ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಹಿ’ ಹೆಣ್ಣಿನ ಅಂತರಂಗದ ಹೊಳಪು

Last Updated 3 ಅಕ್ಟೋಬರ್ 2019, 9:24 IST
ಅಕ್ಷರ ಗಾತ್ರ

‘ಕಳರಿಪಯಟ್ಟು’ ವಿಶ್ವದ ಅತ್ಯಂತ ಪುರಾತನ ಸಮರ ಕಲೆ. ಇದು ಹಲವು ಸಮರ ಕಲೆಗಳ ತಾಯಿಯೂ ಹೌದು. ಕಳರಿಯು ದೇಹದ ಶಕ್ತಿಯನ್ನು ಒಗ್ಗೂಡಿಸುವ ಹಾಗೂ ಮನಸ್ಸನ್ನು ಏಕಾಗ್ರತೆಗೆ ಒಯ್ಯುವ ಕೆಲಸ ಮಾಡುತ್ತದೆ. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಖಚಿತತೆ, ಲಾಲಿತ್ಯ, ಆತ್ಮವಿಶ್ವಾಸ ಮೂಡಿಸುವ ಈ ಕಲೆಯು ಬೌದ್ಧಿಕ ಸ್ಥಿರತೆಯ ವೃದ್ಧಿಗೂ ಸಹಕಾರಿ.

ಭಾರತದಲ್ಲಿ ಮೊದಲ ಬಾರಿಗೆ ಬೆಳ್ಳಿತೆರೆಯ ಮೇಲೆ ‘ದೇಹಿ’ ರೂಪದಲ್ಲಿ ಕಳರಿ ಕಲೆಯ ಪರಿಚಯವಾಗುತ್ತಿದೆ. ಬೆಂಗಳೂರಿನ ಯಲಹಂಕ ಬಳಿಯ ಚಿಕ್ಕಗುಬ್ಬಿಯಲ್ಲಿರುವ ಕಳರಿ ಗುರುಕುಲಂನ ಗುರು ರಂಜನ್‌ ಮುಲ್ಲರತ್‌ ಅವರ ಪರಿಶ್ರಮ ಇದರ ಹಿಂದಿದೆ. ಕನ್ನಡ, ತಮಿಳು ಮತ್ತು ಮಲಯಾಳದಲ್ಲಿ ಈ ಸಿನಿಮಾ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡದ್ದು.

ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ಧನಾ. ತಮಿಳಿನ ‘ಪಡೈವೀರನ್‌’ ಚಿತ್ರ ನಿರ್ದೇಶಿಸಿದ್ದ ಅವರಿಗೆ ‘ದೇಹಿ’ ಎರಡನೇ ಚಿತ್ರ. ‘ಎಂದಿರನ್‌ 2’, ‘ಇಂಡಿಯನ್’ ಚಿತ್ರಗಳಿಗೆ ಕೆಲಸ ಮಾಡಿರುವ ಬಿ. ಜಯಮೋಹನ್‌ ಅವರೇ ಇದರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ.

ಹದಿನೇಳು ವರ್ಷ ವಯಸ್ಸಿನ ದಿವ್ಯಾ ಮಾಡೆಲಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಆಕೆಯದು ಉನ್ನತ ಬದುಕು ಕಟ್ಟಿಕೊಳ್ಳುವ ಹಂಬಲ. ಆದರೆ, ಸಮಾಜದಲ್ಲಿ ನಡೆಯುವ ಕೆಲವು ಅಹಿತಕರ ಘಟನೆಗಳು ಅವಳ ಮನಸ್ಸನ್ನು ಘಾಸಿಗೊಳಿಸುತ್ತವೆ. ಆಕೆ ಮಾನಸಿಕವಾಗಿ ಕುಗ್ಗಿ ಹೋಗುತ್ತಾಳೆ. ಆಗ ಅವಳ ನೆರವಿಗೆ ಬರುವುದು ಕಳರಿ ಗುರು. ಈ ಕಲೆಯ ಮೂಲಕ ಆಕೆಯ ಬದುಕು ಹೇಗೆ ಹಸನಾಗುತ್ತದೆ ಎನ್ನುವುದೇ ಚಿತ್ರದ ಕಥಾಹಂದರ.

ಕಳರಿ ಗುರುವಿನ ಪಾತ್ರಕ್ಕೆ ಬಣ್ಣ ಹಚ್ಚಿರುವುದು ನಟ ಕಿಶೋರ್. ಮೂಲತಃ ಅವರು ಕಳರಿ ವಿದ್ಯೆಯನ್ನೂ ಕಲಿತಿದ್ದಾರೆ.ದಿವ್ಯಾ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಉಪಾಸನಾ ಗುರ್ಜರ್. ಬೆಂಗಳೂರಿನ ಸಂತ ಜೋಸೆಫ್‌ ಕಾಲೇಜಿನಲ್ಲಿ ಪರಿಸರ ವಿಜ್ಞಾನದಲ್ಲಿ ಪದವಿ ಅಧ್ಯಯನ ಮಾಡುತ್ತಿರುವ ಅವರಿಗೆ ಈ ಕಲೆಯಲ್ಲಿ ಒಂದು ದಶಕದ ಅನುಭವ ಇದೆ. ಕಳೆದ ಐದು ವರ್ಷದಿಂದಲೂ ನ್ಯಾಷನಲ್‌ ಕಳರಿ ಫೈಟ್‌ ಚಾಂಪಿಯನ್‌ಶಿಪ್‌ನಲ್ಲಿ ಅಗ್ರಸ್ಥಾನ ಪಡೆದಿರುವುದು ಆಕೆಯ ಹೆಗ್ಗಳಿಕೆ.

ಕಳರಿ ಗುರುಕುಲಂ, ಹಂಪಿ, ಬೇಲೂರು ಸುತ್ತಮುತ್ತ ಚಿತ್ರದ ಶೂಟಿಂಗ್‌ ನಡೆಸಲಾಗಿದೆ. ನಾಲ್ಕು ಹಾಡುಗಳಿಗೆ ನೊಬಿಲ್‌ ಪೌಲ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಆನಂದ್‌ ಸುಂದರೇಶ್‌ ಅವರದು. ಗುರುಕುಲಂನ ವಿದ್ಯಾರ್ಥಿಗಳೇ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹಲವು ಅಂತರರಾಷ್ಟ್ರೀಯ ಸಿನಿಮೋತ್ಸವಗಳ ವಿವಿಧ ವಿಭಾಗದಲ್ಲಿ ಈ ಚಿತ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

‘ಮಹಿಳೆಯ ಅಂತರಂಗದ ಶಕ್ತಿಯೇ ದೇಹಿ ಚಿತ್ರದ ಹೂರಣ. ಸ್ತ್ರೀಯರ ಸಬಲೀಕರಣಕ್ಕೆ ಒತ್ತು ನೀಡುವುದೇ ಇದರ ಮೂಲ ಧ್ಯೇಯ. ಗುರುಕುಲಂನ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರಲ್ಲಿ ನಟಿಸಿದ್ದಾರೆ. ಆಧುನಿಕ ಬಾಳ್ವೆಗೆ ಕಳರಿ ಪೂರಕ. ಇದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ’ ಎಂದು ವಿವರಿಸುತ್ತಾರೆ ಕಳೆದ ಎರಡು ದಶಕಗಳಿಂದಲೂ ಕಳರಿ ಕಲೆಯ ಉಳಿವಿಗೆ ಟೊಂಕಕಟ್ಟಿ ನಿಂತಿರುವ ಕಳರಿ ಗುರುಕುಲಂನ ರಂಜನ್‌ ಮುಲ್ಲರತ್.

‘ಕಿಶೋರ್ ಅವರ ಇಬ್ಬರು ಮಕ್ಕಳು ಗುರುಕುಲದಲ್ಲಿಯೇ ಕಲಿಯುತ್ತಿದ್ದಾರೆ. ಕಿಶೋರ್‌ ಕೂಡ ಈ ಕಲೆ ಕಲಿತಿದ್ದಾರೆ. ಅವರೊಬ್ಬ ನ್ಯಾಚುರಲ್‌ ನಟ. ಹಾಗಾಗಿಯೇ, ಅವರನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು. ವಿವಿಧ ದೇಶಗಳಲ್ಲಿ ನಡೆಯುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಕ್ಕೆ ದೇಹಿಯನ್ನು ಕಳುಹಿಸಲಾಗಿದೆ. ವಿಶ್ವಮಟ್ಟದಲ್ಲಿ ಈ ಕಲೆಯ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲುವುದೇ ಇದರ ಹಿಂದಿರುವ ಉದ್ದೇಶ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT