ಭಾನುವಾರ, ಏಪ್ರಿಲ್ 5, 2020
19 °C

ಕನ್ನಡಕ್ಕೆ ಬಂದ ಜೇಮ್ಸ್‌ ಬಾಂಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇರೆ ಭಾಷೆಗಳ ಸಿನಿಮಾಗಳನ್ನು ಕನ್ನಡದಲ್ಲೇ  ನೋಡಿ ಖುಷಿಪಡುವವರಿಗೆ, ಇನ್ನಷ್ಟು ಖುಷಿಪಡಲು ಕಾರಣವೊಂದು ಸಿಕ್ಕಿದೆ. ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ಬೇರೆ ಬೇರೆ ಭಾಷೆಗಳ ಕನಿಷ್ಠ ನಾಲ್ಕು ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಆಗಲಿವೆ.

ಬಾಂಡ್, ಜೇಮ್ಸ್‌ ಬಾಂಡ್: ಜೇಮ್ಸ್‌ ಬಾಂಡ್‌ ಸಿನಿಮಾಗಳ ಪ್ರೇಮಿಗಳಿಗೆ ಇದಕ್ಕಿಂತ ಖುಷಿಕೊಡುವ ಸುದ್ದಿ ಇನ್ನೊಂದಿರಲಾರದು. ಜೇಮ್ಸ್‌ ಬಾಂಡ್ ಸರಣಿಯ ‘ನೋ ಟೈಮ್‌ ಟು ಡೈ’ ಚಿತ್ರವು ಇದೇ ಮೊದಲ ಬಾರಿಗೆ ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಆಗಲಿದೆ. ಇದು ಏಪ್ರಿಲ್‌ 2ರಂದು ತೆರೆಗೆ ಬರುವ ನಿರೀಕ್ಷೆ ಇದೆ.

ಮರಕ್ಕರ್: ಸೂಪರ್‌ ಸ್ಟಾರ್‌ ಮೋಹನ್‌ಲಾಲ್‌ ಅಭಿನಯದ, 16ನೆಯ ಶತಮಾನದ ಕಥೆಯನ್ನು ಹೊಂದಿರುವ ಮಲಯಾಳ ಸಿನಿಮಾ ಇದು. ಈ ಚಿತ್ರ ಕೂಡ ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಆಗುತ್ತಿದೆ. ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲೂ ಇದು ಡಬ್ ಆಗಿ ತೆರೆಗೆ ಬರುತ್ತಿದ್ದು, ಮಾರ್ಚ್‌ 26ರಿಂದ ವೀಕ್ಷಕರನ್ನು ರಂಜಿಸಲಿದೆ.

ಬ್ಲ್ಯಾಕ್‌ ವಿಡೊವ್: ಈ ಚಿತ್ರದ ಕನ್ನಡ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದೆ. ಚಿತ್ರವು ಏಪ್ರಿಲ್‌ 30ರಂದು ತೆರೆಗೆ ಬರಲು ಸಜ್ಜಾಗಿದೆ ಎನ್ನುವ ಮಾಹಿತಿ ‘ಬುಕ್‌ ಮೈಶೊ’ ವೆಬ್‌ಸೈಟ್‌ನಲ್ಲಿ ಇದೆ. ಈ ಚಿತ್ರವು ಕನ್ನಡದಲ್ಲಿ ಮಾತ್ರವಲ್ಲದೆ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳ ಭಾಷೆಗಳಲ್ಲಿ ಕೂಡ ತೆರೆಗೆ ಬರಲಿದೆ.

ಗೋಪಿನಾಥ್ ಕಥೆ: ಏರ್‌ ಡೆಕ್ಕನ್ ವಿಮಾನಯಾನ ಸಂಸ್ಥೆಯ ಸಂಸ್ಥಾಪಕ, ನಿವೃತ್ತ ಸೇನಾ ಅಧಿಕಾರಿ ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಅವರ ಜೀವನ ಆಧರಿಸಿದ ಸಿನಿಮಾ ‘ಸೂರಾರಾಯ್ ಪೊಟ್ರು’. ತಮಿಳಿನ ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತದೆ. ‘ಜನರ ಬೇಡಿಕೆಯ ಕಾರಣಕ್ಕೆ ಇದನ್ನು ಕನ್ನಡಕ್ಕೆ ಡಬ್ ಮಾಡಲಾಗುವುದು’ ಎಂದು ಈ ಚಿತ್ರತಂಡ ಘೋಷಿಸಿದೆ. ಇದು ಏಪ್ರಿಲ್ 9ರಂದು ತೆರೆಗೆ ಬರುವ ನಿರೀಕ್ಷೆ ಇದೆ.

ವಿಜಯ್ ಅಭಿನಯದ ‘ಮಾಸ್ಟರ್’ ಚಿತ್ರವನ್ನು ತಮಿಳು ಮತ್ತು ತೆಲುಗಿನ ಜೊತೆಯಲ್ಲಿ ಕನ್ನಡದಲ್ಲೂ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡಕ್ಕೆ ಇದೆ ಎಂಬ ಸುದ್ದಿ ಬಂದಿದೆ. ಇದು ಏಪ್ರಿಲ್‌ 9ರಂದು ತೆರೆಗೆ ಬರುವ ಸಾಧ್ಯತೆ ಇದೆ.

ಜನರ ಪ್ರತಿಕ್ರಿಯೆ ಹೇಗಿದೆ?

ಸುದೀಪ್ ಮತ್ತು ಸಲ್ಮಾನ್ ಖಾನ್ ಅಭಿನಯದ ‘ದಬಾಂಗ್–3’ ನಂತರ, ಕನ್ನಡದಲ್ಲಿ ಯಾವುದೇ ಸಿನಿಮಾ ಡಬ್ ಆಗಿ ಬಿಡುಗಡೆ ಆಗಿಲ್ಲ. ‘ಎರಡು ವಾರಕ್ಕೆ ಒಂದು ಅಥವಾ ತಿಂಗಳಿಗೆ ಒಂದಾದರೂ ಡಬ್ ಸಿನಿಮಾ ಬಿಡುಗಡೆ ಆದರೆ, ಜನರ ಪ್ರತಿಕ್ರಿಯೆ ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ’ ಎಂದು ಹೇಳುತ್ತಾರೆ ನಿರ್ಮಾಪಕ, ವಿತರಕ ಜಾಕ್ ಮಂಜು.

‘ಸುದೀಪ್ ನಟಿಸಿರುವ ಚಿತ್ರಗಳು ಕನ್ನಡಕ್ಕೆ ಡಬ್ ಆದಾಗ ಕಲೆಕ್ಷನ್ ಚೆನ್ನಾಗಿ ಆಗಿದೆ ಎಂಬ ಮಾತುಗಳಿವೆ. ಆದರೆ, ಒಳ್ಳೆಯ ಕಥೆ ಇರುವ, ಮೂಲ ಭಾಷೆಯಲ್ಲಿ ಸೂಪರ್ ಹಿಟ್ ಆದ ಚಿತ್ರದ ಕನ್ನಡ ಡಬ್ ಆವೃತ್ತಿಯ ಪ್ರದರ್ಶನ ಚೆನ್ನಾಗಿ ಆಗದಿದ್ದರೆ ಮಾತ್ರ ಡಬ್ ಸಿನಿಮಾಗಳಿಗೆ ಜನರ ಪ್ರತಿಕ್ರಿಯೆ ಚೆನ್ನಾಗಿಲ್ಲ ಎನ್ನಲು ಸಾಧ್ಯ’ ಎನ್ನುವುದು ಮಂಜು ಅವರ ಅಭಿಪ್ರಾಯ.

‘ಸೈರಾ’ ಮತ್ತು ‘ದಬಾಂಗ್–3’ ಚಿತ್ರಗಳು ಕನ್ನಡದಲ್ಲಿ ಕನಿಷ್ಠ ತಲಾ ₹ 2 ಕೋಟಿ ಬಾಚಿಕೊಂಡಿವೆ ಎಂಬ ವರದಿಗಳು ಇವೆ.

***

ಒಳ್ಳೆಯ ಸಿನಿಮಾ ಡಬ್ ಆದರೆ ಜನ ನೋಡುತ್ತಾರೆ ಎಂಬುದು ಖಚಿತ. ಆದರೆ, ಇಂಗ್ಲಿಷ್ ಸಿನಿಮಾ ಡಬ್ ಆದಾಗ ಅದನ್ನು ಎಷ್ಟು ಜನ ವೀಕ್ಷಿಸುತ್ತಾರೆ ಎಂಬ ಪ್ರಶ್ನೆ ಇದೆ. ಏಕೆಂದರೆ ಇಂಗ್ಲಿಷ್ ಸಿನಿಮಾ ವೀಕ್ಷಿಸುವ ವರ್ಗದವರು, ಆ ಭಾಷೆಯಲ್ಲೇ ಸಿನಿಮಾ ಆಸ್ವಾದಿಸುತ್ತಾರೆ.
– ಜಾಕ್ ಮಂಜು, ನಿರ್ಮಾಪಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು