ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕು ಭೀತಿ: ಮನೆಯಲ್ಲೇ ಫಿಟ್‌ನೆಸ್‌

Last Updated 23 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಸದಾ ಪ್ರವಾಸ, ಶೂಟಿಂಗ್‌, ಯೋಗ, ಜಿಮ್‌, ಪಾರ್ಟಿ ಮುಂತಾಗಿ ನಾನಾ ಚಟುವಟಿಕೆಯಲ್ಲಿ ಮುಳುಗಿರುತ್ತಿದ್ದ ನಟ– ನಟಿಯರು ಹಠಾತ್ತಾಗಿ ಮನೆಯಲ್ಲಿ ಕುಳಿತುಕೊಳ್ಳುವುದು ಕಷ್ಟದ ಕೆಲಸವೇ. ಇನ್ನೂಎಷ್ಟು ದಿನ ಈ ಪರಿಸ್ಥಿತಿ ಎನ್ನುವುದೂ ಗೊತ್ತಿಲ್ಲ.ಮನೆಯಲ್ಲಿಎಲ್ಲರೊಟ್ಟಿಗೆ ಸೇರಿ ಸಮಯ ಕಳೆಯಲು ಸಿಕ್ಕಿದ ಅಪರೂಪದ ಸಂದರ್ಭ ಅಂದುಕೊಂಡಿದ್ದವರಿಗೆ ಈಗ 3–4 ದಿನಗಳನ್ನು ಕಳೆಯುವುದರೊಳಗೆ ತಲೆ ಕೆಡಲು ಶುರುವಾಗಿದೆಯಂತೆ! ಈ ಮಧ್ಯೆ ಏಕಾಗ್ರತೆ, ಕ್ರಿಯಾಶೀಲತೆ, ಫಿಟ್ನೆಸ್‌, ಶಿಸ್ತುಬದ್ಧ ಜೀವನಶೈಲಿ ಕಾಪಾಡಿಕೊಳ್ಳುವುದು ಚಿತ್ರತಾರೆಯರಿಗೆ ದೊಡ್ಡ ಸವಾಲೇ ಆಗಿದೆ.

ಕೊರೊನಾ ಸೋಂಕು ತಗುಲುವ ಭೀತಿಯಿಂದ ಜಿಮ್‌ ಸೆಂಟರ್‌ಗಳು, ಯೋಗ ಕೇಂದ್ರಗಳು, ಪಾರ್ಕ್‌ಗಳನ್ನೂ ಮುಚ್ಚಲಾಗಿದೆ. ‘ಗೃಹ’ಬಂಧನದಲ್ಲಿರುವ ತಾರೆಯರು ಈಗ ಮನೆಯಲ್ಲೇ ಫಿಟ್ನೆಸ್‌ ಮಂತ್ರ ಜಪಿಸುತ್ತಿದ್ದಾರೆ.

‘ಮನೆಯಲ್ಲಿ ಕಾಲ ಕಳೆಯುವುದು ಮೊದಲ 3–4 ದಿನ ಚೆನ್ನಾಗಿತ್ತು. ಅಮ್ಮನ ಅಡುಗೆ ರುಚಿ ಸವಿಯಲು, ಮನೆಯಲ್ಲಿ ಎಲ್ಲರೊಟ್ಟಿಗೆ ಬೆರೆಯಲು, ಹರಟೆ ಹೊಡೆಯಲು ಖುಷಿಯಾಗುತ್ತಿತ್ತು. ಈಗ ನೋಡಿದ ಮುಖಗಳನ್ನೇ ನೋಡುತ್ತಾ ಕುಳಿತುಕೊಳ್ಳಲು ಬೋರ್‌ ಆಗಲಾರಂಭಿಸಿದೆ. ಟಿ.ವಿ ನೋಡುತ್ತಾ, ಹೊರಗಿನವರ ಜತೆಗೆ ಮಾತನಾಡುತ್ತಾ ಕಾಲ ಕಳೆಯಲು ಹೋದರೆ ಅದೂ ಆತಂಕ ಹೆಚ್ಚಿಸುವಂತಿದೆ. ವಾಕಿಂಗ್‌, ಜಾಗಿಂಗ್‌, ಡಾನ್ಸ್‌, ಜಿಮ್‌, ಯೋಗ ಎಲ್ಲವೂ ಬಿಟ್ಟುಬಿಟ್ಟಿದ್ದೆ.ಚೆನ್ನಾಗಿ ತಿಂದು ಒಂದೆರಡು ಕೆ.ಜಿ. ತೂಕವೂ ಹೆಚ್ಚಾಗಿರಬೇಕು. ಈಗ ಮತ್ತೆ ಜಿಮ್‌, ಯೋಗ ಶುರು ಮಾಡುತ್ತಿದ್ದೇನೆ’ ಎನ್ನುತ್ತಾರೆ ನಟಿ ಸಂಜನಾ ಗಲ್ರಾನಿ.

‘ನಿಜಕ್ಕೂ ಇದು ಡಿಪ್ರೆಷನ್‌ ಟೈಮ್‌. ಹಾಗಂಥ ನಾನು ಡಿಪ್ರೆಷನ್‌ಗೆ ಹೋಗಿದ್ದೀನಿ ಎಂದಲ್ಲ. ಹೀಗೆ ಮೂಲೆ ಹಿಡಿದು ಕುಳಿತುಕೊಳ್ಳುವುದೆಂದರೆ ತಲೆ ಕೆಡುವುದೇ. ದೈಹಿಕವಾಗಿ ಚಟುವಟಿಕೆಯಿಂದ ಇದ್ದರೆ ಮಾತ್ರ ಮಾನಸಿಕವಾಗಿಯೂ ಸದೃಢವಾಗಿರುತ್ತೇವೆ. ಕೊರೊನಾ ಎದುರಿಸಲುಮಾನಸಿಕ ಗಟ್ಟಿತನವೂ ಬೇಕು. ಯೋಗಾಭ್ಯಾಸ, ಸಂಗೀತ ಕೇಳುವುದು, ಡಾನ್ಸ್‌ ಮತ್ತು ಜಿಮ್‌ ಕಸರತ್ತು ನಡೆಸಬೇಕು. ಯೋಗ,ಸೂರ್ಯ ನಮಸ್ಕಾರ, ಧ್ಯಾನ ಕೂಡ ಮನಸ್ಸನ್ನು ಗಟ್ಟಿಗೊಳಿಸುತ್ತದೆ’ ಎನ್ನುತ್ತಾರೆ ಅವರು.

ಇನ್ನುಬಹುಭಾಷಾ ನಟಿ ಹರಿಪ್ರಿಯಾ ಅವರು ಫಿಟ್ನೆಸ್‌ ಕಾಯ್ದುಕೊಳ್ಳಲು ಮನೆಯಲ್ಲೇ ಜಿಮ್‌ ಉಪಕರಣಗಳನ್ನು ಜೋಡಿಸಿಕೊಂಡಿದ್ದಾರೆ. ಜಾಗಿಂಗ್‌ ಮತ್ತು ಸೈಕ್ಲಿಂಗ್‌ಗಾಗಿ ಅವರು ಹೊರ ಹೋಗುತ್ತಿದ್ದರು. ಈಗ ಅದನ್ನು ನಿಲ್ಲಿಸಿದ್ದಾರೆ. ಫಿಟ್ನೆಸ್‌ಗಾಗಿ ಯೋಗಾಭ್ಯಾಸ ಮತ್ತು ಕೆಲವು ಸ್ಟ್ರೆಚ್‌ಗಳನ್ನು ಮನೆಯಲ್ಲೇ ಮಾಡುತ್ತಿದ್ದಾರಂತೆ.

‘ಮನೆಯಲ್ಲಿರುವುದನ್ನು ಯಾರೂ ಕೂಡ ಶಿಕ್ಷೆ ಎಂದುಕೊಳ್ಳಬಾರದು. ಇದು ನಮ್ಮ ಕುಟುಂಬ ರಕ್ಷಿಸಿಕೊಳ್ಳಲು ಮತ್ತು ಸಮುದಾಯಕ್ಕೆ ರೋಗ ಹರಡದಂತೆ ತಡೆಗಟ್ಟಲು ಇರುವ ಮಾರ್ಗೋಪಾಯ. ಮನೆಯಲ್ಲಿ ಈಗ ಹೆಚ್ಚು ಸಮಯ ಕಳೆದರೆ, ಅಷ್ಟು ಬೇಗ ಹೊರಗೆ ನಾವು ಮುಕ್ತವಾಗಿ ಓಡಾಡಬಹುದು ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎನ್ನುತ್ತಾರೆ ಹರಿಪ್ರಿಯಾ.

‘ಅಪ್ಪ– ಅಮ್ಮನ ಜತೆಗೆ ಬಾಲ್ಯದ ಆಟಗಳನ್ನೆಲ್ಲ ಆಡಲು, ಪೇಂಟಿಂಗ್‌, ಡ್ರಾಯಿಂಗ್‌ ಮಾಡಲು, ನೆಚ್ಚಿನ ಸಿನಿಮಾಗಳನ್ನು ಒಟಿಟಿಯಲ್ಲಿ ನೋಡುವ ಅವಕಾಶಗಳು ಸಿಕ್ಕಿವೆ. ಇದನ್ನು ಬಳಸಿಕೊಳ್ಳುತ್ತಿದ್ದೇನೆ. ಬಾಕಿ ಉಳಿದಿದ್ದಕೆಲಸಗಳನ್ನು ಪೂರ್ಣಗೊಳಿಸುತ್ತಿದ್ದೇನೆ. ಉಪ್ಪಿ ಸರ್‌ ಜತೆಗೆ ನಟಿಸಲಿರುವ ಸಿನಿಮಾದ ಸ್ಕ್ರಿಪ್ಟ್‌ ಓದುತ್ತಿದ್ದೇನೆ. ಮನೆಯಲ್ಲೇ ಇದ್ದರೂ ಫಿಟ್ನೆಸ್‌ ಕಾಯ್ದುಕೊಳ್ಳಲು ಯಾವುದೇ ತೊಂದರೆ ಇಲ್ಲ’ ಎಂದರು.

ಪ್ರವಾಸದಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದ ನಟಿ ಸಂಯುಕ್ತಾ ಹೆಗ್ಡೆ, ಈಗ ಫಿಟ್ನೆಸ್‌ಗಾಗಿ ಮನೆಯಲ್ಲೇ ಡಾನ್ಸ್‌, ಯೋಗ, ಜಿಮ್‌ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರಂತೆ. ‘ಎರಡು ಗಂಟೆ ವರ್ಕೌಟ್‌ ಮಾಡಿದರೆ, ಒಂದು ಗಂಟೆ ಯೋಗ ಮಾಡುತ್ತೇನೆ. ಇನ್ನಷ್ಟು ಸಮಯವನ್ನು ಸಂಗೀತ ಆಲಿಸುವುದರಲ್ಲಿ ಕಳೆಯುತ್ತಿದ್ದೇನೆ. ಈ ಸಮಯ ಎಲ್ಲರಿಗೂ ಬಹಳ ಕಠಿಣವಾದದ್ದೇ. ಆದರೆ, ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇರುವುದರಿಂದ ಹೊರಗೆಲ್ಲೂ ಕಾಲಿಡದೆ, ಆರೋಗ್ಯ ಉಳಿಸಿಕೊಳ್ಳಿ. ಫಿಟ್ನೆಸ್‌ ಕಾಯ್ದುಕೊಳ್ಳಲು ವರ್ಕೌಟ್‌ ಮಾಡುವುದರಲ್ಲಿ ಹೆಚ್ಚು ಸಮಯ ಕಳೆಯಿರಿ’ ಎನ್ನುತ್ತಾರೆ.

ಬಾಲಿವುಡ್‌ನಲ್ಲಿ ಫಿಟ್ನೆಸ್‌ಗೆ ಹೆಚ್ಚು ಒತ್ತುಕೊಡುವವರಲ್ಲಿ ಶಿಲ್ಪಾ ಶೆಟ್ಟಿ ಹೆಸರು ಮುಂಚೂಣಿಯಲ್ಲಿದೆ. ಈಕೆ ಯೋಗ ಪ್ರಿಯೆ. ಎಂದಿಗೂ ಯೋಗಾಭ್ಯಾಸ ತಪ್ಪಿಸಿದವರಲ್ಲ. ‘ಗೃಹ’ಬಂಧನ ವಿಧಿಸಿಕೊಂಡಿರುವ ಅವರು ಪತಿ ಮತ್ತು ಮಗನ ಜತೆಗೆ ಸಮಯ ಕಳೆಯುತ್ತಿದ್ದಾರೆ. ಪತಿ ಮತ್ತು ಮಗನಿಗೆ ರುಚಿರುಚಿಯಾದ ಅಡುಗೆ ಮಾಡಿ ಬಡಿಸುವುದರ ಜತೆಗೆ, ಫಿಟ್ನೆಸ್‌ ಟಿಪ್ಸ್‌ಗಳನ್ನು ಮಗನಿಗೂ ಹೇಳಿಕೊಡುತ್ತಿದ್ದಾರೆ. ಮಗನ ಜತೆಗೆ ವ್ಯಾಯಾಮ ಮಾಡುವ ಫೋಟೊ ಮತ್ತು ವಿಡಿಯೊಗಳನ್ನು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT