ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 50 ಪ್ರೇಕ್ಷಕರಿಗಷ್ಟೇ ಅವಕಾಶ: ಸರ್ಕಾರದ ನಿರ್ಧಾರಕ್ಕೆ ಚಿತ್ರರಂಗದ ವಿರೋಧ

ಎಂಟು ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಶೇ 50 ಪ್ರೇಕ್ಷಕರಿಗಷ್ಟೇ ಅವಕಾಶ
Last Updated 2 ಏಪ್ರಿಲ್ 2021, 15:16 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19 ನಿಯಂತ್ರಣಕ್ಕಾಗಿ ರಾಜ್ಯದ ಎಂಟು ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಗರಿಷ್ಠ ಶೇ 50 ಪ್ರೇಕ್ಷಕರಿಗಷ್ಟೇ ಅವಕಾಶ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಚಿತ್ರರಂಗವು ವಿರೋಧಿಸಿದೆ.

ಬಿಬಿಎಂಪಿ ವ್ಯಾಪ್ತಿ ಸೇರಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಕಲಬುರ್ಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್‌ ಮತ್ತು ಧಾರವಾಡ ಜಿಲ್ಲೆಗಳ ಸಿನಿಮಾ ಮಂದಿರಗಳಲ್ಲಿ ಗರಿಷ್ಠ ಶೇ 50 ವೀಕ್ಷಕರಿಗೆ ಮಾತ್ರ ಅವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

‘ಒಳ್ಳೆಯ ಕನ್ನಡ ಸಿನಿಮಾದ ಕೊಲೆ’

ಈ ಕುರಿತು ಪ್ರತಿಕ್ರಿಯೆ ನೀಡಿದ ನಟ ಪುನೀತ್‌ ರಾಜ್‌ಕುಮಾರ್‌, ‘ನಾಲ್ಕೈದು ದಿನಗಳ ಹಿಂದೆ ಘೋಷಣೆ ಮಾಡಿದ್ದರೆ ‘ಯುವರತ್ನ’ ಚಿತ್ರವನ್ನೇ ಬಿಡುಗಡೆ ಮಾಡುತ್ತಿರಲಿಲ್ಲ. ಬಿಡುಗಡೆ ಮಾಡುವುದನ್ನು ಮುಂದಕ್ಕೆ ಹಾಕುತ್ತಿದ್ದೆವು. ಈ ಹಿಂದೆ ಮುಖ್ಯಮಂತ್ರಿ ಅವರು ಮಾಡಿದ್ದ ಟ್ವೀಟ್‌ ಆಧರಿಸಿಯೇ ನಾವು ಚಿತ್ರ ಬಿಡುಗಡೆ ಮಾಡಿದೆವು. ನಮಗೆ ಆಘಾತ ಆಗಿದೆ. ಭಾನುವಾರದವರೆಗೂ ಪ್ರೇಕ್ಷಕರಿಗೆ ಟಿಕೆಟ್‌ ಬಿಕರಿಯಾಗಿದೆ. ಏನು ಮಾಡಬೇಕು ಎಂದೇ ಅರ್ಥವಾಗುತ್ತಿಲ್ಲ. ಎಲ್ಲರೂ ಗೊಂದಲಕ್ಕೀಡು ಮಾಡವ ಕೆಲಸ ಆಗಿದೆ. ಒಳ್ಳೆಯ ಕನ್ನಡ ಚಿತ್ರವೊಂದರ ಕೊಲೆಯಾದಂತಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪ್ರೇಕ್ಷಕರ ಸಂಖ್ಯೆಯನ್ನು ಶೇ 50 ನಿರ್ಬಂಧಿಸಿರುವುದನ್ನು ರದ್ದುಗೊಳಿಸಿ, ಪೂರ್ಣ ಪ್ರಮಾಣದಲ್ಲಿ ಚಿತ್ರಮಂದಿರಗಳ ಭರ್ತಿಗೆ ಅವಕಾಶ ನೀಡಬೇಕು. ಮಾಲ್‌ಗಳಲ್ಲಿ, ಚಿತ್ರಮಂದಿರಗಳಲ್ಲಿ ಜನರು ಸರ್ಕಾರದ ನಿಯಮಗಳನ್ನು ಪಾಲಿಸಿಯೇ ಸಿನಿಮಾ ನೋಡುತ್ತಿದ್ದಾರೆ. ದಯವಿಟ್ಟು ನಿರ್ಬಂಧ ಹಾಕಬೇಡಿ. ಚಿತ್ರರಂಗಕ್ಕೆ ಇದು ಕಷ್ಟವಾಗಲಿದೆ. ಇಂತಹ ನಿರ್ಧಾರ ಜನರಲ್ಲಿ ಹೆಚ್ಚಿನ ಭಯ ಮೂಡಿಸಲಿದೆ. ಪ್ರಸ್ತುತ ಸಂದರ್ಭದಲ್ಲಿ ಸುರಕ್ಷತೆ ಎನ್ನುವುದು ಮುಖ್ಯ. ಆದರೆ, ಅದರ ಜೊತೆಗೆ ಜೀವನವೂ ಸಾಗಿಸಬೇಕು’ ಎಂದು ಹೇಳಿದರು.

‘ಆಘಾತ ಆಗಿದೆ’

‘ಜನರು ಕುಟುಂಬ ಸಮೇತರಾಗಿ ಬಂದು ಚಿತ್ರಗಳನ್ನು ನೋಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಿರ್ಬಂಧ ಸೂಕ್ತವಲ್ಲ.ಎಲ್ಲ ಕಡೆ ಚುನಾವಣೆ ರ್‍ಯಾಲಿ, ಹಲವು ಕಾರ್ಯಕ್ರಮಗಳು ನಡೆಯುತ್ತಿದೆ. ಇದರ ನಡುವೆ ಸಿನಿಮಾವನ್ನು ಮಾತ್ರ ಗುರಿಯಾಗಿಸಿ ಏಕೆ ನಿರ್ಬಂಧ ಹಾಕಲಾಗುತ್ತಿದೆ. ಚಿತ್ರಮಂದಿರದೊಳಗೆ ಕೇವಲ 500–600 ಜನರಷ್ಟೇ ಇರುತ್ತಾರೆ. ಎಲ್ಲರೂ ಮಾಸ್ಕ್‌ ಧರಿಸಿಯೇ ಚಿತ್ರಗಳನ್ನು ನೋಡುತ್ತಿದ್ದಾರೆ. ಧೈರ್ಯವಾಗಿ ಚಿತ್ರಮಂದಿರದತ್ತ ಜನರು ಬರುತ್ತಿದ್ದಾರೆ. ಹೊಸ ನಿಯಮದಂತೆ ಎರಡೆರಡು ಇಂಟರ್‌ವಲ್‌ಗಳು ಇವೆ. ಏಕಾಏಕಿ ಈ ನಿರ್ಬಂಧ ಹೇರಿರುವುದು, ಉದ್ಯಮ, ಚಿತ್ರರಂಗವನ್ನು ನಡುನೀರಿನಲ್ಲಿ ಕೈಬಿಟ್ಟಂತಾಗಿದೆ. ಮುಂದೆ ನಿರ್ಮಾಪಕರ ಪರಿಸ್ಥಿತಿ ಏನು. ಇದು ದುಃಖಕರವಾದ ವಿಷಯ’ ಎಂದು ಗುರುವಾರವಷ್ಟೇ ಬಿಡುಗಡೆಯಾದ ‘ಯುವರತ್ನ’ ಚಿತ್ರದ ನಿರ್ದೇಶಕ ಸಂತೋಷ್‌ ಆನಂದರಾಮ್‌ ಹೇಳಿದರು.

‘ಈ ಪರಿಸ್ಥಿತಿಯಲ್ಲಿ ಸರ್ಕಾರ ಮುಂದಾಲೋಚಿಸಿಯೇ ನಿರ್ಧಾರ ತೆಗೆದುಕೊಂಡಿರುತ್ತದೆ. ಆದರೆ, ಈಗಾಗಲೇ ಲಾಕ್‌ಡೌನ್‌ ಹಾಗೂ ಹಲವು ನಿರ್ಬಂಧದಿಂದ ಚಿತ್ರರಂಗವು ಕಂಗೆಟ್ಟಿದೆ. ಸರ್ಕಾರವೂ ಇಂತಹ ನಿರ್ಬಂಧ ಹಾಕುವಾಗ, ಚಿತ್ರರಂಗಕ್ಕೆ ಕನಿಷ್ಠ ತೆರಿಗೆ ವಿನಾಯಿತಿ ಅಥವಾ ಕಡಿತದಂತಹ ಸೌಲಭ್ಯವನ್ನು ಕಲ್ಪಿಸಬೇಕು. ಇಲ್ಲವಾದಲ್ಲಿ ಸಂಕಷ್ಟ ಮತ್ತಷ್ಟು ಹೆಚ್ಚಲಿದೆ’ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರವು ಚಿತ್ರಮಂದಿರಗಳಲ್ಲಿ ಕಳೆದ ಫೆ.1ರಿಂದ ಪೂರ್ಣ ಪ್ರಮಾಣದ ಆಸನ ಭರ್ತಿಗೆ ಅವಕಾಶ ಕೊಟ್ಟಿದ್ದರೂ, ರಾಜ್ಯ ಸರ್ಕಾರ ಶೇ 50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಿ ನಿರ್ಬಂಧ ಮುಂದುವರಿಸಿತ್ತು. ಇದಕ್ಕೆ ಚಿತ್ರರಂಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಆದೇಶವನ್ನು ಹಿಂಪಡೆದಿತ್ತು. ಇದೀಗ ಎಂಟು ಜಿಲ್ಲೆಗಳಲ್ಲಿ ಈ ನಿರ್ಬಂಧವನ್ನು ಮತ್ತೆ ಜಾರಿಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT