ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಂದಿಸಿ ಬರೆದ ‘ಐಶಾನಿ’: ಸಿನಿ ಪಯಣದ ಬಗ್ಗೆ ಮೆಲುಕು ಹಾಕಿದ ಕರಾವಳಿ ಬೆಡಗಿ

Last Updated 9 ಫೆಬ್ರುವರಿ 2023, 23:45 IST
ಅಕ್ಷರ ಗಾತ್ರ

‘ವಾಸ್ತು ಪ್ರಕಾರ’ ಚಂದನವನಕ್ಕೆ ಕಾಲಿಟ್ಟ ಪುಟಾಣಿ ಮಗುವಿನ ಧ್ವನಿಯ, ಮುಗ್ಧ ಮುಖದ ಕರಾವಳಿಯ ಬೆಡಗಿ ಐಶಾನಿ ಶೆಟ್ಟಿ, ಇದೀಗ ‘ಹೊಂದಿಸಿ ಬರೆಯಿರಿ’ ಎನ್ನುತ್ತಿದ್ದಾರೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ‘ಶಾಕುಂತಲೆ’ ಆಗಿ ಮಿಂಚುತ್ತಿರುವ ಐಶಾನಿ ತಮ್ಮ ಸಿನಿಪಯಣವನ್ನು ‘ಸಿನಿಮಾ ಪುರವಣಿ’ ಜೊತೆ ಮೆಲುಕು ಹಾಕಿದರು.

ಸಿನಿಮಾ ಆಯ್ಕೆಯ ಕುರಿತು ತಾವೇ ಹಾಕಿಕೊಂಡ ಷರತ್ತುಗಳಿಂದಲೇ ಮಾತು ಆರಂಭಿಸಿದ ಐಶಾನಿ, ‘ವರ್ಷಕ್ಕೆ ಹತ್ತು ಸಿನಿಮಾ ಮಾಡಬೇಕು. ಆದಷ್ಟು ಬೇಗ ನೂರು ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಹೊರೆ ಹೊತ್ತು ನಾನು ಈ ಕ್ಷೇತ್ರಕ್ಕೆ ಇಳಿದಿಲ್ಲ. ಆಫರ್‌ಗಳು ಸಾಕಷ್ಟು ಬಂದಿವೆ. ಆದರೆ ನನಗೆ ಹಿಡಿಸುವ ಕಥೆಗಳು, ಮನಸಾರೆ ಹಿಡಿಸಿದ ಪಾತ್ರಗಳು ಬಂದಾಗ ಒಪ್ಪಿಕೊಂಡಿದ್ದೇನೆ. ಮಾಡುವ ಸಿನಿಮಾಗಳ ಮೂಲಕ ಜನರು ನನ್ನನ್ನು ಗುರುತಿಸಬೇಕು ಎನ್ನುವುದಷ್ಟೇ ನನ್ನ ಗುರಿ. ಇಲ್ಲಿಯವರೆಗೆ ಮಾಡಿರುವ ಪಾತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರಕಿದೆ’ ಎನ್ನುತ್ತಾರೆ.

‘ಹೊಂದಿಸಿ ಬರೆಯಿರಿ’ ರಾಮೇನಹಳ್ಳಿ ಜಗನ್ನಾಥ್‌ ಅವರ ನಿರ್ದೇಶನದ ಚೊಚ್ಚಲ ಚಿತ್ರ. ಅವರು ಈ ಕಥೆಯನ್ನು ಹೇಳಿದಾಗ, ಮೊದಲು ನಮ್ಮನ್ನು ಆಕರ್ಷಿಸಿದ್ದು ಶೀರ್ಷಿಕೆ. ಈ ಶೀರ್ಷಿಕೆ ನಮ್ಮನ್ನು ಬಾಲ್ಯಕ್ಕೆ ಕರೆದೊಯ್ಯುತ್ತದೆ. ಈ ಶೀರ್ಷಿಕೆಯನ್ನು ರೂಪಕದ ರೀತಿ ಇಲ್ಲಿ ಬಳಸಿದ್ದಾರೆ. ಚಿತ್ರಕಥೆ ಅಚ್ಚುಕಟ್ಟಾಗಿದೆ. ಇದು ಪ್ರೇಮಕಥೆ ಮತ್ತು ನಾಲ್ಕೈದು ಸ್ನೇಹಿತರ ನಡುವೆ ನಡೆಯುವ ಕಥೆ. ಎಲ್ಲರೂ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು. ಓದುವುದರಲ್ಲಿ ತುಂಬಾ ಆಸಕ್ತಿ ಇರುವ, ವಿಜ್ಞಾನಿಯಾಗುವ ಕನಸು ಕಾಣುತ್ತಿರುವ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಹುಡುಗಿಯ ಪಾತ್ರ ನನ್ನದು. ‘ಸನಿಹ ಪೊನ್ನಪ್ಪ’ ನನ್ನ ಪಾತ್ರದ ಹೆಸರು. ನಿಮಗೆ ಗೊತ್ತೇ ಇದೆ, ಮೆಕ್ಯಾನಿಕಲ್‌ ಬ್ರ್ಯಾಂಚ್‌ ಎಂದರೆ ಅಲ್ಲಿ ಹುಡುಗಿಯರು ವಿರಳ.(ನಗುತ್ತಾ..)ಅದರಲ್ಲೂ ಚೆಂದದ ಹುಡುಗಿಯರು ಅಪರೂಪ! ನನ್ನ ಇಲ್ಲಿಯವರೆಗಿನ ಸಿನಿಪಯಣದಲ್ಲಿ ಇದೊಂದು ವಿಶೇಷವಾದ ಪಾತ್ರ. ಶಿಕ್ಷಣದ ಮುಂದಿನ ಜೀವನ ಸಿನಿಮಾದಲ್ಲಿದೆ. ಎಲ್ಲರೂ ಮೂರು ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದೇವೆ. 12 ವರ್ಷದ ಪಯಣ ಈ ಸಿನಿಮಾದಲ್ಲಿದೆ. ತೆರೆ ಮೇಲೆ ಈ ಅವಧಿಯನ್ನು ಪಾತ್ರದ ಮುಖಾಂತರ ತೋರಿಸುವುದು ಸವಾಲಾಗಿತ್ತು ಎನ್ನುತ್ತಾರೆ ಐಶಾನಿ.

ಚಿತ್ರದಲ್ಲಿನ ನನ್ನ ಲುಕ್‌ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ಚೆನ್ನಾಗಿದೆ ಎಂದರು, ಇನ್ನು ಕೆಲವರಿಗೆ ಹಿಡಿಸಿಲ್ಲ. 2008ರಲ್ಲಿ ನಡೆಯುವ ಕಥೆ ಇದಾಗಿರುವ ಕಾರಣ, ಆ ಕಾಲದ ಉಡುಪು, ಹೇರ್‌ಸ್ಟೈಲ್‌ ಇಲ್ಲಿ ಕಾಣಬಹುದಾಗಿದೆ. ಇದಕ್ಕಾಗಿ ನಾನು ಆ ಸಂದರ್ಭದಲ್ಲಿ ಎಂಜಿನಿಯರಿಂಗ್‌ ಓದಿದ್ದ ನನ್ನ ಸ್ನೇಹಿತರ ಫೋಟೊಗಳನ್ನು ತರಿಸಿಕೊಂಡಿದ್ದೆ. ಈ ಕಾರಣದಿಂದಾಗಿ ‘ಸನಿಹ’ ಪಾತ್ರ ಮುದ್ದುಮುದ್ದಾಗಿ ಬಂದಿದೆ. ಚಿತ್ರದ ಕಥೆಯು ಬದುಕಿಗೆ ಹತ್ತಿರವಾಗಿದೆ. ಹೀಗಾಗಿ ಎಲ್ಲರಿಗೂ ಈ ಸಿನಿಮಾ ಕನೆಕ್ಟ್‌ ಆಗುತ್ತದೆ ಎಂದು ಹೇಳುತ್ತಾರೆ.

ನಿರ್ದೇಶನ, ಫಿಲ್ಮ್‌ ಮೇಕಿಂಗ್‌ ಬಗ್ಗೆ ನನಗೆ ಆಸಕ್ತಿ ಹುಟ್ಟಿದ್ದು ಮೊದಲ ಸಿನಿಮಾ ಸಂದರ್ಭದಲ್ಲೇ. ಆಗ ನನಗೆ ಎಲ್ಲವೂ ಹೊಸತು. ಕುತೂಹಲವೂ ಹೆಚ್ಚಾಗಿತ್ತು. ಬರವಣಿಗೆಯ ಹವ್ಯಾಸ ನನಗೆ ಮೊದಲಿನಿಂದಲೇ ಇತ್ತು. ಸ್ನಾತಕೋತ್ತರ ಪದವಿ ಪಡೆಯುತ್ತಿರುವ ಸಂದರ್ಭದಲ್ಲಿ ಶೈಕ್ಷಣಿಕ ಪ್ರವಾಸಕ್ಕೆಂದು ಹೋದ ಸಂದರ್ಭದಲ್ಲಿ ನೋಡಿದ, ಅನುಭವಿಸಿದ ಘಟನೆಗಳನ್ನು ಇಟ್ಟುಕೊಂಡು ಒಂದು ಕಥೆ ಮಾಡಿದೆ. ಅದುವೇ ನನ್ನ ಕಿರುಚಿತ್ರ ‘ಕಾಜಿ’. ಅತ್ಯುತ್ತಮ ತಾಂತ್ರಿಕ ತಂಡ ಈ ಪ್ರಾಜೆಕ್ಟ್‌ನಲ್ಲಿತ್ತು. ಇದಾದ ಬಳಿಕ ಒಂದಿಷ್ಟು ಕಿರುಚಿತ್ರಗಳನ್ನು ಮಾಡುವ ಆಸೆ ಇತ್ತು. ಆದರೆ ಕಮರ್ಷಿಯಲ್‌ ಸಿನಿಮಾಗಳನ್ನು ಮಾಡಲು ಸ್ನೇಹಿತರ ಒತ್ತಾಯವಿತ್ತು. ಸದ್ಯ ಒಂದು ಸ್ಕ್ರಿಪ್ಟ್‌ ಮೇಲೆ ಕೆಲಸ ಮಾಡುತ್ತಿದ್ದೇನೆ. ಇದರಲ್ಲಿ ನಾನೇ ಲೀಡ್‌ ಮಾಡುತ್ತಿದ್ದೇನೆ. ಈ ಪ್ರಾಜೆಕ್ಟ್‌ ಈ ವರ್ಷ ಆರಂಭವಾಗಲಿದೆ ಎಂದು ಮಾಹಿತಿ ನೀಡುತ್ತಾರೆ ಐಶಾನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT