ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ರಹ್ಮಚಾರಿ’ ಆಗ್ತಾನಾ ಸಂಸಾರಿ: ನೀನಾಸಂ ಸತೀಶ್ ಸಂದರ್ಶನ

Last Updated 29 ನವೆಂಬರ್ 2019, 4:53 IST
ಅಕ್ಷರ ಗಾತ್ರ

ಗ್ರಾಮೀಣ ಸೊಗಡಿನ ಮ್ಯಾನರಿಸಂ ಮತ್ತು ಸಹಜ ನಟನೆಯಿಂದ ಚಿತ್ರರಸಿಕರ ಮನಗೆದ್ದ ನಟ ನೀನಾಸಂ ಸತೀಶ್‌. ಈ ವರ್ಷ ‘ಅಯೋಗ್ಯ’ ಸಿನಿಮಾದಲ್ಲಿ ಪ್ರೇಕ್ಷಕರನ್ನು ನಕ್ಕು ನಗಿಸಿ, ‘ಚಂಬಲ್‌’ ಸಿನಿಮಾದಲ್ಲಿ ಐಎಎಸ್‌ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದರು. ಈಗ ‘100% ವರ್ಜಿನ್‌’ ಅಡಿ ಬರಹವಿರುವ‘ಬ್ರಹ್ಮಚಾರಿ’ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಭರಪೂರಮನರಂಜನೆ ನೀಡಲು ಅವರು ಕಾತರರಾಗಿದ್ದಾರೆ. ಈ ಚಿತ್ರದ ಕುರಿತು ಹಲವು ಮಾಹಿತಿಗಳನ್ನು ನೀನಾಸಂ ಸತೀಶ್‌ ‘ಸಿನಿಮಾ ಪುರವಣಿ’ಯ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ದೇಶದಲ್ಲಿ ನಡೆದಿರುವ ವಿಚ್ಛೇದನ ಪ್ರಕರಣಗಳಲ್ಲಿಶೇ 80ರಷ್ಟು ಪ್ರಕರಣಗಳಿಗೆ ಲೈಂಗಿಕ ಸಮಸ್ಯೆಯೇ ಕಾರಣ ಎನ್ನುವ ಸಮೀಕ್ಷಾ ವರದಿಯೊಂದನ್ನು ಉಲ್ಲೇಖಿಸುತ್ತಾ, ಅದನ್ನು ತಮ್ಮ ಸಿನಿಮಾದ ಕಥೆಗೆ ಸಮರ್ಥನೆಯಾಗಿಒತ್ತುಸಾಕ್ಷಿಯಂತೆ ಇಟ್ಟುಕೊಂಡು ಮಾತಿಗಿಳಿದರು ಸತೀಶ್‌. ಲೈಂಗಿಕ ಸಮಸ್ಯೆಗೂ ‘ಬ್ರಹ್ಮಚಾರಿ’ಗೂ ಏನು ಸಂಬಂಧ ಎನ್ನುತ್ತೀರಾ? ಸಂಬಂಧ ಖಂಡಿತಾ ಇದೆ. ಲೈಂಗಿಕ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಅಂಜುವ, ಸಮಸ್ಯೆಗಳನ್ನು ಒಳಗೇ ಇಟ್ಟುಕೊಂಡು ನಲುಗುವವರ ಪರಿಸ್ಥಿತಿಯನ್ನು, ಆ ಸಮಸ್ಯೆಯಿಂದ ಹೇಗೆ ಹೊರಬರಬೇಕು ಎನ್ನುವುದನ್ನು ಹಾಸ್ಯಮಯವಾಗಿ ತೆರೆಯ ಮೇಲೆ ತೋರಿಸಿದ್ದೇವೆ ಎಂದರು.

‘ಬ್ರಹ್ಮಚಾರಿ’ ಚಿತ್ರದಲ್ಲಿ ನೀನಾಸಂ ಸತೀಶ್
‘ಬ್ರಹ್ಮಚಾರಿ’ ಚಿತ್ರದಲ್ಲಿ ನೀನಾಸಂ ಸತೀಶ್

ಉದಯ್‌ ಮೆಹ್ತಾ ತುಂಬಾ ಪ್ಯಾಷನೇಟ್‌ ನಿರ್ಮಾಪಕ. ಅವರ ಜತೆಗೆ ಐದು ವರ್ಷಗಳ ಹಿಂದೆ ‘ಲವ್‌ ಇನ್‌ ಮಂಡ್ಯ’ ಸಿನಿಮಾ ಮಾಡಿದ್ದೆ. ಆ ಸಿನಿಮಾ ಕೂಡ ನವೆಂಬರ್‌ 29ಕ್ಕೆ ಬಿಡುಗಡೆಯಾಗಿತ್ತು. ‘ಬ್ರಹ್ಮಚಾರಿ’ ಅವರೊಂದಿಗೆ ಮಾಡಿರುವ ಎರಡನೇ‌‌ಸಿನಿಮಾ. ಕಾಕತಾಳೀಯ ಎನ್ನುವಂತೆ ಬ್ರಹ್ಮಚಾರಿ ಸಿನಿಮಾ ಕೂಡ ಅದೇ ದಿನಾಂಕದಲ್ಲಿ ಬಿಡುಗಡೆಯಾಗುತ್ತಿದೆ.ನಿರ್ದೇಶಕ ಚಂದ್ರಮೋಹನ್‌ ವೃತ್ತಿಪರವಾಗಿ ಅವರ ಜವಾಬ್ದಾರಿ ನಿರ್ವಹಿಸಿದ್ದಾರೆ.ಈ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬರಲು ನಿರ್ದೇಶಕರು ಮತ್ತು ನಿರ್ಮಾಪಕರೇ ಪ್ರಮುಖ ಕಾರಣ ಎನ್ನುವ ಮಾತು ಸೇರಿಸಿದರು ಸತೀಶ್‌.

‘ಬ್ರಹ್ಮಚಾರಿ’ ಮೂಲಕ ಪ್ರೇಕ್ಷಕರಿಗೆ ಏನು ಹೇಳಲು ಹೊರಟಿದ್ದೀರಿ?

ಇದರಲ್ಲಿಅದ್ಭುತವಾದ ಕಥೆ ಇದೆ. ಲೈಂಗಿಕ ಸಮಸ್ಯೆಯ ಒಂದು ಎಳೆ ಇಟ್ಟುಕೊಂಡುಬಹಳಷ್ಟು ಜನರ ಬದುಕಿನ ಕಥೆಯನ್ನು ಈ ಸಿನಿಮಾ ಮೂಲಕ ಹೇಳಿದ್ದೇವೆ.ಇದರಲ್ಲಿ ಸಂಪೂರ್ಣ ಮನರಂಜನೆಯ ಸಿನಿಮಾ. ಇದರಲ್ಲಿರುವ ಹಾಸ್ಯ, ಪ್ರೇಕ್ಷಕನನ್ನು ಎಷ್ಟು ನಗಿಸುವುದೋ ಅಷ್ಟೇ ಕಣ್ಣೀರು ಹಾಕಿಸುವ ಭಾವುಕತೆಯೂ ಇದೆ. ಎರಡು ಗಂಟೆ ಇಪ್ಪತ್ತು ನಿಮಿಷ ಪ್ರೇಕ್ಷಕ ಮೈಮರೆತು ಕೂರುವಂತೆ ಮಾಡಲಿದೆ. ಚಿತ್ರಮಂದಿರದಿಂದ ಹೊರಬರುವಾಗಜನರು ಖಂಡಿತಾ ರಿಫ್ರೆಶ್‌ ಆಗಿರುತ್ತಾರೆ.

ಈ ಸಿನಿಮಾದಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳಿ...

ತುಂಬಾ ಮುಗ್ಧ ಯುವಕ ಮತ್ತು ರಾಮನ ಭಕ್ತನ ಪಾತ್ರ ನನ್ನದು. ರಾಮನನ್ನು ಅನುಸರಿಸಿ ಬದುಕವಂತವನು.ಯಾವ ಹುಡುಗಿಯನ್ನು ಟಚ್‌ ಕೂಡ ಮಾಡದ, ಕಣ್ಣೆತ್ತಿಯೂ ನೋಡದ ಯುವಕ, ಮದುವೆಯಾಗುವ ಹುಡುಗಿಯ ಜತೆಗೆ ಮಾತ್ರ ಲವ್‌ ಮತ್ತು ಸಂಸಾರ. ಇಂತಹ ಹುಡುಗನ ಬಾಳಲ್ಲಿ ಹುಡುಗಿ ಹೇಗೆ ಪ್ರವೇಶಿಸುತ್ತಾಳೆ, ಏನೆಲ್ಲ ಸಮಸ್ಯೆಗಳು ಆಗಲಿವೆ, ಅದರಿಂದ ಹೇಗೆ ಹೊರ ಬರುತ್ತಾನೆ ಎನ್ನುವುದನ್ನು ನನ್ನ ಪಾತ್ರವು ತೋರಿಸಲಿದೆ.

‘ಬ್ರಹ್ಮಚಾರಿ’ ಪಾತ್ರ ತಮಗೆ ಸವಾಲಾಗಿತ್ತಾ?

ನಾನು ಇದುವರೆಗೆ ಮಾಡಿರುವ‍ಪಾತ್ರಗಳಿಗೆ ಹೋಲಿಸಿದರೆ ಇದು ನನಗೆ ದೊಡ್ಡ ಸವಾಲಿನ ಪಾತ್ರವೇ ಆಗಿತ್ತು. ಕಮರ್ಷಿಯಲ್‌ ಆದ ‘ಅಯೋಗ್ಯ’, ‘ಚಂಬಲ್‌’ನಂತಹ ಸಿನಿಮಾಗಳಲ್ಲಿ ನಾಯಕ ಪ್ರಧಾನ ಪಾತ್ರಗಳನ್ನು ಮಾಡಿದ್ದೆ. ಇದ್ದಕ್ಕಿದ್ದಂತೆ ತನ್ನ ಹೀರೋಯಿಸಂ ಬಿಟ್ಟು ‘ಬ್ರಹ್ಮಚಾರಿ’ಯಂತಹ ಪಾತ್ರ ಮಾಡಲು ಸ್ವಲ್ಪ ಹಿಂಜರಿಕೆ ಉಂಟಾಯಿತು. ಪಾತ್ರ ಒಪ್ಪಿಕೊಳ್ಳುವ ಮೊದಲು ನೂರು ಬಾರಿ ಯೋಚಿಸಿದ್ದೇನೆ. ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿದರೆ ಮಾತ್ರ ಒಬ್ಬ ನಟ ಎನಿಸಿಕೊಳ್ಳುವುದು. ಹಾಗಾಗಿ, ನಾನೇಕೆ ಈ ಪಾತ್ರ ಮಾಡಬಾರದೆಂಬ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಂಡು ಈ ಪಾತ್ರ ಒಪ್ಪಿಕೊಂಡೆ. ನಿಜ ಹೇಳಬೇಕೆಂದರೆ ಈ ಸಿನಿಮಾ ಕಥೆಗಾಗಿ ನಾನು ನಟಿಸಲು ಒಪ್ಪಿಕೊಂಡೆ.ಬ್ರಹ್ಮಚಾರಿಯೊಬ್ಬ ಹೇಗೆ ಸಂಸಾರಿಯಾಗುತ್ತಾನೆ ಎನ್ನುವುದು ಚಿತ್ರದ ಕಥಾಹಂದರ. ಕಥೆ ಮತ್ತು ನಿರ್ದೇಶಕರೇ ಈ ಚಿತ್ರದ ನಿಜವಾದ ನಾಯಕ.

ಅದಿತಿ ಮತ್ತು ನಿಮ್ಮ ಕಾಂಬಿನೇಷನ್‌ ಬಗ್ಗೆ ಹೇಳಿ...

ನಾನು ಎಷ್ಟು ಚೆನ್ನಾಗಿ ನಟಿಸಿದ್ದೀನೋ ಅದಕ್ಕೆ ಸರಿಸಮಾನಾಗಿಅದಿತಿ ಪ್ರಭುದೇವನಾಯಕಿಯಾಗಿ ಅಭಿನಯಿಸಿದ್ದಾರೆ. ಅದಿತಿ ಈ ಸಿನಿಮಾ ಮೂಲಕ ಖಂಡಿತಾ ದೊಡ್ಡ ನಟಿಯಾಗಿ ಹೊರಹೊಮ್ಮಲಿದ್ದಾರೆ. ಈ ಚಿತ್ರದಲ್ಲಿ ನಟಿಸಿರುವ ಎಲ್ಲರೂ ಅವರವರ ಪಾತ್ರಗಳಿಗೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ.ಈ ಸಿನಿಮಾ ಹಾಸ್ಯ ಪ್ರಧಾನವಾಗಿರಲಿದೆ. ಉಳಿದಂತೆ ಭಾವುಕ ಸನ್ನಿವೇಶಗಳು ಸಾಕಷ್ಟು ಇವೆ. ಹೊಟ್ಟೆ ಹುಣ್ಣಾಗುವಷ್ಟು ನಗಿಸುವ ಹಾಸ್ಯ ಖುಷಿಯಲ್ಲೂ ಕಣ್ಣೀರು ಬರಿಸುವಂತೆ, ಭಾವುಕ ಸನ್ನಿವೇಶಗಳಲ್ಲೂ ಕಣ್ಣೀರು ಬರಿಸುತ್ತದೆ.ಜನರು ಈ ಸಿನಿಮಾವನ್ನು ತುಂಬಾ ಇಷ್ಟಪಡುತ್ತಾರೆ, ಯಶಸ್ಸಿನತ್ತ ಕೊಂಡೊಯ್ಯುತ್ತಾರೆ ಎನ್ನುವ ನಂಬಿಕೆಯಲ್ಲಿದ್ದೇನೆ.

ಭವಿಷ್ಯದಲ್ಲಿ ಎಂಥಾ ಪಾತ್ರಗಳನ್ನು ಬಯಸುತ್ತಿದ್ದೀರಿ...

ನಾನು ಯಾವಾಗಲೂ ಕಥೆ ನೋಡಿಯೆ ಸಿನಿಮಾ ಮಾಡುವುದು. ಮೊದಲು ಕಥೆಗೆ ಆದ್ಯತೆ ನೀಡುತ್ತೇನೆ. ನಂತರ ಪಾತ್ರದ ಬಗ್ಗೆ ಯೋಚಿಸುತ್ತೇನೆ. ಕಥೆ ತುಂಬಾ ಚೆನ್ನಾಗಿದ್ದರೆ ಅದರಲ್ಲಿ ನನ್ನ ಪಾತ್ರ ಎಂಥದ್ದೇ ಆಗಿರಲಿ, ಅದು ಚಪ್ಪಲಿ ಹೊಲೆಯುವ ಪಾತ್ರವಾಗಿರಲಿ, ರಾಜನ ಪಾತ್ರವಾಗಿರಲಿ, ಬಾಂಡ್‌ ಪಾತ್ರವಾಗಿರಲಿ ನಟಿಸಲು ನಾನು ಸಿದ್ಧನಿದ್ದೇನೆ.

ಸಿನಿಮಾನಿರ್ದೇಶನದ ಯೋಜನೆಯಾವ ಹಂತದಲ್ಲಿದೆ

ನಾನು ನಿರ್ದೇಶನ ಮಾಡುವುದು2020ರ ಮಧ್ಯಂತರದಲ್ಲಿ ಪಕ್ಕಾ. ನಮ್ಮದೇ ಚಿತ್ರ ನಿರ್ಮಾಣ ಸಂಸ್ಥೆಯಡಿ ‘ಮೈ ನೇಮ್‌ ಇಸ್‌ ಸಿದ್ಧೇಗೌಡ’ ಚಿತ್ರಕ್ಕೆ ಮುಂದಿನ ವರ್ಷ ಆ್ಯಕ್ಷನ್‌ ಕಟ್‌ ಹೇಳಲಿದ್ದೇನೆ.

ನಿಮ್ಮ ಅಭಿನಯದ ಸಿನಿಮಾಗಳು ಯಾವ ಹಂತದಲ್ಲಿವೆ?

‘ಗೋಧ್ರಾ’ ಬಹುತೇಕ ಪೂರ್ಣಗೊಂಡಿದ್ದು, ಇನ್ನು ಒಂದು ಹಾಡು ಮಾತ್ರ ಬಾಕಿ ಇದೆ. ಈ ಸಿನಿಮಾ ಕೂಡ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಸದ್ಯ, ‘ಕಹಿ’ ಮತ್ತು ‘ಅಳಿದು ಉಳಿದವರು’ ಚಿತ್ರಗಳನ್ನು ನಿರ್ದೇಶಿಸಿರುವ ಅರವಿಂದ್‌ ಶಾಸ್ತ್ರಿ ನಿರ್ದೇಶನದ ‘ವೈತರಣಿ’ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಈಗಾಗಲೇ ಲಂಡನ್‌ನಲ್ಲಿ ಚಿತ್ರೀಕರಣ ಮುಗಿಸಿ ಬಂದಿದ್ದೇನೆ. ಎರಡನೇ ಹಂತದ ಚಿತ್ರೀಕರಣ ಜನವರಿಯಿಂದ ಶುರುವಾಗಲಿದೆ.ಇದೊಂದು ಮರ್ಡರ್‌ ಮಿಸ್ಟ್ರಿ ಕಥೆಯ ಸಿನಿಮಾ. ಈ ಚಿತ್ರಕ್ಕೆ ಶರ್ಮಿಳಾ ಮಾಂಡ್ರೆ ಬಂಡವಾಳ ಹೂಡುವ ಜತೆಗೆನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು ‘ಪರಿಮಳ ಲಾಡ್ಜ್‌’ ಚಿತ್ರೀಕರಣ ಫೆಬ್ರುವರಿಯಿಂದಆರಂಭವಾಗಲಿದೆ. ಹಾಗೆಯೇ ತಮಿಳಿನಲ್ಲೂ ಒಂದು ಸಿನಿಮಾ ಮಾಡುತ್ತಿದ್ದು, ಅನಿಶ್‌ ನಿರ್ದೇಶದಲ್ಲಿ ತಮಿಳು ಸಿನಿಮಾ ಮುಂದಿನ ವರ್ಷ ಆರಂಭವಾಗಲಿದೆ.

ಪ್ಯಾನ್‌ ಇಂಡಿಯಾ ಸಿನಿಮಾ ಮಾಡುವ ಯೋಜನೆ ಇದೆಯಾ?

ಹೌದು ಅಂಥ ಗುರಿ, ಕನಸು ಮೊದಲಿನಿಂದಲೂ ಇದೇ. ಅಂಥ ಸಬ್ಜೆಕ್ಟ್‌ ಮತ್ತು ಕಥೆಗೆ ಕಾಯುತ್ತಿದ್ದೇನೆ. ಸದ್ಯ ‘ಬ್ರಹ್ಮಚಾರಿ’ಯೇ ತಲೆಯಲ್ಲಿತುಂಬಿಕೊಂಡಿದ್ದು, ಜನರ ಬಳಿಗೆ ಈ ಸಿನಿಮಾ ಕೊಂಡೊಯ್ಯುವ ಬಗ್ಗೆ ಯೋಚಿಸುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT