ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕ್ ಲವ್ ಯಾ ಸಿನಿಮಾ ವಿಮರ್ಶೆ: ಇಲ್ಲಿ ಸಿನಿಮಾಗಿಂತ ಹಾಡುಗಳೇ ಹಿಟ್‌!

Last Updated 26 ಫೆಬ್ರುವರಿ 2022, 13:07 IST
ಅಕ್ಷರ ಗಾತ್ರ

ಸಿನಿಮಾ: ಏಕ್‌ ಲವ್‌ ಯಾ

ನಿರ್ಮಾಣ: ರಕ್ಷಿತಾ ಪ್ರೇಮ್‌

ನಿರ್ದೇಶನ: ಪ್ರೇಮ್‌

ತಾರಾಗಣ: ರಾಣಾ, ರೀಷ್ಮಾ ನಾಣಯ್ಯ, ರಚಿತಾ ರಾಮ್‌, ಚರಣ್‌ ರಾಜ್‌, ಶಶಿಕುಮಾರ್‌, ಸುಚೇಂದ್ರ ಪ್ರಸಾದ್‌

******

ಕಾಲಿಗೆ ಚಕ್ರ ಕಟ್ಟಿಕೊಂಡವರಂತೆಇಲ್ಲಿನ ಬಹುತೇಕ ದೃಶ್ಯಗಳಲ್ಲಿ ನಾಯಕ ಜಾರಿಕೊಂಡೇ ಪ್ರವೇಶ ಕೊಡುತ್ತಾನೆ. ಹೀರೊಗಿಂತ ಜಾಸ್ತಿ ಬಿಲ್ಡ್‌ಅಪ್‌ ಕೊಟ್ಟಿರೊ ಕೆಲ ಪಾತ್ರಗಳಿಗೆ ನ್ಯಾಯವನ್ನು ಪ್ರೇಕ್ಷಕರೇ ಒದಗಿಸಿಕೊಡಬೇಕು. ಗಟ್ಟಿಯಾದ ಕಥೆ ಇಲ್ಲದೆ ಇಡೀ ಸಿನಿಮಾ ಸೂತ್ರ ಕಿತ್ತ ಗಾಳಿಪಟವಾಗಿದ್ದರೆ, ಬಿರುಗಾಳಿಗೆ ಸಿಲುಕಿದಂತೆ ದೃಶ್ಯಗಳು ಎಲ್ಲೆಲ್ಲಿಯೋ ಹೋಗುತ್ತಿರುವಾಗ ಪ್ರೇಕ್ಷಕರು ತರ್ಕಕ್ಕೆ ಇಳಿಯಬಾರದು. ಫೈಟಿಂಗ್ ನಡುವೆಯೂ ತೂರಿಬರುವ ಕಿವಿ ಇಂಪಾಗಿಸುವ ಸಾಲು ಸಾಲು ಹಾಡು, ಬೀಟ್ಸ್‌ಗಳನ್ನು ಕೇಳಿ ಸಮಾಧಾನಪಟ್ಟುಕೊಳ್ಳಬೇಕು. ಹೀಗೆ ಪೂರ್ಣಗೊಳ್ಳುತ್ತದೆ ‘ಶೋ ಮ್ಯಾನ್‌’ ಪ್ರೇಮ್‌ ಅವರ ನಿರ್ದೇಶನದ ಸಿನಿಮಾ ‘ಏಕ್‌ ಲವ್‌ ಯಾ’.

ಕಥೆ ಹೀಗಿದೆ. ಅಮರ್‌(ರಾಣಾ) ಕಾನೂನು ಅಧ್ಯಯನ ಮಾಡುವ ಬುದ್ಧಿವಂತ ವಿದ್ಯಾರ್ಥಿ. ಸ್ವಲ್ಪ ರ್‍ಯಾಶ್‌. ಸಿಗರೇಟ್‌, ಮದ್ಯಪಾನ ಈತನ ಹವ್ಯಾಸ. ಕಾಲೇಜಿನೊಳಗೂ ಇದಕ್ಕೆ ಅವಕಾಶವಿದೆ! ಇಲ್ಲಿ ಪರಿಚಯವಾಗುವುದೇ ಸಿಗರೇಟ್‌ ಸೇದಿಕೊಂಡು ಬೋಲ್ಡ್‌ ಆಗಿ ಪ್ರವೇಶ ನೀಡುವ ನಟಿ ರಚಿತಾ ರಾಮ್ ವಿದ್ಯಾರ್ಥಿನಿ ಪಾತ್ರ. ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಆಗಮಿಸುವ ಖ್ಯಾತ ವಕೀಲ ಸಿ.ಎಚ್‌. ವಿಶ್ವನಾಥ್‌ (ಚರಣ್‌ ರಾಜ್‌) ಕಾಲ್ಪನಿಕ ಪ್ರಕರಣವೊಂದನ್ನು ಬಗೆಹರಿಸಲು ವಿದ್ಯಾರ್ಥಿಗಳಿಗೆ ಸವಾಲೆಸೆಯುತ್ತಾರೆ.

‘ಮದ್ಯ’ಲೋಕದಲ್ಲಿದ್ದರೂ ಅಮರ್‌ ಆ ಪ್ರಕರಣವನ್ನು ಭೇದಿಸುತ್ತಾನೆ. ಅಮರ್‌ಗೆ ವಿಶ್ವನಾಥ್‌ ಜ್ಯೂನಿಯರ್‌ ಲಾಯರ್‌ ಆಗುವ ಅವಕಾಶ ನೀಡುತ್ತಾರೆ. ಬಹುತೇಕ ಸಿನಿಮಾದಲ್ಲಿರುವಂತೇ ಇಲ್ಲಿಯೂ ಕಥೆಗೆ ಎರಡು ಎಳೆಯಿದೆ. ಒಂದು ಫ್ಲ್ಯಾಶ್‌ಬ್ಯಾಕ್‌. ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದ ಮಗನನ್ನು (ಅಮರ್‌) ವಕೀಲನನ್ನಾಗಿ ಮಾಡುವ ಆಸೆ ಶಂಕರ್‌ಗೆ (ಶಶಿಕುಮಾರ್‌). ಆದರೆ ಹೈಸ್ಕೂಲ್‌ನಲ್ಲೇ ‘ಅನಿತಾ’(ರೀಷ್ಮಾ ನಾಣಯ್ಯ) ಜೊತೆ ಹುಚ್ಚು ಪ್ರೀತಿಯಲ್ಲಿ ಬೀಳುವ ಅಮರ್‌, ಕಾಲೇಜಿನಲ್ಲೂ ಆಕೆಯ ಹಿಂದೆ ‘ಪಾಗಲ್‌ ಪ್ರೇಮಿ’ಯಂತೆ ಸುತ್ತುತ್ತಾನೆ. ಆದರೆ ಈ ಪ್ರೀತಿಯನ್ನು ಒಪ್ಪದೆ, ತಂದೆ ತಾಯಿಯ ಜೊತೆ ಊರು ಬಿಟ್ಟ ಅನಿತಾಳನ್ನು ಕೊಲ್ಲುವಷ್ಟು ಸಿಟ್ಟು ನಾಯಕನಿಗೆ. ಹೀಗಿರುವಾಗ ಅನಿತಾಳ ಮೇಲೆ ಅತ್ಯಾಚಾರವಾಗುತ್ತದೆ. ನಾಯಕ ಆರೋಪಿಯಾಗುತ್ತಾನೆ. ಮುಂದೆ ಏನಾಗುತ್ತದೆ ಎನ್ನುವುದು ಚಿತ್ರದ ದ್ವಿತೀಯಾರ್ಧ. ಅಥವಾ ಕಥೆ ಕೊಂಚ ಕಾಣಸಿಗುವ ಭಾಗ ಎನ್ನಬಹುದು.

ರೌಡಿಸಂ, ತಾಯಿ–ಮಗನ ಸೆಂಟಿಮೆಂಟ್‌ ಬಿಟ್ಟು ಈ ಬಾರಿ ತಂದೆ–ಮಗನ ಸಂಬಂಧದ ಮೇಲೆ ಇಡೀ ಸಿನಿಮಾದ ಕಥೆಯನ್ನು ಪ್ರೇಮ್‌ ಹೆಣೆದಿದ್ದಾರೆ. ಪ್ರೇಮ್‌, ಸಿನಿಮಾದಲ್ಲಿ ಹಾಡುಗಳಿಗೆ ಹಾಗೂ ಅದ್ಧೂರಿತನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ನಿರ್ದೇಶಕರಲ್ಲೊಬ್ಬರು. ಈ ಸಿನಿಮಾದಲ್ಲೂ ಇವೆರಡೂ ವಿಷಯಕ್ಕೆ ವಿಶೇಷ ಆದ್ಯತೆ ಇದೆ. ಟೈಟಾನಿಕ್‌ನಂತೆ ಮುಳುಗುವ ಈ ಸಿನಿಮಾವನ್ನು ಅರ್ಜುನ್‌ ಜನ್ಯ ಅವರ ಸಂಗೀತ, ಹಾಡು ಮತ್ತು ಕೆಲ ದೃಶ್ಯಗಳ ಚಿತ್ರೀಕರಣಕ್ಕಾಗಿ ಆಯ್ಕೆ ಮಾಡಿಕೊಂಡ ಸ್ಥಳಗಳ ದೃಶ್ಯ ವೈಭವ ಹಾಗೂ ಒಂದಿಷ್ಟು ಪೋಲಿ ಡೈಲಾಗ್‌ಗಳು ಕಾಪಾಡಿವೆ ಎಂದರೆ ಖಂಡಿತ ತಪ್ಪಾಗಲಾರದು. ಹೈಸ್ಕೂಲ್‌, ಕಾಲೇಜಿನಲ್ಲಿ ಗೆಳೆಯರ ಜೊತೆಗಿನ ದೃಶ್ಯಗಳು ಇದಕ್ಕೆ ಸಾಕ್ಷ್ಯ.

ದ್ವಿತೀಯಾರ್ಧದಲ್ಲಿನ ನ್ಯಾಯಾಲಯದಲ್ಲಿನ ವಾದ ನೀರಸ. ‘ವಿಶ್ವನಾಥ್‌’ ಪಾತ್ರವನ್ನು ಇನ್ನಷ್ಟು ಗಟ್ಟಿಗೊಳಿಸಬಹುದಿತ್ತು. ಇಡೀ ಸಿನಿಮಾದಲ್ಲಿ ಲಾಜಿಕ್‌ ಇಲ್ಲದ ಹಲವು ದೃಶ್ಯಗಳು ತಲೆಸುತ್ತು ಬರಿಸುತ್ತವೆ. ರಾಜ್ಯದ ಗಮನ ಸೆಳೆದ ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ನಾಯಕ ಬಾರ್‌ನಲ್ಲಿ ಆರಾಮವಾಗಿ ಕುಡಿಯುತ್ತಾ, ಊರುರು ಸುತ್ತುವಾಗ ಹೀಗೆನಿಸುತ್ತದೆ. ಚೊಚ್ಚಲ ಸಿನಿಮಾವಾದರೂ ಆ್ಯಕ್ಷನ್‌ನಲ್ಲಿ, ನಟನೆಯಲ್ಲಿ ರಾಣ ಚಪ್ಪಾಳೆ ಗಿಟ್ಟಿಸುತ್ತಾರೆ.

ಮೊದಲ ಸಿನಿಮಾವಾದರೂ ರೀಷ್ಮಾ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ತಂದೆ ಪಾತ್ರದಲ್ಲಿ ಶಶಿಕುಮಾರ್‌, ಸುಚೇಂದ್ರ ಪ್ರಸಾದ್‌ ಹಾಗೂ ಉಳಿದ ಪಾತ್ರಗಳು ಗಮನ ಸೆಳೆದಿವೆ. ರಚಿತಾ ರಾಮ್‌ ಅವರ ಪಾತ್ರ ಎರಡು ಹಾಡಿಗೆ, ಒಂದು ಪಫ್‌, ಒಂದು ಲಿಪ್‌ಲಾಕ್‌ಗೆ ಸೀಮಿತ. ‘ಕಾಕ್ರೋಚ್’ ಸುಧಿ ಇಲ್ಲಿ ಕಥೆಯಿಂದಾಗಿ ‘ಹಿಟ್‌’ವಿಕೆಟ್‌ ಆಗಿ ನರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT