ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ಕಥೆಗೆ ದೀಪಿಕಾ–ರಣವೀರ್ ಜೋಡಿ

Last Updated 3 ಜನವರಿ 2020, 12:49 IST
ಅಕ್ಷರ ಗಾತ್ರ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಪತಿ ಹಾಗೂ ಸಹ ಕಲಾವಿದ ರಣವೀರ್ ಸಿಂಗ್ ಅವರ ಜೊತೆ ಮತ್ತೊಂದು ಸಿನಿಮಾದಲ್ಲಿ ಜೊತೆಯಾಗಲಿದ್ದಾರೆ. ಇದು ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಅವರ ಜೀವನ, ಭಾರತ ಕ್ರಿಕೆಟ್ ತಂಡ 1983ರಲ್ಲಿ ವಿಶ್ವಕಪ್ ಗೆದ್ದಿದ್ದನ್ನು ಆಧರಿಸಿದ ಕಥೆ ಹೊಂದಿದೆ.

ಅಂದಹಾಗೆ, ಈ ಚಿತ್ರದ ಶೀರ್ಷಿಕೆ ‘83’. ‘ಈ ಚಿತ್ರದಲ್ಲಿ ಅಭಿನಯಿಸಿದ್ದು ಹೊಸ ಅನುಭವ ನೀಡಿತು’ ಎಂದು ದೀಪಿಕಾ ಹೇಳಿದ್ದಾರೆ. ‘83’ ಚಿತ್ರದಲ್ಲಿ ದೀಪಿಕಾ ಅವರು ಕಪಿಲ್ ದೇವ್ ಪತ್ನಿ ರೋಮಿ ದೇವ್ ಅವರ ಪಾತ್ರ ನಿಭಾಯಿಸಲಿದ್ದಾರೆ. ಕಪಿಲ್ ಅವರ ಪಾತ್ರವನ್ನು ರಣವೀರ್ ನಿಭಾಯಿಸಲಿದ್ದಾರೆ.

ಈ ಚಿತ್ರವನ್ನು ಕಬೀರ್ ಖಾನ್ ನಿರ್ದೇಶಿಸುತ್ತಿದ್ದಾರೆ. ದೀಪಿಕಾ ಮತ್ತು ರಣವೀರ್ ಅವರು ಈ ಹಿಂದೆ ‘ಬಾಜಿರಾವ್ ಮಸ್ತಾನಿ’, ‘ಪದ್ಮಾವತ್’ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ.

‘ವಾಸ್ತವಕ್ಕೆ ತುಸು ಹೆಚ್ಚು ಹತ್ತಿರವಿರುವ ಸಿನಿಮಾದಲ್ಲಿ ರಣವೀರ್ ಜೊತೆ ಅಭಿನಯಿಸಿದ್ದು ಖುಷಿ ನೀಡಿತು. ನಾವು ಹಿಂದೆ ಜೊತೆಯಾಗಿ ನಟಿಸಿದ್ದ ಸಿನಿಮಾಗಳಲ್ಲಿ ಇದ್ದಂತಹ ಭಾವತೀವ್ರತೆಯ ಸಂಭಾಷಣೆಗಳು, ಆ ಬಗೆಯ ಭಾಷೆಯ ಬಳಕೆ ಇದರಲ್ಲಿ ಇಲ್ಲ. ಹಾಗಾಗಿ ಇದೊಂದು ಬಗೆಯಲ್ಲಿ ಹೊಸ ಅನುಭವ ನೀಡಿತು’ ಎನ್ನುವುದು ದೀಪಿಕಾ ಅವರ ಮಾತು.

‘ಈ ಚಿತ್ರದ ಪಾತ್ರಗಳು ಸಂಪೂರ್ಣವಾಗಿ ಭಿನ್ನ. ನಾವು ಹಿಂದೆ ಮಾಡಿದ ಚಿತ್ರಗಳಿಗೆ ಹೋಲಿಸಿದರೆ ಕಾಲಘಟ್ಟ ಕೂಡ ಭಿನ್ನ. ಪಾತ್ರಕ್ಕಾಗಿ ನಾವು ಧರಿಸಿದ ಬಟ್ಟೆಗಳು, ಚಿತ್ರೀಕರಣದ ಸೆಟ್‌ ಕೂಡ ಬೇರೆಯದು. ನಾವು ಒಬ್ಬರನ್ನೊಬ್ಬರು ನೋಡಿಕೊಂಡು, ಇಂತಹ ಸಿನಿಮಾಗಳಲ್ಲಿ ನಾವಿಬ್ಬರೂ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು ಎಂದು ಹೇಳಿಕೊಂಡಿದ್ದೇವೆ’ ಎಂದು ದೀಪಿಕಾ ಅವರು ಹೇಳಿದ್ದಾರೆ.

‘83’ ಚಿತ್ರದಲ್ಲಿ ದೀಪಿಕಾ ಅವರು ತೆರೆಯ ಮೇಲೆ ಹೆಚ್ಚಿನ ಹೊತ್ತು ಕಾಣಿಸಿಕೊಳ್ಳುವುದಿಲ್ಲವಂತೆ. ಆದರೆ, ಕಪಿಲ್ ಹಾಗೂ ರೋಮಿ ಅವರಂತಹ ಜನಪ್ರಿಯ ವ್ಯಕ್ತಿಗಳ ವೈಯಕ್ತಿಕ ಬದುಕನ್ನು ಅರಿಯಲು ಇದೊಂದು ಅವಕಾಶ ಎಂದು ಭಾವಿಸಿ ಅವರು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರಂತೆ.

‘ನನ್ನ ತಂದೆಯ (ಪ್ರಕಾಶ್ ಪಡುಕೋಣೆ) ಅಥ್ಲೆಟಿಕ್ ಜೀವನದಲ್ಲಿ ನನ್ನ ತಾಯಿ ಎಷ್ಟು ಮುಖ್ಯವಾದ ಬೆಂಬಲ ನೀಡುತ್ತಿದ್ದರು ಎಂಬುದನ್ನು ನಾನು ಕಂಡಿದ್ದೇನೆ. ಅಪ್ಪನ ಯಶಸ್ಸಿಗೆ ತಾಯಿಯ ಕೊಡುಗೆ ಏನು ಎಂಬುದನ್ನೂ ಕಂಡಿರುವೆ. ರೋಮಿ ಮತ್ತು ಕಪಿಲ್ ಅವರಲ್ಲೂ ಇಂತಹ ಸಾಮ್ಯ ಇದೆ. ಹಾಗಾಗಿ ನಾನು ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿದೆ’ ಎಂದು ದೀಪಿಕಾ ತಿಳಿಸಿದರು.

ಈ ಚಿತ್ರದಲ್ಲಿ ಇರುವುದು ಭಾರತ ಕ್ರಿಕೆಟ್ ತಂಡ ಭಾರತದಿಂದ ಇಂಗ್ಲೆಂಡ್‌ಗೆ ತೆರಳಿ, ಅಲ್ಲಿ ವಿಶ್ವಕಪ್ ಗೆದ್ದುಕೊಳ್ಳುವವರೆಗಿನ ಮೂರು ವಾರಗಳ ಕಥೆ.

ಈ ಚಿತ್ರದ ನಂತರ ದೀಪಿಕಾ ಅವರು ಶಕುನ್ ಬಾತ್ರಾ ನಿರ್ದೇಶನದ ರೊಮ್ಯಾಂಟಿಕ್‌ ಥ್ರಿಲ್ಲರ್ ಸಿನಿಮಾವೊಂದರಲ್ಲಿ ಕೆಲಸ ಮಾಡಲಿದ್ದಾರೆ. ಈ ಚಿತ್ರವನ್ನು ಧರ್ಮ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ. ಸಿದ್ಧಾಂತ್ ಚತುರ್ವೇದಿ ಮತ್ತು ಅನನ್ಯಾ ಪಾಂಡೆ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಮಹಾಭಾರತವನ್ನು ಆಧರಿಸಿದ ಚಿತ್ರವೊಂದರಲ್ಲಿ ದೀಪಿಕಾ ಅವರು ದ್ರೌಪದಿಯ ಪಾತ್ರ ನಿಭಾಯಿಸಲಿದ್ದಾರೆ. ಇದು ಮಹಾಭಾರತದ ಕಥೆಯನ್ನು ಹೆಣ್ಣಿನ ದೃಷ್ಟಿಕೋನದಿಂದ ಹೇಳಲಿದೆಯಂತೆ.

‘ಮಹಾಭಾರತದ ಕುರಿತು ನನ್ನ ತಲೆಯಲ್ಲಿ ಒಂದು ನಿರ್ದಿಷ್ಟ ದೃಷ್ಟಿಕೋನವನ್ನು ಮಾತ್ರ ತುಂಬಲಾಗಿದೆ. ಈ ಕಥೆಯನ್ನು ಇನ್ನೊಂದು ದೃಷ್ಟಿಕೋನದಿಂದ ನೋಡುವುದು ಚೆನ್ನಾಗಿರಲಿದೆ’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT