‘ಭೈರವ ಗೀತ’ಕ್ಕೆ ಆರ್‌ಜಿವಿ ಟ್ಯೂನ್‌!

7

‘ಭೈರವ ಗೀತ’ಕ್ಕೆ ಆರ್‌ಜಿವಿ ಟ್ಯೂನ್‌!

Published:
Updated:
Deccan Herald

‘ಧನಂಜಯ್‌ ಇಡೀ ದಕ್ಷಿಣ ಭಾರತದ ಚಿತ್ರರಂಗಕ್ಕೆ ಸಲ್ಲುವಂಥ ನಟ’ 

ರಾಮ್‌ ಗೋಪಾಲ್‌ವರ್ಮ ಹೀಗೆಂದಾಗ ಪಕ್ಕ ಕೂತಿದ್ದ ನಟ ಧನಂಜಯ್‌ ಕಣ್ಣಲ್ಲಿ ನೂರು ನಕ್ಷತ್ರಗಳು ಒಮ್ಮೆಗೇ ಹೊತ್ತಿಕೊಂಡಂಥ ಬೆಳಕು. ‘ನಾನು ಯಾವುದೇ ಪಾತ್ರವನ್ನು ಗಮನಿಸುವಾಗ ಆ ಪಾತ್ರ ನಿರ್ವಹಿಸಿರುವ ನಟನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಬಹುಸೂಕ್ಷ್ಮವಾಗಿ ನೋಡುತ್ತೇನೆ. ಎಲ್ಲ ನಟರಿಗೂ ಅವರದ್ದೇ ಆದ ಇತಿಮಿತಿಗಳಿರುತ್ತವೆ. ಅವುಗಳ ನಡುವೆಯೂ ಧನಂಜಯ್‌ ಒಬ್ಬ ಸಮರ್ಥ ನಟ. ಈ ಚಿತ್ರದ ಮೂಲಕ ಕನ್ನಡದೊಟ್ಟಿಗೆ ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಪರಿಚಯ ಆಗುತ್ತಿದ್ದಾರೆ’ ಎಂದು ಇನ್ನಷ್ಟು ಪ್ರಶಂಸನೆಯ ಸುರಿಮಳೆಗೈದರು ವರ್ಮ.

ಅದು ಧನಂಜಯ್ ನಟನೆಯ, ಆರ್‌ಜಿವಿ ಶಿಷ್ಯ ಸಿದ್ಧಾರ್ಥ್‌ ನಿರ್ದೇಶನದ ‘ಭೈರವಗೀತ’ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ. ಕಾರ್ಯಕ್ರಮಕ್ಕೆ ಕೊಂಚ ತಡವಾಗಿ ಬಂದ ಆರ್‌ಜಿವಿ ಮನಸೋಇಚ್ಛೆ ಧನಂಜಯ್‌ ಅವರನ್ನು ಹೊಗಳಿದರು. ಹಾಗೆಯೇ ನಿರ್ದೇಶಕ ಸಿದ್ಧಾರ್ಥ ಅವರ ಕುರಿತೂ ಒಳ್ಳೆಯ ಮಾತುಗಳನ್ನು ಆಡಿದರು. ‘22 ವರ್ಷದ ಸಿದ್ಧಾರ್ಥ ಅವರ ಪ್ರತಿಭೆಯ ಶೋಧನೆ ಈ ಸಿನಿಮಾ ಮೂಲಕ ಆಗುತ್ತಿದೆ’ ಎಂದು ಹೇಳಿದರು.

90ರ ದಶಕದಲ್ಲಿ ರಾಯಲಸೀಮೆಯಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ‘ಭೈರವಗೀತ’ ರೂಪುಗೊಂಡಿದೆಯಂತೆ. ‘ಮೇಲುನೋಟಕ್ಕೆ ವಯಲೆಂಟ್ ಇರುವಂತೆ ಕಂಡರೂ ಅದರ ಹಿಂದೆ ಒಂದು ಸುಂದರ ಪ್ರೇಮಕಥೆ ಇದೆ. ತಳವರ್ಗದ ಜನರ ಬದುಕಿನ ಹೋರಾಟ, ಸಮಾಜದ ಎರಡು ವರ್ಗಗಳ ನಡುವಿನ ಸಂಘರ್ಷ ಈ ಚಿತ್ರದಲ್ಲಿದೆ. ನಮ್ಮ ನಡುವೆಯೇ ನಡೆದ ಕಥೆಯಾದ್ದರಿಂದ ಜನರಿಗೆ ಆಪ್ತವಾಗಿ ಮುಟ್ಟುತ್ತದೆ’ ಎಂಬ ವಿವರಣೆಯನ್ನೂ ಆರ್‌ಜಿವಿ ನೀಡಿದರು. 

‘ಟಗರು ಚಿತ್ರದ ಪಾತ್ರಕ್ಕಿಂತಲೂ ಕ್ರೂರರೂಪದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು ಧನಂಜಯ್‌.

ಲಿಪ್‌ಲಾಕ್‌ ದೃಶ್ಯದಲ್ಲಿ ನಟಿಸಿರುವ ಕುರಿತು ಮಾತು ಬಂದಾಗ ‘ನಿರ್ದೇಶಕರ ಆಣತಿಯಂತೆ ನಟಿಸಿದ್ದೇನೆ’ ಎಂದು ನಕ್ಕರು. ಮೊದಲ ಬಾರಿ ಬೇರೆ ಭಾಷೆಯ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಖುಷಿ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಚಿತ್ರದಲ್ಲಿನ ಏಳು ಹಾಡುಗಳಿಗೆ ಕೆ. ಕಲ್ಯಾಣ್ ಸಾಹಿತ್ಯ ಬರೆದಿದ್ದಾರೆ.

‘ಆರ್‌ಜಿವಿ ನನಗೆ ಮೆಂಟರ್‌ ಆಗಿದ್ದಾರೆ. ಅವರ ಪ್ರೋತ್ಸಾಹದಿಂದಲೇ ಅವರ ಮೂರು ಸಿನಿಮಾಗಳಿಗೆ ಸಂಕಲನ ಮಾಡಿದೆ. ಈಗ ನಿರ್ದೇಶಕನಾಗುತ್ತಿದ್ದೇನೆ. ಸಾಧ್ಯವಾದಷ್ಟೂ ಸಹಜವಾಗಿ ಕಾಣುವ ರೀತಿಯಲ್ಲಿಯೇ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದೇವೆ. ಲೊಕೆಶನ್‌ಗಳ ಆಯ್ಕೆಯಲ್ಲಿಯೂ ಈ ಎಚ್ಚರ ವಹಿಸಿದ್ದೇವೆ’ ಎಂದರು ನಿರ್ದೇಶಕ ಸಿದ್ಧಾರ್ಥ. 

ನಾಯಕಿ ಇರಾ ಬದಲಿಗೆ ಅವರ ತಂದೆ ಬಾಲ್‌ರಾಜ್‌ವಾಡಿ ಹಾಜರಿದ್ದರು.

ಭಾಸ್ಕರಶ್ರೀ ಮತ್ತು ಆರ್‌ಜಿವಿ ಜಂಟಿಯಾಗಿ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ನವೆಂಬರ್‌ 22ಕ್ಕೆ ಚಿತ್ರ ತೆರೆಕಾಣಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !