೆ ಸ್ಪರ್ಧಿಸಿ ದಶಕದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ’ ಎಂದು ಬರಗೂರು ಅವರು ತಿಳಿಸಿದ್ದಾರೆ.

‘ಮಾತು ಬಾರದ ಚಿತ್ರಕಲಾವಿದನ ಆಶಯ ಮತ್ತು ಅಭಿವ್ಯಕ್ತಿ ವಿನ್ಯಾಸವನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಚಿತ್ರವು ಚಿತ್ರಕಲೆಯ ವಿವಿಧ ಸಾಧ್ಯತೆಗಳನ್ನು ಸಾದರಪಡಿಸಿದೆ. ಈ ಚಿತ್ರವನ್ನು ‘ಸಮುದಾಯದತ್ತ ಸಿನಿಮಾ’ ಪರಿಕಲ್ಪನೆಯಡಿ ‘ಚಿತ್ರಯಾತ್ರೆ’ ನಡೆಸಿ ಈಗಾಗಲೇ ಅನೇಕ ಊರುಗಳಲ್ಲಿ ಪ್ರದರ್ಶನ ನೀಡಲಾಗಿದೆ. ಈ ಹಿಂದೆ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲೂ ಈ ಚಿತ್ರವು ಪ್ರದರ್ಶನಕ್ಕೆ ಆಯ್ಕೆಯಾಗಿತ್ತು’ ಎನ್ನುತ್ತಾರೆ ಬರಗೂರು.

ಬರಗೂರು ಅವರೇ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು 2017ರಲ್ಲಿ ಬಾಲರಾಜ್‌ ಅವರು ನಿರ್ಮಿಸಿದ್ದರು. ಮೂಕಚಿತ್ರ ಕಲಾವಿದನ ಪಾತ್ರದಲ್ಲಿ ಕುಮಾರ್‌ ಗೋವಿಂದ್‌ ನಟಿಸಿದ್ದಾರೆ. ಸೋದರಿ ಪಾತ್ರದಲ್ಲಿ ರೇಖಾ ಅವರು ನಟಿಸಿದ್ದು, ಇತರೆ ಪಾತ್ರಗಳಲ್ಲಿ ಸುಂದರರಾಜ್‌, ಯತಿರಾಜ್‌, ಶೀತಲ್‌ ಶೆಟ್ಟಿ, ವೆಂಕಟರಾಜ್‌ ಮುಂತಾದವರು ನಟಿಸಿದ್ದಾರೆ.

ಚಿತ್ರಕ್ಕೆ ಆದವಾನಿ ಛಾಯಾಗ್ರಹಣ, ಸುರೇಶ್‌ ಅರಸು ಸಂಕಲನ, ಶಮಿತಾ ಮಲ್ನಾಡ್‌ ಸಂಗೀತ ನಿರ್ದೇಶನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT