ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಗ್ರೇ ಗೇಮ್ಸ್‌' ಸೇರಿದಂತೆ ಈ ವಾರ ನಾಲ್ಕು ಚಿತ್ರಗಳು ತೆರೆಗೆ

Published 9 ಮೇ 2024, 23:54 IST
Last Updated 9 ಮೇ 2024, 23:54 IST
ಅಕ್ಷರ ಗಾತ್ರ
ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮುಕ್ತಾಯಗೊಳ್ಳುತ್ತಿದ್ದಂತೆ ಸಿನಿಮಾ ಬಿಡುಗಡೆ ಚಟುವಟಿಕೆ ಚುರುಕುಗೊಂಡಿದೆ. ಈ ವಾರ ನಾಲ್ಕು ಸಿನಿಮಾಗಳು ತೆರೆ ಕಾಣುತ್ತಿವೆ. ಜೊತೆಗೆ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಅಂಜನಿ ಪುತ್ರ’ ಚಿತ್ರ ಮರುಬಿಡುಗಡೆಗೊಳ್ಳುತ್ತಿದೆ.

ರಾಮನ ಅವತಾರ

‘ಆಪರೇಷನ್‌ ಅಲಮೇಲಮ್ಮ’ ಖ್ಯಾತಿಯ ರಿಷಿ ನಾಯಕನಾಗಿ ನಟಿಸಿರುವ ‘ರಾಮನ ಅವತಾರ’ ಚಿತ್ರ ಇಂದು (ಮೇ 10) ಬಿಡುಗಡೆಗೆಯಾಗುತ್ತಿದೆ. ಕಳೆದ ವರ್ಷ ಜೂನ್‌ನಲ್ಲಿಯೇ ತೆರೆಗೆ ಬರಲು ಸಿದ್ಧವಿದ್ದ ಹಾಸ್ಯಮಯ ಕಥಾ ಹಂದರ ಹೊಂದಿರುವ ಚಿತ್ರವನ್ನು ವಿಕಾಸ್ ಪಂಪಾಪತಿ ನಿರ್ದೇಶಿಸಿದ್ದಾರೆ. ಸ್ಟಾರ್ ಫ್ಯಾಬ್ ಪ್ರೊಡಕ್ಷನ್‌ ಅಡಿಯಲ್ಲಿ ‘ಆಪರೇಷನ್ ಅಲಮೇಲಮ್ಮ’ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 

ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದು, ಅರುಣ್ ಸಾಗರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಜಾನರ್ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶಪಾಂಡೆ ಕ್ಯಾಮೆರಾ ಕೈಚಳಕವಿದ್ದು, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಅಮರನಾಥ್ ಸಂಲಕನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಚಿತ್ರೀಕರಣಗೊಂಡಿದೆ. 

 ಗ್ರೇ ಗೇಮ್ಸ್‌

ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದ್ದ ವಿಜಯ ರಾಘವೇಂದ್ರ, ಭಾವನಾ ರಾವ್‌ ನಟನೆಯ ‘ಗ್ರೇ ಗೇಮ್ಸ್‌’ ಇಂದು ತೆರೆ ಕಾಣುತ್ತಿರುವ ಮತ್ತೊಂದು ಚಿತ್ರ. 

ಗಂಗಾಧರ್‌ ಸಾಲಿಮಠ ನಿರ್ದೇಶನದ ಚಿತ್ರ ಸಸ್ಪೆನ್ಸ್‌ ಡ್ರಾಮಾ ಕಥೆಯನ್ನು ಹೊಂದಿದೆ. ‘ಇಲ್ಲಿ ಚಿಂತನೆಗಳ ಪ್ರಚೋದನೆ ನಡೆಯುತ್ತದೆ. ಸರಿ ತಪ್ಪುಗಳ ಗ್ರಹಿಕೆಗಳಿಗೂ ಸವಾಲೆಸೆಯಲಾಗುತ್ತದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಆನ್‌ಲೈನ್‌ ಗೇಮಿಂಗ್‌ ಪೈಪೋಟಿ ಜೊತೆಗೆ ಮೆಟಾವರ್ಸ್‌ನ ಸಂಕೀರ್ಣತೆಗಳ ಬೆಸುಗೆ ಗ್ರೇ ಗೇಮ್ಸ್‌’ ಎಂದಿದೆ ಚಿತ್ರತಂಡ. 

ಶ್ರುತಿ ಪ್ರಕಾಶ್‌, ಅಪರ್ಣಾ, ರವಿ ಭಟ್‌ ಮುಖ್ಯಭೂಮಿಕೆಯಲ್ಲಿದ್ದಾರೆ. ಆನ್‌ಲೈನ್‌ ಗೇಮಿಂಗ್‌ ಹಿನ್ನೆಲೆಯಲ್ಲಿ ಸಾಗುವ ಈ ಸಿನಿಮಾದಲ್ಲಿ ಸೈಕಾಲಜಿಸ್ಟ್‌ ಆಗಿ ವಿಜಯ ರಾಘವೇಂದ್ರ ನಟಿಸಿದರೆ, ಸೈಬರ್‌ ಕ್ರೈಂ ತನಿಖಾಧಿಕಾರಿಯಾಗಿ ಭಾವನಾ ರಾವ್‌ ಕಾಣಿಸಿಕೊಂಡಿದ್ದಾರೆ. ವೃತ್ತಿಪರ ಗೇಮರ್‌ ಆಗಿ ಜೈ, ಚಿತ್ರನಟಿಯಾಗಿ ಶ್ರುತಿ ಪ್ರಕಾಶ್‌ ಸಿನಿಮಾದಲ್ಲಿದ್ದಾರೆ. ಆನಂದ್‌ ಮುಗದ್‌ ಈ ಸಿನಿಮಾ ನಿರ್ಮಾಣ ಮಾಡಿದ್ದು, ವರುಣ್‌ ಡಿಕೆ ಛಾಯಾಚಿತ್ರಗ್ರಹಣ, ಜಗದೀಶ್ ಎನ್‌. ಸಂಕಲನ ಚಿತ್ರಕ್ಕಿದೆ. 

ಅಲೈಕ್ಯಾ

ಬಹುತೇಕ ಹೊಸಬರಿಂದಲೇ ಕೂಡಿರುವ ‘ಅಲೈಕ್ಯಾ’ ಚಿತ್ರ ತೆರೆ ಕಾಣುತ್ತಿದೆ. ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರಕ್ಕೆ ಸಾತ್ವಿಕ್ ಎಂ.ಭೂಪತಿ ಕಥೆ ಬರೆದು, ಆ್ಯಕ್ಷನ್‌–ಕಟ್‌ ಹೇಳಿದ್ದಾರೆ. ‘ಒಂದಷ್ಟು ಸ್ನೇಹಿತರ ತಂಡ ವೀಕೆಂಡ್ ಕಳೆಯಲು ಗೆಸ್ಟ್‌ಹೌಸ್‌ಗೆ ಹೋಗುತ್ತಾರೆ. ಅಲ್ಲಿ ಅನಿರೀಕ್ಷಿತವಾಗಿ ನಡೆದ ಕೆಲವು ಘಟನೆಗಳಿಗಳಿಂದ ಆ ಅತಿಥಿಗೃಹದಲ್ಲಿ ಆತ್ಮಗಳಿರುವುದು ಗೊತ್ತಾಗಿ ಅಲ್ಲಿಂದ ತಪ್ಪಿಸಿಕೊಂಡು ಬರಲು ಪ್ರಯತ್ನಿಸಿ ವಿಫಲರಾಗುತ್ತಾರೆ. ಈ ಪಯಣವೇ ಚಿತ್ರದ ಕಥೆ’ ಎಂದಿದ್ದಾರೆ ನಿರ್ದೇಶಕರು.

ಎಂ.ಭೂಪತಿ ಬಂಡವಾಳ ಹೂಡಿರುವ ಈ ಚಿತ್ರ ಬೆಂಗಳೂರು, ಚಿಕ್ಕಮಗಳೂರು, ಮೇಲುಕೋಟೆ ಸುತ್ತಮುತ್ತ ಚಿತ್ರೀಕರಣಗೊಂಡಿದೆ. ಸಾಯಿ ಸೋಮೇಶ್ ಸಂಗೀತ, ಬುಗುಡೆ ವೀರೇಶ್ ಛಾಯಾಚಿತ್ರಗ್ರಹಣ, ಮುತ್ತುರಾಜ್ ಸಂಕಲನ ಈ ಚಿತ್ರಕ್ಕಿದೆ. ದರ್ಶಿನಿ ಆರ್.ಒಡೆಯರ್, ನಿಸರ್ಗ ಮನ್ವೀರ್ ಚವ್ಹಾನ್, ವಿವೇಕ ಚಕ್ರವರ್ತಿ ಮುಂತಾದವರು ನಟಿಸಿದ್ದಾರೆ.

‘4 ಎನ್ 6’

ಪರ್ಪಲ್ ಪ್ಯಾಚ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಾಯಿಪ್ರೀತಿ ಎನ್. ನಿರ್ಮಿಸಿರುವ, ಮರ್ಡರ್‌ ಮಿಸ್ಟ್ರಿ ಜೊತೆಗೆ ಪತ್ತೆದಾರಿ, ಥ್ರಿಲ್ಲರ್‌ ಕಥೆ ಹೊಂದಿರುವ ‘4 ಎನ್ 6’ ಈ ವಾರ ತೆರೆಗೆ ಬರುತ್ತಿದೆ.

‘ಲವ್ ಮಾಕ್ಟೇಲ್’ ಖ್ಯಾತಿಯ ರಚನಾ ಇಂದರ್‌ ಫೋರೆನ್ಸಿಕ್ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಶ್ರೀನಿವಾಸ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ.

‘ಕೊಲೆಯೊಂದರ ತನಿಖೆಯ ಸುತ್ತ ನಡೆಯುವ ಕಥಾಹಂದರ ಚಿತ್ರದಲ್ಲಿದ್ದು, ಇಂಥ ಪ್ರಕರಣ ಪತ್ತೆಹಚ್ಚುವಲ್ಲಿ ಫೋರೆನ್ಸಿಕ್ ರಿಪೋರ್ಟ್ ತುಂಬಾ ಪ್ರಮುಖವಾಗಿರುತ್ತದೆ. ಇದು ಬರೀ ಮರ್ಡರ್ ಇನ್ವೆಸ್ಟಿಗೇಶನ್ ಸುತ್ತ ನಡೆವ ಕಥೆಯಲ್ಲ, ಸೈಕಲಾಜಿಕಲ್ ಚಿತ್ರವೂ ಹೌದು’ ಎಂದಿದೆ ಚಿತ್ರತಂಡ.

ಭವಾನಿ ಪ್ರಕಾಶ್, ನವೀನ್ ಕುಮಾರ್ ಹಾಗೂ ಆದ್ಯಶೇಖರ್ ತಾರಾಗಣದಲ್ಲಿದ್ದಾರೆ. ಚರಣ್ ತೇಜ್ ಛಾಯಾಚಿತ್ರಗ್ರಹಣ, ಸಾಯಿ ಸೋಮೇಶ್ ಸಂಗೀತ ನಿರ್ದೇಶನವಿದೆ. 

ಅಂಜನಿ ಪುತ್ರ

ಪುನೀತ್‌ ರಾಜ್‌ಕುಮಾರ್‌, ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿದ್ದ ಅಂಜನಿಪುತ್ರ ಸಿನಿಮಾ ಮರುಬಿಡುಗಡೆಯಾಗುತ್ತಿದೆ. 2017ರ ಡಿಸೆಂಬರ್‌ 21ರಂದು ಈ ಚಿತ್ರ ತೆರೆ ಕಂಡಿತ್ತು. ಎಂಎನ್‌ಕೆ ಮೂವಿಸ್‌ ಮೂಲಕ ಎಂಎನ್‌ ಕುಮಾರ್‌ ನಿರ್ಮಿಸಿದ್ದ ಚಿತ್ರಕ್ಕೆ ಎ ಹರ್ಷ ನಿರ್ದೇಶನವಿದೆ. ಪಿ. ರವಿಶಂಕರ್, ರಮ್ಯಾ ಕೃಷ್ಣನ್, ಮುಖೇಶ್ ತಿವಾರಿ ಮತ್ತು ಚಿಕ್ಕಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿಬಸ್ರೂರ್‌ ಸಂಗೀತ, ಸ್ವಾಮಿ ಜೆ ಛಾಯಾಚಿತ್ರಗ್ರಹಣ, ದೀಪು ಎಸ್‌ ಕುಮಾರ್‌ ಸಂಕಲನವಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT