ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನಿ ಸಮ್ಮಾನ–2 | ಕಾಟೇರ ಚಿತ್ರದ ತಂತ್ರಜ್ಞರಿಗೆ ಸನ್ಮಾನದ ಗರಿ

Published 5 ಜುಲೈ 2024, 0:02 IST
Last Updated 5 ಜುಲೈ 2024, 0:02 IST
ಅಕ್ಷರ ಗಾತ್ರ

ಅತ್ಯುತ್ತಮ ಚಿತ್ರಕಥೆ: ಜಡೇಶ್‌ ಕೆ.ಹಂಪಿ ಹಾಗೂ ತರುಣ್‌ ಕಿಶೋರ್‌ ಸುಧೀರ್‌ ಚಿತ್ರ: ಕಾಟೇರ

2023ರ ವರ್ಷಾಂತ್ಯದಲ್ಲಿ ತೆರೆಗೆ ಬಂದ ‘ಕಾಟೇರ’ ತನ್ನ ಸದೃಢವಾದ ಕಥೆಯಿಂದಲೇ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿತು. ಭೂ ಸುಧಾರಣಾ ಕಾಯ್ದೆಯನ್ನು ಎಳೆಯಾಗಿಟ್ಟುಕೊಂಡು ದಬ್ಬಾಳಿಕೆ, ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ವಿರುದ್ಧ ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. 1970–80ರಲ್ಲಿ ನಡೆಯುವ ಕಥೆಯ ಸಿನಿಮಾದ ಜೀವಾಳವೇ ಚಿತ್ರಕಥೆ ಹಾಗೂ ಸಂಭಾಷಣೆ. ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಈ ಸಿನಿಮಾ ತನ್ನ ಗಟ್ಟಿಯಾದ ಕಥೆಯಿಂದ ಪ್ರೇಕ್ಷಕರನ್ನು ಆಕರ್ಷಿಸಿತ್ತು. 

‘ಈ ಸಿನಿಮಾದ ಐಡಿಯಾ ತೆಗೆದುಕೊಂಡು ಬಂದ ಜಡೇಶ್‌ ಅವರಿಗೆ ಮೊದಲ ಧನ್ಯವಾದ. ಇದೊಂದು ಭಿನ್ನವಾದ ಸೂಕ್ಷ್ಮ ವಿಷಯವಾಗಿತ್ತು. ಈ ಸಿನಿಮಾ ಆಗುವುದಕ್ಕೆ ಮುಖ್ಯ ಕಾರಣ ದರ್ಶನ್‌. ರಾಕ್‌ಲೈನ್‌ ವೆಂಕಟೇಶ್‌ ಅವರೂ ಬೆಂಬಲವಾಗಿ ನಿಂತರು. ಈ ಪ್ರಶಸ್ತಿ ನೀಡಿದ ಪ್ರಜಾವಾಣಿಗೆ ಧನ್ಯವಾದ’ ಎಂದರು ತರುಣ್‌ ಸುಧೀರ್‌.  

‘ಇವತ್ತಿನ ಕಾಲದಲ್ಲಿ ಬಹುತೇಕ ಪ್ರಶಸ್ತಿಗಳು ತಮ್ಮ ಗೌರವ ಕಳೆದುಕೊಂಡಿವೆ. ಆದರೆ ಪ್ರಜಾವಾಣಿಯಂತಹ ಪತ್ರಿಕೆ ತನ್ನ ಅಸ್ಮಿತೆಯನ್ನು ದೀರ್ಘಕಾಲದಿಂದ ಉಳಿಸಿಕೊಂಡು ಬಂದಿದೆ. ಇದರಿಂದ ಪ್ರಶಸ್ತಿಗೆ ಗೌರವ ಬಂದಿದೆ. ನಿಜವಾದ ಅರ್ಥದಲ್ಲಿ ಕಲಾವಿದರಿಗೆ ಇದರಿಂದ ಗೌರವ ದೊರಕಿದೆ’ ಎಂದರು ನಟ ಮುಖ್ಯಮಂತ್ರಿ ಚಂದ್ರು. ‘ಚಿತ್ರಕಥೆಯೇ ಸಿನಿಮಾದ ಜೀವಾಳವಾಗಿರುತ್ತದೆ. ಚಿತ್ರಕಥೆ ಎನ್ನುವುದು ಸಿನಿಮಾದ ಅಡಿಪಾಯ. ಅಡಿಪಾಯವಿಲ್ಲದೇ ಒಂದು ಬೃಹತ್‌ ಕಟ್ಟಡ ಕಟ್ಟಲು ಸಾಧ್ಯವೇ ಇಲ್ಲ’ ಎಂದು ನಿರ್ದೇಶಕ ಪಿ.ಶೇಷಾದ್ರಿ ಅಭಿಪ್ರಾಯವ್ಯಕ್ತಪಡಿಸಿದರು.   

ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದವರು: ಬಿ.ಎಸ್‌.ಲಿಂಗದೇವರು(ಚಿತ್ರ: ವಿರಾಟಪುರ ವಿರಾಗಿ), ಅನಂತ ಶಾಂದ್ರೇಯ ಹಾಗೂ ರಾಘವೇಂದ್ರ ಮಾಯಕೊಂಡ (ಚಿತ್ರ:ಡೇರ್‌ ಡೆವಿಲ್‌ ಮುಸ್ತಾಫಾ), ಜಡೇಶ್‌ ಕೆ.ಹಂಪಿ ಹಾಗೂ ತರುಣ್‌ ಕಿಶೋರ್‌ ಸುಧೀರ್‌(ಚಿತ್ರ: ಕಾಟೇರ), ಮಂಸೋರೆ ಹಾಗೂ ವೀರೇಂದ್ರ ಮಲ್ಲಣ್ಣ(ಚಿತ್ರ: 19.20.21), ಉಮೇಶ್‌ ಕೆ.ಕೃಪ(ಚಿತ್ರ: ಟಗರುಪಲ್ಯ)

‘ಹರಿ’ಯ ರಾಗ ಲಹರಿ

ವಿ.ಹರಿಕೃಷ್ಣ ‘ಕಾಟೇರ’ ಚಿತ್ರದ ಸಂಗೀತಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ. ಸಂಗೀತ ನಿರ್ದೇಶಕ ವಿ.ಮನೋಹರ್‌ ಹಾಗೂ ಗಾಯಕಿ ಶಮಿತಾ ಮಲ್ನಾಡ್‌ ಪ್ರಶಸ್ತಿ ವಿತರಿಸಿದರು.

ವಿ.ಹರಿಕೃಷ್ಣ 1990ರ ದಶಕದಲ್ಲಿ ಹಂಸಲೇಖ, ವಿ.ರವಿಚಂದ್ರನ್, ಸಾಧು ಕೋಕಿಲ, ಗುರುಕಿರಣ್ ಸೇರಿದಂತೆ ಅನೇಕ ಪ್ರಮುಖ ಸಂಗೀತ ನಿರ್ದೇಶಕರಿಗೆ ಸಹಾಯಕರಾಗಿ ಕೆಲಸ ಮಾಡಿದ್ದಾರೆ. 2006ರಲ್ಲಿ ನಟ ದರ್ಶನ್ ಅವರ ಮೊದಲ ನಿರ್ಮಾಣದ ‘ಜೊತೆ ಜೊತೆಯಲಿ’ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರು. ಎರಡು ದಶಕಗಳಲ್ಲಿ 50ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. 2008 ರಲ್ಲಿ ‘ಗಾಳಿಪಟ’, 2009 ರಲ್ಲಿ ‘ರಾಜ್ ದಿ ಶೋ ಮ್ಯಾನ್’ ಮತ್ತು 2010 ರಲ್ಲಿ ‘ಜಾಕಿ’ ಚಿತ್ರದ ಅತ್ಯುತ್ತಮ ಸಂಗೀತಕ್ಕಾಗಿ ಸತತವಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ‍ಪಡೆದಿದ್ದಾರೆ.  2013 ರಲ್ಲಿ ತಮ್ಮದೇ ‘ಡಿ-ಬೀಟ್ಸ್’ ಎಂಬ ಆಡಿಯೊ ಕಂಪನಿಯನ್ನು ಪ್ರಾರಂಭಿಸಿದರು. ಸಾಕಷ್ಟು ಹಿಟ್‌ ಗೀತೆಗಳು ಇವರ ಹೆಸರಿನಲ್ಲಿದೆ. 
ನಾಮನಿರ್ದೇಶನಗೊಂಡಿದ್ದವರು

l ಮಣಿಕಾಂತ್‌ ಕದ್ರಿ ಚಿತ್ರ: ವಿರಾಟಪುರ ವಿರಾಗಿ

l ಮಿದುನ್‌ ಮುಕುಂದನ್‌ ಚಿತ್ರ: ಸ್ವಾತಿ ಮುತ್ತಿನ ಮಳೆ ಹನಿಯೇ

l ಬಿಂದು ಮಾಲಿನಿ ಚಿತ್ರ: ಆಚಾರ್‌ & ಕೋ

l ರಘು ದೀಕ್ಷಿತ್‌ ಚಿತ್ರ: ಆರ್ಕೆಸ್ಟ್ರಾ ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT