ಚೈತ್ರಗಾನ@20

ಗುರುವಾರ , ಏಪ್ರಿಲ್ 25, 2019
33 °C
ಹುಡುಗಾ ಹುಡುಗಾ..ಹುಡುಗಿಯ ಎರಡು ದಶಕದ ಗಾನ ಸಂಭ್ರಮ

ಚೈತ್ರಗಾನ@20

Published:
Updated:
Prajavani

ಆ ಐದರ ಬಾಲೆಯ ಮನಸ್ಸು ಸೆಳೆದಿದ್ದು ಮನೆಯಲ್ಲಿದ್ದ ಮಾಯಾಪೆಟ್ಟಿಗೆ. ಟಿ.ವಿಯಲ್ಲಿ ಬಿತ್ತರವಾಗುತ್ತಿದ್ದ ಜಾಹೀರಾತುಗಳ ಹಾಡುಗಳೊಟ್ಟಿಗೆ ಆಕೆಯ ರಾಗವೂ ಜುಗಲ್‌ಬಂದಿಗೆ ಇಳಿಯುತ್ತಿತ್ತು. ಮನಸ್ಸಿನ ತುಂಬಾ ಗಾಯನವೇ ತುಂಬಿಕೊಂಡಿತು. ತನ್ನನ್ನು ಬಿಟ್ಟು ಮುಂದಕ್ಕೆ ಓಡುತ್ತಿರುವಂತೆ ಭಾಸವಾಗುತ್ತಿದ್ದ ಪ್ರಪಂಚ ಗಾಯನದ ಅಲೆಯಲ್ಲಿ ಭಿನ್ನವಾಗಿ ಕಾಣಿಸಿತ್ತು. ಪ್ರತಿದಿನ ಸಂಜೆ ಅಮ್ಮನ ಮುಂದೆ ಕುಳಿತು ದೇವರನಾಮವನ್ನು ಕಲಿಯತೊಡಗಿದಳು. ಮಗಳ ಕಂಠಸಿರಿಯಲ್ಲಿ ‘ಕೃಷ್ಣ ಬಾರೋ...’ ಹಾಡು ಅನುರಣಿಸಿದಾಗ ಅಮ್ಮನ ಮನದಲ್ಲೂ ಪುಳಕ‌. 

ಹಿನ್ನೆಲೆ ಗಾಯಕಿ ಚೈತ್ರಾ ಎಚ್‌.ಜಿ. ಗಾಯನದ ಹಿಂದೆ ಬಿದ್ದಿದ್ದು ಹೀಗೆ. ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ‘ಅಮೃತಧಾರೆ’ ಚಿತ್ರದ ‘ಹುಡುಗಾ ಹುಡುಗಾ ಓ ನನ್ನ ಮುದ್ದಿನ ಹುಡುಗಾ...’ ಹಾಡು ಕೇಳಿದರೆ ಅವರ ಗಾಯನ ಸಾಮರ್ಥ್ಯದ ಪರಿಚಯವಾಗುತ್ತದೆ. ಬಾಲ್ಯದಲ್ಲಿಯೇ ಅವರ ಮನಸ್ಸು ಗಾಯನದ ಮೇಲೆ ಪೂರ್ತಿಯಾಗಿ ನೆಟ್ಟಿತ್ತು. ‘ಬೇಡ ಕೃಷ್ಣ ರಂಗಿನಾಟ’ ಸಿನಿಮಾದ ಹಾಡಿಗೆ ಕಂಠದಾನ ಮಾಡಿದಾಗ ಅವರಿಗೆ ಎಂಟರ ಪ್ರಾಯ. ಈಗ ಅವರ ಗಾಯನಕ್ಕೆ ಎರಡು ದಶಕದ ಹರೆಯ.

ಪ್ರಯೋಗಾತ್ಮಕ ಸವಾಲುಗಳಿಗೆ ಒಗ್ಗಿಕೊಳ್ಳುವುದು ಎಂದರೆ ಚೈತ್ರಾಗೆ ಇಷ್ಟ. ಹಾಗಾಗಿಯೇ, ಪುರಂದರದಾಸರ ‘ಕೃಷ್ಣ ಎನಬಾರದೆ’ ಹಾಡನ್ನು ಸಮಕಾಲೀನ ಶೈಲಿಯಲ್ಲಿ ಪ್ರಸ್ತುತಪಡಿಸಲು ಮುಂದಾಗಿದ್ದಾರೆ. ಆ ಹಾಡಿಗೆ ‘ಕೃಷ್ಣ’ ಎಂದು ಹೆಸರಿಟ್ಟಿದ್ದಾರೆ. ಯುಗಾದಿ ಹಬ್ಬದಂದು ಇದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಲಿದೆ. ಈ ಪ್ರಯೋಗದಲ್ಲಿ ಬಳಕೆಯಾಗಿರುವುದು ಚೈತ್ರಾ ಅವರ ಧ್ವನಿ ಮತ್ತು ಪಿಯಾನೊ ಮಾತ್ರವಷ್ಟೇ.  

‘ನಾನು ಹಿಂದೂಸ್ತಾನಿ ಶಾಸ್ತ್ರೀಯ ಗಾಯಕಿ. ಸಿನಿಮಾ ಹಾಡುಗಳನ್ನು ಅವುಗಳ ಅಗತ್ಯಕ್ಕೆ ತಕ್ಕಂತೆ ನನ್ನದೇ ಶೈಲಿಯಲ್ಲಿ ಹಾಡಿದ್ದೇನೆ ಅಷ್ಟೇ. ಪುರಂದರದಾಸರ ಕೃಷ್ಣ ಹಾಡನ್ನು ಹಾಡಿರುವುದು ಹಿಂದೂಸ್ತಾನಿ ಶಾಸ್ತ್ರೀಯ ಶೈಲಿಯಲ್ಲಿ. ಇದರ ಅವಧಿ 4.20 ನಿಮಿಷ. ಹಾಡಿಗೆ ಸಂಗೀತ ಸಂಯೋಜಿಸುವಾಗ ಹಲವು ಸಂಗೀತ ಪರಿಕರಗಳ ಬಳಕೆ ಸಹಜ. ಈ ಹಾಡಿಗೆ ಪಿಯಾನೊವನ್ನು ಮಾತ್ರ ಬಳಸಿದ್ದೇವೆ. ಈಗ ಫಾಸ್ಟ್ ಮ್ಯೂಸಿಕ್‌ ಯುಗ. ಹಾಡು ಮೆಡಿಟೇಟಿವ್‌ ಆಗಿರಬೇಕು. ತೀರಾ ಕ್ಲಾಸಿಕಲ್‌ ಆಗಿದ್ದರೆ ಯುವಜನರಿಗೆ ರುಚಿಸುವುದಿಲ್ಲ. ಅವರಿಗೂ ಬೋರ್‌ ಅನಿಸಬಾರದು. ಹಾಗಾಗಿ, ಹಾಡಿಗೆ ಪಾಶ್ಚಾತ್ಯ ಶೈಲಿಯ ಸ್ಪರ್ಶ ನೀಡಿದ್ದೇನೆ. ಕೇಳುಗರಿಗೆ ವಿಶೇಷ ಪ್ಯಾಕೇಜ್‌ ಇದು. ಎಲ್ಲಾ ವಯೋಮಾನದವರಿಗೆ ಇಷ್ಟವಾಗುವಂತೆ ಹಾಡು ರೂಪಿಸಲಾಗಿದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

‘ಗಜ ಚಿತ್ರದಲ್ಲಿ ನಾನು ಹಾಡಿದ ಬಂಗಾರಿ ಯಾರೇ ನೀ ಬುಲ್‌ಬುಲ್‌... ಸಾಂಗ್‌ ಕೇಳಿದವರಿಗೆ ಈ ಹಾಡು ಭಿನ್ನವಾಗಿ ಕಾಣುತ್ತದೆ. ಅವರು ಚೈತ್ರಾ ಕಂಠದಲ್ಲಿ ಇಂತಹ ಹಾಡು ಮೂಡಿಬರಲು ಸಾಧ್ಯವೇ? ಎಂದು ಪ್ರಶ್ನಿಸಿದರೂ ಅಚ್ಚರಿಪಡಬೇಕಿಲ್ಲ’ ಎಂದು ಚಂದದ ನಗು ಚೆಲ್ಲಿದರು.

ಅಂದಹಾಗೆ ಚೈತ್ರಾ ಜಿಮ್ನಾಸ್ಟಿಕ್‌ಪಟುವೂ ಹೌದು. ಹೈಸ್ಕೂಲ್‌ನಲ್ಲಿ ಇದ್ದಾಗಲೇ ಈ ಕ್ರೀಡೆಯಲ್ಲಿ ಸಾಕಷ್ಟು ಪರಿಣತಿ ಪಡೆದಿದ್ದಾರಂತೆ. ಪದವಿಪೂರ್ವ ಕಾಲೇಜು ಮೆಟ್ಟಿಲು ಹತ್ತಿದಾಗ ಕತ್ತಿವರಸೆಯ ಅಭ್ಯಾಸಕ್ಕಿಳಿದರು. ರಾಷ್ಟ್ರಮಟ್ಟದಲ್ಲಿ ಈ ಕ್ರೀಡೆ ಪ್ರತಿನಿಧಿಸಿ ಚಿನ್ನದ ಪದಕ ಪಡೆದ ಹೆಗ್ಗಳಿಕೆ ಅವರದು. ಎಂಜಿನಿಯರಿಂಗ್‌ ಪದವಿಯ ಜೊತೆಗೆಯೇ ಗಂಭೀರವಾಗಿ ಹಿನ್ನೆಲೆ ಗಾಯನ ವೃತ್ತಿ ಸ್ವೀಕರಿಸಿದ ಅವರು, ಇಲ್ಲಿಯವರೆಗೆ 950ಕ್ಕೂ ಹೆಚ್ಚು ಹಾಡುಗಳಿಗೆ ಜೀವ ತುಂಬಿದ್ದಾರೆ.  

ಮೊದಲ ಬಾರಿಗೆ ರೆಕಾರ್ಡಿಂಗ್‌ ಸ್ಟುಡಿಯೊಗೆ ಹೋದದ್ದನ್ನು ಅವರು ಮೆಲುಕು ಹಾಕುವುದು ಹೀಗೆ: ‘ವಿ. ಮನೋಹರ್ ಸರ್‌ ‘ಬೇಡ ಕೃಷ್ಣ ರಂಗಿನಾಟ’ ಚಿತ್ರದ ಹಾಡೊಂದಕ್ಕೆ ಹುಡುಗಿಯೊಬ್ಬಳ ವಾಯ್ಸ್‌ ಬೇಕೆಂದು ಹುಡುಕಾಟ ನಡೆಸಿದ್ದರು. ಆಗ ರೆಕಾರ್ಡಿಂಗ್ ಎಂದರೆ ಏನಂದು ನನಗೂ ಗೊತ್ತಿರಲಿಲ್ಲ. ಚೆನ್ನಾಗಿ ಹಾಡಿದರೆ ಚಾಕೋಲೆಟ್‌, ಐಸ್‌ಕ್ರೀಮ್‌ ಕೊಡುತ್ತಾರೆ ಎಂದು ಅಪ್ಪ, ಅಮ್ಮ ಪುಸಲಾಯಿಸಿದರು. ನಾನು ಖುಷಿಯಿಂದಲೇ ಹೋದೆ. ಆಗಲೇ ನಾನು ಸಂಕೇತ್‌ ಸ್ಟುಡಿಯೊ ನೋಡಿದ್ದು. ಕೋಗಿಲೆಯೇ... ಕೋಗಿಲೆಯೇ... ಹಾಡನ್ನು ಚೆನ್ನಾಗಿಯೇ ಹಾಡಿದೆ. ಆಗ ಮನೋಹರ್‌ಗೆ ಸಹಾಯಕರಾಗಿದ್ದವರು ಗುರುಕಿರಣ್‌. ಅವರೇ ಈ ಹಾಡು ಹಾಡಿಸಿದ್ದು’ ಎನ್ನುತ್ತಾರೆ.

ಈ ಹಾಡಿಗೆ ಅವರು ಪಡೆದ ಮೊದಲ ಸಂಭಾವನೆ ₹ 150 ಅಂತೆ. ‘ಆ ದಿನದ ನೆನಪು ಇನ್ನೂ ಹಸಿರಾಗಿದೆ. ಮನೋಹರ್‌ ಸರ್‌ ಸಂಭಾವನೆ ಕೊಟ್ಟರು. ಅಷ್ಟು ಮೊತ್ತದ ಹಣ ನೋಡಿದಾಗ ರೋಮಾಂಚನವಾಗಿತ್ತು. ಆ ಹಣದಲ್ಲಿ ನನಗೂ ಮತ್ತು ನನ್ನ ತಮ್ಮ ಚೈತನ್ಯನಿಗೂ ಅಪ್ಪ ಐಸ್‌ಕ್ರೀಮ್‌, ಚಾಕೋಲೆಟ್ ಕೊಡಿಸಿದರು’ ಎಂದು ನೆನಪಿಸಿಕೊಳ್ಳುತ್ತಾರೆ.  

ಈ ಹಾಡಿನ ಬಳಿಕ ಅವರು ಹಿನ್ನೆಲೆ ಗಾಯನದ ಸೆಳೆತಕ್ಕೆ ಸಿಲುಕಿದರಂತೆ. ‘2000ರಲ್ಲಿ ಮಾರುತಿ ಮೀರಜ್‌ಕರ್‌ ಅವರು ಭಕ್ತಿಗೀತೆ ಗಾಯನ ಕುರಿತು ಪ್ರಾಜೆಕ್ಟ್‌ವೊಂದರ ತಯಾರಿಯಲ್ಲಿದ್ದರು. ಟ್ರ್ಯಾಕ್‌ ಹಾಡುವಂತೆ ನನಗೆ ಕೇಳಿದರು. ಆಗಲೇ ನಾನು ಗಾಯನವನ್ನು ವೃತ್ತಿಯಾಗಿ ಪರಿಗಣಿಸಿದೆ’ ಎನ್ನುತ್ತಾರೆ ಅವರು.   

ಹುಡುಗಾ ಹುಡುಗಾ... ಹಾಡು ಅವರ ವೃತ್ತಿಬದುಕಿಗೆ ಹೊಸ ತಿರುವು ನೀಡಿತು. ‘ಸಂತೋಷ್‌ ಎಂಬ ಚಿತ್ರಕ್ಕೆ ಸ್ಟೀಫನ್‌ ಸರ್‌ ಸಂಗೀತ ಸಂಯೋಜಿಸಿದ್ದರು. ಆ ಚಿತ್ರದ ಓ ಮೈ ಲವ್‌... ಹಾಡಿಗೆ ನಾನೇ ಟ್ರ್ಯಾಕ್‌ ಹಾಡಿದೆ. ಕೊನೆಗೆ ನನ್ನ ಹಾಡನ್ನೇ ಉಳಿಸಿಕೊಂಡರು. ಈ ನಡುವೆ ಮನೋಮೂರ್ತಿ ಸರ್‌ ಜೊತೆಗೆ ಸ್ಟೀಫನ್‌ ಅವರೂ ಕೆಲಸ ಮಾಡುತ್ತಿದ್ದರು. ಅದೇ ವೇಳೆ ನಾಗತಿಹಳ್ಳಿ ಚಂದ್ರಶೇಖರ್‌ ಸರ್‌ ಅಮೃತಧಾರೆ ಚಿತ್ರದ ಹಾಡಿಗೆ ಹೊಸ ಕಂಠದ ಹುಡುಕಾಟದಲ್ಲಿದ್ದರು. ಆಗ ನನ್ನ ಹೆಸರು ಸೂಚಿಸಿದ್ದೇ ಸ್ವೀಫನ್‌ ಸರ್‌. ಅದು ನನ್ನ ಪಾಲಿಗೆ ಮರೆಯಲಾರದ ಕ್ಷಣ. ಆ ಹಾಡಿನ ಪ್ರತಿ ಸಾಲುಗಳೂ ಸುಮಧುರವಾಗಿವೆ. ಮೂವರು ಸೇರಿ ಪ್ರತಿ ಸಾಲುಗಳು ಭಿನ್ನವಾಗಿ ಮೂಡಿಬರುವಂತೆ ಹಾಡಿಸಿದರು’ ಎಂದು ಮೆಲುಕು ಹಾಕುತ್ತಾರೆ.

‘ಸಿಹಿರ್’ ಚೈತ್ರಾ ಸಂಗೀತ ಸಂಯೋಜಿಸಿದ ಮೊದಲ ಚಿತ್ರ. ಮತ್ತಷ್ಟು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುವ ಆಸೆ ಅವರಿಗಿದೆಯಂತೆ. ‘ಎರಡು– ಮೂರು ಸಿನಿಮಾಕ್ಕೆ ಸಂಗೀತ ಸಂಯೋಜಿಸುವಂತೆ ಅವಕಾಶಗಳು ಬರುತ್ತಿವೆ. ಇನ್ನೂ ಮಾತುಕತೆ ಹಂತದಲ್ಲಿದೆ. ಭಿನ್ನವಾಗಿ  ಸಂಗೀತ ಸಂಯೋಜನೆ ಮಾಡುವ ಆಲೋಚನೆಯಿದೆ’ ಎನ್ನುತ್ತಾರೆ.

ಹಾಡುಗಾರಿಕೆ ಸುಲಭವಲ್ಲ. ಅದಕ್ಕೆ ಬದ್ಧತೆ, ಪರಿಶ್ರಮಬೇಕು ಎನ್ನುವುದು ಅವರ ಅನುಭವದ ಮಾತು. ‘ಯಾವುದೇ ವೃತ್ತಿ ಸ್ವೀಕರಿಸಿದಾಗ ಅದರ ಬಗ್ಗೆ ತಾತ್ಸಾರ ಬೇಡ. ಪ್ರೀತಿಯಿಂದ ಸ್ವೀಕರಿಸಬೇಕು. ಗಾಯನ, ಚಿತ್ರಕಲೆ ಸೇರಿದಂತೆ ಎಲ್ಲದ್ದಕ್ಕೂ ಒಂದು ಕೌಶಲ ಇರುತ್ತದೆ. ಅದನ್ನು ಸಿದ್ಧಿಸಿಕೊಳ್ಳಬೇಕು. ಟೆಕ್ನಿಕಲ್‌ ವಿಷಯ ಗೊತ್ತಿಲ್ಲದಿದ್ದರೆ ಸಿನಿಮಾ ಇಂಡಸ್ಟ್ರಿಯಲ್ಲಿ ಬಹುಕಾಲ ಉಳಿಯಲು ಸಾಧ್ಯವಿಲ್ಲ. ಹಿನ್ನೆಲೆ ಗಾಯಕರಿಗೆ ಕ್ಲಾಸಿಕಲ್‌ ಗೊತ್ತಿರಲೇಬೇಕು ಎಂದು ನಾನು ಹೇಳಲಾರೆ. ಅದು ಗೊತ್ತಿಲ್ಲದೆ ಇದ್ದವರು ತಮ್ಮದೇ ಶೈಲಿ ರೂಢಿಸಿಕೊಂಡು ಪ್ರಸಿದ್ಧರಾಗಿರುವ ಸಾಕಷ್ಟು ನಿದರ್ಶನಗಳಿವೆ. ಗಾಯನ ಕಲಿಕೆಗೆ ಬದ್ಧತೆ ಬೇಕು’ ಎನ್ನುತ್ತಾರೆ ಅವರು. 

‘ಸಂಗೀತದ ಮೂಲ ಪಾಠ ಕಲಿಯಬೇಕು. ನಾನು ಇಂಡಸ್ಟ್ರಿಗೆ ಪ್ರವೇಶಿಸಿದಾಗ ನನ್ನದೇ ಶೈಲಿಯಲ್ಲಿ ಹಾಡುತ್ತಾ ಹೋದೆ. ಅದು ನಿರ್ದೇಶಕರಿಗೆ ಇಷ್ಟವಾಯಿತು. ಪ್ರಖ್ಯಾತ ಗಾಯಕರಿಂದ ಕಲಿಯುವುದು ಸಾಕಷ್ಟಿದೆ. ಅವರಿಂದ ಕಲಿಯುವ ಜೊತೆಗೆ ನಮ್ಮ ಶೈಲಿಯನ್ನೂ ಉಳಿಸಿಕೊಳ್ಳಬೇಕು. ಯಾರೊಬ್ಬರ ಅನುಕರಣೆ ಸಲ್ಲದು. ಸ್ವಂತ ಶೈಲಿ ಹುಟ್ಟು ಹಾಕಿಕೊಳ್ಳಬೇಕು. ಈ ಮಾತು ಹಾಡುಗಾರಿಕೆಗಷ್ಟೇ ಸೀಮಿತವಲ್ಲ. ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆ’ ಎಂದು ಹೊಸಬರಿಗೆ ಸಲಹೆ ನೀಡುತ್ತಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !