ಸೋಮವಾರ, ಆಗಸ್ಟ್ 2, 2021
26 °C

ನಟ– ನಟಿಯರಿಗೆ ‘ವಿದ್ಯುತ್‌ ಶಾಕ್‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನಟಿ ತಾಪ್ಸಿ ಪನ್ನು ಸೇರಿದಂತೆ ಅನೇಕ ಬಾಲಿವುಡ್‌ನ ನಟ– ನಟಿಯರು ಜೂನ್‌ ತಿಂಗಳ‌ಲ್ಲಿ ಬಂದ ಭಾರಿ ಮೊತ್ತದ ವಿದ್ಯುತ್‌ ಬಿಲ್‌ ನೋಡಿ ಹೌಹಾರಿದ್ದಾರೆ. ಪ್ರತಿ ತಿಂಗಳು ಬರುವ ವಿದ್ಯುತ್‌ ಬಿಲ್‌ಗಿಂತ ಜೂನ್‌ ತಿಂಗಳಲ್ಲಿ ಮೂರು ಪಟ್ಟು ಹೆಚ್ಚು ಬಂದಿದ್ದು, ತಮ್ಮ ಬಿಲ್‌ನ ಫೋಟೊಗಳನ್ನು ತೆಗೆದು ಸೋಶಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. 

ವಿದ್ಯುತ್‌ ಬಿಲ್‌ ಬಗ್ಗೆ ಮೊದಲು ಟ್ವೀಟ್‌ ಮಾಡಿದ್ದು ನಟಿ ತಾಪ್ಸಿ ಪನ್ನು. ಟ್ವೀಟ್‌ನಲ್ಲಿ ಮೂರು– ನಾಲ್ಕು ತಿಂಗಳ ಬಿಲ್‌ ಹಂಚಿಕೊಂಡಿರುವ ತಾಪ್ಸಿ, ‘ಮೇ ತಿಂಗಳಲ್ಲಿ ₹3,850 ಬಂದ ಬಿಲ್‌  ಜೂನ್‌ ತಿಂಗಳಿಗೆ ₹36 ಸಾವಿರದಷ್ಟು ಹೆಚ್ಚಾಗಲು ಕಾರಣ ಏನು‘ ಎಂದು ಪ್ರಶ್ನಿಸಿದ್ದಾರೆ.

ತಾನು ಅಷ್ಟೊಂದು ವಿದ್ಯುತ್‌ ಬಳಸದಿದ್ದರೂ ಭಾರಿ ಬಿಲ್‌ ಬಂದಿದೆ ಟ್ವೀಟ್‌ನಲ್ಲಿ ಹೇಳಿರುವ ಅವರು, ‘ನಾನು ಮನೆಯನ್ನು ಸ್ವಚ್ಛಗೊಳಿಸುವುದಕ್ಕಾಗಿ ವಾರಕ್ಕೆ ಒಂದು ಬಾರಿ ಮಾತ್ರ ಅಪಾರ್ಟ್‌ಮೆಂಟ್‌ಗೆ ಹೋಗುತ್ತೇನೆ. ಇಷ್ಟೊಂದು ಬಿಲ್‌ ಬರಬೇಕಾದರೆ ತನ್ನ ಗಮನಕ್ಕೆ ಬರದಂತೆ ಬೇರೆಯಾದರೂ ವಿದ್ಯುತ್‌ ಕದ್ದು ಬಳಕೆ ಮಾಡುತ್ತಿದ್ದಾರಾ?’ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. 

‘ಬಿಲ್‌ ನೋಡಿದಾಗ ಅಪಾರ್ಟ್‌ಮೆಂಟ್‌ನಲ್ಲಿ ಯಾವುದಾದರೂ ಹೊಸ ವಸ್ತು ಬಳಕೆ ಮಾಡುತ್ತಿದ್ದೀನಾ ಎಂದು ನನಗೆ ಆಶ್ಚರ್ಯವಾಯಿತು. ಬಿಲ್‌ ಇಷ್ಟೊಂದು ಹೆಚ್ಚಳ ಆಗೋಕೆ ಏನು ಕಾರಣ? ನೀವು ಯಾವ ಆಧಾರದ ಮೇಲೆ ನಮಗೆ ಚಾರ್ಜ್‌ ಮಾಡುತ್ತೀರಿ?’ ಎಂದು ಗರಂ ಆಗಿದ್ದಾರೆ. 

ತಾಪ್ಸಿ ಪನ್ನು ಟ್ವೀಟ್‌ ಮಾಡುತ್ತಿದ್ದಂತೆಯೇ ಡಿನೊ ಮೊರಿಯಾ, ರೇಣುಕಾ ಸಹನೆ, ಆಶೀಶ್‌ ಚೌಧರಿ ಸೇರಿದಂತೆ ಬಾಲಿವುಡ್‌ನ ಅನೇಕ ಮಂದಿ ತಮ್ಮ ವಿದ್ಯುತ್‌ ಬಿಲ್‌ ಫೋಟೊಗಳನ್ನು ಶೇರ್‌ ಮಾಡಿದ್ದಾರೆ. 

ರೇಣುಕಾ ಸಹನೆ ‘ಮೇ ತಿಂಗಳಲ್ಲಿ ₹5,510 ಬಿಲ್‌ ಬಂದಿತ್ತು. ಜೂನ್‌ ತಿಂಗಳಲ್ಲಿ ಮೇ ತಿಂಗಳ ಬಿಲ್‌ ಸೇರಿಸಿ ₹29,700 ಮೊತ್ತ‌ ಬಂದಿದೆ. ಅಂದರೆ ಜೂನ್‌ ತಿಂಗಳಿಗೆ ₹18,080 ಬಿಲ್‌. ಐದು ಸಾವಿರದಿಂದ 18 ಸಾವಿರಕ್ಕೆ ಏರಿಕೆಯಾಗಿದ್ದು ಹೇಗೆ?‘ ಎಂದಿದ್ದಾರೆ. 

‘ಕಳೆದ ತಿಂಗಳು ಆರು ಸಾವಿರ ಬಿಲ್‌ ಪಾವತಿಸಿದ್ದೆ. ಈ ತಿಂಗಳು ₹50 ಸಾವಿರ ಬಿಲ್‌. ಹೊಸ ಬಿಲ್‌ ಏರಿಕೆ ದರ ಏನು?’ ಎಂದು ಹುಮಾ ಎಸ್‌. ಖುರೇಷಿ ಪ್ರಶ್ನಿಸಿದ್ದಾರೆ. 

‘₹8 ಸಾವಿರದಿಂದ ₹28 ಸಾವಿರಕ್ಕೆ ಬಿಲ್‌ ಹೆಚ್ಚಳ ಆಗಿದೆ. ಅವರು ಲಾಕ್‌ಡೌನ್‌ ಹೆಚ್ಚುವರಿ ಶುಲ್ಕು ವಿಧಿಸಿದ್ದಾರಾ? ಎಂದು ಸೌಮ್ಯ ಟಂಡನ್‌ ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು