ಶುಕ್ರವಾರ, ಫೆಬ್ರವರಿ 26, 2021
18 °C

ಬೆಲ್‌ ಬಾಟಂ: ಹಳೆ ಪ್ಯಾಂಟು; ಮೀಮ್ಸ್‌ ಮಸ್ತ್‌ ಉಂಟು

ಪದ್ಮನಾಭ ಭಟ್ Updated:

ಅಕ್ಷರ ಗಾತ್ರ : | |

‘ಅಯ್ಯೋ ಸಿವನೇ, ಈ ನನ್ನ ಕಂದ ಓದಲ್ಲ, ಬರೆಯಲ್ಲ. ಡಿಟೆಕ್ಟಿವ್‌ ಆಗ್ತೀನಿ ಅಂತ ಕುಂತದಲ್ಲ. ಇದನ್ನು ತಗಂಡು ಏನ್‌ ಮಾಡ್ಲಿ? ಒಂದ್ ತಾಯತನಾದ್ರೂ ಕಟ್ಟುಸ್ಲ?’

ಹೊಸ್ತಿಲಲ್ಲಿ ಸೊರಗಿ ಕೂತಿರುವ ಹುಡುಗನ್ನೇ ನೋಡುತ್ತ ಮುಡಿತುಂಬ ಹೂ ಮುಡಿದ, ಚಿಂತಾಕ್ರಾಂತ ತಾಯಿಯ ಸ್ವಗತ ಇದು. ಇದೇನು ಪಕ್ಕದಲ್ಲಿ ‘‘ಎದೆ ಕಲುಕುವ ಸೆಂಟಿಮೆಂಟ್‌ ಪತ್ತೆದಾರಿ ಪಿಚ್ಚರ್‌’ ಎಂಬ ಒಕ್ಕಣಿಕೆ. ಮೇಲುಗಡೆ ‘ಚಿತ್ತಚೋರ ರಿಷಬ್‌ ಶೆಟ್ಟಿ, ಹಂಸವದನೆ ಹರಿಪ್ರಿಯಾ ನಟನೆಯಲ್ಲಿ’ ಎಂಬ ಸಾಲು...

– ‘ಇದೇನು ಟೆಂಟ್‌ ಸಿನಿಮಾ ಕಾಲದ ಫೋಸ್ಟರು ಕೈಗೆ ಸಿಕ್ಕಿದ ಹಾಗಿದೆಲ್ಲಾ’ ಎಂದು ಯೋಚಿಸಬೇಡಿ. ಮುಂದಿನದು ಓದಿ...

***

‘ಸರ್ಪದೇವನ ಶಾಪದಿಂದ ಸಂಸಾರವನ್ನು ರಕ್ಷಿಸುವ ಗೃಹಿಣಿಯೊಬ್ಬಳ ಮೈನವಿರೇಳಿಸುವ ಸಾಹಸಮಯ ಕಥೆ’, ಮಾರುಕಟ್ಟೆಯಲ್ಲಿ ಇದೀಗ ಲಭ್ಯ. ಹೊಚ್ಚ ಹೊಸ ಕಾದಂಬರಿ. ಪ್ರತಿಗಳಿಗಾಗಿ ಸಂಪರ್ಕಿಸಿ; ಭುಜಂಗಶೆಟ್ಟಿ ಬುಕ್‌ ಸೆಂಟರ್‌ ಪರಂಗಿಪೇಟೆ. ಲೇಖಕರು: ಸ್ನೇಕ್‌ ನಾಗ

– ಇದ್ಯಾವ ಥ್ರಿಲ್ಲರ್ ಕಾದಂಬರಿ ಹೊಸತಾಗಿ ಮಾರುಕಟ್ಟೆಗೆ ಬಂದಿದ್ದು? ಪೋಸ್ಟರ್‌ ನೋಡಿದ್ರೆ ಮಜಾ ಇದೆ ಅನ್ಸತ್ತೆ. ಅಟ್ಟದ ಮೇಲಿನ ಹಳೆ ಹಳೆ ಟ್ರಂಕ್‌ ಹೊರಗೆ ತೆಗೆದು ಕೂತ ಹಾಗಿದೆ ಎಂದು ಅಸಡ್ಡೆ ಮಾಡಬೇಡಿ. ಬರಿ ಹಳೆಯಷ್ಟೇ ಅಲ್ಲ ಬಂಡವಾಳ. ಮುಂದಿಂದು ಕೆಜಿಎಫ್‌ ಕಥೆ ಓದಿ...

***

ಕೆಜಿಎಫ್‌ ಸಿನಿಮಾದ ಡಾನ್‌: ನನಗೊಂದು ಕೆಲ್ಸ ಆಗ್ಬೇಕು; ಒಂದು ಆನೇನ ಹೊಡೀಬೇಕು

ಡಿಟೆಕ್ಟಿವ್ ದಿವಾಕರ್‌: ಅಷ್ಟು ದೊಡ್ಡ ಪ್ರಾಣಿನೇ ಯಾಕೆ?

ಡಾನ್‌: ಮಗಳಿಗೆ ಮದುವೆ ಆಯ್ತು. ಗ್ರಾಂಡಾಗಿ ಬೀಗರೂಟ ಹಾಕಿಸ್ಬೇಕು

ದಿವಾಕರ್‌: ಸಾರಿ ಆಂಡ್ರೂಸ್‌, ಆನೆ ಹೊಡೆದ್ರೆ ಅರಣ್ಯ ಇಲಾಖೆಯವ್ರು ಅರೆಸ್ಟ್‌ ಮಾಡ್ತಾರೆ. ಬೇಕಿದ್ರೆ 50 ಕೆಜಿ ನಾಟಿಕೋಳಿ ಕೊಡ್ತೀನಿ, ಎಂಜಾಯ್‌ ಮಾಡು!

– ಇವನ್ಯಾವನಪ್ಪ ಲೂಸ್‌ ಡಿಕೆಕ್ಟೀವ್‌ ದಿವಾಕರ? ಕೆಜಿಎಫ್‌ ಡಾನ್‌ಗೆ ಡಬ್ಬ ತುಂಬ ಬೂಂದಿಲಾಡು ತುಂಬಿ ಕೊಡ್ತಿದಾನೆ ಎಂದುಕೊಳ್ಳಬೇಡಿ. ಕೆಜಿಎಫ್‌ಗಷ್ಟೇ ಅಲ್ಲ; ‘ಪುಟ್ ಗೌರಿ ಮದುವೆ’ ಧಾರಾವಾಹಿಯನ್ನೂ ಬಿಟ್ಟಿಲ್ಲ ಇವ್ನು...

ಯಾರಿವ್ನು ದಿವಾಕರ? ಅವ್ನ ಪೂರ್ತಿ ಪರಿಚಯ ಆಗಬೇಕಾದ್ರೆ ಫೆ. 15ರವರೆಗೆ ಕಾಯಲೇ ಬೇಕು. ಯಾಕೆಂದರೆ ಅವನ ‘ನಾನ್‌ ಸ್ಟಾಪ ಥ್ರಿಲ ರೈಡ’ ಸಿನಿಮಾ ‘ಬೆಲ್‌ ಬಾಟಂ’ ರೀಲೀಜ ಆಗ್ತಿರೋದು ಫೆ. 15ರಂದು. ಅದಕ್ಕಾಗಿಯೇ ಅವನು ‘ಬಂದು ಕಾಣಿರಿ...’ ಎಂದು ಕರೆಯುತ್ತಿದ್ದಾನೆ.

ಜಯತೀರ್ಥ ನಿರ್ದೇಶನ, ರಿಷಭ್‌ ಶೆಟ್ಟಿ ಮತ್ತು ಹರಿಪ್ರಿಯಾ ಅಭಿನಯದ ‘ಬೆಲ್‌ ಬಾಟಂ’ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈ ಸಿನಿಮಾದ ಕುರಿತು ಕುತೂಹಲ ಹುಟ್ಟಿಸಿರುವುದು ಫೆಸ್‌ಬುಕ್‌ನಲ್ಲಿ ಹರಿಯಬಿಡುತ್ತಿರುವ ಮೀಮ್ಸ್‌ಗಳಿಂದ. ಹಳೆಯ ಅಟ್ಲಾಸ್‌ ಸೈಕಲ್‌, ದೀಪಾವಳಿ ಲಾಟರಿ, ಆಶಾ ಹೊಲಿಗೆ ಯಂತ್ರ, ಹೀಗೆ ಹಳೆಯ ಜಾಹೀರಾತು ಮಾದರಿಗಳನ್ನೂ ಹೊಸದಾದ ಕೆಜಿಎಫ್‌ ಸಿನಿಮಾ ಡಾನ್‌, ಅವನೇ ಶ್ರೀಮನ್ನಾರಾಯಣದ ರಕ್ಷಿತ್‌ ಶೆಟ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹೀಗೆ ಬೇರೆ ಬೇರೆ ಸಿನಿಮಾ ಪಾತ್ರಗಳನ್ನು ಇಟ್ಟುಕೊಂಡು ಮಜಮಜವಾದ ಮೀಮ್ಸ್‌ ಮಾಡುವ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಹೊಸಬಗೆಯ ಪ್ರಚಾರದ ಕಿಚ್ಚುಹೊತ್ತಿಸಿದೆ ‘ಬೆಲ್‌ ಬಾಟಂ’. ಒಂದು ಬಗೆಯಲ್ಲಿ ಹಳೆಯ ಮದ್ಯದ ಬಾಟಲಿ ಹೊಸ ಅಲಂಕಾರ ಮಾಡಿ ಜನರಿಗೆ ಕೊಡುವ ತಂತ್ರ ಇದು. ಹೊಸ ಬಾಟಲಿ ಹಳೆ ನಶೆ ಎರಡೂ ಇರುವ ಮೋಜು ಅದು. 

ಡಿಟೆಕ್ಟಿವ್‌ ದಯಾನಂದನ ಕೈವಾಡ:

ಫೇಸ್‌ಬುಕ್‌ನಲ್ಲಿ ಸಖತ್‌ ಕ್ಲಿಕ್‌ ಆಗಿರುವ ಈ ತಂತ್ರದ ಹಿಂದಿರುವ ಮಾಸ್ಟರ್‌ ಮೈಂಡ್‌ ಯಾರದು ಗೊತ್ತೆ? ಇದು ಡಿಟೆಕ್ಟಿವ್‌ ದಯಾನಂದ!

ದಿವಾಕರ ಹೋಗ್ಲಿ, ಇವರಾರು ದಯಾನಂದ? ಸಿನಿಮಾದಲ್ಲಿ ಬೋಗಸ್‌ ಡಿಟೆಕ್ಟಿವ್‌ ದಿವಾಕರನ ಸಕಲ ಸಂಕಷ್ಟಗಳನ್ನೂ ಸೃಷ್ಟಿಸಿ, ಈಗ ಫೇಸ್‌ಬುಕ್‌ನಲ್ಲಿಯೂ ಮತ್ತೆ ನೂರೆಂಟು ಬಗೆಯಲ್ಲಿ ಅವನ ಮರ್ಯಾದೆ ತೆಗೆದು ಸಂತೋಷ ಪಡುತ್ತಿರುವ ದಯಾನಂದ್‌, ‘ಬೆಲ್‌ ಬಾಟಂ’ ಸಿನಿಮಾಗೆ ಕಥೆ ಬರೆದವರು. ಹಿಂದೆ ಇವರು ‘ಬೆಂಕಿಪಟ್ಣ’ ಎಂಬ ಸಿನಿಮಾ ನಿರ್ದೇಶಿಸಿದ್ದರು.

ಈ ಪ್ರಚಾರತಂತ್ರದ ದಾರಿ ಇವರ ತಲೆಯೊಳಗೆ ತೆರೆದುಕೊಂಡಿದ್ದ ಹಿಂದೆಯೂ ಮೀಮ್ಸ್‌ಗೆ ವಸ್ತುವಾಗಬಲ್ಲಂಥದ್ದೇ ಒಂದು ಕಥೆಯಿದೆ. ಅದನ್ನು ಅವರ ಬಾಯಿಯಲ್ಲಿಯೇ ಕೇಳಿ: 

‘‘ಬೆಲ್‌ ಬಾಟಂ’ ಸಿನಿಮಾ 80 ಕಾಲಘಟ್ಟದಲ್ಲಿ ನಡೆಯುವ ಕಥೆ. ನಾನು, ನಿರ್ದೇಶಕ ಜಯತೀರ್ಥ ಚಿತ್ರಕ್ಕಾಗಿ ಪ್ರಾಪರ್ಟಿ ಹುಡುಕಲು ಅಲೆದಾಡುತ್ತಿದ್ದೆವು. ಒಂದಿನ ಸಂಡೆ ಬಜಾರ್‌ನಲ್ಲಿ ಅಲೆದಾಡುತ್ತಿದ್ದಾಗ ಪ್ಲ್ಯಾಶ್‌ ಕ್ಯಾಮೆರಾ ಸಿಕ್ಕಿದವು. ಥ್ರಿಲ್ ಆಗೋಯ್ತು. ನಾನು ಮತ್ತು ಜಯತೀರ್ಥ ಎಲ್ಲರೂ ತೊಂಬತ್ತರ ದಶಕದಲ್ಲಿ ಬೆಳೆದವರು... ಫ್ಲ್ಯಾಶ್‌ ಕ್ಯಾಮೆರಾ, ವಿಂಟೆಜ್‌ ಎಲ್ಲ ಅನುಭವಗಳನ್ನು ಹಾದು ಬಂದವರು...

ಸಾಮಾನ್ಯವಾಗಿ ಸ್ಮೆಲ್‌ಗೆ ಒಂದು ಪವರ್ ಇರುತ್ತದೆ. ಚಿಕ್ಕವರಿದ್ದಾಗ ಅಮ್ಮ ದೇವರ ಮನೆಯಲ್ಲಿ ಹಚ್ಚುತ್ತಿದ್ದ ಅಗರಬತ್ತಿಯ ಘಮ ಮತ್ತೆ ಹತ್ತಿಪ್ಪತ್ತು ವರ್ಷಗಳ ನಂತರ ಮತ್ತೆಲ್ಲೋ ಸಿಕ್ಕಾಗ ಅದೇ ದೇವರ ಮನೆಯಲ್ಲಿನ ಅಮ್ಮ ನೆನಪಾಗಿಬಿಡುತ್ತಾಳಲ್ಲ.., ಅಂಥದ್ದೇ ಅನುಭವವನ್ನು ಈ ರೆಟ್ರೊ ಪ್ರಾಪರ್ಟಿಗಳು ನಮಗೆ ಕೊಟ್ಟವು. ನಮಗಾದ ಈ ಅನುಭವವನ್ನು ಎಲ್ಲರಿಗೂ ಹಂಚಬೇಕು ಅನಿಸ್ತು.’

ಹೀಗೆ ರೆಟ್ರೊ ಮೀಮ್ಸ್‌ ಐಡಿಯಾ ಹೊಳೆದ ಕತೆಯನ್ನು ಹೇಳುವ ದಯಾನಂದ, ತಮ್ಮ ಐಡಿಯಾವನ್ನು ಕಾರ್ಯರೂಪಕ್ಕೆ ತರುವಾಗ ಸ್ವತಃ ಪತ್ತೆದಾರಿ ಕೆಲಸಕ್ಕೇ ಇಳಿಯಬೇಕಾಯ್ತು.  

‘ರೆಟ್ರೊ ಫೋಟೊಗಳು, ಜಾಹೀರಾತುಗಳು, ಆಗಿನ ಕಾಲದ ನ್ಯಾಷನಲ್ ಲೇವಲ್ ಉತ್ಪನ್ನಗಳು, ಕರ್ನಾಟಕದಲ್ಲಿ ತಯಾರಾಗ್ತಿದ್ದ ಅಡಿಕೆ ಪುಡಿಯು ಜಾಹೀರಾತು ಎಲ್ಲ ಬೇಕಿತ್ತು. ಇವೆಲ್ಲವೂ ಎಲ್ಲಿ ಸಿಗಬಹುದು ಎಂದು ಯೋಚಿಸಿದಾಗ ಹೊಳೆದಿದ್ದು ಹಳೆಯ ಸಿನಿಮಾ ಮ್ಯಾಗಜಿನ್‌.  ಹುಡುಕಲು ಶುರುಮಾಡಿದ್ವಿ. ವಿಜಯಮ್ಮನ ಹತ್ರ ಹಳೆಯ ‘ರೂಪತಾರಾ’ ಸಂಗ್ರಹ ಇದೆ ಅಂತ ಗೊತ್ತಾಯ್ತು. ಅವರ ಮನೆಗೆ ಹೋಗಿ ನೋಡಿದಾಗ ಗಾಬರಿಯಾಯ್ತ. ನೀರು ಹುಡುಕಿ ಬಂದವರಿಗೆ ಸಮುದ್ರ ಸಿಕ್ಕಿಬಿಡ್ತು ಅನಿಸ್ತು. ರಾಶಿ ರಾಶಿ ರೂಪತಾರಾ ಮ್ಯಾಗಜಿನ್‌ಗಳನ್ನು ಬೈಂಡ್‌ ಮಾಡಿ ಇಟ್ಟಿದ್ದರು. ‘ಬೇಕಾದ್ದು ಬಳಸಿಕೊಳ್ಳಿ’ ಎಂದು ಪೂರ್ತಿ ನಮಗೆ ಒಪ್ಪಿಸಿಬಿಟ್ಟರು. ಪ್ರತಿ ಪುಟಗಳನ್ನು ಸ್ಕ್ಯಾನ್ ಮಾಡಿ ಇಟ್ಟುಕೊಂಡೆವು. ಹಾಗಾಗಿ ಈ ರೆಟ್ರೊ ಮೀಮ್ಸ್‌ ಕ್ರೆಡಿಟ್‌ ಸಲ್ಲಬೇಕಾಗಿರುವುದು ವಿಜಯಮ್ಮನಿಗೆ’ ಎಂದು ದಯಾನಂದ ವಿವರಿಸುತ್ತಾರೆ. 

ಈ ಸರಣಿಯ ಮೊದಲ ಪೋಸ್ಟರ್‌ನಲ್ಲಿ ಬಳಸಿಕೊಂಡಿದ್ದು ಪ್ರಾಮಿಸ್‌ ಹಲ್ಲುಪುಡಿಯ ಹಳೆಯ ಜಾಹೀರಾತನ್ನು. ‘ಲವಂಗದೆಣ್ಣೆಯ ಸುಗಂಧದೊಂದಿಗೆ’ ಎಂಬ ಟ್ಯಾಗ್ ಲೈನ್‌ ಸಹ ಇದ್ದ ಆ ಪೋಸ್ಟರ್‌ ಅನ್ನು ಬೆಲ್‌ಬಾಟಂ ಶೀರ್ಷಿಕೆಯೊಂದಿಗೆ ಫೇಸ್‌ಬುಕ್‌ನಲ್ಲಿ ಪ್ರಕಟಿಸುವಾಗ ದಯಾನಂದ ಅವರಿಗೆ ಸುಮ್ಮನೆ ಒಂದು ಪ್ರಯೋಗ ಮಾಡಿ ನೋಡೋಣ ಎಂಬ ಯೋಚನೆ ಮಾತ್ರ ಇತ್ತು. ಆದರೆ ಫೇಸ್‌ಬುಕ್‌ನಲ್ಲಿ ಹರಿಯಬಿಟ್ಟ ನಾಲ್ಕೈದು ತಾಸಿಗೆ ಅದೇ ಪೋಸ್ಟರ್‌ ಮೂರು ನಾಲ್ಕು ಜನ ಸ್ನೇಹಿತರಿಂದ ಅವರ ಮೊಬೈಲ್‌ಗೆ ವಾಟ್ಸ್‌ಆ್ಯಪ್‌ ಮೂಲಕ ಬಂದಾಗ ಮಾತ್ರ ಅಚ್ಚರಿಯೂ ಖುಷಿಯೂ ಒಟ್ಟೊಟ್ಟಿಗೇ ಆಯ್ತು. ‘ಇದರಲ್ಲೇನೋ ವೈರಲ್‌ ಗುಣವಿದೆ. ಮುಂದುವರಿಸಿಕೊಂಡು ಹೋಗೋಣ’ ಎಂದು ಅನಿಸಿದ್ದೂ ಆಗಲೇ. 

‘ಈ ಥರದ ರೆಟ್ರೊ ಜಾಹೀರಾತುಗಳು ಎರಡು ಬಗೆಯಲ್ಲಿ ಆಕರ್ಷಿಸುತ್ತಿವೆ. ಒಂದು ಹೊ ಪೀಳಿಗೆಯವರು ಇದೇನೋ ಹೊಸರೀತಿಯಲ್ಲಿ ಇದೆಯಲ್ಲ ಎಂದು ಕುತೂಹಲದಿಂದ ನೋಡುತ್ತಿದ್ದಾರೆ. ಹಾಗೆಯೇ ಫೇಸ್‌ಬುಕ್‌ನಲ್ಲಿ ಇರುವ, ಎಂಬತ್ತರ ದಶಕದ ಕೊನೆ ಮತ್ತು ತೊಂಬತ್ತರ ದಶಕದ ಮಧ್ಯದಲ್ಲಿ ಇಂಥ ಅನುಭವಗಳಿಗೆ ಎರವಾದವರು ನಾಸ್ಟಾಲ್ಜಿಕ್‌ ಮೂಡ್‌ಗೆ ಹೋಗುತ್ತಾರೆ’ ಎಂದು ಈ ಜಾಹಿರಾತು ಜನಪ್ರಿಯವಾಗಿರುವುದರ ಹಿಂದಿನ ಕಾರಣವನ್ನು ದಯಾನಂದ ಹೇಳುತ್ತಾರೆ. 

ಒಟ್ಟಾರೆ ಫೆಸ್‌ಬುಕ್‌ ಎಂಬ ಆಧುನಿಕ ಪ್ರಮೋಷನ್‌ನ ವೇದಿಕೆಯ ನಟ್ಟ ನಡುವೆ ಹಳೆಯ ಬೆಲ್‌ ಬಾಟಂ ಪ್ಯಾಂಟು ತೊಟ್ಟ ಡಿಟೆಕ್ಟಿವ್‌ ದಿವಾಕರ ತನ್ನ ಮೊದ್ದುತನದ ಮೂಲಕವೇ ಮುದ್ದು ಗಳಿಸಿಕೊಳ್ಳುತ್ತಿದ್ದಾನೆ. ಓಲ್ಡ್‌ ಈಸ್‌ ಗೋಲ್ಡ್‌ ಅನ್ನುವ ಸಾಲನ್ನು ಫೇಸ್‌ಬುಕ್‌ ಜಮಾನದಲ್ಲಿಯೂ ಸಾಬೀತುಗೊಳಿಸಿರುವ ಖುಷಿಯಲ್ಲಿ ಚಿತ್ರತಂಡ ಇದೆ. ಫೆ. 15ರಂದು ಬಿಡುಗಡೆಯಾದಾಗಲೂ ಇದೇ ಬಗೆಯ ಪ್ರತಿಸ್ಪದಂನ ದೊರೆಯುವ ಕನಸು ಅವರದ್ದು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು