ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನಿ ಸಿನಿಮಾ ಜಗತ್ತು; ಹೊಸದೊಂದು ಭರವಸೆ

Last Updated 16 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ಮಧ್ಯ ಪ್ರಾಚ್ಯ ದೇಶಗಳ ಪೈಕಿ ಇರಾನಿ ಸಿನಿಮಾ ಮಾತ್ರ ಜಗತ್ತಿಗೆ ಪರಿಚಿತ ಎಂದವರು ಇರಾನಿ ಸಿನಿಮಾ ನಿರ್ದೇಶಕಿ ಅಯ್ದಾ ಪೆನಾಹೆಂದೆ. ಅಮೆರಿಕದ ಇಂಡಿಪೆಂಡೆಂಟ್‌ ಸಿನಿಮಾಗಳ ದಿಗ್ಗಜ ಜಾರ್‌ಮುಶ್ ಕೂಡ ಇರಾನಿ ಸಿನಿಮಾಗಳ ಕಾವ್ಯಗುಣದ ಬಗ್ಗೆ ಹೇಳುತ್ತಲೇ ಬಂದಿದ್ದು, ಭೂಮಿಯ ಮೇಲಿರುವ ಸಿನಿಮಾ ತೋಟಗಳಲ್ಲಿ ಒಂದು ಎಂದು ಇರಾನಿ ಸಿನಿಮಾಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಿದೆ.

ಇಸ್ಲಾಮಿಕ್ ರಿಪಬ್ಲಿಕ್‌ನಲ್ಲಿ ಇರುವ ಧಾರ್ಮಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕಟ್ಟಳೆಗಳು ಸಿನಿಮಾ ನಿರ್ಮಾಣದ ಮಿತಿಗಳೇ ಹೌದು. ಅಲ್ಲಿ ಸಿನಿಮಾ ನಿರ್ಮಿತಿಗೆ ತನ್ನದೇ ಆದ ಸವಾಲುಗಳಿವೆ. ಜಾಗತಿಕವಾಗಿ ಅತ್ಯುತ್ತಮ ಸಿನಿಮಾಗಳನ್ನು ತಯಾರಿಸುವ ರಾಷ್ಟ್ರಗಳ ಪಟ್ಟಿಯಲ್ಲಿ ಮುಖ್ಯ ಸ್ಥಾನ ಪಡೆದಿದೆ ಇರಾನ್. ಆದಾಗ್ಯೂ ಚಿತ್ರಕಥೆ ಮೊದಲೇ ಸತ್ತೆಯ ಅನುಮತಿ ಪಡೆದಿರಬೇಕಾಗುತ್ತದೆ. ನಂತರವೂ ಸಿನಿಮಾ ಪ್ರದರ್ಶನಕ್ಕೆ ಅನುಮತಿ ಸಿಗುತ್ತದೆಂಬ ಖಾತ್ರಿ ಇರುವುದಿಲ್ಲ. ಜಾಫರ್ ಪನಾಹಿ ನಿರ್ದೇಶಿಸಿದ ‘ದಿ ಟ್ಯಾಕ್ಸಿ’ ಬರ್ಲಿನ್‌ ಚಿತ್ರೋತ್ಸವದಲ್ಲಿ ಅಪಾರ ಪ್ರಶಂಸೆ, ಪ್ರಶಸ್ತಿ ಗಳಿಸಿದ ಸಿನಿಮಾ. ಆದರೆ ಇರಾನ್‌ನಲ್ಲಿ ಈ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಯಿತು. ಕೆಲವರು ಹೆಚ್ಚಿನ ಕಲಾತ್ಮಕ ಸ್ವಾತಂತ್ರ್ಯಕ್ಕಾಗಿ ದೇಶ ತೊರೆದಿರುವುದೂ ಇದೆ.

ಆದರೆ ಇತ್ತೀಚೆಗೆ ಅಲ್ಲಿ ಬರುತ್ತಿರುವ ಸಿನಿಮಾಗಳನ್ನು ಗಮನಿಸಿದರೆ ಅಲ್ಲಿನ ಪರಿಸರದೊಳಗೆ ಸಕಾರಾತ್ಮಕ ಬದಲಾವಣೆಯೊಂದು ನಡೆದಿರುವ ಸೂಚನೆಯೇನೊ ಅನಿಸುವಂತಿದೆ.

ಉತ್ತರ ಇರಾನಿನ ಕಿತ್ತಳೆ ತೋಟಗಳಿಂದ ಹಣ್ಣು ಕಿತ್ತು ಮಾರಾಟಕ್ಕೆ ಕಳಿಸುವ ಗುತ್ತಿಗೆ ವ್ಯವಹಾರಗಳಲ್ಲಿ ಪುರುಷರದೇ ಪ್ರಾಬಲ್ಯ. ಅದರಲ್ಲಿ ತೊಡಗಿಕೊಳ್ಳುವ ಪರಿಸ್ಥಿತಿ ಅಬಾನ್‌ ಪಾಲಿಗೆ. ಏಕಾಂಗಿಯಾಗಿ ಗುತ್ತಿಗೆ ಗಿಟ್ಟಿಸಿಕೊಂಡು ಅಲ್ಲಿ ತನ್ನನ್ನು ಸ್ಥಾಪಿಸಿಕೊಳ್ಳಲು ಆಕೆಗೆ ಹಲವಾರು ಅಡೆತಡೆ, ಕಿರಿಕಿರಿ. ಕಡೆಗೆ ಎಲ್ಲವನ್ನೂ ಮೆಟ್ಟಿ ನಿಲ್ಲುವ ಕಥೆ ‘ಆರೇಂಜ್ ಡೇಸ್’. ಪತಿ ಅವಳ ಈ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರೂ ಸಮಯ ಬಂದಾಗ ಅವಳ ಬೆಂಬಲಕ್ಕೆ ನಿಲ್ಲುತ್ತಾನೆ. ಮಧ್ಯಮ ವರ್ಗದ ಕುಟುಂಬದಲ್ಲಿ ಮಹಿಳೆ ಎದುರಿಸುವ ದಾಂಪತ್ಯ ಸಮಸ್ಯೆಯೂ ಇದೆಯಾದರೂ ಅದು ಅವಳು ಎದುರಿಸಬೇಕಾದ ಸವಾಲುಗಳಿಗೆ ಇನ್ನೊಂದು ಸೇರ್ಪಡೆ ಎಂದಷ್ಟೆ ಬಿಂಬಿತವಾಗಿದೆಯೆ ಹೊರತು ಅವಳು ಸ್ವಂತಿಕೆ ತೋರುವ ದಿಟ್ಟೆ ಎನ್ನುವ ಕಾರಣಕ್ಕೆ ಅವಳಿಗೆ ಸಿಕ್ಕ ಶಿಕ್ಷೆ ಎನ್ನುವ ರೀತಿಯಲ್ಲಿ ಅಲ್ಲ. ನಿಷ್ಠುರ ನಡೆಯ ಹೆಣ್ಣುಮಗಳ ಚಿತ್ರಣ ಎಲ್ಲೂ ಅಸಹಜವಾಗಿಲ್ಲ.

‘ಹ್ಯಾಟ್ರಿಕ್‌’ ಎಂಬ ಇರಾನಿ ಸಿನಿಮಾದಲ್ಲಿ ಕೂಡ ಯುವ ದಂಪತಿ, ಅವರ ಸ್ನೇಹಿತ ಮತ್ತು ಅವರ ಸ್ನೇಹಿತೆ ಒಂದು ಮನೆಯಲ್ಲಿ ಪಾರ್ಟಿ ಮುಗಿಸಿಕೊಂಡು ರಾತ್ರಿ ಮನೆಗೆ ಮರಳುವ ದೃಶ್ಯವಿದೆ. ಸ್ನೇಹಿತರೊಟ್ಟಿಗೆ ಬರುವಾಗ ಮಹಿಳೆ ಕಾರಿನಿಂದ ಮುಖ ಹೊರಗೆ ಹಾಕಿ ತಂಗಾಳಿ ಆಸ್ವಾದಿಸುವುದನ್ನು ಇನ್ನೊಬ್ಬ ಮದುವೆಯಾದ ಮಹಿಳೆ ತನ್ನ ಪ್ರೊಫೆಶನಲ್‌ ಕ್ಯಾಮೆರಾದಲ್ಲಿ ಬಿಡುವಿಲ್ಲದೇ ಕ್ಲಿಕ್ಕಿಸುವ ದೃಶ್ಯ ಚೇತೋಹಾರಿಯಾಗಿದೆ. ಫೋಟೊಗ್ರಫಿ ಅವಳ ಹೊಸ ಹವ್ಯಾಸಕ್ಕೊಂದು ಸೇರ್ಪಡೆ ಎನ್ನುವುದು ಮತ್ತು ಇನ್ನೊಬ್ಬಾಕೆಯು ವಿದೇಶಿ ಭಾಷೆಯನ್ನು ಕಲಿಯುವ ತರಗತಿಯಲ್ಲಿ ಸ್ನೇಹಿತನ ಪರಿಚಯವಾಗಿರುವುದು ಮುಂದಿನ ದೃಶ್ಯಗಳಲ್ಲಿ ಅನಾವರಣಗೊಳ್ಳುತ್ತದೆ.

ಸದಾ ನಿಗಾವಹಿಸುವ ತಂದೆ ತಾಯಿ, ಶಿಕ್ಷಕರ ನಡೆಗೆ ಬೇಸತ್ತ ಹದಿಮೂರು ವರ್ಷದ ಇರಾನಿ ವಿದ್ಯಾರ್ಥಿನಿ ಕೊನೆಗೆ ಅತ್ಯಂತ ಕಟ್ಟುನಿಟ್ಟಿನ ಸನ್ನಿವೇಶದಿಂದ ಹೊರನಡೆಯುವ ಬಂಡಾಯದ ಕಥೆ ಕೆನಡಿಯನ್ ಸಿನಿಮಾ ‘ಆವ’ದಲ್ಲಿದೆ.

ಇರಾನಿನ ಗುಡ್ಡದ ಬಳಿಯ ಹಳ್ಳಿಯ ಹುಡುಗಿಯೊಬ್ಬಳು ಕಲಾವಿದೆಯಾಗಬೇಕೆಂಬ ಹಂಬಲದಿಂದ ಖ್ಯಾತ ನಟಿಯನ್ನೇ ವಾಟ್ಸ್ಆಪ್‌ ವಿಡಿಯೊ ಸಂದೇಶದ ಮೂಲಕ ಸಂಪರ್ಕಿಸುವ ಕತೆ ‘ಥ್ರೀ ಫೇಸಸ್‌’. ಇದು ಕೂಡ ‘ಟ್ಯಾಕ್ಸಿ’ ಚಿತ್ರ ಖ್ಯಾತಿಯ ನಿರ್ದೇಶಕ ಜಾಫರ್ ಪನಾಹಿ ನಿರ್ದೇಶಿಸಿದ ಸಿನಿಮಾ. ಇಲ್ಲಿಯೂ ಮಹಿಳಾ ಶೋಷಣೆಯ ಅನೇಕ ವಿಧಗಳ ಅನಾವರಣವೇ. ಕಡೆಗೆ ನಟಿಯೊಟ್ಟಿಗೆ ಹೊರಟುಬಿಡುವ ಬಾಲಕಿಯ ನಿರ್ಧಾರ ಹೊಸದೊಂದು ಲೋಕಕ್ಕೆ ಅವರು ತೆರೆದುಕೊಳ್ಳುತ್ತಿರುವ ಸೂಚನೆಯಂತಿದೆ. ‘ಯೆಲ್ಲೊ’ ಸಿನಿಮಾ ಕೂಡ ವಿಜ್ಞಾನಿಗಳು ತಮ್ಮ ಆವಿಷ್ಕಾರಕ್ಕೆ ಪೇಟೆಂಟ್‌ ಪಡೆದು ಇಟಲಿಗೆ ಹೋಗುವ ಕನಸು ಕಂಡುದನ್ನು ತೋರಿದೆ.

ಇರಾನಿ ಸಿನಿಮಾ ‘ಬಾಂಬ್‌ ಎ ಲವ್‌ ಸ್ಟೋರಿ’ ಯುದ್ಧದ ಸಮಯದ ಕತೆ ಹೇಳುತ್ತದೆ. ಇರಾನ್ –ಇರಾಕ್ ಯುದ್ಧದ ತೀವ್ರತೆ, ಆತಂಕದ ದಿನಗಳು. ಚಿಕ್ಕವನಿದ್ದಾಗ ಕಳೆದುಕೊಂಡ ತಮ್ಮನ ನೆನಪಿನಲ್ಲಿ ನಾಯಕ ಇಂದೂ ಸಂತಸದಿಂದ ಇರಲಾರ. ಮಾತಿಲ್ಲದ ಕ್ಷಣಗಳೇ ಹೆಚ್ಚು. ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವುದು ಕಠಿಣ. ಕಟ್ಟಿಕೊಂಡ ಹೆಂಡತಿ ಒಂದು ದಿನ ‘ನಮ್ಮ ನಡುವೆ ಮಾತಿಲ್ಲದೆ ಎಷ್ಟು ದಿನವಾದ್ವು? ನಿರ್ದಿಷ್ಟ ಸ್ಯಾಂಡ್‌ವಿಚ್‌ ತಿನ್ನುವಂತಿಲ್ಲ, ಇಷ್ಟದ ಹಾಡು ಕೇಳುವಂತಿಲ್ಲ ತಮ್ಮನ ನೆನಪು ಮಾಡಿಕೊಟ್ಟಂತೆ ಆಗಿಬಿಡುತ್ತದೆ... ಮನಬಿಚ್ಚಿ ನಗುವಂತೆಯೂ ಇಲ್ಲವಲ್ಲ ಇದೆಂಥ ಬದುಕು? ಯಾವ ಕ್ಷಣದಲ್ಲಿ ನಮ್ಮ ಮೇಲೆ ಬಾಂಬ್‌ ಬೀಳುತ್ತದೊ ಗೊತ್ತಿಲ್ಲ ಆದರೂ ನಾವು ಬದುಕುವುದು ಹೀಗೆ...’ ಎಂದೆಲ್ಲ ಜೋರುದನಿಯಲ್ಲಿ ಕೂಗಾಡಿಬಿಡುತ್ತಾಳೆ. ಅವನು ಯೋಚಿಸತೊಡಗುತ್ತಾನೆ. ಹಿಂದಿನ ದಿನದ ಆಕೆಯ ಪ್ರಶ್ನೆಗಳಿಂದಾಗಿ ಆಲೋಚನೆಗೆ ಬಿದ್ದವನ ಮನ ಮಥಿಸತೊಡಗಿರುತ್ತದೆ. ಶಾಲೆಯ ಬಾಲಕನೊಬ್ಬನ ಮುಗ್ಧ ಪ್ರೀತಿ ತುಂಬಿದ ಪತ್ರವೂ ಅವನ ಕೈಸೇರಿ ಅಂತೂ ಅವನು ಮನಬಿಚ್ಚಿ ಮಾತನಾಡಲು ಹಾತೊರೆಯುತ್ತಾನೆ. ಆಕೆಯ ವ್ಯಕ್ತಿತ್ವ, ಅವಳು ನಗುವ ರೀತಿ ತನಗೆಷ್ಟು ಇಷ್ಟ ಎಂದು ಹೇಳುತ್ತಲೇ ಅವಳನ್ನು ಗ್ರಹಿಸಿದ ಬಗೆಯನ್ನು ನಿವೇದಿಸಿಕೊಳ್ಳತೊಡಗುವುದು ಚಿತ್ರದ ಬಹುಮುಖ್ಯ ಘಟ್ಟ. ಆಕೆ ತಲೆಯ ಮೇಲೆ ಹೊದ್ದ ಸ್ಕಾರ್ಫ್ ಅವಳ ಸಾಂಪ್ರದಾಯಿಕ ಚಹರೆಯನ್ನೇ ಬಿಂಬಿಸಿದರೂ ಬದಲಾದ ಕಾಲದಲ್ಲಿ ತನ್ನ ಬಯಕೆಯನ್ನು ಆಸೆ, ಆಕಾಂಕ್ಷೆಗಳನ್ನೂ ಧೈರ್ಯವಾಗಿ ವ್ಯಕ್ತಪಡಿಸುವ ಛಾತಿ ತೋರುವುದು ಆಕೆಯ ಪಾತ್ರಕ್ಕೆ ಗಟ್ಟಿತನ ನೀಡಿದೆ. ಪತಿಯ ಎದುರು ನಿಂತು ಹೀಗೇಕೆ? ಎಂದು ಕೇಳುವ ಸಂಪ್ರದಾಯವಾದೀ ಮಹಿಳೆಯನ್ನು ನಾವು ಕಲ್ಪಿಸಿಕೊಳ್ಳುವುದು ಸಾಧ್ಯವಿತ್ತೆ? ಜಗತ್ತಿನ ಯಾವುದೊ ಮೂಲೆಯಲ್ಲಿ ಇರುವ ಸಂಪ್ರದಾಯವಾದೀ ಮನೆಗಳ ಹಜಾರವನ್ನು ನಾವು ಹೊಕ್ಕು ನೋಡುವಂತಾದುದು ಹೀಗೆ ವಿಶ್ವ ಸಿನಿಮಾಗಳ ಸಹಜ ಜಗತ್ತಿನ ಅನಾವರಣಗಳ ಮೂಲಕ. ಇಲ್ಲವಾದರೆ ಎತ್ತರೆತ್ತರದ ಕಾಂಪೌಂಡುಗಳ ಒಳಗೆ, ಮುಚ್ಚಿದ ಬಾಗಿಲುಗಳ ಹಿಂದೆ ಹಿಜಾಬು, ಸ್ಕಾರ್ಫು, ಬುರ್ಖಾ ಧರಿಸಿದ ಮಹಿಳೆಯರ ಮನಸು, ಅವರು ಬದಲಾದ ಕಾಲದೊಂದಿಗೆ ಸ್ಪಂದಿಸುತ್ತ ಬದುಕು ಕಟ್ಟಿಕೊಂಡು ಕೋಮಲ ದಿಟ್ಟೆಯರಾಗಿರುವುದು ಎಲ್ಲಿ ತಿಳಿಯುತ್ತಿತ್ತು? ಪ್ರೀತಿ, ಮುನಿಸು, ಮಮತೆಗಳಂತಹ ಭಾವಗಳೆಲ್ಲ ಎಲ್ಲ ಕಡೆಯೂ ಒಂದೇ ಎಂಬುದು ಇವರು ಬೇರೆಯೇ ಎಂದುಕೊಂಡಿದ್ದ ಉಳಿದವರಿಗೆ ಹೇಗೆ ಅರ್ಥವಾಗಬೇಕಿತ್ತು?

***

ಈ ಬಾರಿಯ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಇರಾನಿ ಪರ್ಷಿಯನ್, ಅರೇಬಿಕ್ ಮತ್ತು ಇತರ ಕೆಲವು ದೇಶಗಳ ಸಿನಿಮಾಗಳಲ್ಲೂ ಮಸ್ಲಿಂ ಪಾತ್ರಗಳೇ ಪ್ರಧಾನವಾಗಿದ್ದುದು ವಿಶೇಷ. ಅದರಲ್ಲೂ ಮುಸ್ಲಿಂ ದೇಶಗಳಿಂದ ಬಂದ ಸಿನಿಮಾಗಳು ಬಹಳ ದಿಟ್ಟತನ ಮೆರೆದಿವೆ.

ಶಿಕ್ಷಣ ಪಡೆದ ಅಲ್ಲಿನ ಸ್ತ್ರೀ ಪಾತ್ರಗಳು ತಮ್ಮ ಹಕ್ಕುಗಳ ಬಗ್ಗೆ ಮಾತನಾಡುತ್ತಿವೆ. ಮದ್ಯ ಸೇವನೆ, ಸಿಗರೇಟ್‌ ಸೇವನೆ, ರಾತ್ರಿ ಪಾರ್ಟಿ, ಬುರ್ಖಾ ಹಾಕದ ಬಿಚ್ಚು ಮನದ ಸ್ತ್ರೀಯರ ಆತ್ಮೀಯ ಬಂಧದೊಡನೆಯ ಆಪ್ತ ಕ್ಷಣಗಳು ಕೂಡ ಈ ಸಿನಿಮಾ ದೃಶ್ಯಗಳ ಚೌಕಟ್ಟಿನಲ್ಲಿದ್ದುದು ವಿಶೇಷ. ಕೇವಲ ಇವುಗಳನ್ನು ಒಳಗೊಂಡ ಕಾರಣಕ್ಕೆ ಅಲ್ಲ, ಕತೆಯ ಪ್ಲಾಟ್‌ ಕೂಡ ಅದೇ ನೆಲದ್ದು. ಮಹಿಳೆಯ ಅಷ್ಟೇ ಅಲ್ಲ, ಎಲ್ಲರ ಹಕ್ಕುಗಳು ತೀವ್ರ ಮೂಲಭೂತವಾದಿ ಚಟುವಟಿಕೆಗಳಿಂದ ದಮನಿತವಾಗಿ ನಲುಗಿದ ನೆಲದಿಂದ ಇಂಥ ಸಿನಿಮಾ ಬರುತ್ತಿರುವುದು ಎಂಬ ಕಾರಣಕ್ಕೆ ಇದು ವಿಶೇಷ ಎನಿಸುತ್ತದೆ. ಒಂದೊಮ್ಮೆ ಕೊಮೇನಿ ಆಳ್ವಿಕೆಯಿಂದ ಹೊರಬಂದ ಇರಾನ್‌ ಸ್ಥಿತ್ಯಂತರ ಕಾಣುತ್ತ ಅನೇಕ ವಿಷಯಗಳಲ್ಲಿ ಬದಲಾಗುತ್ತಿರುವುದರ ಸೂಚನೆಯೆ? ಸಾಮಾನ್ಯವಾಗಿ ಚಿತ್ರಕಥೆಯಲ್ಲಿ ಸಂಘರ್ಷ, ಕೋಮು ಗಲಭೆ, ಸಿದ್ಧ ಮಾದರಿಯ ಮುಸ್ಲಿಂ ಪಾತ್ರಗಳು ನಮ್ಮ ಕಣ್ಮುಂದೆ ಬರುತ್ತವೆ.

ಈ ಸಿನಿಮಾಗಳಲ್ಲಿ ಸಂಘರ್ಷ, ಸಮಸ್ಯೆ ಇಲ್ಲವೆಂತಲ್ಲ. ಆದರೆ, ಅದನ್ನು ಮೆಟ್ಟಿ ನಿಲ್ಲುವ ಛಾತಿಯೂ ಇದೆ. ಒಟ್ಟಾರೆ ಅಭಿವೃದ್ಧಿಪರವಾಗಿ ಬದಲಾದ ನಡೆ ಹೊಸ ಬೆಳವಣಿಗೆಯ ಬಗ್ಗೆ ಬೇರೇನನ್ನೋ ಹೇಳುತ್ತಿದೆ ಎನಿಸುವಂತಿವೆ ಸಮಕಾಲೀನ ಸಿನಿಮಾಗಳು. ರಾಜಕೀಯ ಅವ್ಯವಸ್ಥೆ ಮತ್ತು ಪ್ರತ್ಯೇಕತೆಯ ಸಂದರ್ಭದಲ್ಲಿ ಕಲೆ ಮತ್ತು ಮಾನವೀಯ ಕತೆಗಳ ಮೂಲಕ ತನ್ನ ದೇಶವನ್ನು ಜಗತ್ತಿಗೆ ಪರಿಚಯಿಸಿದವ ಇರಾನಿನ ಯುವ ನಿರ್ದೇಶಕ ಅಸ್ಗರ್‌ ಫರಾದಿ. ಅಬ್ಬಾಸ್ ಕಿಯರೋಸ್ತಾಮಿ ಮತ್ತು ಇತರರು ತಮ್ಮ ಸಂಸ್ಕೃತಿಯನ್ನು ಪ್ರಚುರಪಡಿಸುವಲ್ಲಿ ಮುಖ್ಯ ಪಾತ್ರ ವಹಿಸಿದವರು. 2012ರಲ್ಲಿ ‘ಎ ಸೆಪರೇಶನ್‌’ ಗೆ ನಂತರ 2017ರಲ್ಲಿ ‘ದಿ ಸೇಲ್ಸ್‌ಮನ್’ ಸಿನಿಮಾಕ್ಕಾಗಿ ಅಸ್ಗರ್ ಫರಾದಿ ಅಕಾಡೆಮಿ ಪ್ರಶಸ್ತಿ ಪಡೆದುದನ್ನು ಗಮನಿಸಬಹುದು.

ಸಮಕಾಲೀನ ಸಿನಿಮಾಗಳಲ್ಲಿ ಮಹಿಳೆಯ ಸಾಂಪ್ರದಾಯಿಕ ಪಾತ್ರಗಳು ಬದಲಾಗುತ್ತಿವೆ. ಪಾತ್ರ ಕಟ್ಟಿಕೊಡುವಾಗ ವ್ಯಕ್ತಿತ್ವ ಕಟ್ಟಿಕೊಡುವ ನಿಟ್ಟಿನಲ್ಲಿ ಅವರನ್ನು ಸಹಜವಾಗಿ ಬಿಂಬಿಸುತ್ತಿವೆ. ಎಷ್ಟರಮಟ್ಟಿಗೆ ಸಹಜ ಎಂದರೆ ಕಂಟೆಂಪರರಿ ಸಿನಿಮಾಗಳ ಮೂಲಕ ನಾವೇ ಅವರಿರುವ ದೇಶ, ಊರು, ಮನೆಗಳಿಗೆ ಹೋಗಿ ಬಂದಂತೆ. ಕಟ್ಟುಪಾಡುಗಳು ಇಲ್ಲಿನ ಕಥೆಯ ಪಾತ್ರಗಳಿಗೂ ಇವೆ. ಪಾತ್ರ ಇರುವ ಕಥೆಯ ಸನ್ನಿವೇಶ ಮತ್ತು ಕತೆ ನಡೆಯುವ ಸ್ಥಳದಲ್ಲೂ ಇವೆ. ಆದರೂ ಅವರ ಬದಲಾದ ವ್ಯಕ್ತಿತ್ವ ಹೊರಜಗತ್ತಿಗೆ ತೋರ್ಪಡಿಸಿಕೊಳ್ಳದೇ ಉಳಿದುಬಿಡಬಹುದಾದ ಸಾಧ್ಯತೆಗಳೇ ಹೆಚ್ಚಿದ್ದವು. ಅವರ ಜಗದೊಳಗೆ ಹೊಕ್ಕು ನೋಡುವ ಸಾಧ್ಯತೆ ಇಲ್ಲದೆ ಒಂದು ರೀತಿಯ ಭಯ (ಇಸ್ಲಾಮೋಫೋಬಿಯಾ) ಸಮಾಜದಲ್ಲಿ ಇನ್ನೂ ಇದೆ. ಅದೇ ಹಳೆಯ ಸಿದ್ಧ ಮಾದರಿ ತೋರಿಸುವುದು ಹಾಗೂ ತಪ್ಪಾಗಿ ಬಿಂಬಿಸುವುದರ ಮೂಲಕ ಇಸ್ಲಾಮಾಫೋಬಿಯವನ್ನು ಪೋಷಿಸುವುದು ಮತ್ತು ಅದನ್ನು ವ್ಯಾಖ್ಯಾನಿಸುವುದು ಎರಡೂ ನಡೆಯುತ್ತಿದೆ. ಹಲವು ಕಟ್ಟುಪಾಡುಗಳ ಮೂಲಕ ಹತ್ತಿಕ್ಕಿದ ಮಹಿಳೆ ಮತ್ತು ಅಗತ್ಯಕ್ಕಿಂತ ಹೆಚ್ಚೇ ರೋಷ, ಕೆಚ್ಚು ತುಂಬಿದ ಹಿಂಸಾತ್ಮಕ ಮಧ್ಯಪ್ರಾಚ್ಯ ರಾಷ್ಟ್ರದ ಪುರುಷ ಪಾತ್ರಗಳೇ ಮಾಧ್ಯಮಗಳಲ್ಲಿ ಮತ್ತು ಮನರಂಜನಾ ಕ್ಷೇತ್ರದಲ್ಲಿ ಹೆಚ್ಚಿನ ಸ್ಥಳವನ್ನು ಆಕ್ರಮಿಸುವಂತಾಗಿದೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಿನಿಮಾ ಕೂಡ ಪ್ರಯತ್ನಿಸಬಹುದಾಗಿದೆ. ಆದರೆ ಇದರ ಬದಲಾಗಿ ಮುಖ್ಯವಾಹಿನಿಯ ಸಿನಿಮಾಗಳೇ ಇಂತಹ ಪ್ರಕ್ರಿಯೆಯನ್ನು ನಂಬಿಕೆಯನ್ನು ಗಟ್ಟಿಗೊಳಿಸುವುದೂ ಇದೆ. ಸಿನಿಮಾದಂತಹ ಪ್ರಭಾವಿ ಮಾಧ್ಯಮಗಳು ಇಂತಹ ಪೂರ್ವಗ್ರಹಗಳು ಮತ್ತು ತಪ್ಪು ಗ್ರಹಿಕೆಗಳನ್ನು ನಿವಾರಿಸಲು ಸಾಧ್ಯವಿದೆ. ಸಿನಿಮಾ ಅಂಥದೊಂದು ಶಕ್ತಿಯುತ ವೇದಿಕೆ. ಪರ್ಯಾಯ ನಿರೂಪಣೆಗಳ ಮೂಲಕ ಬದಲಾವಣೆ ತರುವ ಸಾಮರ್ಥ್ಯ ಸಿನಿಮಾ ಮಾಧ್ಯಮಕ್ಕಿದೆ.

ನಮ್ಮ ಸುತ್ತಲಿನ ಜಗತ್ತನ್ನು ಅರಿತುಕೊಳ್ಳುವ ದಾರಿಯಲ್ಲಿ ಒಂದು ಸಮುದಾಯದ ಕುರಿತಾದ ನಮ್ಮ ಸಾಂಸ್ಕೃತಿಕ ಗ್ರಹಿಕೆಗಳ ಬಗ್ಗೆ ನಮಗೆ ಲಭ್ಯವಿರುವ ಈ ದೃಶ್ಯ ವೇದಿಕೆಗಳು ಏನು ಹೇಳುತ್ತಿವೆ ಎಂಬುದು ಪ್ರಶ್ನೆ. ನಮ್ಮ ಕಥೆಗಳಲ್ಲಿ ಅವರ ಜೀವನಶೈಲಿ ನಿಗೂಢವಾಗೇ ಉಳಿದುಬಿಟ್ಟಿದೆಯೆ? ಎಂದು ಅನಿಸಿಬಿಡುತ್ತದೆ.

ಕನಿಷ್ಠ ಒಂದಾದರೂ ಮುಸ್ಲಿಂ ಪಾತ್ರ ಇರುವ ಸಿನಿಮಾವೊಂದರಲ್ಲಿ ಆ ಪಾತ್ರವು ಭಯೋತ್ಪಾದನೆಯ ಬಲಿಪಶು ಅಥವಾ ಅಪರಾಧಿಯ ಬಗ್ಗೆ ಮಾತನಾಡುತ್ತದೆಯೆ? ಅತಾರ್ಕಿಕವಾಗಿ ಕೋಪೋದ್ರಿಕ್ತ ಎಂದು ಬಿಂಬಿಸಲಾಗಿದೆಯೆ? ಮೂಢನಂಬಿಕೆ, ಸಾಂಸ್ಕೃತಿಕವಾಗಿ ಹಿಂದುಳಿದ ಅಥವಾ ಆಧುನಿಕತೆಗೆ ತೆರೆದುಕೊಳ್ಳದಂತಹ ವ್ಯಕ್ತಿ ಎಂದು ಚಿತ್ರಿತವಾಗಿದೆಯೆ? ಪಾಶ್ಚಾತ್ಯ ಮಾದರಿಯ ಜೀವನಕ್ಕೆ ಮಾರಕವೆಂಬಂತೆ ಪ್ರಸ್ತುತಪಡಿಸಲಾಗಿದೆಯೆ? ಒಂದು ವೇಳೆ ಪಾತ್ರವು ಪುರುಷ ಆಗಿದ್ದಲ್ಲಿ ಸ್ತ್ರೀದ್ವೇಷಿಯಾಗಿ ಪಾತ್ರವು ಮಹಿಳೆಯಾಗಿದ್ದಲ್ಲಿ ಪುರುಷನಿಂದ ದಬ್ಬಾಳಿಕೆಗೆ ಒಳಪಟ್ಟವಳಂತೆ ಚಿತ್ರಿಸಿದ್ದಾರೆಯೆ? ಈ ಎಲ್ಲ ಪ್ರಶ್ನೆಗಳಲ್ಲಿ ಒಂದಾದರೂ ಪ್ರಶ್ನೆಗೆ ಹೌದು ಎಂಬ ಉತ್ತರ ದೊರೆತರೆ ಆ ಸಿನಿಮಾ ರಿಜ್‌ ಪರೀಕ್ಷೆಯಲ್ಲಿ ಫೇಲಾದಂತೆಯೇ. ಈ ಪರೀಕ್ಷೆ ದೃಶ್ಯಮಾಧ್ಯಮಗಳಲ್ಲಿ ಮುಸ್ಲಿಮರ ಚಿತ್ರಣವನ್ನು ಅಳೆಯಲು ರೂಪುಗೊಂಡಿದ್ದು.

ಇದನ್ನು ಸೂಕ್ತವಾಗಿ ಬದಲಿಸುವ ದಾರಿಯೊಂದಿದೆ. ಮುಸ್ಲಿಮರು ಪ್ರತಿನಿಧಿಸುವ ಸಂಸ್ಕೃತಿ ಮತ್ತು ಅವರ ಸುತ್ತಲಿನ ಕಥೆಗಳ ಸವಾಲುಗಳ ಬಗ್ಗೆ ಪರ್ಯಾಯ ಆಲೋಚನಾ ಕ್ರಮವನ್ನು ಉತ್ತೇಜಿಸುವುದು. ಇಂತಹ ಪರೀಕ್ಷೆಯೇ ಒಟ್ಟಾರೆ ಸಿನಿಮಾ ಉದ್ಯಮಕ್ಕೆ ಸವಾಲೊಡ್ಡುವಲ್ಲಿ ಮೊದಲ ಹೆಜ್ಜೆ ಇರಿಸಿದಂತೆ. ವಿಶ್ವ ಸಿನಿಮಾ ಜಗತ್ತು ಕೂಡ ವಿವಿಧ ಸ್ಥಳಗಳ, ಜನರ ಇನ್ನೂ ಸಂಕೀರ್ಣ ಚಿತ್ರಣ ಒದಗಿಸಬಲ್ಲುದು.

ಟುನಿಶಿಯಾ ಸಿನಿಮಾ ‘ಫತ್ವಾ’ ಸಂಕೀರ್ಣತೆಯನ್ನು ಸರಳವಾಗಿ, ಅಷ್ಟೇ ಬಿಗಿಯಾದ ನಿರೂಪಣೆಯಿಂದ ಹೇಳುತ್ತ ಗಮನ ಸೆಳೆಯುತ್ತದೆ. ಫ್ರಾನ್ಸ್‌ನಲ್ಲಿ ನೆಲೆಸಿದ ಬ್ರಾಹಿಮ್, ಮಗ ಸತ್ತ ಸುದ್ದಿ ತಿಳಿದು ಟುನಿಶಿಯಾಕ್ಕೆ ಧಾವಿಸುತ್ತಾನೆ. ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ತೋರುವ ಸಾವಿನ ಕಾರಣ ಕೆದಕುತ್ತ ಹೋದಂತೆ ದಂಗುಬಡಿಸುವ ವಿಷಯಗಳು ನಮ್ಮೆದುರು ತೆರೆದುಕೊಳ್ಳುತ್ತ ಹೋಗುತ್ತವೆ. ತೀವ್ರವಾದಿ ಇಸ್ಲಾಂ ಗುಂಪಿನಲ್ಲಿ ಸಕ್ರಿಯನಾಗಿದ್ದ ಮಗನನ್ನು ಪ್ರಭಾವಿಸಿದ ಅಂಶಗಳನ್ನು ಒಂದೊಂದಾಗಿ ಹುಡುಕಿ ಹೋದಂತೆ ತಾಯಿ ತನ್ನ ಸಿದ್ಧಾಂತಗಳಿಗಾಗಿ ಮಗನನ್ನೂ ತ್ಯಾಗ ಮಾಡಬೇಕಾದ ಸ್ಥಿತಿ ಎದುರಿಸಿರುವುದು ಅರಿವಿಗೆ ಬರುತ್ತದೆ. ಕಠಿಣ ನಿಲುವಿನ ದಿಟ್ಟ ಮಹಿಳೆ, ರಾಜಕೀಯ ಹೋರಾಟದಲ್ಲೂ ಅಷ್ಟೇ ದೃಢವಾಗಿ ತೊಡಗಿರುವ ಚಿತ್ರಣ ಅಬ್ಬಾ ಎನಿಸುವಂತೆ ಮಾಡುವ ಕೆಲವು ಅಂಶಗಳಲ್ಲಿ ಒಂದು. ಕಡೆಗೆ ಅವಳು ಪತಿಯನ್ನೂ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಇದೆಯೆಂದರೂ ತನ್ನ ಅಭಿವ್ಯಕ್ತಿಯನ್ನು ಬಿಟ್ಟುಕೊಡಲಾರಳು. ಆಕೆಯ ಪಾತ್ರ ರೂಪಿಸುವಲ್ಲಿ ಸಿದ್ಧ ಮಾದರಿಗಳಿಗೆ ಅಂಟಿಕೊಂಡಿರದೇ ಮುಸ್ಲಿಂ ಮಹಿಳೆಯರಲ್ಲೂ ಬದಲಾಗುತ್ತಿರುವ ಧೋರಣೆಯನ್ನು ಸಶಕ್ತವಾಗಿ ಅಷ್ಟೇ ಸಹಜವಾಗಿ ವಾಸ್ತವದ ನೆಲೆಗಟ್ಟಿನಲ್ಲಿ ಕಟ್ಟಿಕೊಟ್ಟ ರೀತಿ ಅನನ್ಯ.

ಅನೇಕ ಕ್ಲಿಷ್ಟ ಪರಿಸ್ಥಿತಿಯ ನೆಲದಿಂದಲೇ ಇಷ್ಟೆಲ್ಲ ವೈವಿಧ್ಯಮಯ ವಸ್ತು ವಿಷಯಗಳುಳ್ಳ ಸಕಾರಾತ್ಮಕ ಚಿತ್ರಣದ ಸಿನಿಮಾ ನಿರ್ಮಾಣ ಸಾಧ್ಯವಾಗುತ್ತಿರುವುದು ಭರವಸೆ ಮೂಡಿಸುವಂತಿದೆ. ಪ್ರಜಾಪ್ರಭುತ್ವ ದೇಶವಾದ ನಮ್ಮಲ್ಲಿ ಇಂತಹ ಸಿನಿಮಾಗಳು ಬಂದರೆ ಪ್ರತಿಕ್ರಿಯೆ ಹೇಗಿರುತ್ತಿತ್ತೊ ಎಂಬ ಕಾರಣಕ್ಕೆ ಈ ಬೆಳವಣಿಗೆ ವಿಸ್ಮಯ ಮೂಡಿಸುತ್ತದೆ!

ಉತ್ತಮ ಸಿನಿಮಾ ಮಾತ್ರದಿಂದಲೇ ಎಲ್ಲ ಸಮಸ್ಯೆಗಳು ಇತ್ಯರ್ಥವಾಗುತ್ತವೆ ಅಂತೇನಿಲ್ಲ. ಆದರೆ ಖಂಡಿತ ಜನರ ನಡುವಿನ ಅಂತರಗಳ ಸೇತುವಾಗಬಲ್ಲದು. ವಿವಿಧ ನೆಲೆಯ ಪ್ರೇಕ್ಷಕರನ್ನು ತನ್ನೆದುರು ತಂದು ಒಂದೇ ಜಾಗದಲ್ಲಿ ನಿಲ್ಲಿಸಿ ಅವರನ್ನುದ್ದೇಶಿಸಿ ಮಾತನಾಡುವ ಕಾರಣಕ್ಕೆ ಸಿನಿಮಾ ಮಾಧ್ಯಮ ಹಲವು ಭಾವನಾತ್ಮಕ ಬದಲಾವಣೆಗೆ ಮುನ್ನುಡಿ ಬರೆಯಬಹುದು. ಸಿನಿಮಾ ಕೂಡ ಸಂಸ್ಕೃತಿ ಬೆಳೆಸುತ್ತದೆ ಎಂಬುದನ್ನು ಬಹುತೇಕರು ಒಪ್ಪುತ್ತಾರೆ. ಹೊಸ ಪೀಳಿಗೆ ಹುಟ್ಟಿದೆ. ಹೊಸ ಭರವಸೆಯೊಂದಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT