ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ವಿ‘ಭಿನ್ನ’

Last Updated 1 ಜುಲೈ 2018, 14:25 IST
ಅಕ್ಷರ ಗಾತ್ರ

‘ಭಿನ್ನ’ ಎಂದರೆ ಬೇರೆ ರೀತಿಯದ್ದು ಎಂಬ ಅರ್ಥವಿದೆ. ಆದರೆ ಇದೇ ಶಬ್ದಕ್ಕೆ ಒಡೆದಿರುವುದು, ಛಿದ್ರವಾಗಿರುವುದು ಎಂಬ ಅರ್ಥವೂ ಇದೆ. ಆದರ್ಶ್‌ ಈಶ್ವರಪ್ಪ ಅವರ ಹೊಸ ಸಿನಿಮಾ ಹೆಸರೂ ‘ಭಿನ್ನ’. ಈ ಶಬ್ದಕ್ಕಿರುವ ಎರಡೂ ಅರ್ಥಗಳನ್ನೂ ಸಿನಿಮಾಗೆ ಅನ್ವಯಿಸಬಹುದು ಎನ್ನುವ ಸುಳಿವು ಅವರ ಮಾತಿನಲ್ಲಿಯೇ ಸಿಗುತ್ತದೆ.

ಇತ್ತೀಚೆಗೆ ರಾಕ್‌ಲೈನ್‌ ಸ್ಟುಡಿಯೊದಲ್ಲಿ ‘ಭಿನ್ನ’ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆಯಿತು. ಮುಹೂರ್ತದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ಎತ್ತರಕ್ಕೆ ಬೆಳೆದಿರುವ ತೆಂಗಿನ ತೋಟದ ನೆರಳಿನಲ್ಲಿ ಕುರ್ಚಿಗಳನ್ನು ಹಾಕಿ ಸರಳ ವೇದಿಕೆ ಸಿದ್ಧಪಡಿಸಲಾಗಿತ್ತು. ಕುರ್ಚಿಗಳ ಇಕ್ಕೆಲಗಳಲ್ಲಿ ಹಾಕಿದ್ದ ಪೋಸ್ಟರ್‌ಗಳಲ್ಲಿ ಒಡೆದ ಕನ್ನಡಿಯ ಹಿನ್ನೆಲೆಯಲ್ಲಿ ಹೆಣ್ಣಿನ ಕಣ್ಣಿನ ಚಿತ್ರವಿತ್ತು.

‘ಮಹಾತ್ವಾಕಾಂಕ್ಷೆ ಇರುವ ನಟಿ ಕಾವೇರಿ ತಾನು ನಟಿಸಲಿರುವ ಸಿನಿಮಾ ಕಥೆಯನ್ನು ತೆಗೆದುಕೊಂಡು ಊರಾಚೆಯ ಮನೆಯೊಂದಕ್ಕೆ ಹೋಗಿ ಓದಲು ತೊಡಗುತ್ತಾಳೆ. ಆ ಏಕಾಂತದ ಮನೆಯಲ್ಲಿ ಕೂತು, ಕಥೆಯನ್ನು ಓದುತ್ತ ಓದುತ್ತ ಅವಳಿಗೆ ಇದು ತನ್ನದೇ ಕಥೆಯಲ್ಲವೇ ಎಂದು ಅನಿಸತೊಡಗುತ್ತದೆ. ಹಾಗಾದರೆ ಅವಳ ಬದುಕಿನ ಕಥೆ ಏನು? ಅದಕ್ಕೂ ಅವಳು ನಟಿಸುತ್ತಿರುವ ಸಿನಿಮಾದ ಕಥೆಗೂ ಇರುವ ಸಂಬಂಧವೇನು? ಈ ಗೊಂದಲವನ್ನು ಅವಳು ಹೇಗೆ ನಿವಾರಿಸಿಕೊಳ್ಳುತ್ತಾಳೆ ಎನ್ನುವ ಎಳೆಯನ್ನು ಇಟ್ಟುಕೊಂಡು ಸಿನಿಮಾ ಕಟ್ಟಿದ್ದೇವೆ’ ಎಂದು ಸಿನಿಮಾ ಹಿನ್ನೆಲೆಯನ್ನು ವಿವರಿಸಿದರು ನಿರ್ದೇಶಕ ಆದರ್ಶ್‌ ಈಶ್ವರಪ್ಪ.

ಕಾವೇರಿ ಓದುತ್ತಿರುವ ಕಥೆಯೊಳಗೆ ನಡೆಯುವ ಘಟನೆಗಳು ಮತ್ತು ಅವಳು ಓದಲು ಕುಳಿತುಕೊಂಡಿರುವ ಮನೆಯೊಳಗೆ ನಡೆಯುವ ಘಟನೆಗಳು ಹೀಗೆ ಎರಡು ಹಳಿಗಳ ಮೇಲೆ ಸಿನಿಮಾ ಪಯಣಿಸುತ್ತದಂತೆ. ಇಂಥದ್ದೊಂದು ನಿರೂಪಣೆಯ ವಿಧಾನ ಆಯ್ದುಕೊಳ್ಳುವುದಕ್ಕೆ ಅವರಿಗೆ ಸ್ಫೂರ್ತಿಯಾಗಿದ್ದು ‘ಅ ಫಿಲಂ ಬಾಯ್ ವೇರಾ ವಾಗನ್‌’ ಎಂಬ ಕಿರುಚಿತ್ರ. ‘ಇದೊಂದು ಸಸ್ಪೆನ್ಸ್‌, ಥ್ರಿಲ್ಲರ್ ಸಿನಿಮಾ. ಸಂಪೂರ್ಣವಾದ ಕಾಲ್ಪನಿಕ ಕಥೆ’ ಎಂದು ಅವರು ಸ್ಪಷ್ಟಪಡಿಸಿದರು. ಹಾಗೆಯೇ ‘ಈ ಚಿತ್ರ ಪುಟ್ಟಣ್ಣ ಕಣಗಾಲ್ ಅವರಿಗೆ ನಾನು ಸಲ್ಲಿಸುವ ದೊಡ್ಡ ಟ್ರಿಬ್ಯೂಟ್ ಆಗುತ್ತದೆ’ ಎಂಬ ನಂಬಿಕೆಯೂ ಅವರದು.

ಕಾವೇರಿಯ ಪಾತ್ರದಲ್ಲಿ ಪಾಯಲ್ ರಾಧಾಕೃಷ್ಣ ನಟಿಸಿದ್ದಾರೆ. ಇನ್ನೊಬ್ಬ ನಾಯಕಿ ವಿಮಲಾ ಪಾತ್ರದಲ್ಲಿ ಸೌಮ್ಯಾ ಜಗನ್‌ಮೂರ್ತಿ ನಟಿಸಿದ್ದಾರೆ. ‘ನಾನು ಈ ಚಿತ್ರದಲ್ಲಿ ವಿಮಲಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಬ್ಯುಸಿನೆಸ್ ಕನ್ಸಲ್ಟೆಂಟ್ ಆಗಿ ಹಲವು ದೇಶಗಳಿಗೆ ಹೋಗಿಬರುತ್ತಿರುವ ಹುಡುಗಿಯ ಪಾತ್ರ’ ಎಂದರು ಸೌಮ್ಯಾ.

ಸಿದ್ಧಾರ್ಥ್ ಮಾಧ್ಯಮಿಕ ಅವರೂ ಈ ಚಿತ್ರದ ಮಹತ್ವದ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಶಶಾಂಕ್ ಪುರುಷೋತ್ತಮ್ ಕೂಡ ಇನ್ನೊಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಲಹರಿ ವೇಲು ಕೂಡ ಮುಹೂರ್ತ ಕಾರ್ಯಕ್ರಮದಲ್ಲಿ ಹಾಜರಿದ್ದರು. ನೀವು ಈ ಚಿತ್ರದಲ್ಲಿ ಪಾತ್ರ ಮಾಡ್ತೀರಾ? ಎಂದು ಕೇಳಿದ ಪತ್ರಕರ್ತರ ಪ್ರಶ್ನೆಗೆ ನಕ್ಕು ‘ನಿರ್ದೇಶಕರು ಕೊಟ್ಟರೆ ಮಾಡ್ತೀನಿ’ ಎಂದರು.

ಪರ್ಪಲ್ ರಾಕ್‌ ಎಂಟರ್‌ಟೇನರ್ಸ್‌ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ನಿರ್ಮಾಣ ಸಂಸ್ಥೆಯ ಪರವಾಗಿ ಮಾತನಾಡಿದ ಶ್ರೀನಿವಾಸ್, ‘ಇದು ಯುವ ಮನಸ್ಸುಗಳ ತಂಡ. ಈ ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ಬಿಂಬಿಸಬೇಕು ಎನ್ನುವುದು ನಮ್ಮ ಆಸೆ. ಖಂಡಿತವಾಗಿಯೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತದೆ ಎಂಬ ವಿಶ್ವಾಸ ಇದೆ’ ಎಂದು ಹೇಳಿದರು.

ಇಪ್ಪತ್ಮೂರು ದಿನಗಳಲ್ಲಿ ಒಂದೇ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ಮಾಡುವ ಯೋಚನೆ ಚಿತ್ರತಂಡಕ್ಕಿದೆ. ಇಪ್ಪತ್ತು ದಿನಗಳ ಕಾಲ ಬೆಂಗಳೂರಿನಲ್ಲಿಯೂ, ಮೂರು ದಿನ ಚಿಕ್ಕಮಗಳೂರಿನ ಸುತ್ತಮುತ್ತಲಿನ ಜಾಗಗಳಲ್ಲಿಯೂ ಚಿತ್ರೀಕರಣ ಮಾಡುವ ಯೋಜನೆಯನ್ನು ತಂಡ ಹಾಕಿಕೊಂಡಿದೆ.


ಆದರ್ಶ್‌ ಈಶ್ವರಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT