ಭಾನುವಾರ, ಜನವರಿ 26, 2020
27 °C
ಸಂಕ್ರಾಂತಿ ಬ್ಲಾಕ್‌ಬಸ್ಟರ್‌ ಸಿನಿಮಾಗಳು

ರಜನಿ, ಮಹೇಶ್‌ ಬಾಬು, ಅಲ್ಲು ಅರ್ಜುನ್, ದೀಪಿಕಾ ಸಿನಿಮಾಗಳ ಕಲೆಕ್ಷನ್​ ಎಷ್ಟು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಲಿವುಡ್‌, ಟಾಲಿವುಡ್‌ ಮತ್ತು ಕಾಲಿವುಡ್‌ನಲ್ಲಿ ಹೊಸ ವರ್ಷದ ಆರಂಭದಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ನಾಲ್ಕು ಸಿನಿಮಾಗಳು ಬಿಡುಗಡೆಯಾಗಿ ಸಂಕ್ರಾಂತಿ ಸಂಭ್ರಮವನ್ನು ಇಮ್ಮಡಿಗೊಳಿಸಿವೆ.

ತೆಲುಗಿನ ಮಹೇಶ್‌ ಬಾಬು ನಟನೆಯ 'ಸರಿಲೇರು ನೀಕೆವ್ವರು‘, ಅಲ್ಲು ಅರ್ಜುನ್‌ ಅಭಿನಯದ 'ಅಲಾ ವೈಕುಂಠಪುರಮುಲೋ‘ ರಜನಿಕಾಂತ್‌ ನಟಿಸಿರುವ ತಮಿಳಿನ ದರ್ಬಾರ್‌ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಛಪಾಕ್‌ ಹಿಂದಿ ಸಿನಿಮಾ ಬಿಡುಗಡೆಯಾಗಿದ್ದು ಗಲ್ಲಾ ಪೆಟ್ಟಿಗೆಯಲ್ಲಿ ಹಿಟ್‌ ಪಡೆದುಕೊಂಡಿವೆ. 

5–6 ದಿನಗಳ ಅಂತರದಲ್ಲಿ ಬಿಡುಗಡೆಯಾದ ಈ ಸಿನಿಮಾಗಳ ಒಟ್ಟಾರೆ ಗಳಿಕೆ ಹೇಗಿದೆ ಎಂಬುದರ ಲೆಕ್ಕಾಚಾರ ಇಲ್ಲಿದೆ.

ದರ್ಬಾರ್‌...

ಸೂ‍ಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ ದರ್ಬಾರ್‌ ಜನವರಿ 9ರಂದು ವಿಶ್ವದಾದ್ಯಂತ ಬಿಡುಯಾಗಿದೆ. ಎ.ಆರ್‌.ಮುರುಗದಾಸ್‌ ನಿರ್ದೇಶದ ಈ ಸಿನಿಮಾ ಬಾಕ್ಸ್‌ ಆಫೀಸ್‌ ಗಳಿಕೆಯಲ್ಲಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಗಳಿಕೆಯಲ್ಲಿ ಸ್ವಲ್ಪ ಹಿನ್ನಡೆಯಾಗಿದೆ ಎಂದು ವಿತರಕರು ಅಭಿಪ್ರಾಯಪಟ್ಟಿದ್ದಾರೆ.

₹ 200 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ 7000 ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಭಾರತದಲ್ಲಿ 4000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ದರ್ಬಾರ್‌ ತೆರೆಗೆ ಬಂದಿತ್ತು. ಈ ವಾರಾಂತ್ಯದಲ್ಲಿ ₹ 250 ಕೋಟಿ ಗಳಿಸುವ ನಿರೀಕ್ಷೆಯನ್ನು ಚಿತ್ರತಂಡ ಹೊಂದಿದೆ. 

ಚೆನ್ನೈ ಸೇರಿದಂತೆ ತಮಿಳುನಾಡಿನಲ್ಲಿ ₹19 ರಿಂದ ₹20 ಕೋಟಿ, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರದಲ್ಲಿ ₹ 7 ಕೋಟಿ, ದಕ್ಷಿಣ ರಾಜ್ಯಗಳನ್ನು ಹೊರತುಪಡಿಸಿ ಭಾರತದಲ್ಲಿ ₹ 25 ಕೋಟಿ, ವಿದೇಶಗಳಲ್ಲಿ ₹ 30 ಕೋಟಿ ಗಳಿಕೆಯಾಗಿದೆ ಎಂದು ಬಾಕ್ಸ್‌ ಆಫೀಸ್‌ನ ಪ್ರಾಥಮಿಕ ವರದಿಗಳು ತಿಳಿಸಿವೆ. ದರ್ಬಾರ್‌ ಒಟ್ಟಾರೆ ನಾಲ್ಕು ದಿನಗಳಲ್ಲಿ ₹ 82 ಕೋಟಿ ಗಳಿಕೆಯಾಗಿದೆ ಎನ್ನಲಾಗಿದೆ. 

ರಜನಿಕಾಂತ್‌ ಅವರ ಹಿಂದಿನ ಚಿತ್ರಗಳಿಗೆ ಹೋಲಿಕೆ ಮಾಡಿದರೆ ಈ ಮೊತ್ತ ಕಡಿಮೆ ಎಂದು ಕಾಲಿವುಡ್‌ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 

ಸರಿಲೇರು ನೀಕೆವ್ವರು...

ಪ್ರಿನ್ಸ್‌ ಮಹೇಶ್‌ ಬಾಬು ಅಭಿನಯದ ಸರಿಲೇರು ನೀಕೆವ್ವರು ಸಿನಿಮಾ ಭರ್ಜರಿ ಓಪನಿಂಗ್‌ ಪಡೆಯುವ ಮೂಲಕ ಗಳಿಕೆಯಲ್ಲಿ ದಾಪುಗಾಲಿಟ್ಟಿದೆ. ಎರಡು ದಿನಗಳ ಹಿಂದೆ ಬಿಡುಗಡೆಯಾದ ಈ ಸಿನಿಮಾ ಒಟ್ಟಾರೆ ₹ 63 ಕೋಟಿ ಬಾಚಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ₹ 45 ಕೋಟಿ ಬಾಚಿಕೊಂಡರೆ, ವಿಶ್ವದಾದ್ಯಂತ ₹ 15 ಕೋಟಿ, ತಮಿಳುನಾಡು, ಕೇರಳ, ಕರ್ನಾಟಕದಲ್ಲಿ ₹ 3 ಕೋಟಿಗೂ ಹೆಚ್ಚು ಗಳಿಕೆಯಾಗಿದೆ ಎನ್ನಲಾಗಿದೆ. ಅಲ್ಲು ಅರ್ಜುನ್‌ ಅಭಿನಯದ 'ಅಲಾ ವೈಕುಂಠಪುರಮುಲೋ‘ ಸಿನಿಮಾ ಬಿಡುಗಡೆಯಾಗಿರುವುದರಿಂದ ಮಹೇಶ್‌ ಬಾಬು ಸಿನಿಮಾದ ಒಟ್ಟಾರೆ ಗಳಿಕೆಯಲ್ಲಿ ಹಿನ್ನಡೆಯಾಗಿದೆ ಎನ್ನಲಾಗುತ್ತಿದೆ. 

'ಅಲಾ ವೈಕುಂಠಪುರಮುಲೋ‘...

ತ್ರಿವಿಕ್ರಮ ಶ್ರೀನಿವಾಸ ಸಾರಥ್ಯದ ಅಲ್ಲು ಅರ್ಜುನ್‌ ಅಭಿನಯದ ‘ಅಲಾ ವೈಕುಂಠಪುರಮುಲೋ‘ ಸಿನಿಮಾ ಮೊದಲ ದಿನವೇ ಬಾಕ್ಸ್‌ ಆಫೀಸ್‌ ಹಿಟ್‌ ಪಡೆದುಕೊಂಡಿದೆ.

ಮೊದಲ ದಿನವೇ ವಿಶ್ವದಾದ್ಯಂತ ₹ 29 ಕೋಟಿ ಬಾಚಿದೆ ಎಂದು ಬಾಕ್ಸ್‌ ಆಫೀಸ್‌ನ ಪ್ರಾಥಮಿಕ ವರದಿಗಳು ತಿಳಿಸಿವೆ. ಆಂಧ್ರ, ತೆಲಂಗಾಣದಲ್ಲಿ ಒಂದೇ ದಿನದಲ್ಲಿ 19 ಕೋಟಿ ದೋಚಿದೆ. ಉಳಿದಂತೆ ಇತರೆಡೆ ₹ 10 ಕೋಟಿ ಗಳಿಕೆಯಾಗಿದೆ. 

ಛಪಾಕ್‌...

ದೀಪಿಕಾ ಪಡುಕೋಣೆ ಅಭಿನಯದ ಛಪಾಕ್‌ ಸಿನಿಮಾ ಬಿಡುಗಡೆಯಾಗಿ ಮೂರು ದಿನಗಳಲ್ಲಿ ₹ 19.2 ಕೋಟಿ ಬಾಚಿಕೊಂಡಿದೆ ಎಂದು ಬಾಕ್ಸ್‌ ಆಫೀಸ್‌ ವರದಿಗಳು ತಿಳಿಸಿವೆ.

ದೀಪಿಕಾ ಪಡುಕೋಣೆ ಜೆಎನ್‌ಯುಗೆ ಭೇಟಿ ನೀಡಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತು ಛಪಾಕ್‌ ಬಾಯ್‌ಕಾಟ್‌ ಮತ್ತು ಛಪಾಕ್‌ ಸಫೋರ್ಟ್ ಟ್ರೆಂಡ್‌ಗಳು ಸೃಷ್ಟಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಾಗ್ವಾದಗಳು ನಡೆದಿದ್ದವು. 

ಕಳೆದ ಶುಕ್ರವಾರ ಈ ಸಿನಿಮಾ ವಿಶ್ವದಾದ್ಯಂತ ತೆರೆಕಂಡಿತ್ತು. ಕಳೆದ ಮೂರು ದಿನಗಳಲ್ಲಿ ಈ ಸಿನಿಮಾ ಒಟ್ಟಾರೆ ₹ 19.2 ಕೋಟಿ ಬಾಚಿದೆ. ಶುಕ್ರವಾರ ₹ 4.77 ಕೋಟಿ, ಶನಿವಾರ ₹ 6.90 ಕೋಟಿ, ಭಾನುವಾರ ₹ 7.35 ಕೋಟಿ ಗಳಿಕೆಯಾಗಿದೆ. 

ಮೆಟ್ರೊ ನಗರಗಳಲ್ಲಿ ಛಪಾಕ್‌ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದ್ದರೆ, ಎರಡನೇ ಹಂತದ ನಗರಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನಲಾಗಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು