ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ದಿನವೇ ತೆರೆಗೆ ಬಂದ ‘ಮಹಿಷಾಸುರ ಮರ್ದಿನಿ’

Last Updated 9 ಮಾರ್ಚ್ 2022, 11:20 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳಾ ದಿನಾಚರಣೆಯ ದಿನವೇ ಮಹಿಳಾ ಪ್ರಧಾನ ಚಿತ್ರವೊಂದನ್ನು ನಿಮಗೆ ಅರ್ಪಿಸಿದ್ದೇವೆ...

ಇದು ಚಿತ್ರ ನಿರ್ದೇಶಕ ರಂಜನ್‌ ಘೋಷ್‌ ವಿನಮ್ರವಾಗಿ ಪ್ರೇಕ್ಷಕರನ್ನು ಕೋರಿದ ಪರಿ.

13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಮಹಿಷಾಸುರ್‌ ಮರ್ದಿನಿ’ ಬಂಗಾಳಿ ಚಿತ್ರ ಪ್ರದರ್ಶನದ ಸಂದರ್ಭ ನಿರ್ದೇಶಕ ರಂಜನ್‌ ಹಾಗೂ ಚಿತ್ರದ ನಟಿ ಋತುಪರ್ಣಾ ಸೇನ್‌ ಗುಪ್ತಾ ಅವರು ಆಡಿಟೋರಿಯಂಗೆ ಭೇಟಿ ನೀಡಿ ಮಾತನಾಡಿದರು.

ಈ ಚಿತ್ರ ಏಷ್ಯಾ ಸಿನಿಮಾಗಳ ವಿಭಾಗದಲ್ಲಿ ಸ್ಪರ್ಧಿಸಿದೆ.

ಏನಿದೆ ‘ಮಹಿಷಾಸುರ್‌ ಮರ್ದಿನಿ’ಯಲ್ಲಿ?

‘ಹೆಣ್ಣನ್ನು ದುರ್ಗೆ, ದೇವಿ ಎಂದೆಲ್ಲಾ ದೇವರ ಜಾಗದಲ್ಲಿಟ್ಟು ಆರಾಧಿಸುತ್ತೇವೆ. ವಾಸ್ತವದಲ್ಲಿ ಅಷ್ಟೇ ಶೋಷಣೆಗೆ ಒಳಗಾಗುತ್ತಿದ್ದಾಳೆ. ಈ ವಾಸ್ತವಗಳನ್ನು ಹೇಳುವ ಪ್ರಯತ್ನ ನಮ್ಮದು. ಸ್ವಲ್ಪ ರಂಗ ಪ್ರಯೋಗ ಮತ್ತು ಸಿನಿಮಾ ಎರಡನ್ನೂ ಬೆರೆಸಿ ಮಾಡಲಾದ ಚಿತ್ರವಿದು’ ಎಂದು ರಂಜನ್‌ ಹೇಳಿದರು.

ಒಂದು ರಾತ್ರಿಯಲ್ಲಿ ನಡೆಯುವ ಕಥೆ ಇದು. ಹತ್ತು ವರ್ಷದ ಅನಾಥ ಬಾಲಕಿಯೊಬ್ಬಳನ್ನು ಅತ್ಯಾಚಾರ ಎಸಗಿ ಕೊಂದು ಸುಟ್ಟು ಹಾಕಿದ ಘಟನೆಯೊಂದು ಮುಖ್ಯ ಪಾತ್ರಗಳ ಹಿನ್ನೆಲೆಯಲ್ಲಿ ಸಾಗುತ್ತದೆ. ಅದೇ ವೇಳೆ ಕಸದ ತೊಟ್ಟಿಯಲ್ಲಿ ಸಿಕ್ಕ ಹೆಣ್ಣು ಮಗುವೊಂದು ಆ ರಾತ್ರಿಯಲ್ಲಿ ಮನೆಯಲ್ಲಿರುವ ಯುವಕ ಯುವತಿಯರ ತಂಡಕ್ಕೆ ಸಿಗುತ್ತದೆ. ಅದನ್ನು ಅವರು ಪೋಷಿಸುತ್ತಾರೆ. ಎಲ್ಲವೂ ರೂಪಕದಂತೆ ಸಾಗುತ್ತದೆ. ಅತ್ಯಾಚಾರವೊಂದರ ಹಿಂದೆ ಬರುವ ಧರ್ಮ ರಾಜಕಾರಣ, ಬಾಲಕಿಯ ಸಾವಿಗೆ ಸಿಗುವ ಪರಿಹಾರದ ಹಣಕ್ಕಾಗಿ ನಡೆಯುವ ಹೊಡೆದಾಟಗಳು ಇವೆಲ್ಲವನ್ನೂ ಕಟ್ಟಿಕೊಡಲಾಗಿದೆ. ಮೈಸೂರಿನಲ್ಲಿ ನಡೆದ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣವೂ ಸುದ್ದಿಯ ರೂಪದಲ್ಲಿ ಹಿನ್ನೆಲೆ ಧ್ವನಿಯಲ್ಲಿ ಕೇಳಿಸುತ್ತದೆ.

ಚಿತ್ರದ ಮುಕ್ಕಾಲು ಭಾಗ ಒಂದೇ ಸನ್ನಿವೇಶದಲ್ಲಿ ನಡೆಯುವುದರಿಂದ ಒಂದಿಷ್ಟು ಏಕತಾನತೆ ಅನಿಸುತ್ತದೆ. ಉತ್ತರಾರ್ಧದಲ್ಲಿ ಸಿನಿಮಾ ವೇಗ ಪಡೆದುಕೊಂಡಿದೆ.

ಒಂದೇ ಸನ್ನಿವೇಶದಲ್ಲಿ ಪಾತ್ರಗಳು ಪರಸ್ಪರ ಕಥೆ ಹೇಳುತ್ತಾ ಸಾಗುತ್ತವೆ. ಅತ್ತ ಪೂರ್ಣ ಪ್ರಮಾಣದ ರಂಗಪ್ರಯೋಗವೂ ಅಲ್ಲದ, ಇತ್ತ ಸಿನಿಮಾವೂ ಅಲ್ಲದ ರೀತಿ ವಿಷಯ ವಸ್ತುವನ್ನು ಕಟ್ಟಿಕೊಡಲಾಗಿದೆ. ದುರ್ಗೆಯ ಮೂರ್ತಿಯನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಹೆಣ್ಣಿನ ಬದುಕಿನ ತುಮುಲಗಳು ತೆರೆದುಕೊಳ್ಳುತ್ತವೆ.

‘ಚಿತ್ರಕ್ಕೆ ಉತ್ತಮ ಸ್ವಾಗತ ಸಿಕ್ಕಿದೆ. ಖಂಡಿತವಾಗಿಯೂ ಇದು ತೀರ್ಪುಗಾರರಿಗೆ ಇಷ್ಟವಾಗುತ್ತದೆ ಎಂದು ಭಾವಿಸಿದ್ದೇನೆ. ಈ ಚಿತ್ರದಿಂದ ತಿಳಿದುಕೊಳ್ಳುವ ವಿಚಾರಗಳು ಸಾಕಷ್ಟಿವೆ’ ಎಂದುಋತುಪರ್ಣಾ ಸೇನ್‌ ಹೇಳಿದರು.

ಮಂಗಳವಾರ ಒರಾಯನ್‌ ಮಾಲ್‌ನಲ್ಲಿ ಚಿತ್ರಪ್ರೇಮಿಗಳ ಓಡಾಟ ಇತ್ತಾದರೂ ಪ್ರದರ್ಶನಾಂಗಣಗಳಲ್ಲಿ ಸಾಧಾರಣ ಪ್ರಮಾಣದ ಹಾಜರಾತಿ ಇತ್ತು.

‘ಚಿತ್ರೋತ್ಸವದ ಕೈಪಿಡಿಯಲ್ಲಿ ತಮ್ಮ ಹೆಸರು ಹಾಕಿಲ್ಲ’ ಎಂದು ನಾಮನಿರ್ದೇಶಿತ ಸದಸ್ಯರೊಬ್ಬರು ತಕರಾರು ಮಾಡಿದ ಪ್ರಸಂಗವೂ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT