ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ರಜನಿಕಾಂತ್‌ಗೆ ಫಾಲ್ಕೆ ಗೌರವ; ಹರಿದು ಬರುತ್ತಿದೆ ಅಭಿನಂದನೆಗಳ ಮಹಾಪೂರ

ತಮಿಳು ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರಿಂದ ಶುಭಾಶಯಗಳ ಸುರಿಮಳೆ
Last Updated 1 ಏಪ್ರಿಲ್ 2021, 8:48 IST
ಅಕ್ಷರ ಗಾತ್ರ

ಚೆನ್ನೈ: ಪ್ರತಿಷ್ಠಿತ ದಾದಾ ಸಾಹೇಬ್‌ ಫಾಲ್ಕೆ ಗೌರವಕ್ಕೆ ಪಾತ್ರರಾಗಿರುವ ಸೂಪರ್‌ ಸ್ಟಾರ್‌ ರಜನಿಕಾಂತ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

‘ತಡವಾಗಿಯಾದರೂ, ಪುರಸ್ಕಾರಕ್ಕೆ ಅವರನ್ನು ಗುರುತಿಸಿರುವುದು ಸ್ವಾಗತಾರ್ಹ‘ ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಹೇಳಿದ್ದರೆ, ತಮ್ಮ ಧೀರ್ಘಕಾಲದ ಸ್ನೇಹಿತ ಮಕ್ಕಳ್‌ ನೀಧಿ ಮಯಮ್ ಪಕ್ಷದ ಸಂಸ್ಥಾಪಕ, ನಟ ಕಮಲ್ ಹಾಸನ್‌ ‘ಉತ್ತಮ ನಟನೊಬ್ಬನಿಗೆ ನೀಡುವ ಅತ್ಯುನ್ನತ ಪುರಸ್ಕಾರಕ್ಕೆ ರಜನಿಕಾಂತ್ ಆಯ್ಕೆ ಮಾಡಿರುವುದು ಅತ್ಯಂತ ಸೂಕ್ತವಾಗಿದೆ‘ ಎಂದು ಶ್ಲಾಘಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಕಮಲ್‌, ‘ಸುಪ್ರೀಂ ಸ್ಟಾರ್ ಮತ್ತು ಆತ್ಮೀಯ ಗೆಳೆಯ ರಜನಿಕಾಂತ್‌ ಅತ್ಯುನ್ನತ ಪ್ರಶಸ್ತಿ, ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರಕ್ಕೆ ಭಾಜನರಾಗಿರುವುದು ಬಹಳ ಸಂತಸ ತಂದಿದೆ. ಪರದೆಯ ಮೇಲೆಯೇ ಅಭಿಮಾನಿಗಳ ಮನ ಗೆಲ್ಲಬಹುದು ಎಂಬುದನ್ನು ಸಾಬೀತುಪಡಿಸಿರುವ ರಜನಿ ಅವರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದು ಶೇ 100ರಷ್ಟು ಸೂಕ್ತವಾಗಿದೆ‘ ಎಂದು ಹೇಳಿದ್ದಾರೆ.

‘ರಜನಿಕಾಂತ್ ಒಬ್ಬ ಆತ್ಮೀಯ ಸ್ನೇಹಿತ ಮತ್ತು ಸರಿಸಾಟಿಯಿಲ್ಲದ ನಟ. ನಟನೆ ಮತ್ತು ಸ್ನೇಹದ ಸಂಕೇತವಾಗಿ ರಜನಿಕಾಂತ್ ಸಿನಿಮಾ ರಂಗದಲ್ಲಿ ಮುಂದುವರಿಯಲಿ‘ ಎಂದು ಸ್ಟಾಲಿನ್ ಟ್ವೀಟರ್‌ನಲ್ಲಿ ಹಾರೈಸಿದ್ದಾರೆ.

ಪಿಎಂಕೆ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಡಾ.ಅನ್ಬುಮಣಿ ರಾಮದಾಸ್, ಎಎಂಎಂಕೆ ನಾಯಕ ಟಿಟಿವಿ ದಿನಕರನ್, ರಾಷ್ಟ್ರೀಯ ಪ್ರಶಸ್ತಿ ವಿಜೇತ ಗೀತ ರಚನೆಕಾರ ವೈರಮುತ್ತು, ಜನಪ್ರಿಯ ಹಾಸ್ಯನಟ ವಿವೇಕ್‌ ಮತ್ತು ಚಲನಚಿತ್ರ ನಟರು ರಜನಿಕಾಂತ್ ಅವರಿಗೆ ಶುಭಾಶಯ ಕೋರಿದ್ದಾರೆ.

ನಟ ರಜನಿಕಾಂತ್‌ ಅವರಿಗೆ 51ನೇ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಗುರುವಾರ ಪ್ರಕಟಿಸಿದ್ದರು.

ತಮಿಳು ಚಿತ್ರರಂಗದಲ್ಲಿ ಖ್ಯಾತ ನಟ ದಿವಂಗತ ಶಿವಾಜಿ ಗಣೇಶನ್ ಮತ್ತು ಖ್ಯಾತ ಸಿನಿಮಾ ನಿರ್ದೇಶಕ ದಿವಂಗತ ಕೆ. ಬಾಲಚಂದರ್ ಅವರು ಫಾಲ್ಕೆ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಬಾಲಚಂದರ್‌ ಅವರ ಮಾರ್ಗದರ್ಶನದಲ್ಲೇ ಬೆಳೆದು ಬಂದ ನಟ ರಜನಿಕಾಂತ್ ತಮಿಳು ಸಿನಿಮಾ ರಂಗದ ಮೂರನೇ ವ್ಯಕ್ತಿಯಾಗಿ ಫಾಲ್ಕೆ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT