ಮುಂಬೈ: ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ ಭಾರತ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಸಾಧನೆಗೆ ನಟರಾದ ಚಿರಂಜೀವಿ, ಮೋಹನ್ ಲಾಲ್, ಅಕ್ಷಯ್ ಕುಮಾರ್, ಜೂನಿಯರ್ ಎನ್‌ಟಿಆರ್, ಸನ್ನಿ ದೇವಲ್ ಹಾಗೂ ನಟಿ ಕರೀನಾ ಕಪೂರ್ ಖಾನ್, ಸೇರಿದಂತೆ ಭಾರತೀಯ ಚಿತ್ರರಂಗದ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಲಕ್ಷಾಂತರ ಹೃದಯಗಳು ಇಸ್ರೊಗೆ ‘ಧನ್ಯವಾದ’ ಎಂದು ಹೇಳಿವೆ ಎಂದು ‘ಎಕ್ಸ್’ (ಟ್ವಿಟರ್) ವೇದಿಕೆಯಲ್ಲಿ ಹೇಳಿರುವ ಅಕ್ಷಯ್ ಕುಮಾರ್, ‘ನಾವು ತುಂಬಾ ಹೆಮ್ಮೆಪಡುಂತೆ ನೀವು ಮಾಡಿದ್ದೀರಿ. ಭಾರತವು ಐತಿಹಾಸಿಕ ಸಾಧನೆಯನ್ನು ನೋಡುತ್ತಿರುವುದು ಅದೃಷ್ಟ. ಭಾರತವು ಚಂದ್ರನ ಮೇಲಿದೆ. ನಾವು ಚಂದ್ರನ ಮೇಲಿದ್ದೇವೆ. #ಚಂದ್ರಯಾನ3’ ಎಂದೂ ಬರೆದುಕೊಂಡಿದ್ದಾರೆ
ಚಂದ್ರಯಾನ–3 ಚಂದ್ರನ ಮೇಲೆ ಇಳಿಯುವುದನ್ನು ತಮ್ಮ ಮಕ್ಕಳೊಂದಿಗೆ ವೀಕ್ಷಿಸಿರುವುದಾಗಿ ಹೇಳಿದ್ದ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್, ‘ಭಾರತೀಯಳಾಗಿದ್ದಕ್ಕೆ ಹೆಮ್ಮೆ ಪಡುತ್ತೇನೆ’ ಎಂದಿದ್ದಾರೆ. ‘ಎಂಥ ಅದ್ಭುತ. ಹೆಮ್ಮೆ ಹೆಮ್ಮೆ ಹೆಮ್ಮೆ!’ ಎಂದು ಕರೀನಾ ಇನ್‌ಸ್ಟಾಗ್ರಾಂನಲ್ಲಿ ಹೇಳಿದ್ದು, ‘ಇಸ್ರೊ’ದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಇನ್ನು ನಟ ಸನ್ನಿ ದೇವಲ್ ಅವರು 2001ರ ‘ಗದರ್’ ಸಿನಿಮಾದಲ್ಲಿನ ಜನಪ್ರಿಯ ಸಂಭಾಷಣೆಯ ಮಾದರಿಯಲ್ಲಿ, ‘ಎಂಥಾ ಹೆಮ್ಮೆಯ ಕ್ಷಣ. #ಹಿಂದೂಸ್ತಾನ್ ಜಿಂದಾಬಾದ್ ಥಾ, ಹೈ ಔರ್ ರಹೇಗಾ’ ಎಂದು ಹೇಳಿದ್ದು, ‘ಭಾರತೀಯ ಬಾಹ್ಯಾಕಾಶದಲ್ಲಿ ಐತಿಹಾಸಿಕ ಕ್ಷಣ, ಹೆಮ್ಮೆ!’ ಎಂದು ‘ಎಕ್ಸ್’ನಲ್ಲಿ ಹೇಳಿಕೊಂಡಿದ್ದಾರೆ.
‘ನಂಬಲಾಗದಂಥ ಸಂತಸ, ಹೆಮ್ಮೆ’ ಎಂದು ಕಾಜೋಲ್ ಹೇಳಿದ್ದರೆ, ಅವರ ಪತಿ ಅಜಯ್ ದೇವಗನ್, ‘ಈ ಐತಿಹಾಸಿಕ ಕ್ಷಣದಲ್ಲಿ ಬದುಕುತ್ತಿರುವುದಕ್ಕೆ ಹೆಮ್ಮೆ, ಉತ್ಸುಕತೆ ಮತ್ತು ಗೌರವ. ಭಾರತ್ ಮಾತಾ ಕಿ ಜೈ’ ಎಂದು ಹೇಳಿದ್ದಾರೆ.
‘ಇಂದು ನನ್ನ ಹೃದಯ ಹೆಮ್ಮೆಯಿಂದ ಉಬ್ಬಿ ಹೋಗಿದೆ. ‘ನನ್ನ ಜನರು ಎತ್ತರಕ್ಕೆ ಹೋಗುತ್ತಾರೆ ಮತ್ತು ಅತ್ಯುತ್ತಮವಾದದ್ದನ್ನು ನೀಡುತ್ತಾರೆ. ಅಭಿನಂದನೆಗಳು. ಇಸ್ರೊ ಮತ್ತು ಚಂದ್ರಯಾನ–3 ರ ಸಾಧನೆಯ ಹಿಂದಿರುವ ಎಲ್ಲರಿಗೂ ನನ್ನ ನಮನಗಳು. ‘ಚಂದ್ರನ ಮೇಲೆ ಭಾರತ’ ಎಂದು ನಟ ಹೃತಿಕ್ ರೋಷನ್ ‘ಎಕ್ಸ್’ ವೇದಿಕೆಯಲ್ಲಿ ಹೇಳಿದ್ದಾರೆ.
‘ಪ್ರತಿಯೊಬ್ಬ ಭಾರತೀಯನ ಪಾಲಿಗೆ ಇಂದು ಐತಿಹಾಸಿಕ ದಿನ. ಇದೊಂದು ಹೆಮ್ಮೆಯ ಕ್ಷಣ. ನಾವು ನಕ್ಷತ್ರ, ಚಂದ್ರ ಮತ್ತು ಅದಾರಚೆಗೂ ಎಂಬ ಹೆಮ್ಮೆ ಮತ್ತು ನಂಬಿಕೆಯ ಕ್ಷಣ. #ಇಸ್ರೊ ಹೆಮ್ಮೆ’ ಎಂದು ನಟ ಮನೋಜ್ ಭಾಜಪೇಯಿ ಬರೆದುಕೊಂಡಿದ್ದಾರೆ.
ಚಂದ್ರಯಾನ–3ರ ಸಾಫ್ಟ್ ಲ್ಯಾಡಿಂಗ್ ಅನ್ನು ‘ಭಾರತದ ಮಹತ್ವದ ಸಾಧನೆ’ ಎಂದು ಬಣ್ಣಿಸಿರುವ ಮೆಗಾಸ್ಟಾರ್ ಚಿರಂಜೀವಿ ಅವರು, ಚಂದ್ರನ ಮೇಲೆ ರಜಾದಿನಗಳನ್ನು ಕಳೆಯುವ ದಿನಗಳು ಇನ್ನು ಕನಸಾಗಿ ಉಳಿದಿಲ್ಲ!’ ಎಂದೂ ಹೇಳಿದ್ದಾರೆ.
‘ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್‌ಗಾಗಿ ಇಸ್ರೊಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಎಂದಿನಂತೆ, ನೀವು ಭಾರತದ ಹೆಮ್ಮೆ’ ಎಂದು ಜೂನಿಯರ್ ಎನ್‌ಟಿಆರ್ ಹೇಳಿಕೊಂಡಿದ್ದಾರೆ.
ಮಲಯಾಳ ಚಿತ್ರರಂಗದ ಹಿರಿಯ ನಟ ಮೋಹನ್ ಲಾಲ್ ಅವರು ‘ಅಂತಿಮವಾಗಿ ದಕ್ಷಿಣಧ್ರುವವು ಮಾನವ ಕುಲಕ್ಕೆ ತೆರೆದುಕೊಳ್ಳುತ್ತಿದೆ’ ಎಂದಿದ್ದಾರೆ.
‘ಚಂದ್ರನ ದಕ್ಷಿಣ ಧ್ರುವದಲ್ಲಿ ಇತಿಹಾಸವನ್ನು ಸ್ಪರ್ಶಿಸಲು ಶ್ರಮಿಸಿದ ಇಸ್ರೊದ ಪ್ರತಿ ವಿಜ್ಞಾನಿ, ತಂತ್ರಜ್ಞ, ಸಿಬ್ಬಂದಿಗೆ ಅಭಿನಂದನೆಗಳು. ಜೈ ಹಿಂದ್!’ ಎಂದು ಅವರು ‘ಎಕ್ಸ್’ ವೇದಿಕೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಟರಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಾರ್ತಿಕ್ ಆರ್ಯನ್, ವಿಜಯ್ ವರ್ಮಾ, ಗೀತರಚನೆಕಾರ ಪ್ರಸೂನ್ ಜೋಷಿ ಸೇರಿದಂಥೆ ಹಲವರು ಇಸ್ರೊಗೆ ಅಭಿನಂದನೆ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.