ಸೋಮವಾರ, ಅಕ್ಟೋಬರ್ 3, 2022
24 °C

ದರ್ಶನ್‌ ಹೇಳಿಕೆಗೆ ‘ಕ್ರಾಂತಿ’ ಸಾರಿದ ಅಪ್ಪು ಫ್ಯಾನ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕ್ರಾಂತಿ’ ಸಿನಿಮಾದ ಪ್ರಚಾರ ಸಂದರ್ಶನವೊಂದರಲ್ಲಿ ದರ್ಶನ್‌ ಅವರು ನಟರ ಅಭಿಮಾನಿಗಳ ಕುರಿತು ನೀಡಿದ ಹೇಳಿಕೆ ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ಕಿಡಿ ಹೊತ್ತಿಸಿದೆ. ದರ್ಶನ್‌ ಹಾಗೂ ಪುನೀತ್‌ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಸಮರ ಜೋರಾಗಿದೆ. 

ದರ್ಶನ್‌ ಹೇಳಿದ್ದೇನು?

‘ಅಭಿಮಾನ ಎಂಥದ್ದು ಅನ್ನುವುದನ್ನು ಸತ್ತ ಮೇಲೆ ತೋರಿಸುವುದಿದೆ. ಉದಾಹರಣೆಗೆ ಪುನೀತ್‌ ರಾಜ್‌ಕುಮಾರ್‌ ಅವರ ಮೇಲಿನ ಅಭಿಮಾನ ನೋಡಿರಬಹುದು. ಆದರೆ, ನನಗೆ ಬದುಕಿರುವಾಗಲೇ ಅಭಿಮಾನ ಏನು ಅನ್ನುವುದನ್ನು ಜನ ತೋರಿಸಿದರು. ಸಾಕು ಬಿಡಯ್ಯಾ ಇನ್ನೇನಾಗಬೇಕು ಎಂಬಂತಾಗಿದೆ. ಆ ಅಭಿಮಾನದಿಂದಲೇ ‘ಕ್ರಾಂತಿ’ ಈ ಮಟ್ಟಕ್ಕೆ ಬಂದಿದೆ’ ಎಂದಿದ್ದರು.

ಈ ಹೇಳಿಕೆ ಬಾಕ್ಸ್‌ಆಫೀಸ್‌ ಕರ್ನಾಟಕ ಎಂಬ ಟ್ವಿಟರ್‌ ಖಾತೆಯಲ್ಲಿ ಪ್ರಕಟವಾಗಿದೆ. 

ಇದಕ್ಕೆ ಒಂದೊಂದು ಅರ್ಥ ಕಲ್ಪಿಸಿದ ಪುನೀತ್‌ ಅಭಿಮಾನಿಗಳು ದರ್ಶನ್‌ ವಿರುದ್ಧ ತೀವ್ರ ಕಿಡಿ ಕಾರಿದ್ದಾರೆ. ‘ಅಪ್ಪು ಅವರನ್ನು ಅಭಿಮಾನಿಗಳು ಎಲ್ಲೋ ಮೇಲೆ ಇಟ್ಟಿದ್ದಾರೆ. ಬಾಕ್ಸ್‌ಆಫೀಸ್‌ ಕರ್ನಾಟಕ ಇಂಥ ಹೇಳಿಕೆಗಳನ್ನು ಪ್ರಕಟಿಸಿ ನಟರ ಮಧ್ಯೆ, ಅಭಿಮಾನಿಗಳ ಮಧ್ಯೆ ತಂದಿಡುವುದು ಬೇಡ’ ಎಂದು ಪುಟ್ಟ ವಿಡಿಯೋ ತುಣುಕುಗಳನ್ನು ಮಾಡಿ ಎಚ್ಚರಿಸಿದ್ದಾರೆ. ಈ ನಡುವೆ ಕ್ರಾಂತಿ ಸಿನಿಮಾದ ಪ್ರಚಾರ ಕಾರ್ಯಕ್ರಮಗಳನ್ನೂ ಅಭಿಮಾನಿಗಳು ಹರಿಯಬಿಡುತ್ತಿದ್ದು ಪರ – ವಿರೋಧ ಚರ್ಚೆಗಳ ನಡುವೆ ‘ಕ್ರಾಂತಿ’ ಪೋಸ್ಟರ್‌ ಟ್ರೆಂಡ್‌ ಆಗಿದೆ. 

ಚರ್ಚೆ ತೀವ್ರಗೊಳ್ಳುತ್ತಿರುವುದನ್ನು ಕಂಡ ನಿರ್ದೇಶಕ ದುನಿಯಾ ಸೂರಿ ಅವರು, ‘ಪುನೀತ್‌ ಅವರು ನಿಧನರಾದಾಗ ಆ ದುಃಖದಿಂದ ತಾವು ಹುಟ್ಟು ಹಬ್ಬವನ್ನು ಆಚರಿಸುವುದಿಲ್ಲ ಎಂದು ದರ್ಶನ್‌ ಹೇಳಿದರು. ಅದರ ಬಗ್ಗೆ ಒಂದು ಮಾತೂ ಹೇಳಲಿಲ್ಲ. ಪುನೀತ್‌ ಬಗೆಗಿನ ಕಾರ್ಯಕ್ರಮವನ್ನು ಬೇಕಿದ್ದರೆ ನಿಂತುಕೊಂಡೇ ನೋಡುತ್ತೇವೆ ಎಂದು ಸೌಜನ್ಯತೆ ತೋರಿದಾಗಲೂ ಒಂದೂ ಪೋಸ್ಟ್‌ ಹಾಕಲಿಲ್ಲ. ಈಗ ಮಾತಿನ ಭರದಲ್ಲಿ ‘ಪುನೀತ್‌ ಅವರಿಗೆ ನಿಧನದ ನಂತರ ದೊಡ್ಡ ಗೌರವ ಸಿಕ್ಕಿತು. ನನಗೆ ಈಗಲೇ ಸಿಕ್ಕಿದೆ. ನನಗೆ ಇಷ್ಟೇ ಸಾಕು ಎಂದು ಒಳ್ಳೆಯ ರೀತಿಯಲ್ಲೇ ಹೇಳಿದ ಮಾತನ್ನು ತಿರುಚಿ, ಡಿ’ಬಾಸ್‌ ಅವರು ಪುನೀತ್‌ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿದ್ದಾರೆ. ಅವರು (ದರ್ಶನ್‌) ಅತ್ಯಂತ ಕೆಟ್ಟವರು ಎಂಬಂತೆ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ವೈಯಕ್ತಿಕ ಜೀವನ ಕೆದಕುತ್ತಾ ಅವರ ವಿರುದ್ಧ ಪೈಪೋಟಿಗೆ ಬಿದ್ದವರಂತೆ ಪೋಸ್ಟ್‌ ಹಾಕುತ್ತಿದ್ದೀರಲ್ಲಾ ನಿಮಗೆ ದೇವರು ಒಳ್ಳೆಯದು ಮಾಡಲಿ’ ಎಂದು ವ್ಯಂಗ್ಯ ಮತ್ತು ವಿಷಾದದಿಂದ ಪೋಸ್ಟ್‌ ಹಾಕಿದ್ದಾರೆ. 

ಸೂರಿ ಹೇಳಿಕೆಯನ್ನು ಭಾನುವಾರ ಸಂಜೆವರೆಗೆ 371ಕ್ಕೂ ಅಧಿಕ ಜನರು ರಿಟ್ವೀಟ್‌ ಮಾಡಿದ್ದಾರೆ. ಈ ಹೇಳಿಕೆಗೂ ಕಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಚರ್ಚೆ ಮುಂದುವರಿಯುತ್ತಲೇ ಇದೆ. 

ಇತ್ತ ಸುದೀಪ್‌ ಅಭಿಮಾನಿಗಳು ‘ಕ್ರಾಂತಿ’ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್‌ ಅವರನ್ನೂ ಟ್ರೋಲ್‌ ಮಾಡುತ್ತಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು