*ನಿಮ್ಮ ಹಿನ್ನೆಲೆ ಹಾಗೂ ಸಿನಿಮಾ ಪಯಣ ಕುರಿತು...
ನಾನು ಕೋಲಾರದ ಹುಡುಗ. ಎಂಜಿನಿಯರಿಂಗ್ ಓದಲು ಬೆಂಗಳೂರಿಗೆ ಬಂದವನು. ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದುತ್ತಿರುವಾಗ ಕಿರುಚಿತ್ರಗಳು, ನಾಟಕದ ಬಗ್ಗೆ ಆಸಕ್ತಿ ಹುಟ್ಟಿತ್ತು. ಎಂಜಿನಿಯರಿಂಗ್ ಮಾಡಿದ ಮಗನನ್ನು ಸಿನಿಮಾ ಕ್ಷೇತ್ರಕ್ಕೆ ಬಿಡಲು ಅಪ್ಪ–ಅಮ್ಮನಿಗೆ ಇಷ್ಟವಿರಲಿಲ್ಲ. ಎಂ.ಟೆಕ್ ಮಾಡು ಎಂದರು. ಅದರ ಜೊತೆಗೆ ಬೇಕಿದ್ದರೆ ಸಿನಿಮಾ ಕೋರ್ಸ್ ಮಾಡಲು ಹೇಳಿದರು. ಎಂ.ಟೆಕ್ ಓದುತ್ತಾ ನಾನು ಸಿನಿಮಾ ಕ್ಷೇತ್ರವನ್ನು ಮರೆಯುತ್ತೇನೆ ಎಂದು ಅವರು ತಿಳಿದುಕೊಂಡಿದ್ದರು.
2016ರಲ್ಲಿ ಅದೇ ಕಾಲೇಜಿನಲ್ಲಿ ಎಂ.ಟೆಕ್ ಮಾಡುತ್ತಿರುವಾಗಲೇ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟೆ. ನನ್ನ ಕಿರುಚಿತ್ರಗಳನ್ನು ನೋಡಿ ‘ಮಾಯಾಬಜಾರ್’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಲು ನಿರ್ದೇಶಕರಾದ ರಾಧಾಕೃಷ್ಣ ಅವಕಾಶ ನೀಡಿದರು. ಬಳಿಕ ಗುರುದೇಶಪಾಂಡೆ ಅವರ ‘ಪೆಂಟಗನ್’ ಚಿತ್ರದಲ್ಲಿನ ಒಂದು ಕಥೆಯಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದೆ. ಹೀಗೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದೆ. ಇವುಗಳಲ್ಲಿ ಹಲವು ಬಿಡುಗಡೆ ಆಗಲೇ ಇಲ್ಲ.
*‘ಫೈರ್‌ಫ್ಲೈ’ ಹುಟ್ಟಿಕೊಂಡಿದ್ದು ಹೇಗೆ?
ನಿವೇದಿತಾ ಶಿವರಾಜ್‌ಕುಮಾರ್ ಅವರು ವೆಬ್ ಸರಣಿ ಕಥೆಗಳನ್ನು ಹುಡುಕುತ್ತಿರುವುದು ಗೊತ್ತಾಯಿತು. ನನ್ನ ಬಳಿ ಇದ್ದ ಒಂದು ಕತೆಯನ್ನು ಅವರ ಮುಂದೆ ಪ್ರಸ್ತುತಪಡಿಸಿದ್ದೆ. ಇದು ಅವರಿಗೆ ಒಪ್ಪಿಗೆ ಆಯಿತು. ಬಳಿಕ ಬರವಣಿಗೆ ಮಾಡಿಕೊಂಡು ಒಟಿಟಿ ವೇದಿಕೆಗಳ ಬಳಿ ತೆರಳಿದೆವು. ಹಲವು ಕಾರಣಗಳಿಂದ ಇದು ಚಿತ್ರೀಕರಣಗೊಳ್ಳಲಿಲ್ಲ. ಈ ನಡುವೆ ‘ಗುರು ಶಿಷ್ಯರು’ ನಿರ್ದೇಶಕರಾದ ಜಡೇಶ್ ಹಂಪಿ ಅವರ ಬಳಿ ಕೆಲಸ ಮಾಡುತ್ತಿದ್ದೆ. ಆ ವೇಳೆಯಲ್ಲಿ ‘ಫೈರ್‌ಫ್ಲೈ’ ಸಿನಿಮಾದ ಕಥೆ ಬರೆಯುತ್ತಿದ್ದೆ. ಒಂಟಿತನ ಹಾಗೂ ಖಿನ್ನತೆ ಎನ್ನುವುದು ಈಗಿನ ಯುವಜನತೆಯಲ್ಲಿ ಹೆಚ್ಚಿದೆ. ಒಂದು ವಿಷಯದಿಂದ ಹೊರಬರಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಅವರು ಬಹಳ ಸೂಕ್ಷ್ಮ. ಇದನ್ನು ಹಲವರಲ್ಲಿ ನೋಡಿದ್ದೆ. ಈ ವಿಷಯವನ್ನೇ ಇಟ್ಟುಕೊಂಡು ಮನರಂಜನಾತ್ಮಕವಾಗಿ ಕಥೆ ಬರೆದೆ. ನಮ್ಮೊಳಗೇ ಬೆಳಕಿದೆ. ಅದನ್ನು ಅರಿತುಕೊಳ್ಳುವುದು ಮುಖ್ಯ ಎನ್ನುವುದಕ್ಕೆ ‘ಫೈರ್‌ಫ್ಲೈ’(ಮಿಂಚು ಹುಳ) ಎಂಬ ಶೀರ್ಷಿಕೆ ಇಟ್ಟೆ.
ಈ ಕತೆಯನ್ನು ತೆಗೆದುಕೊಂಡು ಹಲವು ನಿರ್ಮಾಪಕರ ಬಳಿ ಹೋಗಿದ್ದೆ. ಆ ಮೇಲೆ ನಿವೇದಿತಾ ಶಿವರಾಜ್‌ಕುಮಾರ್ ಅವರಿಗೆ ಕಥೆ ಬರೆದಿರುವ ವಿಷಯ ತಿಳಿಸಿದೆ. ಅವರು ಮೂರು ವೆಬ್ ಸರಣಿಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡಿದ್ದರು. ಮೊದಲಿಗೆ ಅವರು ಸಿನಿಮಾ ನಿರ್ಮಾಣ ಮಾಡುವುದೇ ಇಲ್ಲ, ಏನಿದ್ದರೂ ವೆಬ್ ಸರಣಿಯಷ್ಟೇ ಎಂದಿದ್ದರು. ಕಥೆ ಕೇಳಿ ಇಷ್ಟವಾದರೆ ಬೇರೆ ನಿರ್ಮಾಪಕರಿಗೆ ರೆಫರ್ ಮಾಡಿ ಎಂದು ನಾನು ಅವರಲ್ಲಿ ಕೇಳಿಕೊಂಡೆ. ಅವರು ಕಥೆ ಕೇಳಿದ ಬಳಿಕ ಇಷ್ಟಪಟ್ಟು, ಶಿವರಾಜ್‌ಕುಮಾರ್ ಅವರಿಗೂ ಕಥೆ ಹೇಳಲು ತಿಳಿಸಿದರು. ಅವರೂ ಇಷ್ಟಪಟ್ಟರು. ಹೀಗೆ ಶುರುವಾಗಿದ್ದು ‘ಫೈರ್‌ಫ್ಲೈ’.
*ಎಂಜಿನಿಯರಿಂಗ್ ಮಾಡಿದವರು ಏನು ಬೇಕಾದರೂ ಆಗಬಹುದಾ?
ಈ ವಿಷಯದಲ್ಲಿ ನನಗೆ ನಟ ರಕ್ಷಿತ್ ಶೆಟ್ಟಿ ಸ್ಫೂರ್ತಿ. ನಟನೆಯ ಜೊತೆಗೆ ನಿರ್ದೇಶಕನಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ನಮ್ಮ ರೀತಿಯೇ ಆಲೋಚನೆಯುಳ್ಳವರು. ಜೀವನದಲ್ಲಿ ಮುಂದೇನು ಎಂದು ಗೊತ್ತಿಲ್ಲದವರೇ ಎಂಜಿನಿಯರಿಂಗ್ ಮಾಡುತ್ತಾರೆ. ಇದೊಂದು ಸುರಕ್ಷಿತ ವೇದಿಕೆ. ಇಲ್ಲಿಗೆ ಹೆಜ್ಜೆ ಮೇಲೆ ಜೀವನದಲ್ಲಿ ಏನಾಗಬೇಕು? ಗುರಿ ಏನು ಎಂದು ನಿರ್ಧರಿಸಿ ಮುಂದುವರಿಯುವವರೇ ಹಲವರು.
*ಹೀರೊ ಆಗಿದ್ದು ಆಕಸ್ಮಿಕವೇ?
ಹೌದು. ಪ್ರಿಪ್ರೊಡಕ್ಷನ್ ಸಂದರ್ಭದಲ್ಲಿ ನಾಯಕ ಯಾರು ಎಂದು ನಾನು, ನಿವೇದಿತಾ ಅವರು ಹುಡುಕುತ್ತಿದ್ದೆವು. ನಮಗೊಂದು ಹೊಸಮುಖ ಬೇಕಿತ್ತು. 25–26 ವರ್ಷ ಯುವಕನ ಅಗತ್ಯ ನಮಗಿತ್ತು. ಇಂತವರು ಯಾರೂ ನಮಗೆ ಸಿಗಲಿಲ್ಲ. ಕೊನೆಯಲ್ಲಿ ನಾನೇ ಈ ಪಾತ್ರ ಮಾಡಬಹುದು ಎಂದು ಅವರಿಗೆ ಹೇಳಿದೆ. ಕಿರುಚಿತ್ರಗಳಲ್ಲಿ ನಟಿಸಿದ ಅನುಭವ ನನಗೆ ಇತ್ತು. ನಿವೇದಿತಾ ಅವರೂ ಒಪ್ಪಿಕೊಂಡರು. ಟೀಸರ್ ಮೂಲಕ ನನ್ನ ಮುಖವನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದೆವು. ಹೀಗಾಗಿ ಅಲ್ಲಿ ಪಾತ್ರವನ್ನೇ ಮುಖ್ಯವಾಗಿಟ್ಟುಕೊಂಡು ಸಂಕಲನ ಮಾಡಿದ್ದೆವು. ಟ್ರೇಲರ್‌ನಲ್ಲಿ ಸಿನಿಮಾದ ಹರಿವು ಹೇಗಿರುತ್ತದೆ ಎನ್ನುವುದನ್ನು ಪ್ರೇಕ್ಷಕರ ಎದುರಿಗೆ ಇಟ್ಟಿದ್ದೇವೆ.
*ಹೊಸಬರಾಗಿ ನಿಮಗೆ ಸಿಕ್ಕಿರುವ ಪ್ರೋತ್ಸಾಹದ ಬಗ್ಗೆ...
ನಮ್ಮಂತಹ ಹೊಸಬರಿಗೆ ಈ ರೀತಿಯ ನಿರ್ಮಾಣ ಸಂಸ್ಥೆ ಸಿಕ್ಕಿರುವುದು ಖುಷಿಯ ವಿಚಾರ. ಜವಾಬ್ದಾರಿಯೂ ಅಷ್ಟೇ ಇದೆ. ಹೊಸಬರ ಸಿನಿಮಾ ಗೆದ್ದರಷ್ಟೇ ಮತ್ತಷ್ಟು ಹೊಸಬರಿಗೆ ಸಿನಿಮಾ ನಿರ್ಮಾಣ ಮಾಡುವ ಧೈರ್ಯ ನಿರ್ಮಾಪಕರಿಗೆ ಬರುತ್ತದೆ. ಸಿನಿಮಾ ಹೆಚ್ಚು ಕಮ್ಮಿ ಆದರೆ ಲೆಕ್ಕಾಚಾರ ಶುರುವಾಗುತ್ತದೆ. ಚಿತ್ರರಂಗದ ಎಲ್ಲಾ ವಿಭಾಗಗಳಲ್ಲೂ ಪ್ರತಿಭಾವಂತರು ಇದ್ದು, ಅವರಿಗೆ ಸೂಕ್ತ ಅವಕಾಶ ಸಿಗಬೇಕು. ಇದರ ಜೊತೆಗೆ ನಿರ್ಮಾಪಕರ ಸಂಕಷ್ಟವನ್ನೂ ಅರಿಯುವುದು ಮುಖ್ಯ. ಹಿರಿಯ ನಿರ್ದೇಶಕ, ಹೊಸ ನಾಯಕನ ಜೊತೆಗೂಡಿ ಅಥವಾ ಓರ್ವ ಸ್ಟಾರ್ ನಟ ಯುವ ನಿರ್ದೇಶಕನ ಸಿನಿಮಾ ಮಾಡುವುದು ಇಂದಿನ ಅಗತ್ಯ. ಇದು ಮಾರುಕಟ್ಟೆಗೆ ಉತ್ತೇಜನ ನೀಡಲಿದೆ. ಈ ಕಾಂಬಿನೇಷನ್‌ನಲ್ಲಿ ಎಲ್ಲರೂ ಸುರಕ್ಷಿತವಾಗಿರಬಹುದು.
*ಶಿವರಾಜ್‌ಕುಮಾರ್ ಪಾತ್ರದ ಬಗ್ಗೆ...
ಈ ಪಾತ್ರವನ್ನು ಕಥೆ ಬರೆಯುವಾಗಲೇ ಬರೆದಿದ್ದೆ. ಈ ಪಾತ್ರಕ್ಕೆ ಎಲ್ಲರೂ ಗುರುತಿಸಬಲ್ಲ ಮುಖ ಬೇಕಿತ್ತು. ಇದೊಂದು ಸಣ್ಣ ಅವಧಿಯ ಪಾತ್ರ. ಹಲವು ಆಯ್ಕೆಗಳು ಬಂದರೂ, ಒಮ್ಮೆ ನಿವೇದಿತಾ ಅವರು ಶಿವರಾಜ್‌ಕುಮಾರ್ ಅವರನ್ನೇ ಕೇಳೋಣ ಎಂದರು. ‘ಶಿವರಾಜ್‌ಕುಮಾರ್ ಅವರು ಮಾಸ್ ಹೀರೋ, ನಾನು ಬರೆದಿರುವ ಪಾತ್ರ ಕೂಲ್ ಆಗಿ ಕೂಲಿಂಗ್ ಗ್ಲಾಸ್, ಹೆಡ್‌ಸೆಟ್ ಹಾಕಿಕೊಂಡು ಇರುವ ವ್ಯಕ್ತಿ. ಅದೂ ಸಣ್ಣ ಪಾತ್ರ’ ಎಂದಿದ್ದೆ. ಪಾತ್ರವನ್ನು ವಿವರಿಸಲು ನಿವೇದಿತಾ ಹೇಳಿದರು. ನಾನು ವಿವರಿಸಿದಾಗ ಶಿವಣ್ಣ ಬಹಳ ಇಷ್ಟಪಟ್ಟು ಒಪ್ಪಿದರು. ಅವರ ಮಗಳ ಮೊದಲ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ಅವರಿಗೆ ಒಳಗೊಳಗೇ ಇದ್ದಿರಬೇಕು. ಅದಕ್ಕಾಗಿ ಒಪ್ಪಿಕೊಂಡಿದ್ದರು ಎಂದು ನನಗೆ ಇಂದಿಗೂ ಅನಿಸುತ್ತದೆ. ಇದರಿಂದ ಸಿನಿಮಾಗೂ ಒಂದು ಎನರ್ಜಿ ಸಿಕ್ಕಿತು.
*ಕನ್ನಡ ಚಿತ್ರರಂಗ ಸದ್ಯ ಹೇಗಿದೆ?
ನಾವೀಗ ಬಹಳ ಕಠಿಣ ಪರಿಸ್ಥಿತಿಯಲ್ಲಿ ಇದ್ದೇವೆ. ಕಳೆದ ನಾಲ್ಕು ತಿಂಗಳಿನಿಂದ ದೊಡ್ಡ ಹಿಟ್ ಬರಲಿಲ್ಲ. ಈ ಸಂದರ್ಭದಲ್ಲಿ ಸಿನಿಮಾ ಮಾಡುವುದನ್ನು ಬಿಟ್ಟರೆ ಕಳೆದೇ ಹೋಗುತ್ತೇವೆ. ಕೆಳಗೆ ಬಿದ್ದಾಗಷ್ಟೇ ಎದ್ದು ನಡೆಯಲು ಸಾಧ್ಯ. ಬಿದ್ದವರು ಏಳದೇ ಇದ್ದರೆ ಭವಿಷ್ಯ ಬಹಳ ಕಷ್ಟವಾಗಿರಲಿದೆ. ಬಜೆಟ್ ಚಿಕ್ಕದಾಗಿರಲಿ ಗುಣಮಟ್ಟದ, ಒಳ್ಳೆಯ ಕಥೆಯುಳ್ಳ ಸಿನಿಮಾಗಳು ನಿರಂತರವಾಗಿ ಬರುತ್ತಿರಬೇಕು. ಇದರಿಂದ ಜನಕ್ಕೆ ನಂಬಿಕೆ ಬರಲಿದೆ. ಮಲಯಾಳ ಚಿತ್ರರಂಗದಲ್ಲಿ ಇದೇ ನಡೆಯುತ್ತಿದೆ. ಮುಖ ಪರಿಚಯವಿಲ್ಲದ ಹೀರೊಗಳ ಸಿನಿಮಾಗಳನ್ನೂ ಜನ ಎಲ್ಲೆಡೆ ನೋಡುತ್ತಿದ್ದಾರೆ. ನಮಗೆ ಯುವ ನಿರ್ದೇಶಕರು ಎಷ್ಟು ಅಗತ್ಯವೋ, ಯುವ ಕಲಾವಿದರ ಅಗತ್ಯವೂ ಅಷ್ಟೇ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.