ಬುಧವಾರ, ಅಕ್ಟೋಬರ್ 16, 2019
22 °C

ರಜನಿಕಾಂತ್‌ ಹೊಸ ಸಿನಿಮಾ ‘ತಲೈವರ್‌ 168’ ಅನೌನ್ಸ್‌

Published:
Updated:
Prajavani

‘ಸೂಪರ್‌ ಸ್ಟಾರ್’ ರಜನಿಕಾಂತ್‌ ನಟನೆಯ ‘ದರ್ಬಾರ್’ ಚಿತ್ರ 2020ಕ್ಕೆ ತೆರೆ ಕಾಣಲಿದೆ. ಎ.ಆರ್. ಮುರುಗದಾಸ್ ನಿರ್ದೇಶನದ ಈ ಸಿನಿಮಾದಲ್ಲಿ ನಯನ ತಾರಾ, ಸುನಿಲ್ ಶೆಟ್ಟಿ, ಯೋಗಿಬಾಬು ನಟಿಸಿದ್ದಾರೆ. ಅಂದಹಾಗೆ ಎರಡೂವರೆ ದಶಕಗಳ ನಂತರ ತಲೈವ ಮತ್ತೆ ಪೊಲೀಸ್ ವಸ್ತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದರ ವಿಶೇಷ. 

ಈ ನಡುವೆಯೇ ರಜನಿಕಾಂತ್‌ ಅವರ 168ನೇ ಸಿನಿಮಾಕ್ಕೂ ವೇದಿಕೆ ಸಜ್ಜಾಗಿದೆ. ತಮಿಳಿನ ‘ವಿಶ್ವಾಸಂ’ ಸಿನಿಮಾ ನಿರ್ದೇಶಿಸಿದ್ದ ಶಿವ ಅವರೇ ಸೂಪರ್‌ ಸ್ಟಾರ್‌ ಅವರ ಈ ಹೊಸ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರಂತೆ. ರಜನಿಕಾಂತ್‌ ಅವರ ಈ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಇದಕ್ಕೆ ‘ತಲೈವರ್ 168’ ಎಂದು ಹೆಸರಿಡಲಾಗಿದೆ.

ಈ ಹಿಂದೆ ರಜನಿ ನಟನೆಯ ‘ಎಂದಿರನ್’ ಮತ್ತು ‘ಪೆಟ್ಟಾ’ ಸಿನಿಮಾ ನಿರ್ಮಿಸಿದ್ದ ಸನ್ ಪಿಕ್ಚರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಲಿದೆಯಂತೆ. ಈ ಬಗ್ಗೆ ಸನ್ ಪಿಕ್ಚರ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ಈ ಸುದ್ದಿ ಬಹಿರಂಗಪಡಿಸಿದ್ದು, ಚಿತ್ರತಂಡಕ್ಕೆ ಶುಭ ಕೋರಿದೆ.

ತಮಿಳು ಚಿತ್ರರಂಗದಲ್ಲಿ ಶಿವ ಮಾಸ್ ಚಿತ್ರಗಳಿಗೆ ಫೇಮಸ್‌. ಇನ್ನೊಂದೆಡೆ ಅಜಿತ್‌ ನಟಿಸಿದ್ದ ‘ವಿಶ್ವಾಸಂ’ ಚಿತ್ರಕ್ಕೆ ದುಡಿದ ತಾಂತ್ರಿಕ ವರ್ಗವೇ ಇದರಲ್ಲೂ ಕೆಲಸ ಮಾಡಲಿದೆ ಎನ್ನುವ ಸುದ್ದಿಯೂ ಇದೆ. ಆದರೆ, ಇನ್ನೂ ಈ ಬಗ್ಗೆ ಅಧಿಕೃತವಾದ ಮಾಹಿತಿ ಹೊರಬೀಳುವುದಷ್ಟೇ ಬಾಕಿ ಇದೆ. ರಜನಿ ಮತ್ತು ಶಿವ ಕಾಂಬಿನೇಷನ್‌ನಡಿ ಮೂಡಿಬರಲಿರುವ ಈ ಸಿನಿಮಾದ ಮೇಲೆ ಅಭಿಮಾನಿಗಳಲ್ಲಿ ನಿರೀಕ್ಷೆಗಳು ಗರಿಗೆದರಿರುವುದಂತೂ ಸತ್ಯ.

Post Comments (+)