ಶುಕ್ರವಾರ, ಮೇ 29, 2020
27 °C

ಕೌಟುಂಬಿಕ ಸಂಬಂಧದ ವಂಶವಾಹಿ ಪರೀಕ್ಷೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಡಿಎನ್‌ಎ’ ಎಲ್ಲಾ ಜೀವಿಗಳು ಹಾಗೂ ಹಲವು ವೈರಾಣುಗಳಲ್ಲಿ ಇರುವ ಪ್ರಧಾನ ಅನುವಂಶಿಕ ಜೈವಿಕ ಅಣು. ಇದೇ ಶೀರ್ಷಿಕೆಯ ಸಿನಿಮಾವೊಂದು ಗಾಂಧಿನಗರದಲ್ಲಿ ನಿರ್ಮಾಣವಾಗಿದ್ದು, ಲಾಕ್‌ಡೌನ್‌ ಮುಗಿದ ನಂತರ ತೆರೆಗೆ ಬರಲು ಸಜ್ಜಾಗಿದೆ. ಹಾಗೆಂದು ಈ ಕಥೆ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ್ದಲ್ಲ. ಎರಡು ಸುಂದರ ಕುಟುಂಬಗಳ ನಡುವಿನ ಭಾವನೆ ಹಾಗೂ ಸಂಬಂಧದ ಸುತ್ತ ಹೆಣೆದಿರುವ ಕಥೆ ಇದು.

ಸಂಬಂಧದ ಮಹತ್ವ ಕುರಿತು ಸಾಹಿತಿ ದೇವನೂರ ಮಹದೇವ ಅವರು ಹೇಳಿದ ‘ಸಂಬಂಜ ಅನ್ನೋದು ದೊಡ್ಡದು ಕನಾ...’ ಮಾತಿನ ಸಾಲನ್ನೇ ಈ ಚಿತ್ರಕ್ಕೆ ಟ್ಯಾಗ್‌ಲೈನ್‌ ಆಗಿ ಇಡಲಾಗಿದೆ. ಜತೆಗೆ, ದೇವನೂರ ಅವರ ಕವಿತೆಯೊಂದನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆಯಂತೆ.

ಚಾಮರಾಜನಗರದ ಪ್ರಕಾಶ್‍ರಾಜ್ ಮೇಹು ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಕಥೆ, ಚಿತ್ರಕಥೆಯ ಜವಾಬ್ದಾರಿಯನ್ನು ಅವರೇ ಹೊತ್ತಿದ್ದಾರೆ. ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್‌ ಧರಿಸುತ್ತಿರುವ ಖುಷಿಯಲ್ಲಿದ್ದಾರೆ. ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯಲ್ಲಿ ಹತ್ತು ವರ್ಷ ಹಾಗೂ ನಿರ್ದೇಶಕ ಟಿ.ಎಸ್. ನಾಗಭರಣ ಅವರ ಬಳಿ ಸಹಾಯಕರಾಗಿ ದುಡಿದು ಅನುಭವ ಅವರಿಗಿದೆ. 

‘ದೇವನೂರ ಅವರ ಪ್ರಸಿದ್ಧ ಕವಿವಾಣಿ ಮತ್ತು ಅವರ ಕವಿತೆಯನ್ನು ಈ ಚಿತ್ರದಲ್ಲಿ ಏಕೆ ಬಳಸಿದ್ದೇವೆ ಹಾಗೂ ಚಿತ್ರದ ಶೀರ್ಷಿಕೆಗೆ ಧ್ರುವ, ನಕ್ಷತ್ರ, ಆಕಾಶ ಎಂಬ ಅಡಿಬರಹವನ್ನು ಯಾಕೆ ನೀಡಲಾಗಿದೆ ಎನ್ನುವುದು ಚಿತ್ರ ನೋಡಿದ ಮೇಲೆ ಗೊತ್ತಾಗುತ್ತದೆ’ ಎನ್ನುತ್ತಾರೆ ನಿರ್ದೇಶಕ ಪ್ರಕಾಶ್‍ರಾಜ್ ಮೇಹು.

ಬೆಂಗಳೂರು, ಮೈಸೂರಿನ ಸುತ್ತಮುತ್ತ ಮಾತಿನ ಭಾಗದ ಚಿತ್ರೀಕರಣ ನಡೆಸಲಾಗಿದೆ. ಮಾರಿಕಣಿವೆ ಜಲಾಶಯ ಮತ್ತು ಕೆಆರ್‌ಎಸ್‌ ಜಲಾಶಯದ ಬಳಿ ಹಾಡುಗಳ ಶೂಟಿಂಗ್‌ ಮಾಡಲಾಗಿದೆ.

ಅಚ್ಯುತ್‌ ಕುಮಾರ್‌, ಯಮುನಾ, ‘ಯೂಟರ್ನ್’ ಖ್ಯಾತಿಯ ರೋಜರ್ ನಾರಾಯಣ್, ಎಸ್ತರ್‌ ನರೋಣ, ಮಾಸ್ಟರ್ ಆನಂದ್ ಪುತ್ರ ಮಾಸ್ಟರ್ ಕೃಷ್ಣಚೈತನ್ಯ, ಧ್ರುವ, ಮೇಘಾ, ಅನಿತಾ ಭಟ್, ನೀನಾಸಂ ಶ್ವೇತಾ ತಾರಾಗಣದಲ್ಲಿದ್ದಾರೆ.

ಜಯಂತ ಕಾಯ್ಕಿಣಿ, ಯೋಗರಾಜ್‌ ಭಟ್, ಕೆ.ವೈ. ನಾರಾಯಣಸ್ವಾಮಿ ಹಾಗೂ ಮೇಹು ಅವರ ಸಾಹಿತ್ಯವಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಚೇತನ್‍ ಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ರವಿಕುಮಾರ್‌ ಸನಾ ಅವರದ್ದು.  ಮಾತೃಶ್ರೀ ಎಂಟರ್‌ಪ್ರೈಸಸ್‌ನಡಿ ಮೈಲಾರಿ ಎಂ. ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.