ಶುಕ್ರವಾರ, ಸೆಪ್ಟೆಂಬರ್ 25, 2020
28 °C

ಬಾಲಿವುಡ್‌ನಲ್ಲಿ ಡ್ರಗ್ಸ್‌ ಪಾರ್ಟಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್‌ ಜೋಹರ್‌ ಇತ್ತೀಚೆಗೆ ಆಯೋಜಿಸಿದ್ದ ಪಾರ್ಟಿ ತುಂಬ ವಿವಾದಕ್ಕೀಡಾಗಿದೆ. 

ಪಾರ್ಟಿಯ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಆಗಿದೆ. ವಿಡಿಯೊದಲ್ಲಿ ದೀಪಿಕಾ ಪಡುಕೋಣೆ, ರಣಬೀರ್‌ ಕಪೂರ್‌, ಮಲೈಕಾ ಅರೋರಾ, ಅರ್ಜುನ್‌ ಕಪೂರ್‌, ಶಾಹಿದ್ ಕಪೂರ್‌, ವರುಣ್‌ ಧವನ್‌, ವಿಕ್ಕಿ ಕೌಶಾಲ್‌ ಇದ್ದಾರೆ. ವಿಡಿಯೊದಲ್ಲಿ ಇವರೆಲ್ಲ ಮತ್ತಿನಲ್ಲಿ ತೇಲುತ್ತಿರುವಂತೆ ಬಾಸವಾಗುತ್ತದೆ. ಇದನ್ನು ವೀಕ್ಷಿಸಿದ ನೆಟ್ಟಿಗರು ತೀವ್ರವಾಗಿ ಟೀಕಿಸಿದ್ದಾರೆ.

‘ಸ್ಟಾರ್‌ಗಳು ಡ್ರಗ್ಸ್‌ ತೆಗೆದುಕೊಂಡಿರುವ ಹಾಗಿದೆ’ ಎಂದು ನಾಟ್‌ಕಂಗನಾ ಎಂಬ ಹೆಸರಿನವರು ಟ್ವಿಟರ್‌ನಲ್ಲಿ ಬಹಿರಂಗ ಪತ್ರವನ್ನೇ ಬರೆದಿದ್ದಾರೆ. ನೇರವಾಗಿ ಕರಣ್‌ ಜೋಹರ್‌ ಅವರನ್ನೇ ಆರೋಪಿಸಿದ್ದಾರೆ.

‘ವಿವಾದಾತ್ಮಕ ಪ್ರಶ್ನೆ ಕೇಳಿ ಹಾರ್ದಿಕ್‌ ಪಾಂಡ್ಯ ವೃತ್ತಿಜೀವನವೇ ಅಂತ್ಯವಾಗುವ ಸ್ಥಿತಿಗೆ ದೂಡಿದ್ದೀರಿ. ಈಗ ನೋಡಿದರೆ ಯುವ ನಟರನ್ನು ಕರೆದು ಡ್ರಗ್ಸ್‌ ಪಾರ್ಟಿ ಮಾಡಿದ್ದೀರಿ. ನಟ, ನಟಿಯರು ಸೆಲೆಬ್ರಿಟಿಗಳು ಇದ್ದಾರೆ ಅಂದ ಮಾತ್ರಕ್ಕೆ ಜನರು ಪ್ರಶ್ನೆ ಮಾಡದೇ ಬಿಡುವುದಿಲ್ಲ. ಈಗ ಕಾಲ ಬದಲಾಗಿದೆ’ ಎಂದು ನೇರವಾಗಿ ಕೆಣಕಿದ್ದಾರೆ.

ರಾಜಕಾರಣಿಗಳು ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ‘ಇದನ್ನು ಉಡ್ತಾ ಬಾಲಿವುಡ್‌ ಎಂದು ಕರೆಯಬೇಕು. ಯಾವುದೇ ಅಂಜಿಕೆ ಇಲ್ಲದೇ ಇಂತಹ ಪಾರ್ಟಿ ಮಾಡುತ್ತಿದ್ದಾರೆ. ಡ್ರಗ್ಸ್‌ ಸೇವಿಸುವುದನ್ನು ನಾನು ಕೂಡ ವಿರೋಧಿಸುತ್ತೇನೆ. ನಿಮಗೆ ನಾಚಿಕೆಯಾಗಬೇಕು’ ಎಂದು  ಮಂಜಿಂದರ್ ಸಿರ್ಸಾ ಟ್ವೀಟ್‌ ಮಾಡಿದ್ದಾರೆ. ಪಾರ್ಟಿಯ ವಿಡಿಯೊವನ್ನು ಅವರು ಶೇರ್ ಮಾಡಿ, ಅದರಲ್ಲಿರುವ ಎಲ್ಲಾ ನಟ, ನಟಿಯರ ಹೆಸರನ್ನೂ ಸೇರಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿವಾದಕ್ಕೀಡಾದರೂ, ನಟ, ನಟಿಯರಾಗಲಿ, ಕರಣ್‌ ಜೋಹರ್ ಆಗಲಿ ಪ್ರತಿಕ್ರಿಯಿಸಿಲ್ಲ. ಕಾಂಗ್ರೆಸ್‌ ಪಕ್ಷದ ರಾಜಕಾರಣಿ ಮಿಲಿಂದ್ ದಿಯೋರಾ ಮಾತ್ರ ನೆಟ್ಟಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ನನ್ನ ಪತ್ನಿ ಕೂಡ ಈ ಪಾರ್ಟಿಯಲ್ಲಿದ್ದರು. ಆದರೆ ಅಲ್ಲಿ ಅಂತದ್ದೇನೂ ಆಗಿಲ್ಲ. ಡ್ರಗ್ಸ್‌ ಕೂಡ ತೆಗೆದುಕೊಂಡಿಲ್ಲ. ಸುಮ್ಮನೆ ಕೆಟ್ಟದ್ದನ್ನು ಪ್ರಸಾರ ಮಾಡಬೇಡಿ’ ಎಂದು ಅವರು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು