ಬೆಂಗಳೂರು: ಕನ್ನಡ ಚಿತ್ರರಂಗದ ಮಹಿಳಾ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರ ರಕ್ಷಣೆಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು (ಕೆಎಫ್‌ಸಿಸಿ) ಲೈಂಗಿಕ ದೌರ್ಜನ್ಯ ತಡೆ (ಪಾಶ್) ಸಮಿತಿಯನ್ನು ಶೀಘ್ರದಲ್ಲೇ ರಚಿಸಬೇಕೆಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಸೂಚಿಸಿದ್ದಾರೆ.
ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಅಧ್ಯಯನಕ್ಕೆ ಕೇರಳ ಸರ್ಕಾರ ನೇಮಿಸಿದ್ದ ನ್ಯಾಯಮೂರ್ತಿ ಕೆ. ಹೇಮಾ ಸಮಿತಿಯ ವರದಿ ಬಹಿರಂಗಗೊಂಡ ಬೆನ್ನಲ್ಲೇ, ಕನ್ನಡ ಚಿತ್ರರಂಗದಲ್ಲೂ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಬೇಕು ಎನ್ನುವ ಕೂಗು ಕೇಳಿಬಂದಿದೆ. ಕೆಲ ದಿನಗಳ ಹಿಂದೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆ್ಯಂಡ್ ಇಕ್ವಾಲಿಟಿ (ಫೈರ್) ಸದಸ್ಯರು ಮುಖ್ಯಮಂತ್ರಿಯನ್ನು ಭೇಟಿಯಾಗಿ ಈ ಬಗ್ಗೆ ಮನವಿಯನ್ನೂ ನೀಡಿದ್ದರು.
ಕೆಎಫ್‌ಸಿಸಿ ಪದಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ನಾಗಲಕ್ಷ್ಮಿ ಅವರು ಸೋಮವಾರ (ಸೆ.16) ಈ ಸೂಚನೆ ನೀಡಿದ್ದಾರೆ. ‘ಕೆಎಫ್‌ಸಿಸಿ 15 ದಿನದೊಳಗೆ ಸಮಿತಿ ರಚನೆ ಕುರಿತು ಪ್ರತಿಕ್ರಿಯೆ ನೀಡಬೇಕು’ ಎಂದು ಕೆಎಫ್‌ಸಿಸಿ ಅಧ್ಯಕ್ಷ ಎನ್.ಎಂ. ಸುರೇಶ್ ಅವರಿಗೆ ನಾಗಲಕ್ಷ್ಮಿ ತಿಳಿಸಿದರು. ‘ಪಾಶ್ ಸಮಿತಿ ರಚನೆ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಿ, ಮಂಡಳಿಯ ಕಾರ್ಯಕಾರಿ ಸಮಿತಿ ಮುಂದೆ ವಿಷಯ ಪ್ರಸ್ತಾಪಿಸಿ ಮಹಿಳಾ ಆಯೋಗಕ್ಕೆ ತಿಳಿಸಲಾಗುವುದು’ ಎಂದು ಎನ್.ಎಂ.ಸುರೇಶ್ ಪ್ರತಿಕ್ರಿಯೆ ನೀಡಿದರು.
ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ನಾಗಲಕ್ಷ್ಮಿ, ‘ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯದ ಬಗ್ಗೆ ನಾನು ಅಧಿಕಾರ ಸ್ವೀಕರಿಸಿದ ಮೇಲೆ ಆಯೋಗಕ್ಕೆ ಯಾವುದೇ ದೂರು ಬಂದಿಲ್ಲ. ಪಾಶ್ ಸಮಿತಿ ರಚಿಸಬೇಕು ಎಂದು ಸರ್ಕಾರದ ಅಧಿಸೂಚನೆಯೇ ಇದೆ. ಇಂತಹ ಸಮಿತಿ ರಚನೆಯಾದಾಗ, ಒಂದು ಹೆಣ್ಣುಮಗಳಿಗೆ ಏನೇ ಆದರೂ ತಾಯಿ ಸಂಸ್ಥೆಗೆ ಬಂದು ದೂರು ನೀಡುವ ವ್ಯವಸ್ಥೆ ಆಗಲಿದೆ. ಸಮಿತಿಯಲ್ಲಿ ಯಾರು ಇರಬೇಕು ಎನ್ನುವುದರ ಬಗ್ಗೆಯೂ ಸೂಚನೆಯಿದೆ. ಜೊತೆಗೆ ಆಯೋಗದಿಂದ ಒಂದು ಸಮೀಕ್ಷೆಯನ್ನೂ ಮಾಡುತ್ತೇವೆ. ಚಿತ್ರರಂಗದಲ್ಲಿರುವ 24 ವಿಭಾಗಗಳ ಮಹಿಳೆಯರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂಡಳಿಯ ಅಧ್ಯಕ್ಷರೇ ಸಂಪರ್ಕ ಸಂಖ್ಯೆಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಸಮೀಕ್ಷೆಯು ಗೌಪ್ಯವಾಗಿ ಇರಲಿದೆ. ಇಲ್ಲಿ ಸಂಗ್ರಹವಾದ ಸಮಸ್ಯೆಗಳ ಬಗ್ಗೆ ಗೌಪ್ಯವಾಗಿ ಚರ್ಚೆ ಮಾಡಿ, ಒಂದು ನೀತಿಯನ್ನು ಮಾಡಲಿದ್ದೇವೆ. ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರಿಗೆ ಕನಿಷ್ಠ ಸೌಲಭ್ಯಗಳನ್ನು ಚಿತ್ರರಂಗ ಕಲ್ಪಿಸಿಕೊಡಬೇಕು’ ಎಂದರು.
ಕೆಎಫ್‌ಸಿಸಿ ಜೊತೆ ಸಭೆ ನಡೆಸಲು ಫೈರ್ ಸಂಸ್ಥೆ ಮುಖ್ಯಮಂತ್ರಿಯವರನ್ನು ಭೇಟಿಯಾಗಿದ್ದು ಕಾರಣವಲ್ಲ ಎಂದು ತಿಳಿಸಿದ ನಾಗಲಕ್ಷ್ಮಿ, ‘ಫೈರ್ ಸಂಸ್ಥೆಯವರು ಅವರ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಮೂಲ ಉದ್ದೇಶವೂ ಹೆಣ್ಣುಮಕ್ಕಳ ಸುರಕ್ಷತೆಯೇ’ ಎಂದರು.
ನಟಿಯರಾದ ತಾರಾ ಅನುರಾಧ, ಭಾವನಾ ರಾಮಣ್ಣ, ಸಿಂಧು ಲೋಕನಾಥ್, ನೀತು ಶೆಟ್ಟಿ, ಸಂಜನಾ ಗಲ್ರಾನಿ, ಅನಿತಾ ಭಟ್, ನಿರ್ದೇಶಕಿ ಕವಿತಾ ಲಂಕೇಶ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಕೆಎಫ್‌ಸಿಸಿ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ವಾದ–ಪ್ರತಿವಾದ: ಚಿತ್ರರಂಗದಲ್ಲಿ ಕೇಳಿಬರುತ್ತಿರುವ ಲೈಂಗಿಕ ಶೋಷಣೆಯ ಸತ್ಯಾಸತ್ಯತೆ ತಿಳಿದುಕೊಳ್ಳಲು ಕೇರಳ ಮಾದರಿಯಲ್ಲಿ ಸಮಿತಿಯೊಂದರ ರಚನೆ ಕುರಿತು ಸಭೆಯಲ್ಲಿ ತೀವ್ರ ವಾದ–ಪ್ರತಿವಾದಗಳು ನಡೆದವು. ಇಂತಹ ಸಮಿತಿ ರಚನೆಯಾದರೆ ಮುಂದೊಂದು ದಿನ ಮಹಿಳೆಯರೇ ಇಲ್ಲದ ಚಿತ್ರಗಳ ನಿರ್ಮಾಣವಾಗಲಿದೆ ಎಂದು ನಿರ್ದೇಶಕರೊಬ್ಬರು ಹೇಳಿದರು. ಸಂಭಾವನೆ ತಾರತಮ್ಯ, ಸೌಲಭ್ಯಗಳ ಕೊರತೆ, ಶೋಷಣೆಯ ಕೆಲ ಘಟನೆಗಳನ್ನು ಉಲ್ಲೇಖಿಸಿ ನಟಿಯರು ಮಾತನಾಡಿದರು.
ಕೇರಳದ ಮಾದರಿಯಲ್ಲಿ ಸರ್ಕಾರ ಯಾವುದೇ ಸಮಿತಿ ರಚಿಸುವುದು ಬೇಡ. ಸಮಸ್ಯೆಗಳನ್ನು ನೇರವಾಗಿ ನಮ್ಮ ಬಳಿ ಧೈರ್ಯವಾಗಿ ಹೇಳಿಕೊಂಡರೆ ಖಂಡಿತವಾಗಿಯೂ ನ್ಯಾಯ ಒದಗಿಸುತ್ತೇವೆ. ಸಮಿತಿ ರಚಿಸಿದರೆ ಚಿತ್ರರಂಗ ಬಹಳ ತೊಂದರೆಗೆ ಸಿಲುಕಿಕೊಳ್ಳಲಿದೆಸಾ.ರಾ.ಗೋವಿಂದು ನಿರ್ಮಾಪಕ
ಈ ರೀತಿ ಸಮಿತಿ ರಚನೆಯಾದಾಗ ಸಿನಿಮಾರಂಗಕ್ಕೆ ವ್ಯಾವಹಾರಿಕವಾಗಿ ಸಮಸ್ಯೆಯಾಗಲಿದೆ. ಕೇರಳದ ರೀತಿಯಲ್ಲಿ ಪ್ರಕರಣಗಳು ಹೊರಬರಲಿವೆ ಎಂಬುದಕ್ಕೆ ವಿರೋಧಿಸುತ್ತಿಲ್ಲರಾಕ್‌ಲೈನ್ ವೆಂಕಟೇಶ್ ನಿರ್ಮಾಪಕ ನಾವಿನ್ನೂ ಕಾರ್ಮಿಕ ಕಾಯ್ದೆಯಡಿಯೇ ಇದ್ದೇವೆ. ನಮ್ಮದು ಚಿತ್ರರಂಗವಾಗಿದೆ ಹೊರತು ಉದ್ಯಮವಾಗಿಲ್ಲ. ಉದ್ಯಮ ಎಂದು ಘೋಷಣೆಯಾದರೆ ಎಲ್ಲ ಸೌಲಭ್ಯಗಳು ದೊರಕುತ್ತವೆತಾರಾ ನಟಿ
ನಮಗೆ ಸಭೆಯಲ್ಲಿ ಮಾತನಾಡಲು ಅವಕಾಶ ನೀಡಿಲ್ಲ. ಇಂತಹ ಸಮಸ್ಯೆ ನಾಲ್ಕೈದು ವರ್ಷದ ಹಿಂದೆ ಬಂದಾಗ ಕೈಕುಲುಕಿ ಬಗೆಹರಿಸಿಕೊಳ್ಳಿ ಎಂದಿದ್ದರು. ಇಂತಹ ನಡೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆಗೆ ನಮ್ಮ ಒತ್ತಡ ಮುಂದುವರಿಯಲಿದೆಕವಿತಾ ಲಂಕೇಶ್ ನಿರ್ದೇಶಕಿ
ಕನ್ನಡ ಚಿತ್ರರಂಗದಷ್ಟು ಒಳ್ಳೆಯ ಚಿತ್ರರಂಗ ಬೇರೆಲ್ಲೂ ಇಲ್ಲ. ಚಂದನವನದಲ್ಲಿ ಮಹಿಳಾ ಕಲಾವಿದರ ಸಂಸ್ಥೆ ಆಗಬೇಕು. ಚಿತ್ರರಂಗಕ್ಕೆ ಬರುವ ಹದಿಹರೆಯದ ಹೆಣ್ಣುಮಕ್ಕಳಲ್ಲಿ ಇದರ ಮೂಲಕ ಜಾಗೃತಿ ಮೂಡಿಸಬೇಕುಸಂಜನಾ ಗಲ್ರಾನಿ ನಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.