‘ಬಜಾರ್‌’ ಚಿತ್ರಕ್ಕೆ ತಟ್ಟಿದ ಪೈರಸಿ ಬಿಸಿ

7

‘ಬಜಾರ್‌’ ಚಿತ್ರಕ್ಕೆ ತಟ್ಟಿದ ಪೈರಸಿ ಬಿಸಿ

Published:
Updated:

ಬೆಂಗಳೂರು: ಕಳೆದ ವಾರ ತೆರೆಕಂಡಿದ್ದ ಸಿಂಪಲ್‌ ಸುನಿ ನಿರ್ದೇಶನದ ‘ಬಜಾರ್’ ಸಿನಿಮಾ ಪೈರಸಿಗೆ ತುತ್ತಾಗಿದ್ದು, ಚಿತ್ರತಂಡ ಆತಂಕಗೊಂಡಿದೆ.

ರಷ್ಯಾ ಮೂಲದ ‘ಟೆಲಿಗ್ರಾಂ’ ಆ್ಯಪ್‌ನಲ್ಲಿ ಸಿನಿಮಾ ಸೋರಿಕೆಯಾಗಿದೆ. ಇಲ್ಲಿಯವರೆಗೆ 1.50 ಲಕ್ಷ ಜನರು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಹೊಸ ಸಿನಿಮಾಗಳು ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಪೈರಸಿ ಕಾಟ ಎದುರಿಸುವುದು ಸರ್ವೇ ಸಾಮಾನ್ಯ. ಇಲ್ಲಿ ಸೋರಿಕೆಯಾಗುವ ಸಿನಿಮಾದ ವಿಡಿಯೊಗಳನ್ನು ಸೈಬರ್‌ ಕ್ರೈಮ್‌ ವಿಭಾಗಕ್ಕೆ ದೂರು ಸಲ್ಲಿಸಿ ಸುಲಭವಾಗಿ ನಾಶಗೊಳಿಸಬಹುದು. ಆದರೆ, ಆ್ಯಪ್‌ ಮೂಲಕ ಪೈರಸಿ ಆಗಿರುವುದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಧನ್‌ವೀರ್‌ ಈ ಚಿತ್ರದ ನಾಯಕ. ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಭೂಗತಲೋಕ ಮತ್ತು ಪಾರಿವಾಳ ಹಾರಾಟ ಸ್ಪರ್ಧೆಯ ಸುತ್ತ ಈ ಚಿತ್ರದ ಕಥೆ ಹೊಸೆಯಲಾಗಿದೆ.

‘ಟೆಲಿಗ್ರಾಂ ಆ್ಯಪ್‌ನಲ್ಲಿ ಇರುವ ಚಂದಾದಾರರ ಸಂಖ್ಯೆ 20 ಲಕ್ಷ. ಇಲ್ಲಿ ಸಿನಿಮಾಗಳನ್ನು ಡೌನ್‌ಲೋಡ್‌ ಮಾಡಿಕೊಂಡು ವೀಕ್ಷಿಸುವುದು ಸುಲಭ. ಬಜಾರ್‌ನ ಚಿತ್ರಮಂದಿರದ ಪ್ರತಿಯು ಪೈರಸಿಗೆ ತುತ್ತಾಗಿದೆ. ಸೈಬರ್ ಕ್ರೈಮ್‌ಗೆ ದೂರು ನೀಡಿದ್ದೇನೆ. ಆದರೆ, ಆ್ಯಪ್‌ನಲ್ಲಿರುವ ವಿಡಿಯೊವನ್ನು ನಾಶಗೊಳಿಸಲು ಸಾಧ್ಯವಾಗುತ್ತಿಲ್ಲ’ ಎಂದು ಸಿಂಪಲ್‌ ಸುನಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆ್ಯಪ್‌ನಲ್ಲಿರುವ ವಿಡಿಯೊವನ್ನು ನಾಶಗೊಳಿಸಲು ಹೈದರಾಬಾದ್‌ನ ಖಾಸಗಿ ಸಂಸ್ಥೆಯೊಂದಕ್ಕೆ ಕೋರಿದ್ದೇವೆ. ಅವರು ವಿಡಿಯೊದ ಡೌನ್‌ಲೋಡ್‌ ಲಿಂಕ್‌ಗೆ ವೈರಸ್‌ ಅನ್ನು ಹರಿಬಿಟ್ಟಿದ್ದಾರೆ. ಈ ವಿಡಿಯೊವನ್ನು ಡೌನ್‌ಲೋಡ್‌ ಮಾಡಿದರೆ ಮೊಬೈಲ್‌ ಹ್ಯಾಂಗ್ ಆಗಲಿದೆ’ ಎಂದರು.

‘ಕನ್ನಡದಲ್ಲಿ ದೊಡ್ಡ ಬಜೆಟ್‌ನ ಚಿತ್ರಗಳು ತೆರೆಕಾಣುತ್ತಿವೆ. ಪೈರಸಿ ಕಾಟದಿಂದ ನಿರ್ಮಾಪಕರು ನಷ್ಟ ಅನುಭವಿಸಲಿದ್ದಾರೆ. ಜೊತೆಗೆ, ಚಿತ್ರೋದ್ಯಮಕ್ಕೂ ಇದರಿಂದ ಅಪಾಯ ತಪ್ಪಿದ್ದಲ್ಲ. ಬಿಡುಗಡೆಗೆ ಸಿದ್ಧವಾಗಿರುವ ಚಿತ್ರತಂಡದವರು ಮುಂಜಾಗ್ರತೆವಹಿಸುವುದು ಒಳಿತು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !