ಸೋಮವಾರ, ಮಾರ್ಚ್ 8, 2021
22 °C

‘ಬುದ್ಧಿವಂತ’ನ ಮನಸಿನಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ ಉಪೇಂದ್ರ

‘ಇದೊಂದು ಮೈಂಡ್‌ ಗೇಮ್‌ ಕಥಾನಕ. ಹೆಜ್ಜೆ ಹೆಜ್ಜೆಗೂ ತಿರುವುಗಳು, ಕುತೂಹಲದ ಮೂಟೆ. ಕಥೆ ಸಾಗುವ ಜಾಡು ಪ್ರೇಕ್ಷಕನಿಗೆ ಸುಲಭವಾಗಿ ಊಹಿಸಲು ಅಸಾಧ್ಯ’ ಎನ್ನುತ್ತಾರೆ ಉಪೇಂದ್ರ ನಟನೆಯ ‌‘ಬುದ್ಧಿವಂತ 2’ ಚಿತ್ರದ ನಿರ್ದೇಶಕ ಭದ್ರಾವತಿಯ ಜಯರಾಮ್‌.

‘ಇದು ನಾನು ಸ್ವತಂತ್ರವಾಗಿ ನಿರ್ದೇಶಿಸುತ್ತಿರುವ ಮೊದಲ ಚಿತ್ರ. ‘ಅರಸು’, ‘ವಂಶಿ’, ‘ಮಳೆ ಬರಲಿ ಮಂಜು ಇರಲಿ’, ಮೈಲಾರಿ, ‘ಕೋ...ಕೊ..’, ‘ಬ್ರಹ್ಮ’ ಚಿತ್ರಗಳಿಗೆ ಮತ್ತು ‘ಟೋಪಿವಾಲಾ’ ಚಿತ್ರಕ್ಕೆ ಉಪೇಂದ್ರ ಅವರ ಜತೆಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಉಪೇಂದ್ರ ಮತ್ತು ಟಿ.ಆರ್‌. ಚಂದ್ರಶೇಖರ್‌ ಅವರು ನನ್ನ ಪಾಲಿನ ಗಾಡ್‌ಫಾದರ್‌ಗಳು. ನನ್ನ ಬುದ್ಧಿಮಟ್ಟ ಪರೀಕ್ಷಿಸಿಯೇ ‘ಬುದ್ಧಿವಂತ 2’ ಚಿತ್ರ ನಿರ್ದೇಶಿಸುವ ಹೊಣೆ ನೀಡಿದ್ದಾರೆ’ ಎಂದು ಅವರು ‘ಪ್ರಜಾಪ್ಲಸ್‌’ ಜತೆಗೆ ಮಾತಿಗಿಳಿದರು.  

2008ರಲ್ಲಿ ತೆರೆಕಂಡಿದ್ದ ಉಪೇಂದ್ರ ನಟನೆಯ ‘ಬುದ್ಧಿವಂತ’ ಚಿತ್ರವನ್ನು ರಾಮನಾಥ್ ಋಗ್ವೇದಿ ನಿರ್ದೇಶಿಸಿದ್ದರು. ‘ಬುದ್ಧಿವಂತ’ ಚಿತ್ರದ ಮುಂದುವರಿದ ಭಾಗ ಇದಲ್ಲ. ಆದರೆ, ಟೈಟಲ್‌ ಮಾತ್ರ ಮುಂದುವರಿದ ಭಾಗದಂತೆ ಇದೆ. ಮೊದಲ ಚಾಪ್ಟರ್‌ ಕಥೆಯೇ ಬೇರೆ ಎರಡನೇ ಚಾಪ್ಟರ್‌ ಕಥೆಯೇ ಬೇರೆ. ಉಪ್ಪಿ ಅವರನ್ನು ಈ ಚಿತ್ರದಲ್ಲಿ ನಾನಾ ರೀತಿಯಲ್ಲಿ ಕಾಣಬಹುದು. ಸಂಭಾಷಣೆಯನ್ನು ಉಪೇಂದ್ರ ಮತ್ತು ಪ್ರಶಾಂತ್‌ ನಿಭಾಯಿಸಿದ್ದಾರೆ ಎಂದ ಮೇಲೆ ಉಪ್ಪಿ ಸ್ಟೈಲ್‌ ಮತ್ತು ಮ್ಯಾನರಿಸಂ ಈ ಚಿತ್ರವನ್ನು ಆವರಿಸಿರುವುದು ಸ್ಪಷ್ಟ. ಹಾಗೆಯೇ ಉಪೇಂದ್ರ– ಟಿ.ಆರ್‌.ಚಂದ್ರಶೇಖರ್‌ ಕಾಂಬಿನೇಷನ್‌ನಲ್ಲಿಯೇ ‘ಬುದ್ಧಿವಂತ 3’ ಚಿತ್ರ ಬರಲಿದೆ. ಆ ಚಿತ್ರವನ್ನು ನಾನೇ ನಿರ್ದೇಶಿಸಲಿದ್ದೇನೆ ಎನ್ನುವ ಮಾತು ಸೇರಿಸಿದರು.

78 ದಿನಗಳು ಚಿತ್ರೀಕರಣ ನಡೆದಿದ್ದು, ಚಿತ್ರದ ಎಡಿಟಿಂಗ್‌ ಮುಗಿದಿದೆ. ಮೂರು ಹಾಡುಗಳು ಮಾತ್ರ ಚಿತ್ರೀಕರಣಕ್ಕೆ ಬಾಕಿ ಇವೆ. ಕತಾರ್‌ ಮತ್ತು ಮಲೇಷ್ಯಾಕ್ಕೆ ಹಾಡಿನ ಚಿತ್ರೀಕರಣಕ್ಕಾಗಿ ಹೋಗುವ ಯೋಜನೆ ಈಗ ರದ್ದಾಗಿದೆ. ಲಾಕ್‌ಡೌನ್‌ ತೆರವಾದ ತಕ್ಷಣ ಚಿತ್ರದ ಬಾಕಿ ಕೆಲಸ ಪೂರ್ಣಗೊಳಿಸಲಿದ್ದೇವೆ.

ನಾಯಕಿಯರಾಗಿ ಮೇಘನಾರಾಜ್‌ ಮತ್ತು ಸೋನಾಲ್‌ ಮೊಂತೆರೊ ಇದ್ದಾರೆ. ಈ ಇಬ್ಬರು ಚಿತ್ರದಲ್ಲಿ ನಾಯಕನಿಗೆ ಪ್ರೇಯಸಿಯರು. ಈ ಚಿತ್ರದ ಖಳನಟನ ಪಾತ್ರದಲ್ಲಿ ಕನ್ನಡದ ಹೊಸ ಕಲಾವಿದ ಪದಾರ್ಪಣೆ ಮಾಡುತ್ತಿದ್ದು, ಅವರ ಹೆಸರನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ. ವಿಶೇಷ ಸಂದರ್ಭದಲ್ಲಿ ಖಳನಟನನ್ನು ಪರಿಚಯಿಸುವುದು ಚಿತ್ರತಂಡದ ಯೋಜನೆ. 

ಚಿತ್ರಕ್ಕೆ ಗುರುಕಿರಣ್‌ ಅವರ ಸಂಗೀತವಿದೆ. ಯೋಗರಾಜ್‌ ಭಟ್‌, ಕವಿರಾಜ್‌ ಹಾಡುಗಳನ್ನು ಬರೆದಿದ್ದಾರೆ. ಟಿ.ಆರ್‌.ಚಂದ್ರಶೇಖರ್‌ ಬಂಡವಾಳ ಹೂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು