ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಮರ್ಜೆನ್ಸಿ ಸಿನಿಮಾ | ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವಂತಿಲ್ಲ; ಹೈಕೋರ್ಟ್‌

ಸಿಬಿಎಫ್‌ಸಿ ನಡೆಗೆ ಆಕ್ಷೇಪ
Published : 19 ಸೆಪ್ಟೆಂಬರ್ 2024, 15:46 IST
Last Updated : 19 ಸೆಪ್ಟೆಂಬರ್ 2024, 15:46 IST
ಫಾಲೋ ಮಾಡಿ
Comments

ಮುಂಬೈ: ಸೃಜನಾತ್ಮಕ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವಂತಿಲ್ಲ ಎಂದು ಹೇಳಿರುವ ಬಾಂಬೆ ಹೈಕೋರ್ಟ್, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಎದುರಾಗಬಹುದು ಎಂಬ ಆತಂಕದ ಕಾರಣಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು (ಸಿಬಿಎಫ್‌ಸಿ) ಚಲನಚಿತ್ರಕ್ಕೆ ಪ್ರಮಾಣಪತ್ರ ನಿರಾಕರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಬಿ.ಪಿ. ಕೊಲಾಬಾವಾಲಾ ಮತ್ತು ಫಿರ್ದೋಷ್ ಪೂನಿವಾಲಾ ಅವರು ಇದ್ದ ವಿಭಾಗೀಯ ಪೀಠವು, ಕಂಗನಾ ರನೌತ್ ನಟನೆಯ ‘ಎಮರ್ಜೆನ್ಸಿ’ ಸಿನಿಮಾಕ್ಕೆ ಪ್ರಮಾಣಪತ್ರ ನೀಡುವ ವಿಚಾರವಾಗಿ ಯಾವುದೇ ತೀರ್ಮಾನ ಕೈಗೊಳ್ಳದ ಸಿಪಿಎಫ್‌ಸಿ ಕುರಿತು ಅಸಮಾಧಾನ ವ್ಯಕ್ತ‍ಪಡಿಸಿತು. ನಿರ್ಧಾರವ‌ನ್ನು ಸೆಪ್ಟೆಂಬರ್ 25ಕ್ಕೆ ಮೊದಲು ಕೈಗೊಳ್ಳಬೇಕು ಎಂದು ಅದು ಮಂಡಳಿಗೆ ಸೂಚಿಸಿತು.

ಸಿನಿಮಾವೊಂದರಲ್ಲಿ ತೋರಿಸುವುದೆಲ್ಲವನ್ನೂ ನಂಬುವಷ್ಟು ದೇಶದ ಜನ ಮುಗ್ಧರಿದ್ದಾರೆ ಎಂದು ಮಂಡಳಿಯು ಭಾವಿಸಿದೆಯೇ ಎಂಬ ಪ್ರಶ್ನೆಯನ್ನು ಪೀಠವು ಕೇಳಿತು.

ಮಂಡಳಿಯು ರಾಜಕೀಯ ಕಾರಣಗಳಿಗಾಗಿ, ಈ ಸಿನಿಮಾಕ್ಕೆ ಪ್ರಮಾಣಪತ್ರ ನೀಡಲು ತಡ ಮಾಡುತ್ತಿದೆ ಎಂದು ಅರ್ಜಿದಾರರು ದೂರಿದ್ದಕ್ಕೆ ಪ್ರತಿಯಾಗಿ ಪೀಠವು, ಸಿನಿಮಾದ ಸಹ ನಿರ್ಮಾಪಕಿ ಆಗಿರುವ ಕಂಗನಾ ಅವರೇ ಬಿಜೆಪಿ ಸಂಸದೆ ಕೂಡ ಆಗಿದ್ದಾರೆ, ಆಡಳಿತ ಪಕ್ಷವು ತನ್ನದೇ ಸಂಸದೆಗೆ ವಿರುದ್ಧವಾಗಿದೆಯೇ ಎಂದು ಪ್ರಶ್ನಿಸಿತು.

ಕಂಗನಾ ಅವರು ಈ ಸಿನಿಮಾದ ನಿರ್ದೇಶನ ಕೂಡ ಮಾಡಿದ್ದಾರೆ. ಅಲ್ಲದೆ ಅವರು ಸಿನಿಮಾದಲ್ಲಿ ಇಂದಿರಾ ಗಾಂಧಿ ಅವರ ಪಾತ್ರ ನಿಭಾಯಿಸಿದ್ದಾರೆ. ಸಿನಿಮಾ ಬಿಡುಗಡೆಯನ್ನು ವಿಳಂಬಗೊಳಿಸುವ ಉದ್ದೇಶದಿಂದ, ಮಂಡಳಿಯು ಪ್ರಮಾಣಪ‍ತ್ರ ನೀಡುತ್ತಿಲ್ಲ ಎಂದು ಅವರು ಈಚೆಗೆ ದೂರಿದ್ದರು.

‘ನೀವು ಒಂದಲ್ಲ ಒಂದು ಬಗೆಯಲ್ಲಿ ತೀರ್ಮಾನ ಕೈಗೊಳ್ಳಬೇಕು. ಈ ಸಿನಿಮಾ ಬಿಡುಗಡೆ ಸಾಧ್ಯವಿಲ್ಲ ಎಂದು ಹೇಳುವ ಧೈರ್ಯ ನಿಮಗೆ ಇರಬೇಕು. ಆಗ ನಾವು ನಿಮ್ಮ ಧೈರ್ಯವನ್ನು ಮೆಚ್ಚಿಕೊಳ್ಳಬಹುದು. ಆದರೆ ನೀವು (ಮಂಡಳಿ) ಬೇಲಿಮೇಲೆ ಕುಳಿತವರಂತೆ ಆಡುವುದು ನಮಗೆ ಇಷ್ಟವಿಲ್ಲ’ ಎಂದು ಪೀಠವು ಹೇಳಿದೆ.

‘ಎಮರ್ಜೆನ್ಸಿ’ ಸಿನಿಮಾಕ್ಕೆ ಪ್ರಮಾಣಪತ್ರ ನೀಡುವಂತೆ ಮಂಡಳಿಗೆ ಸೂಚನೆ ನೀಡಬೇಕು ಎಂಬ ಕೋರಿಕೆಯೊಂದಿಗೆ ಜೀ ಎಂಟರ್‌ಟೇನ್ಮೆಂಟ್ ಎಂಟರ್‌ಪ್ರೈಸಸ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ. ಈ ಸಿನಿಮಾ ಸೆಪ್ಟೆಂಬರ್ 6ಕ್ಕೆ ಬಿಡುಗಡೆ ಆಗಬೇಕಿತ್ತು.

ಸಿಬಿಎಫ್‌ಸಿ ಪರವಾಗಿ ಹಾಜರಿದ್ದ ಹಿರಿಯ ವಕೀಲ ಅಭಿನವ್ ಚಂದ್ರಚೂಡ್ ಅವರು, ಈ ಚಿತ್ರವನ್ನು ಮಂಡಳಿಯ ಅಧ್ಯಕ್ಷರು ಪುನರ್‌ಪರಿಶೀಲನಾ ಸಮಿತಿಗೆ ಅಂತಿಮ ತೀರ್ಮಾನಕ್ಕಾಗಿ ರವಾನಿಸಿದ್ದಾರೆ ಎಂದು ತಿಳಿಸಿದರು. ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಎದುರಾಗಬಹುದು ಎಂಬ ಆತಂಕ ಇದೆ ಎಂದು ಅವರು ‍ಪೀಠಕ್ಕೆ ತಿಳಿಸಿದರು.

‘ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆ ಆಗಬಹುದು, ಹೀಗಾಗಿ ಸಿನಿಮಾಕ್ಕೆ ಪ್ರಮಾಣಪತ್ರ ನೀಡಲಾಗದು ಎಂಬ ತೀರ್ಮಾನಕ್ಕೆ ಸಿಬಿಎಫ್‌ಸಿ ಬರಬಾರದು. ಇದು ನಿಲ್ಲಬೇಕು. ಇಲ್ಲದಿದ್ದರೆ ನಾವು ಸೃಜನಾತ್ಮಕ ಸ್ವಾತಂತ್ರ್ಯವನ್ನು ಹತ್ತಿಕ್ಕಿದಂತಾಗುತ್ತದೆ’ ಎಂದು ಪೀಠವು ಹೇಳಿತು.

ಜನ ಏಕೆ ಇಷ್ಟು ಸೂಕ್ಷ್ಮವಾಗುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ನನ್ನ ಸಮುದಾಯವನ್ನು ಸಿನಿಮಾಗಳಲ್ಲಿ ಹಾಸ್ಯದ ವಸ್ತುವಾಗಿಸಲಾಗುತ್ತದೆ. ಆದರೆ ನಾವು ನಕ್ಕು ಸುಮ್ಮನಾಗುತ್ತೇವೆ.
–ನ್ಯಾಯಮೂರ್ತಿ ಬಿ.ಪಿ. ಕೊಲಾಬಾವಾಲಾ (ಲಘು ಧಾಟಿಯಲ್ಲಿ ಹೇಳಿದ ಮಾತು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT