ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಥಿಕಲ್ ಹ್ಯಾಕಿಂಗ್‌: ತಂತ್ರಜ್ಞಾನದ ಜೊತೆ ಕೌಶಲವೂ ಬೇಕು

Last Updated 28 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ತಂತ್ರಜ್ಞಾನ ಹಾಗೂ ಅಂತರ್ಜಾಲದ ಬಳಕೆ ಹೆಚ್ಚಿದಂತೆ ಅದರಿಂದ ಅಪಾಯಗಳೂ ಹೆಚ್ಚುತ್ತಿವೆ. ಇತ್ತೀಚೆಗೆ ಮೊಬೈಲ್‌ಗಳು ಹಾಗೂ ಕಂಪ್ಯೂಟರ್‌ನಿಂದ ವೈಯಕ್ತಿಕ ಮಾಹಿತಿಗಳನ್ನು ಸೋರಿಕೆ ಮಾಡುವ ಹ್ಯಾಕರ್‌ಗಳ ಕಾಟ ಹೆಚ್ಚಾಗಿದೆ. ದೊಡ್ಡ ದೊಡ್ಡ ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳ ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ ಹ್ಯಾಕರ್‌ಗಳು. 1960ರಲ್ಲಿ ಮೊದಲ ಬಾರಿಗೆ ‘ಹ್ಯಾಕರ್’ ಪದವನ್ನು ಹುಟ್ಟುಹಾಕಲಾಯಿತು. ಈಗಂತೂ ಹ್ಯಾಕಿಂಗ್ ಎನ್ನುವುದು ಕಂಪ್ಯೂಟಿಂಗ್‌ನ ಭಾಗವಾಗಿದೆ. ಎಥಿಕಲ್ ಹ್ಯಾಕಿಂಗ್ ಎನ್ನುವುದು ಹ್ಯಾಕಿಂಗ್‌ನ ಒಂದು ಭಾಗವಾಗಿದ್ದು ಇದು ಸದುದ್ದೇಶಗಳಿಂದ ಕೂಡಿದೆ.

ಎಥಿಕಲ್ ಹ್ಯಾಕರ್‌

ಎಥಿಕಲ್‌ ಹ್ಯಾಕರ್‌ಗಳ ಗುರಿ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಕಂಡು ಹಿಡಿಯುವುದು ಹಾಗೂ ದೇಶಕ್ಕೆ ಮಾರಕವಾಗಿರುವ ಸಂಗತಿಗಳನ್ನು ಕಾನೂನುಬದ್ಧವಾಗಿ ಹ್ಯಾಕ್ ಮಾಡಿ ಆ ಮೂಲಕ ದೇಶದ ಗೌಪ್ಯತೆಯನ್ನು ಸುರಕ್ಷಿತವಾಗಿರಿಸುವುದು.

ಹ್ಯಾಕಿಂಗ್‌ನ ವಿಧಗಳು

ವೆಬ್‌ಸೈಟ್ ಹ್ಯಾಕಿಂಗ್‌: ವೆಬ್‌ಸರ್ವರ್‌ ಹಾಗೂ ಡೇಟಾಬೇಸ್‌ಗಳ ಮೂಲಕ ಅನಧಿಕೃತವಾಗಿ ಪ್ರವೇಶಿಸುವುದು, ಮಾಹಿತಿಗಳನ್ನು ಬದಲಿಸುವುದು ಹಾಗೂ ಸೋರಿಕೆ ಮಾಡುವುದಕ್ಕೆ ವೆಬ್‌ಸೈಟ್ ಹ್ಯಾಕಿಂಗ್ ಎನ್ನುತ್ತಾರೆ.

ನೆಟ್‌ವರ್ಕ್ ಹ್ಯಾಕಿಂಗ್‌: ಎನ್‌ಎಸ್‌ ಲುಕ್‌ಅಪ್‌, ಟ್ರೇಸರ್ಟ್‌ ಮುಂತಾದ ಟೂಲ್‌ಗಳ ಮೂಲಕ ನೆಟ್‌ವರ್ಕ್ ವ್ಯವಸ್ಥೆಯನ್ನು ಹ್ಯಾಕ್‌ ಮಾಡುವುದು ಹಾಗೂ ನೆಟ್‌ವರ್ಕ್ ವ್ಯವಸ್ಥೆಯನ್ನು ಕೆಡಿಸುವುದಕ್ಕೆ ನೆಟ್‌ವರ್ಕ್ ಹ್ಯಾಕಿಂಗ್ ಎನ್ನಲಾಗುತ್ತದೆ.

ಇಮೇಲ್ ಹ್ಯಾಕಿಂಗ್‌: ಇಮೇಲ್‌ನ ಬಳಕೆದಾರರ ಅನುಮತಿಯಿಲ್ಲದೆ ಅನಧಿಕೃತವಾಗಿ ಇಮೇಲ್‌ ಅಕೌಂಟ್‌ಗೆ ಪ್ರವೇಶಿಸುವುದು.

ಪಾಸ್‌ವರ್ಡ್‌ ಹ್ಯಾಕಿಂಗ್‌: ಕಂಪ್ಯೂಟರ್‌ನಲ್ಲಿ ಈಗಾಗಲೇ ಸಂಗ್ರಹವಾಗಿರುವ ಡೇಟಾದಿಂದ ರಹಸ್ಯ ಪಾಸ್‌ವರ್ಡ್‌ಗಳನ್ನು ಮರುಪಡೆಯುವುದು, ಆ ಮೂಲಕ ಮಾಹಿತಿ ಕದಿಯವುದು.

ಕಂಪ್ಯೂಟರ್ ಹ್ಯಾಕಿಂಗ್‌: ಅನಧಿಕೃತವಾಗಿ ಕಂಪ್ಯೂಟರ್ ವ್ಯವಸ್ಥೆಯೊಳಗೆ ಪ್ರವೇಶ ಪಡೆಯುವುದು, ಪಾಸ್‌ವರ್ಡ್ ಮುಂತಾದ ಮಾಹಿತಿಗಳನ್ನು ಕದಿಯುವುದು.

ಹ್ಯಾಕರ್‌ಗಳ ವಿಧಗಳು

ವೈಟ್‌ ಹ್ಯಾಟ್ ಹ್ಯಾಕರ್ಸ್‌: ಸಾಮಾನ್ಯವಾಗಿ ವೈಟ್ ಹ್ಯಾಟ್ ಹ್ಯಾಕರ್‌ಗಳು ಒಳ್ಳೆಯ ಉದ್ದೇಶಗಳಿಂದ ಹ್ಯಾಕ್ ಮಾಡುವ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು. ಅಂದರೆ ಅವರು ಕಂಪ್ಯೂಟರ್ ಅಥವಾ ನೆಟ್‌ವರ್ಕ್ ವ್ಯವಸ್ಥೆಯಲ್ಲಿನ ದೌರ್ಬಲ್ಯಗಳನ್ನು ಕಂಡುಹಿಡಿದು ವ್ಯವಸ್ಥೆಗೆ ಹಾನಿ ಮಾಡುವ ಅಂಶಗಳನ್ನು ಸರಿಪಡಿಸುತ್ತಾರೆ. ಜೊತೆಗೆ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಮೌಲ್ಯಮಾಪನ ಮಾಡಲು ಪ್ರಯತ್ನಿಸುತ್ತಾರೆ.

ಬ್ಲ್ಯಾಕ್ ಹ್ಯಾಟ್ ಹ್ಯಾಕರ್‌ಗಳು: ಯಾವುದೇ ಕಂಪ್ಯೂಟರ್ ಅಥವಾ ನೆಟ್‌ವರ್ಕ್ ವ್ಯವಸ್ಥೆಯೊಳಗೆ ಅನಧಿಕೃತವಾಗಿ ಪ್ರವೇಶ ಮಾಡುವವರನ್ನು ಬ್ಲ್ಯಾಕ್ ಹ್ಯಾಟ್ ಹ್ಯಾಕರ್‌ಗಳು ಎನ್ನುತ್ತಾರೆ. ಅವರು ಕಾರ್ಪೊರೇಟ್ ಡೇಟಾ ಕದಿಯುವುದು, ಗೌಪ್ಯತೆಯ ಉಲ್ಲಂಘನೆ, ವ್ಯವಸ್ಥೆಯನ್ನು ಹಾಳುಗೆಡವುವುದು, ನೆಟ್‌ವರ್ಕ್‌ ಸಂವಹನವನ್ನು ನಿರ್ಬಂಧಿಸುವುದು ಮುಂತಾದವನ್ನು ಮಾಡುತ್ತಾರೆ.

ಗ್ರೇ ಹ್ಯಾಟ್ ಹ್ಯಾಕರ್‌, ರೆಡ್‌ ಹ್ಯಾಟ್‌ ಹ್ಯಾಕರ್ಸ್‌, ಬ್ಲೂ ಹ್ಯಾಟ್‌ ಹ್ಯಾಕರ್ಸ್‌, ಎಲೈಟ್ ಹ್ಯಾಕರ್ಸ್‌, ಸ್ಕ್ರಿಪ್ಟ್ ಕಿಡ್ಡಿ, ನಿಯೋಫೈಟ್, ಹ್ಯಾಕ್ಟಿವಿಸ್ಟ್ ಇವರನ್ನು ಮಿಸಲೇನಿಯಸ್ ಹ್ಯಾಕರ್‌ಗಳು ಎನ್ನುತ್ತಾರೆ.

ಎಥಿಕಲ್ ಹ್ಯಾಕಿಂಗ್‌ಗೆ ಬಳಸುವ ಟೂಲ್‌ಗಳು

ಎನ್‌ಮ್ಯಾಪ್: ನೆಟ್‌ವರ್ಕ್ ಮ್ಯಾಪರ್ ಅನ್ನು ಎನ್‌ಮ್ಯಾಪರ್‌ ಎಂದು ಕರೆಯುತ್ತಾರೆ. ಎನ್‌ಮ್ಯಾಪ್ ಎನ್ನುವುದು ಓಪನ್ ಸೋರ್ಸ್ ಟೂಲ್ ಆಗಿದ್ದು ದೊಡ್ಡ ದೊಡ್ಡ ನೆಟ್‌ವರ್ಕ್ ಜಾಲವನ್ನು ಸ್ಕ್ಯಾನ್‌ ಮಾಡಲು ಇದನ್ನು ವಿನ್ಯಾಸಗೊಳಿಸಿರುತ್ತಾರೆ.

ನೆಟ್ಸ್‌ಪಾರ್ಕರ್‌: ಇದು ವೆಬ್ ಸೆಕ್ಯೂರಿಟಿ ಸ್ಕ್ಯಾನಿಂಗ್ ಪರಿಕರಗಳನ್ನು ಸ್ವಯಂಚಾಲಿತಗೊಳಿಸುವ ಏಕೈಕ ಭದ್ರತಾ ಸ್ಕ್ಯಾನರ್ ಆಗಿದೆ. ಈ ಟೂಲ್‌ ಎಥಿಕಲ್ ಹ್ಯಾಕರ್‌ಗಳಿಗೆ ವೆಬ್‌ಸೈಟ್ ಸ್ಕ್ಯಾನ್‌ ಮಾಡುವುದು, ವೆಬ್‌ ಸರ್ವೀಸ್‌ ಹಾಗೂ ವೆಬ್‌ ಅಪ್ಲಿಕೇಷನ್‌ಗಳನ್ನು ಸ್ಕ್ಯಾನ್ ಮಾಡಲು ಅನುಮತಿ ನೀಡುತ್ತದೆ. ಸುರಕ್ಷತಾ ನ್ಯೂನತೆಗಳು ಹಾಗೂ ದೋಷಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.

ಬರ್ಪ್ ಸೂಟ್: ಬರ್ಪ್ ಸೂಟ್ ಸುಲಭವಾಗಿ ಬಳಸಲಾಗುವ ಹಾಗೂ ಜನಪ್ರಿಯ ವೇದಿಕೆಯಾಗಿದೆ. ವೆಬ್‌ ಅಪ್ಲಿಕೇಶನ್‌ಗಳ ಸುರಕ್ಷತಾ ಪರೀಕ್ಷೆಗಳನ್ನು ನಿರ್ವಹಿಸಲು ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ಕೌಶಲಗಳು

ಹ್ಯಾಕಿಂಗ್ ಎನ್ನುವುದು ಕೇವಲ ವಿಜ್ಞಾನವಲ್ಲ, ಇದು ಒಂದು ಕಲೆ. ಇದಕ್ಕೆ ನೂತನ ತಂತ್ರಜ್ಞಾನದೊಂದಿಗೆ ಅಪ್‌ಡೇಟ್‌ ಆಗುತ್ತಲೇ ಇರಬೇಕು, ಅದಕ್ಕಾಗಿ ಸಾಕಷ್ಟು ಶ್ರಮ ವಹಿಸಬೇಕು. ಹೊಸ ಹೊಸ ದೋಷಗಳ ಕುರಿತು ಅರಿವು ಮೂಡಿಸಿಕೊಂಡಿರಬೇಕು.

ಪ್ರೋಗ್ರಾಮಿಂಗ್ ಲ್ಯಾಗ್ವೇಂಜ್‌: ನೈತಿಕ ಹ್ಯಾಕರ್ ಆಗ ಬಯಸುವವರು ಕಂಪ್ಯೂಟರ್‌ ವ್ಯವಸ್ಥೆಗಳ ಕುರಿತು ಆಳವಾಗಿ ತಿಳಿವಳಿಕೆ ಮೂಡಿಸಿಕೊಂಡಿರಬೇಕು. ಪೋಗ್ರಾಮಿಂಗ್ ಹಾಗೂ ಕಂಪ್ಯೂಟರ್‌ ನೆಟ್‌ವರ್ಕ್‌ ಕುರಿತು ಕೌಶಲವಿರಬೇಕು.

ಕಂಪ್ಯೂಟರ್ ಲ್ಯಾಗ್ವೇಂಜ್‌: ಎಚ್‌ಟಿಎಂಎಲ್‌, ಜಾವಾಸ್ಕ್ರಿಪ್ಟ್‌, ಎಸ್‌ಕ್ಯೂಎಲ್‌, ಪಿಎಚ್‌ಪಿ/ರುಬಿ

ಸೆಕ್ಯೂರಿಟಿ: ಫೈರ್‌ವಾಲ್ಸ್‌, ಕ್ಟ್ರಿಪ್ಟೋಗ್ರಫಿ, ಎನ್‌ಕ್ಟ್ರಿಪ್ಷನ್‌, ಡಿಕ್ರಿಪ್ಷನ್‌, ಎಸ್‌ಎಸ್‌ಎಲ್‌, ಎಚ್‌ಎಚ್‌ಟಿಪಿ, ಎಚ್‌ಟಿಟಿಪಿಎಸ್‌, ಐಟಿಸೆಕ್‌ ಇತ್ಯಾದಿ.

(ಪೂರಕ ಮಾಹಿತಿ: ಎಸ್‌.ಜಿ. ಕೃಷ್ಣ, ನಿರ್ದೇಶಕರು ಲೋಕಸ್‌ ಸ್ಟಾರ್ಟ್‌ಅಪ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT