ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಸಿಡ್ ಸಂತ್ರಸ್ತೆ ಲಕ್ಷ್ಮೀ ಅಗರ್‌ವಾಲ್ ಪಾತ್ರದಲ್ಲಿ ದೀಪಿಕಾ ಪಡುಕೋಣೆ

Last Updated 26 ಮಾರ್ಚ್ 2019, 11:47 IST
ಅಕ್ಷರ ಗಾತ್ರ

ಪ್ರತಿ ಸಿನಿಮಾದಲ್ಲೂ ಭಿನ್ನ ಪಾತ್ರಗಳನ್ನೇ ಮಾಡಿ, ಜನಪ್ರಿಯವಾಗಿರುವ ನಟಿ ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಗ್ಲ್ಯಾಮರ್ ರಹಿತ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ್ಯಸಿಡ್ ಸಂತ್ರಸ್ತೆ ಲಕ್ಷ್ಮೀ ಅಗರ್‌ವಾಲ್ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದು, ಈ ಪಾತ್ರದ ಮೊದಲ ಲುಕ್ ಅನ್ನು ಸ್ವತಃ ದೀಪಿಕಾ ತಮ್ಮ ಟ್ವಿಟರ್ ಖಾತೆಯಲ್ಲಿ ಸೋಮವಾರ ಪ್ರಕಟಿಸಿದ್ದಾರೆ.

‘ಈ ಪಾತ್ರ ನನ್ನ ಜೀವನದಲ್ಲಿ ಯಾವತ್ತಿಗೂ ಅಚ್ಚಳಿಯದೇ ಉಳಿಯಲಿದೆ’ ಎನ್ನುವ ಒಕ್ಕಣೆಯನ್ನೂ ದೀಪಿಕಾ ಬರೆದುಕೊಂಡಿದ್ದಾರೆ.

ಮೇಘನಾ ಗುಲ್ಜಾರ್​
ಮೇಘನಾ ಗುಲ್ಜಾರ್​

‘ರಾಝಿ’ಯಂಥ ಯಶಸ್ವಿ ಸಿನಿಮಾ ಕೊಟ್ಟ ನಿರ್ದೇಶಕಿ ಮೇಘನಾ ಗುಲ್ಜಾರ್ ಅವರ ಹೊಸ ಸಿನಿಮಾ ‘ಛಪಾಕ್’ನಲ್ಲಿ ದೀಪಿಕಾ ಆ್ಯಸಿಡ್ ಸಂತ್ರಸ್ತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಲಕ್ಷ್ಮೀ ಅಗರ್‌ವಾಲ್ ಅವರ ಜೀವನಾಧಾರಿತ ಈ ಸಿನಿಮಾದಲ್ಲಿ ದೀಪಿಕಾಳ ಪಾತ್ರದ ಹೆಸರು ಮಾಲತಿ. ಮಾರ್ಚ್ 25ರಿಂದ ಚಿತ್ರೀಕರಣ ಆರಂಭವಾಗಿದ್ದು, ಜನವರಿ 10, 2020ಕ್ಕೆ ಚಿತ್ರ ತೆರೆ ಕಾಣಲಿದೆ.

ದೀಪಿಕಾ ಹಾಗೂ ಮೇಘನಾ ಗುಲ್ಜಾರ್ ತಮ್ಮ ಟ್ವೀಟರ್ ಖಾತೆಯಲ್ಲಿ ಆ್ಯಸಿಡ್‌ನಿಂದ ಸುಟ್ಟುಹೋಗಿರುವ ದೀಪಿಕಾಳ ಮುಖದ ಚಿತ್ರವನ್ನು ಹಾಕಿಕೊಂಡಿರುವುದು ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರ ವೈರಲ್ ಆಗಿದ್ದು, ಚರ್ಚೆಗೂ ಕಾರಣವಾಗಿದೆ. ಟ್ವಿಟರ್‌ನಲ್ಲಿರುವ ಈ ಚಿತ್ರವನ್ನು 20 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ

ಆ್ಯಸಿಡ್ ದಾಳಿಗೊಳಗಾಗಿ ಮುಖ ವಿರೂಪವಾಗಿದ್ದ ಲಕ್ಷ್ಮೀಯನ್ನು ಪತ್ರಕರ್ತ ಅಲೋಕ್ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಪಿಹು ಎನ್ನುವ ಪುಟ್ಟ ಮಗುವಿದೆ. ಆರ್ಥಿಕ ಸಂಕಷ್ಟದಲ್ಲಿರುವ ಲಕ್ಷ್ಮೀಯನ್ನು ಈಗ ಪತಿ ತೊರೆದಿದ್ದಾರೆ. ಈ ಬಗ್ಗೆ ಪತ್ರಿಕೆಯೊಂದು ಪ್ರಕಟಿಸಿದ ವರದಿಯಿಂದ ಪ್ರಭಾವಿತರಾಗಿ ದೀಪಿಕಾ, ಲಕ್ಷ್ಮೀ ಜೀವನಾಧಾರಿತ ಚಿತ್ರದಲ್ಲಿ ತಾವು ಅವಳ ಪಾತ್ರ ಮಾಡುವುದಾಗಿ ಹೇಳಿಕೊಂಡಿದ್ದರು.

ಮೇಘನಾ ಗುಲ್ಜಾರ್ ನಿರ್ದೇಶಿಸಲಿರುವ ಈ ಚಿತ್ರಕ್ಕೆ ದೀಪಿಕಾ ಸಹ ನಿರ್ಮಾಪಕಿ ಕೂಡಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT